ಶನಿವಾರ, ಸೆಪ್ಟೆಂಬರ್ 25, 2021
23 °C
ನಲ್ವತ್ತು ವರ್ಷಗಳ ಹಿಂದಿನ, ಅದ್ಭುತ ವಿನ್ಯಾಸದ ಕೇಕ್‌ ಹರಾಜಿನಲ್ಲಿ ಮಾರಾಟ

ಚಾರ್ಲ್ಸ್‌–ಡಯಾನಾ ವಿವಾಹದ ಕೇಕ್‌ ಸ್ಲೈಸ್‌ ₹1.90 ಲಕ್ಷಕ್ಕೆ ಮಾರಾಟ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ನಲ್ವತ್ತು ವರ್ಷಗಳ ಹಿಂದೆ ಬ್ರಿಟನ್‌ ರಾಜಕುಮಾರ ಪ್ರಿನ್ಸ್‌ ಚಾರ್ಲ್ಸ್‌ ಮತ್ತು ರಾಜಕುಮಾರಿ ಡಯಾನಾ ಅವರ ವಿವಾಹಕ್ಕಾಗಿ ತಯಾರಿಸಿದ್ದ ಒಂದು ಕೇಕ್‌ನ ಸ್ಲೈಸ್‌ ಅನ್ನು ಹರಾಜಿನಲ್ಲಿ ₹1.90 ಲಕ್ಷಕ್ಕೆ(1850 ಪೌಂಡ್‌ಗಳಿಗೆ) ಮಾರಾಟ ಮಾಡಲಾಗಿದೆ !

ಬ್ರಿಟನ್‌ನ ರಾಜಮನೆತನದ ‘ವಧು–ವರರ‘ ವಿವಾಹ ಮಹೋತ್ಸವದಲ್ಲಿ ತಯಾರಿಸಿದ 23 ವಿವಿಧ ಕೇಕ್‌ಗಳಲ್ಲಿನ ಒಂದು ಕೇಕ್‌ನ ಸ್ಲೈಸ್ ಅನ್ನು ಹರಾಜು ಹಾಕಲಾಯಿತು. ಗೆರಿ ಲೇಟನ್ ಎಂಬುವವರು ಈ ಕೇಕ್‌ ಅನ್ನು ಖರೀದಿಸಿದರು. 

ಕೇಕ್‌ನ ಸ್ಲೈಸ್‌ನ ವಿನ್ಯಾಸವೇ ಅದ್ಭುತವಾಗಿತ್ತು. ಸ್ಲೈಸ್‌ನ ಕೆಳಭಾಗದಲ್ಲಿ ಮಾರ್ಜಿಪಾನ್ (ಬಾದಾಮಿ, ಸಕ್ಕರೆ ಮತ್ತು ಕೋಳಿಮೊಟ್ಟೆಯಿಂದ ತಯಾರಿಸಿದ ಪೇಸ್ಟ್‌)ಪದರ, ಅದರ ಮೇಲೆ ಚಿನ್ನದ ಕೆಂಪು, ನೀಲಿ ಮತ್ತು ಬೆಳ್ಳಿ, ಸಕ್ಕರೆಯಿಂದ ಅಲಂಕರಿಸಲಾಗಿತ್ತು.

ಈ ಕೇಕ್‌ ಅನ್ನು ಜುಲೈ 29, 1981ರಲ್ಲಿ, ಬ್ರಿಟನ್‌ ರಾಣಿಯ ತಾಯಿಯವರನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಮೋಯಾ ಸ್ಮಿತ್‌ ಅವರಿಗೆ ನೀಡಲಾಗಿತ್ತು. ಸ್ಮಿತ್‌ ಅವರು ಅದನ್ನು ಜತನದಿಂದ ಸಂರಕ್ಷಿಸಿದ್ದರು. ‘ಹಳೆಯ ಫ್ಲೋರಲ್‌ ಕೇಕ್‌ ಡಬ್ಬದೊಳಗೆ ಅಂದವಾದ ಈ ಕೇಕ್‌ ಸ್ಲೈಸ್‌ ಅನ್ನು ಸಂಗ್ರಹಿಸಿಟ್ಟು, ಡಬ್ಬದ ಮುಚ್ಚಳದ ಮೇಲೆ ‘ಎಚ್ಚರದಿಂದ ನಿರ್ವಹಿಸಿ– ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನ ವೆಡ್ಡಿಂಗ್ ಕೇಕ್‘ ಎಂದು ಬರೆದಿದ್ದರು ಎಂದು ಬಿಬಿಸಿ  ವರದಿ ಮಾಡಿದೆ.

ಸ್ಮಿತ್ ಕುಟುಂಬದವರು ಈ ಕೇಕ್‌ ಅನ್ನು 2008ರಲ್ಲಿ ಸಂಗ್ರಹಕಾರರೊಬ್ಬರಿಗೆ ಮಾರಾಟ ಮಾಡಿದ್ದರು. ಈಗ ವಿಶ್ವದ ಬೇರೆ ಬೇರೆ ಭಾಗದಿಂದ, ಕೇಕ್‌  ಖರೀದಿಗೆ ಬೇಡಿಕೆ ಬಂದ ನಂತರ, ಈ ಕೇಕ್‌ ಸ್ಲೈಸ್‌ ಅನ್ನು ಬುಧವಾರ ಹರಾಜು ಮಾಡಲಾಯಿತು. ‘ಆರಂಭದಲ್ಲಿ, ಈ ಕೇಕ್‌ ಸ್ಲೈಸ್‌ ₹51.48ಕ್ಕೆ(500 ಪೌಂಡ್‌ಗಳಿಗಷ್ಟೇ) ಮಾರಾಟವಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಅದರ ಬೆಲೆ ಏರಿಕೆಯಾಗಿದ್ದು ಅಚ್ಚರಿ ಉಂಟು ಮಾಡಿದೆ‘ ಎಂದು ಸ್ಮಿತ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು