ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಎಫ್‌ಡಿಎ, ಫಿಜರ್‌ ವಿರುದ್ಧ ಟ್ರಂಪ್‌ ಕಿಡಿ

Last Updated 10 ನವೆಂಬರ್ 2020, 11:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತಾನು ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆಯ ಬಗ್ಗೆ ಅಧ್ಯಕ್ಷೀಯ ಚುನಾವಣಾ ಪೂರ್ವದಲ್ಲೇ ಪ್ರಕಟಣೆ ಹೊರಡಿಸದ ಫಿಜರ್‌ ಕಂಪನಿ ಹಾಗೂ ಆಹಾರ ಮತ್ತು ಔಷಧ ಆಡಳಿತದ (ಎಫ್‌ಡಿಎ) ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿಕಾರಿದ್ದಾರೆ.

‘ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿದ ವಿಚಾರವನ್ನು ಮುಂದಿಟ್ಟುಕೊಂಡು ನಾನು ಚುನಾವಣೆಯಲ್ಲಿ ಗೆದ್ದುಬಿಡಬಹುದೆಂಬ ಭಯದಿಂದ ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಚುನಾವಣೆ ಮುಗಿದ ಐದು ದಿನಗಳ ನಂತರ ಲಸಿಕೆಯ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ತಾನು ಅಭಿವೃದ್ಧಿಪಡಿಸಿರುವ ಲಸಿಕೆಯು ಕೋವಿಡ್‌ ತಡೆಗಟ್ಟುವಲ್ಲಿ ಶೇ 90ರಷ್ಟು ಪರಿಣಾಮಕಾರಿಯಾಗಿದೆ ಎಂಬುದು ಪ್ರಾಥಮಿಕ ಸಂಶೋಧನೆಯಿಂದ ಗೊತ್ತಾಗಿದೆ ಎಂದು ಫಿಜರ್‌ ಕಂಪನಿ ಹೇಳಿತ್ತು.

‘ನನ್ನ ಜಾಗದಲ್ಲಿ ಜೊ ಬೈಡನ್‌ ಇದ್ದಿದ್ದರೆ ಲಸಿಕೆ ಕಂಡುಹಿಡಿಯಲು ಇನ್ನೂ ನಾಲ್ಕು ವರ್ಷಗಳು ಬೇಕಾಗುತ್ತಿತ್ತು. ಎಫ್‌ಡಿಎ ಕೂಡ ಅದಕ್ಕೆ ಈಗಿನಷ್ಟು ತ್ವರಿತವಾಗಿ ಅನುಮೋದನೆ ನೀಡುತ್ತಿರಲಿಲ್ಲ. ಅಧಿಕಾರಶಾಹಿಗಳಿಂದ ಲಕ್ಷಾಂತರ ಜನರ ಜೀವ ನಾಶವಾಗುತ್ತಿತ್ತು’ ಎಂದು ಟ್ರಂಪ್‌ ದೂರಿದ್ದಾರೆ.

‘ಫಿಜರ್‌ ಮತ್ತು ಇತರೆ ಕಂಪನಿಯವರು ತಾವು ಅಭಿವೃದ್ಧಿಪಡಿಸಿದ ಲಸಿಕೆ ಕುರಿತ ಪ್ರಕಟಣೆಯನ್ನು ಚುನಾವಣೆಯ ನಂತರವೇ ಪ್ರಕಟಿಸಲಿದ್ದಾರೆ ಎಂದು ನಾನು ಮೊದಲೇ ಹೇಳಿದ್ದೆ. ಲಸಿಕೆ ಕುರಿತ ಮಾಹಿತಿಯನ್ನು ಚುನಾವಣಾ ಪೂರ್ವದಲ್ಲಿ ಬಹಿರಂಗಪಡಿಸಲು ಆ ಕಂಪನಿಗಳಿಗೆ ಧೈರ್ಯವಿರಲಿಲ್ಲ. ಎಫ್‌ಡಿಎಯಾದರೂ ಈ ವಿಷಯವನ್ನು ಸಾಧ್ಯವಾದಷ್ಟು ಬೇಗ ಬಹಿರಂಗಪಡಿಸಬಹುದಿತ್ತು. ಅದು ರಾಜಕೀಯ ಹಿತಾಸಕ್ತಿಯನ್ನು ಬದಿಗೊತ್ತಿ ಜನರ ಜೀವ ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT