ಶನಿವಾರ, ಮೇ 28, 2022
21 °C

ಪುರುಷ- ಮಹಿಳೆ ಒಟ್ಟಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದಕ್ಕೆ ತಾಲಿಬಾನ್ ನಿಷೇಧ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್: ಪಶ್ಚಿಮ ಅಫ್ಗಾನಿಸ್ತಾನದ ಹೆರಾತ್ ನಗರದಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಊಟ ಮಾಡುವುದು ಹಾಗೂ ಉದ್ಯಾನಗಳಿಗೆ ಭೇಟಿ ನೀಡುವುದನ್ನು ತಾಲಿಬಾನ್ ಅಧಿಕಾರಿಗಳು ನಿಷೇಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಅಫ್ಗಾನ್ ಮಾನದಂಡಗಳನ್ನು ಮೀರಿದ ಉದಾರವಾದಿ ನಗರ ಎಂದೇ ಪರಿಗಣಿಸಲಾಗಿದ್ದ ಹೆರಾತ್ ನಗರದ ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಊಟ ಮಾಡುವುದು ಸಾಮಾನ್ಯವಾಗಿದೆ. ಆದರೆ, ಇಲ್ಲಿಯೂ ತಾಲಿಬಾನ್ ಕಠಿಣ ನಿಯಮಗಳನ್ನು ಹೇರಿದೆ.

ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್, ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವ ಕಠಿಣ ನಿರ್ಬಂಧಗಳನ್ನು ಹೇರುತ್ತಿದೆ.

ಹೆರಾತ್‌ನ ಸದ್ಗುಣ ಪ್ರಚಾರ ಮತ್ತು ದುರಾಚಾರ ತಡೆಗಟ್ಟುವಿಕೆ ಸಚಿವಾಲಯದ ತಾಲಿಬಾನ್ ಅಧಿಕಾರಿ ರಿಯಾಜುಲ್ಲಾ ಸೀರತ್, ‘ರೆಸ್ಟೋರೆಂಟ್‌ಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ಎಂದು ಹೇಳಿದರು.

ಈ ಬಗ್ಗೆ ರೆಸ್ಟೋರೆಂಟ್ ಮಾಲೀಕರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನನಗೆ ಮತ್ತು ನನ್ನ ಪತಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ರೆಸ್ಟೋರೆಂಟ್‌ನ ಮ್ಯಾನೇಜರ್ ತಿಳಿಸಿರುವುದಾಗಿ ಹೆಸರು ಹಹೇಳಲಿಚ್ಛಿಸದ ಮಹಿಳೆ ಎಎಫ್‌ಪಿಗೆ ತಿಳಿಸಿದ್ದಾರೆ.

ರೆಸ್ಟೋರೆಂಟ್ ಮಾಲೀಕ ಸಫೀವುಲ್ಲಾ ಎಂಬುವವರು ತಾಲಿಬಾನ್ ಆಡಳಿತದಿಂದ ಕಠಿಣ ಆದೇಶ ಬಂದಿರುವುದನ್ನು ಖಚಿತಪಡಿಸಿದ್ದಾರೆ.

‘ಈ ನಿಯಮವನ್ನು ನಾವು ಪಾಲಿಸಲೇಬೇಕು. ಆದರೆ, ಇದು ನಮ್ಮ ಉದ್ಯಮದ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಿದೆ’ಎಂದೂ ಅವರು ಹೇಳಿದ್ಧಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು