ಅಫ್ಗಾನಿಸ್ತಾನದಲ್ಲಿ ಮಹಿಳೆಯರಿಗೆ ಜಿಮ್ ಪ್ರವೇಶಕ್ಕೆ ನಿಷೇಧ ಹೇರಿದ ತಾಲಿಬಾನ್

ಕಾಬೂಲ್: ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಅಲ್ಲಿ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ಹರಣವಾಗುತ್ತಿದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.
ಜಿಮ್ಗಳಿಗೂ ಪ್ರವೇಶಿಸದಂತೆ ಮಹಿಳೆಯರಿಗೆ ನಿಷೇಧ ಹೇರಲಾಗಿದೆ ಎಂದು ಅಲ್ಲಿನ ತಾಲಿಬಾನ್ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನಿಗಳು, ಹಳೆಯ ನಿಯಮಗಳನ್ನು ಜಾರಿ ಮಾಡುವುದಿಲ್ಲ ಎಂದು ಹೇಳುತ್ತಲೇ ಹೆಣ್ಣು ಮಕ್ಕಳು ಮಾಧ್ಯಮಿಕ ಮತ್ತು ಪ್ರೌಢಶಾಲೆಗೆ ಹೋಗುವುದಕ್ಕೆ ತಡೆ ಹಾಕಿದ್ದರು. ಔದ್ಯೋಗಿಕ ವಲಯಗಳಲ್ಲಿ ಮಹಿಳೆಯರಿಗೆ ನಿಷೇಧ ಹೇರಿದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಅನ್ನು ಕಡ್ಡಾಯಗೊಳಿಸಿದ್ದರು.
ಜನರು ಲಿಂಗ ಪ್ರತ್ಯೇಕತೆಯ ಆದೇಶಗಳನ್ನು ನಿರ್ಲಕ್ಷಿಸುತ್ತಿರುವ ಕಾರಣ ನಿಷೇಧವನ್ನು ಪರಿಚಯಿಸಲಾಗಿದೆ. ಮಹಿಳೆಯರು ಅಗತ್ಯವಿರುವ ಹಿಜಾಬ್ ಅಥವಾ ತಲೆ ಹೊದಿಕೆಯನ್ನು ಧರಿಸುತ್ತಿರಲಿಲ್ಲ. ಹಾಗಾಗಿ, ಕಠಿಣ ನಿಯಮ ಜಾರಿಗೆ ತರಲಾಗಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಹೇಳಿದ್ದಾರೆ.
ಮಹಿಳೆಯರಿಗೆ ಉದ್ಯಾನಗಳ ಪ್ರವೇಶಕ್ಕೂ ನಿಷೇಧ ಹೇರಲಾಗಿದೆ.
ಉದ್ಯಾನಗಳು ಮತ್ತು ಜಿಮ್ಗಳಲ್ಲಿ ಮಹಿಳೆಯರ ನಿಷೇಧ ಈ ವಾರದಿಂದ ಜಾರಿಗೆ ಬಂದಿದೆ.
ಲಿಂಗ ಪ್ರತ್ಯೇಕತೆಗಾಗಿ ವಾರದ ಬೇರೆ ಬೇರೆ ದಿನಗಳಲ್ಲಿ ಮಹಿಳೆ ಮತ್ತು ಪುರುಷರಿಗೆ ಉದ್ಯಾನ ಮತ್ತು ಜಿಮ್ ಬಳಕೆಗೆ ಅನುವು ಮಾಡಿಕೊಡಲು ಸರ್ಕಾರದ ತಂಡಗಳು ಪ್ರಯತ್ನಿಸಿದ್ದವು. ಆದರೆ, ದುರಾದೃಷ್ಟವಶಾತ್ ನಿಯಮ ಪಾಲನೆ ಆಗಲಿಲ್ಲ. ಹೀಗಾಗಿ, ಮಹಿಳೆಯರಿಗೆ ಪಾರ್ಕ್ ಮತ್ತು ಜಿಮ್ಗಳ ಪ್ರವೇಶ ನಿಷೇಧಿಸಲಾಗಿದೆ ಎಂದು ಅಫ್ಗಾನಿಸ್ತಾನದ ವೈಸ್ ಮತ್ತು ವರ್ಚ್ಯೂ ಸಚಿವಾಲಯದ ವಕ್ತಾರ ಮೊಹಮ್ಮದ್ ಅಕೆಫ್ ಮೊಹಜೆರ್ ಹೇಳಿದ್ದಾರೆ.
ಹಲವು ಸಂದರ್ಭಗಳಲ್ಲಿ ಮಹಿಳೆ ಮತ್ತು ಪುರುಷರು ಒಟ್ಟೊಟ್ಟಿಗೆ ಪಾರ್ಕ್ಗಳಲ್ಲಿ ಇದ್ದಿದ್ದು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೆ, ಹಿಜಾಬ್ ಸಹ ನಿರ್ಲಕ್ಷಿಸಲಾಗಿತ್ತು. ಹೀಗಾಗಿ, ಈ ಕಠಿಣ ನಿಯಮ ಜಾರಿಗೆ ತರಬೇಕಾಯಿತು ಎಂದು ಅವರು ಹೇಳಿದ್ದಾರೆ.
ತಾಲಿಬಾನ್ನ ತಂಡಗಳು ಮಹಿಳೆಯರು ಈಗಲೂ ಜಿಮ್ ಮತ್ತು ಉದ್ಯಾನಗಳನ್ನು ಬಳಸುತ್ತಿದ್ದಾರೆಯೇ? ಎಂಬ ಕುರಿತು ಪರಿಶೀಲನೆ ನಡೆಸಲಿವೆ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.