ಬುಧವಾರ, ಡಿಸೆಂಬರ್ 8, 2021
23 °C
ರೊಮಾನಿಯಾದಲ್ಲಿ ಲಸಿಕಾ ಕೇಂದ್ರಗಳ ಮುಂದೆ ಉದ್ದನೆಯ ಸಾಲು

ಐರೋಪ್ಯ ದೇಶಗಳಲ್ಲಿ ಕೋವಿಡ್‌ ಪ್ರಕರಣ, ಸಾವು ಹೆಚ್ಚಳ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಐರೋಪ್ಯ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ಹಾಗೂ ಕೋವಿಡ್‌ನಿಂದಾಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

ಅದರಲ್ಲೂ, ರಷ್ಯಾ, ಉಕ್ರೇನ್‌ ಹಾಗೂ ರೊಮಾನಿಯಾದಲ್ಲಿ ಸಾವಿನ ಪ್ರಮಾಣ ಹೆಚ್ಚು ಕಂಡುಬಂದಿದೆ ಎಂದು ಮಂಗಳವಾರದ ಅಂಕಿ–ಅಂಶಗಳನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಐರೋಪ್ಯ ರಾಷ್ಟ್ರಗಳಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್‌–19ನ 16,72,000 ಹೊಸ ಪ್ರಕರಣಗಳು ವರದಿಯಾಗಿವೆ. ಪ್ರತಿದಿನ ವರದಿಯಾಗುತ್ತಿರುವ ಪ್ರಕರಣ ಸಂಖ್ಯೆ ಸರಾಸರಿ 2,39,000 ಎಂದೂ ಸುದ್ದಿಸಂಸ್ಥೆ ತಿಳಿಸಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ 18ರಷ್ಟು ಹೆಚ್ಚಳ ಕಂಡುಬಂದಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ, ಇದು ಶೇ 60ರಷ್ಟು ಹೆಚ್ಚಳ ಎಂದೂ ತಿಳಿಸಿದೆ.

42 ದೇಶಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಉಕ್ರೇನ್‌, ಹಂಗೇರಿ ಹಾಗೂ ಪೋಲಂಡ್‌ ದೇಶಗಳು ಹೆಚ್ಚು ಬಾಧಿತವಾಗಿವೆ.

ಯುರೋಪ್‌ ಖಂಡದಲ್ಲಿ ಕಳೆದ ಏಳು ದಿನಗಳ ಅವಧಿಯಲ್ಲಿ ಕೋವಿಡ್‌ನಿಂದಾಗಿ ಪ್ರತಿನಿತ್ಯ ಸರಾಸರಿ 3,120 ಜನರು ಮೃತಪಟ್ಟಿರುವುದು ಕಂಡುಬಂದಿದೆ. ಸಾವಿನ ಪ್ರಮಾಣದಲ್ಲಿ ಶೇ 16ರಷ್ಟು ಏರಿಕೆಯಾಗಿದೆ ಎಂದು ಅಂಕಿ–ಅಂಶಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ಲಸಿಕೆ ಪಡೆಯಲು ಸಾಲು
ಬುಕಾರೆಸ್ಟ್‌, ರೊಮಾನಿಯಾ:
ದೇಶದಲ್ಲಿ ಕೋವಿಡ್‌–19ನಿಂದಾಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿನ ಹಾಸಿಗೆಗಳು ಸಹ ಭರ್ತಿಯಾಗಿದ್ದು, ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.

ಕೋವಿಡ್‌–19 ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿನ ಈ ದಿಢೀರ್‌ ಹೆಚ್ಚಳದ ಪರಿಣಾಮ ಜನರು ಕೋವಿಡ್‌ ಲಸಿಕೆ ಪಡೆಯಲು ಮುಗಿ ಬಿದ್ದಿದ್ದಾರೆ. ಹೀಗಾಗಿ ಲಸಿಕಾ ಕೇಂದ್ರಗಳ ಮುಂದೆ ಉದ್ದನೆಯ ಸಾಲುಗಳು ಈಗ ನಿತ್ಯದ ದೃಶ್ಯಗಳಾಗಿವೆ.

ಅತಿ ಕಡಿಮೆ ಪ್ರಮಾಣದ ಲಸಿಕೆ ನೀಡಿರುವ ಯುರೋಪ್‌ನ ಎರಡು ದೇಶಗಳ ಪೈಕಿ ರೊಮಾನಿಯಾವೂ ಒಂದು. ಇಲ್ಲಿ ಶೇ 38ರಷ್ಟು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ಕೆಲವರು ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಇನ್ನೂ ಕೆಲವರು ಒಂದು ಡೋಸ್‌ ಮಾತ್ರ ಹಾಕಿಸಿಕೊಂಡಿದ್ದಾರೆ. ಆದರೆ, ದೇಶದಲ್ಲಿ  ಕೋವಿಡ್‌ ಪ್ರಕರಣ, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದ ಕಾರಣ ಆತಂಕಗೊಂಡಿರುವ ಜನರು ಈಗ ಲಸಿಕೆ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು