ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವನ ಗರಿಷ್ಠ ಜೀವಿತಾವಧಿ 150 ವರ್ಷ: ಹೊಸ ಸಂಶೋಧನೆ

Last Updated 26 ಮೇ 2021, 10:03 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಮಾನವನ ಗರಿಷ್ಠ ಜೀವಿತಾವಧಿ ಎಷ್ಟು ಎಂಬ ಪ್ರಶ್ನೆಗೆ ಇದುವರೆಗೂ ಯಾವುದೇ ಸಂಶೋಧನೆಗಳು ನಿಖರವಾಗಿ ಉತ್ತರ ನೀಡಿಲ್ಲ. ಈ ವಿಚಾರವಾಗಿ ಜಗತ್ತಿನಾದ್ಯಂತ ಹಲವು ಸಂಶೋಧನೆಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಇತ್ತೀಚೆಗೆ ನಡೆದಿರುವ ಸಂಶೋಧನೆಯೊಂದು, 'ಮನುಷ್ಯನು ಗರಿಷ್ಠ 150 ವರ್ಷಗಳ ಕಾಲ ಬದುಕಬಲ್ಲ' ಎಂಬುದಾಗಿ ಹೇಳಿದೆ.

ನೇಚರ್ ಕಮ್ಯೂನಿಕೇಷನ್‌ ಜರ್ನಲ್‌ನಲ್ಲಿ ಮೇ 25 ರಂದು ಪ್ರಕಟವಾದ ಸಂಶೋಧನಾ ವರದಿಯು, 'ಮಾನವನು 120 ವರ್ಷದಿಂದ 150 ವರ್ಷಗಳ ವರೆಗೂ ಬದುಕಬಹುದು' ಎಂದು ತಿಳಿಸಿದೆ.

ಕ್ಯಾನ್ಸರ್, ಹೃದ್ರೋಗ ಅಥವಾ ಅಪಘಾತಗಳಿಂದ ಸಾಯದೇ ಉಳಿದರೆ ಮಾನವನು ಎಷ್ಟು ವರ್ಷಗಳ ಕಾಲ ಜೀವಿಸಬಹುದು ಎಂಬುದರ ಸುತ್ತ ಸಂಶೋಧನೆ ನಡೆಸಲಾಗಿದೆ.

'ಸಾಮಾನ್ಯವಾಗಿ ಮನುಷ್ಯನೊಬ್ಬ ರೋಗಗಳಿಂದ ಸಾಯದೇ ಉಳಿದಾಗ, ವಯಸ್ಸಾದಂತೆಲ್ಲ ಅವನ ದೈಹಿಕ ಸಾಮರ್ಥ್ಯವು ಮಸುಕಾಗುತ್ತದೆ. ಆದರೆ, ಹಲವು ಅಡೆತಡೆಗಳ ನಂತರವೂ ಮಾನವನ ದೇಹದೊಳಗಿನ ರಚನಾತ್ಮಕ ವ್ಯವಸ್ಥೆಯು ಸಮತೋಲನವನ್ನು ಕಾಪಾಡಿಕೊಂಡಿರುತ್ತದೆ' ಎಂದು ವರದಿಯು ಹೇಳಿದೆ.

'ಈ ಸಂಕೀರ್ಣ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿ ಸಾಗಿದರೆ ಮತ್ತು ಒತ್ತಡರಹಿತ ವಾತಾವರಣದಲ್ಲಿ ಮನುಷ್ಯನು ಬದುಕಿದರೆ ಅವನ ಜೀವಿತಾವಧಿ ಸುದೀರ್ಘವಾಗುತ್ತದೆಯೇ?' ಎಂಬ ಪ್ರಶ್ನೆ ಎಲ್ಲರಲ್ಲೂ ಏಳುತ್ತದೆ. ಇದಕ್ಕೆ ಉತ್ತರ ನೀಡಿರುವ ವರದಿಯು, 'ವಯಸ್ಸಾಗುವ ವೇಗ'ವು ಮನುಷ್ಯನ ಜೀವಾತಾವಧಿಯನ್ನು ನಿರ್ಧರಿಸುತ್ತದೆ ಎಂದು ತಿಳಿಸಿದೆ.

ಸಿಂಗಪೂರ ಮೂಲದ ಸಂಶೋಧಕ ಟಿಮೋಥಿ ಪಿರ್ಕೋವ್ ಮತ್ತು ಅವರ ಸಹೋದ್ಯೋಗಿಗಳು 'ವಯಸ್ಸಾಗುವ ವೇಗ'ದ ಬಗ್ಗೆ ಅಧ್ಯಯನ ನಡೆಸಲು ಅಮೆರಿಕ, ಇಂಗ್ಲೆಂಡ್‌ ಮತ್ತು ರಷ್ಯಾದ ಜನಸಮೂಹವನ್ನು ಆಯ್ಕೆ ಮಾಡಿಕೊಂಡಿದ್ದರು. ಮನುಷ್ಯನ ಸ್ಥಿರವಾದ ಆರೋಗ್ಯದಲ್ಲಾಗುವ ಬದಲಾವಣೆಗಳ ಬಗ್ಗೆ ಮೌಲ್ಯಮಾಪನ ಮಾಡಲು, ವಿವಿಧ ವಯೋಮಾನದವರ ರಕ್ತಕಣಗಳ ಸಂಖ್ಯೆಗಳಲ್ಲಿನ ಏರಿಳಿತ ಮತ್ತು ಅವರು ಚಟುವಟಿಕೆಗಳ ಸಾಮರ್ಥ್ಯವನ್ನು ಪರೀಕ್ಷಿಸಿದ್ದರು.

ವಯಸ್ಸಾದಂತೆ ದೇಹದ ಚಟುವಟಿಗಳಿಗೆ ರಕ್ತಕಣಗಳು ಸ್ಪಂದಿಸುವ ಸಾಮರ್ಥ್ಯ ಕುಂದುತ್ತದೆ. ವಯಸ್ಸಾದ ವ್ಯಕ್ತಿಯ ಚೇತರಿಕೆಗೆ ಅಧಿಕ ಸಮಯ ಬೇಕಾಗುತ್ತದೆ. ಆದರೆ, ಮನುಷ್ಯನ ಆರೋಗ್ಯದಲ್ಲಿ ಯಾವುದೇ ಅಡತಡೆಗಳು ಇಲ್ಲದೇ ಹೋದರೆ, ದೇಹವು ತನ್ನ ಸಮತೋಲನವನ್ನು ಕಾಪಾಡಿಕೊಳ್ಳತ್ತದೆ. ಇದರಿಂದ ಮನುಷ್ಯನು 120 ವರ್ಷಗಳಿಂದ 150 ವರ್ಷಗಳ ವರೆಗೂ ಜೀವಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT