ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್: ನಕಲಿ ಉದ್ಯೋಗ ಜಾಲದಲ್ಲಿ ಸಿಲುಕಿದ್ದ 13 ಭಾರತೀಯರ ರಕ್ಷಣೆ

Last Updated 5 ಅಕ್ಟೋಬರ್ 2022, 14:22 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಮಟ್ಟದ ನಕಲಿ ಉದ್ಯೋಗ ಜಾಲದಲ್ಲಿ ಸಿಲುಕಿ ಆಗ್ನೇಯ ಮ್ಯಾನ್ಮಾರ್ ಮ್ಯಾವಾಡ್ಡಿ ಎನ್ನುವ ಪ್ರದೇಶದಲ್ಲಿ ಇದ್ದ 13 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ತಿಳಿಸಿದೆ.

‘ಮ್ಯಾನ್ಮಾರ್‌ನ ನಕಲಿ ಉದ್ಯೋಗ ಜಾಲದಲ್ಲಿ ಸಿಲುಕಿರುವ ಪ್ರಕರಣದ ಕುರಿತು ನಾವು ನಿರಂತರವಾಗಿ ನಿಗಾವಹಿಸಿದ್ದೇವೆ. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಗಳ ನೆರವಿನಿಂದ ಈಗಾಗಲೇ 32 ಮಂದಿ ಭಾರತೀಯರನ್ನು ರಕ್ಷಿಸಿದ್ದೇವೆ. ಇದೀಗ 13 ಭಾರತೀಯರನ್ನು ರಕ್ಷಿಸಲಾಗಿದೆ. ಅವರು ಬುಧವಾರ ತಮಿಳುನಾಡಿಗೆ ತಲುಪಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

‘ಇನ್ನೂ ಕೆಲ ಭಾರತೀಯ ನಾಗರಿಕರನ್ನು ರಕ್ಷಿಸಲಾಗಿದ್ದು, ಅವರು ಮ್ಯಾನ್ಮಾರ್‌ ಅನ್ನು ಅಕ್ರಮವಾಗಿ ಪ್ರವೇಶಿಸಿದ ಕಾರಣಕ್ಕಾಗಿ ಅಲ್ಲಿನ ಸರ್ಕಾರದ ವಶದಲ್ಲಿದ್ದಾರೆ. ಅವರನ್ನು ಆದಷ್ಟು ಬೇಗ ಭಾರತಕ್ಕೆ ಕರೆತರಲು ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದೂ ಬಾಗ್ಚಿ ಮಾಹಿತಿ ನೀಡಿದ್ದಾರೆ.

‘ಇದೇ ರೀತಿಯ ನಕಲಿ ಉದ್ಯೋಗ ಜಾಲಗಳು ಲಾವೊಸ್ ಮತ್ತು ಕಾಂಬೋಡಿಯಾದಲ್ಲೂ ಇರುವುದು ಬೆಳಕಿಗೆ ಬಂದಿದೆ. ವಿಯೆಟ್ನಾಂ,ನಾಮ್ ಪೆನ್ ಮತ್ತು ಬ್ಯಾಂಕಾಕ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಗಳು ಅಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ಸಹಾಯ ಮಾಡುತ್ತಿವೆ’ ಎಂದು ಅವರು ತಿಳಿಸಿದ್ದಾರೆ.

ಥಾಯ್ಲೆಂಡ್‌ನ ನಕಲಿ ಕಂಪನಿಗಳು ಭಾರತದ ಐಟಿ ವೃತ್ತಿಪರರನ್ನು ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ ಹುದ್ದೆಗಳಿಗೆ ನೇಮಕ ಮಾಡಿಕೊಂಡು, ಬಳಿಕ ಅವರನ್ನು ಕಾಡುಗಳ ಮೂಲಕ ಅಕ್ರಮವಾಗಿ ಮ್ಯಾನ್ಮಾರ್‌ಗೆ ಕರೆದುಕೊಂಡು ಹೋಗುತ್ತಿದ್ದವು. ನಂತರ ಆಗ್ನೇಯ ಮ್ಯಾನ್ಮಾರ್ ಮ್ಯಾವಾಡ್ಡಿ ಎನ್ನುವ ಪ್ರದೇಶದಲ್ಲಿ ಅವರ ಮೂಲಕ ಸೈಬರ್ ಅಪರಾಧ ಕೃತ್ಯಗಳನ್ನು ಮಾಡಿಸಲಾಗುತ್ತಿದೆ ಎನ್ನುವ ಕುರಿತು ವಿದೇಶಾಂಗ ಸಚಿವಾಲಯಕ್ಕೆ ವರದಿಗಳು ಬಂದಿದ್ದವು.

ಈ ಹಿನ್ನೆಲೆಯಲ್ಲಿನಕಲಿ ಉದ್ಯೋಗ ಜಾಲದ ಕುರಿತು ಎಚ್ಚರದಿಂದ ಇರಬೇಕು ಎಂದು ಕೇಂದ್ರ ಸರ್ಕಾರವು ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ವೃತ್ತಿಪರರಿಗೆ ಇತ್ತೀಚೆಗೆ ಎಚ್ಚರಿಕೆ ನೀಡಿತ್ತು.

ಆಗ್ನೇಯ ಮ್ಯಾನ್ಮಾರ್‌ನ ಕಯಿನ್ ರಾಜ್ಯದ ಗಡಿಯಲ್ಲಿರುವ ಥಾಯ್ಲೆಂಡ್‌ನ ಮ್ಯಾವಾಡ್ಡಿ ಪ್ರದೇಶವು ಮ್ಯಾನ್ಮಾರ್‌ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಸ್ಥಳೀಯ ಶಸ್ತ್ರಸಜ್ಜಿತ ಗುಂಪುಗಳು ಆ ಪ್ರದೇಶದ ಮೇಲೆ ಹಿಡಿತ ಸಾಧಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT