ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಅಧ್ಯಕ್ಷರ ಮನೆ ಬಳಿ ಪ್ರತಿಭಟನೆ ‘ಭಯೋತ್ಪಾದಕ ಕೃತ್ಯ’ ಎಂದ ಸರ್ಕಾರ

ಆರ್ಥಿಕ ಬಿಕ್ಕಟ್ಟು
Last Updated 1 ಏಪ್ರಿಲ್ 2022, 12:33 IST
ಅಕ್ಷರ ಗಾತ್ರ

ಕೊಲಂಬೊ: ಅಧ್ಯಕ್ಷ ಗೋಟಬಯ ರಾಜಪಕ್ಸೆಅವರ ರಾಜೀನಾಮೆಗೆ ಒತ್ತಾಯಿಸಿ, ಅವರ ನಿವಾಸದ ಮುಂದೆ ಜನರು ನಡೆಸಿದ ಪ್ರತಿಭಟನೆಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಸರ್ಕಾರ ಶುಕ್ರವಾರ ಟೀಕಿಸಿದೆ.

ಈ ಪ್ರತಿಭಟನೆ ಹಿಂದೆ ಪ್ರತಿಪಕ್ಷಗಳೊಂದಿಗೆ ಸಂಪರ್ಕ ಹೊಂದಿರುವ ‘ಉಗ್ರಗಾಮಿಗಳ’ ಕೈವಾಡ ಇದೆ ಎಂದೂ ಸರ್ಕಾರ ಆರೋಪಿಸಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದ ಜನರು, ದೇಶದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅಧ್ಯಕ್ಷ ಗೊಟಬಯಾ ರಾಜಪಕ್ಸ ಅವರ ನಿವಾಸದ ಮುಂದೆ ಗುರುವಾರ ರಾತ್ರಿ ಭಾರಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ವೇಳೆ ಕೆಲ ಉದ್ರಿಕ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಹಾಗೂ ಜಲಫಿರಂಗಿ ಬಳಸಿದ್ದು, ಹಲವರು ಗಾಯಗೊಂಡಿದ್ದಾರೆ. ಅಲ್ಲದೆ ಹಲವು ಮಂದಿಯನ್ನು ಬಂಧಿಸಲಾಗಿದ್ದು, ಕೊಲಂಬೊ ನಗರದ ಬಹುತೇಕ ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿತ್ತು. ಆ ಬಳಿಕ ಅದನ್ನು ತೆರವು ಮಾಡಲಾಗಿದೆ.

ವಿದೇಶಿ ವಿನಿಮಯದ ತೀವ್ರ ಕೊರತೆ ಎದುರಿಸುತ್ತಿರುವ ಶ್ರೀಲಂಕಾದಲ್ಲಿ, ಇಂಧನ, ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಲ್ಲದೆ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಇಂಧನದ ಕೊರತೆಯಿಂದಾಗಿ ದೇಶದಾದ್ಯಂತ ದಿನಕ್ಕೆ 7-10 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಾರಿ ಬಿಗಿ ಭದ್ರತೆ:ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಭಾರೀ ಆಕ್ರೋಶಗೊಂಡ ಪ್ರತಿಭಟನಕಾರರು ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ ಬೆನ್ನಲ್ಲೇ, ಶ್ರೀಲಂಕಾದಾದ್ಯಂತ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಶುಕ್ರವಾರದ ಬಳಿಕ ದೇಶದಾದ್ಯಂತ ಪ್ರತಿಭಟನೆಗಳಿಗೆ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೇಶದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನ ಸಾಮಾನ್ಯರು ತಮ್ಮ ನಿವಾಸದ ಎದುರು ಶಾಂತಿಯುತ ಪ್ರತಿಭಟನೆ ನಡೆಸಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕರೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT