ಗುರುವಾರ , ಮಾರ್ಚ್ 23, 2023
30 °C

ಥಾಯ್ಲೆಂಡ್‌ ಕಾರ್ಖಾನೆಯಲ್ಲಿ ಸ್ಫೋಟ: ಒಂದು ಸಾವು, ನಿವಾಸಿಗಳ ಸ್ಥಳಾಂತರ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಕಾಕ್‌: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ ನಗರದ ಹೊರವಲಯದಲ್ಲಿರುವ ತೈವಾನ್‌ ಮೂಲದ ಪಾಲಿಯಸ್ಟರ್‌ ಫೋಮ್‌ ಉತ್ಪಾದಿಸುವ ಕಾರ್ಖಾನೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಸ್ಫೋಟದಿಂದಾಗಿ ಒಬ್ಬರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.

ಸ್ಫೋಟ ಸಂಭವಿಸುತ್ತಿದ್ದಂತೆ, ಕಾರ್ಖಾನೆಯಾದ್ಯಂತ ಬೆಂಕಿಯ ಜ್ವಾಲೆಗಳು ವ್ಯಾಪಿಸಿವೆ. ಸ್ಫೋಟದಿಂದಾಗಿ ಕಾರ್ಖಾನೆಗೆ ಸಮೀಪವಿರುವ ವಸತಿ ಪ್ರದೇಶಗಳಲ್ಲಿನ 70 ಮನೆಗಳಿಗೆ ಹಾನಿಯಾಗಿದೆ. ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ನಿರತರಾದರು.

ಮುನ್ನೆಚ್ಚರಿಕೆ ಕ್ರಮವಾಗಿ ‌ಕಾರ್ಖಾನೆಯ ಸುತ್ತಲಿನ ಐದು ಕಿ.ಮೀ ವ್ಯಾಪ್ತಿಯಲ್ಲಿರುವ ಸಮುತ್‌ ಪ್ರಾಕನ್ ಪ್ರಾಂತ್ಯದ ಸಾವಿರಾರು ಮಂದಿ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಸ್ಫೋಟಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.

‘ಸ್ಫೋಟದ ಶಬ್ದದ ಜತೆಗೆ, ಕಾರ್ಖಾನೆಯ ಬಳಿ ಮಿಂಚಿನಂತೆ ಬೆಳಕೊಂದು ಕಂಡಿತು. ಭೂಕಂಪ ಸಂಭವಿಸಿದಾಗ ಆಗುವಂತೆ ಮನೆಗಳು ಅಲುಗಾಡಿದ ಅನುಭವವಾಯಿತು‘ ಎಂದು ನಿವಾಸಿ ಬೈತೊಂಗ್ ನಿಸರಾತ್‌ ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿರುವ ಈ ಕಾರ್ಖಾನೆ, ಬ್ಯಾಂಕಾಕ್‌ನ ಸುವರ್ಣಭೂಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 4.8 ಕಿ.ಮೀ ದೂರದಲ್ಲಿದೆ. ಆದರೆ, ಘಟನೆಯಿಂದ ವಿಮಾನ ಸಂಚಾರ ಮತ್ತು ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು