ಮಂಗಳವಾರ, ಜೂನ್ 15, 2021
21 °C

ಶ್ರೀಲಂಕಾ: ಎಲ್ಲ ಶಾಲೆಗಳು ಪುನರಾರಂಭ; ವಿದ್ಯಾರ್ಥಿಗಳ ನಡುವೆ 1 ಮೀಟರ್ ಅಂತರ

ಪಿಟಿಐ Updated:

ಅಕ್ಷರ ಗಾತ್ರ : | |

ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು–ಸಾಂದರ್ಭಿಕ ಚಿತ್ರ

ಕೊಲೊಂಬೊ: ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ನಾಲ್ಕು ತಿಂಗಳಿನಿಂದ ಮುಚ್ಚಲಾಗಿದ್ದ ಶಾಲೆಗಳನ್ನು ಶ್ರೀಲಂಕಾ ಸರ್ಕಾರ ಸೋಮವಾರ ಪುನರಾರಂಭಿಸಿದೆ.

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮೊದಲ ಕೋವಿಡ್‌–19 ಪ್ರಕರಣ ದಾಖಲಾಗುತ್ತಿದ್ದಂತೆ ಮಾರ್ಚ್‌ ಮಧ್ಯದಲ್ಲಿ ದೇಶದ ಎಲ್ಲ ಶಾಲೆಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಜುಲೈನಲ್ಲಿ ಕೆಲವು ತರಗತಿಗಳ ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಿದರೂ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ನಿಲ್ಲಿಸಲಾಯಿತು.

'ಇಂದಿನಿಂದ ಎಲ್ಲ ಶಾಲೆಗಳು ಪುನರಾರಂಭವಾಗಿದ್ದು, ಬೇರೆ ಬೇರೆ ಸಮಯದಲ್ಲಿ ನಿಗದಿತ ತರಗತಿಗಳಿಗೆ ಪಾಠ ನಡೆಸಲಾಗುತ್ತಿದೆ' ಎಂದು ಶಿಕ್ಷಣ ಕಾರ್ಯದರ್ಶಿ ಎನ್‌ಎಚ್‌ಎಂ ಚಿತ್ರಾನಂದ ಹೇಳಿದ್ದಾರೆ.

200ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಕೋವಿಡ್‌ಗಿಂತ ಹಿಂದಿನ ಅನುಸರಿಸಲಾಗುತ್ತಿದ್ದ ವ್ಯವಸ್ಥೆ ಮುಂದುವರಿಯಲಿದೆ. ವಿದ್ಯಾರ್ಥಿಗಳ ನಡುವೆ 1 ಮೀಟರ್‌ ಅಂತರ ಕಾಯ್ದುಕೊಳ್ಳುವ ಮೂಲಕ ಶಾಲೆಗಳಲ್ಲಿ ಪಾಠ, ಇತರೆ ಚಟುವಟಿಕೆಗಳು ನಡೆಯಲಿವೆ. ಆದರೆ, 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಯಾವ ದಿನ ಯಾವ ತರಗತಿಗಳು ನಡೆಯಲಿವೆ ಎಂಬುದನ್ನು ನಿಗದಿಪಡಿಸಿಕೊಳ್ಳುವ ಮೂಲಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸಬಹುದಾಗಿದೆ.

ಕೋವಿಡ್‌–19 ಸಂಪೂರ್ಣ ನಿಯಂತ್ರಣದಲ್ಲಿರುವುದಾಗಿ ಆರೋಗ್ಯ ಇಲಾಖೆ ಖಚಿತ ಪಡಿಸುವವರೆಗೂ ಶಾಲೆಗಳಲ್ಲಿ ಕ್ಯಾಂಟೀನ್‌ ತೆರೆಯಲು ಅನುಮತಿ ನೀಡಲಾಗಿಲ್ಲ.

ಏಪ್ರಿಲ್‌ 30ರಿಂದ ಶ್ರೀಲಂಕಾದಲ್ಲಿ ಸಮುದಾಯದಲ್ಲಿ ಒಂದೂ ಕೋವಿಡ್‌ ಪ್ರಕರಣ ದಾಖಲಾಗಿಲ್ಲ. ಸೋಂಕು ಸಮುದಾಯದಲ್ಲಿ ಹರಡುವುದನ್ನು ನಿಯಂತ್ರಿಸಲಾಗಿದ್ದು, ಇದೀಗ ಶಾಲೆ ಪುನರಾರಂಭಿಸಲಾಗಿದೆ.

ಶ್ರೀಲಂಕಾದಲ್ಲಿ ಈವರೆಗೂ ಒಟ್ಟು 2,844 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 2,579 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ 11 ಮಂದಿ ಸಾವಿಗೀಡಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು