ಶನಿವಾರ, ಡಿಸೆಂಬರ್ 5, 2020
21 °C

ಅಮೆರಿಕದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಆ್ಯಮಿ ಪ್ರಮಾಣ ವಚನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಸುಪ್ರೀಂ ಕೋರ್ಟ್‌ನ 115ನೇ ನ್ಯಾಯಮೂರ್ತಿಯಾಗಿ ಆ್ಯಮಿ ಕಾನೆ ಬ್ಯಾರೆಟ್‌ ಅವರು ಸೋಮವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನ್ಯಾಯಶಾಸ್ತ್ರಜ್ಞೆಯಾಗಿರುವ ಆ್ಯಮಿ ಅವರನ್ನು ಟ್ರಂಪ್‌ ನಾಮನಿರ್ದೇಶನ ಮಾಡಿದ್ದರು.  ಸೆನೆಟ್‌ನಲ್ಲಿ ಆ್ಯಮಿ 52-48 ಮತಗಳಿಂದ ಆಯ್ಕೆಯಾಗಿದ್ದರು.

ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಮ್ಮುಖದಲ್ಲಿ ಶ್ವೇತಭವನದಲ್ಲಿ ನಡೆದ ಸಮಾರಂಭ ದಲ್ಲಿ ಸಾಂಪ್ರದಾಯಿಕ ನಿಲುವಿನ ಆ್ಯಮಿ ಅವರಿಗೆ ನ್ಯಾಯಮೂರ್ತಿ ಕ್ಲಾರೆನ್ಸ್‌ ಥಾಮಸ್‌ ಅವರು ಸಾಂವಿಧಾನಿಕ ಪ್ರತಿಜ್ಞಾ ವಿಧಿ ಬೋಧಿಸಿದರು.

‘ಇಂದು ಈ ಸ್ಥಾನದಲ್ಲಿ ನಿಂತಿರುವುದಕ್ಕೆ ಅತೀವ ಖುಷಿಯಾಗಿದೆ. ಈ ಗೌರವ ಹೆಮ್ಮೆಯ ಭಾವ ಮೂಡಿಸಿದೆ’ ಎಂದು 48 ವರ್ಷ ವಯಸ್ಸಿನ ಆ್ಯಮಿ ತಿಳಿಸಿದ್ದಾರೆ.

‘ದೇಶದ ಪ್ರಮುಖ ಕಾನೂನು ವಿದ್ವಾಂಸರಲ್ಲಿ ಆ್ಯಮಿ ಕೂಡ ಒಬ್ಬರು. ಅವರು ಈ ಹುದ್ದೆಗೇರಿರುವುದು ಖುಷಿಯ ವಿಚಾರ. ಅವರು ನ್ಯಾಯಮೂರ್ತಿಯಾಗಿ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತ ಸೇವೆ ಸಲ್ಲಿಸಲಿದ್ದಾರೆ’ ಎಂದು ಟ್ರಂಪ್‌ ವಿಶ್ವಾಸ ವ್ಯಕ್ತಪಡಿಸಿದರು.

ಅಮೆರಿಕ ಸುಪ್ರೀಂ ಕೋರ್ಟ್‌ನ ಹುದ್ದೆಗೆ ಆಜೀವ ನ್ಯಾಯಮೂರ್ತಿಗಳನ್ನು ನೇಮಿಸಲಾಗುತ್ತದೆ. ಆ್ಯಮಿ ನೇಮಕದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಸಂಪ್ರದಾಯವಾದಿಗಳ ಬಲವು 6-3ಕ್ಕೆ ಏರಿದೆ.

ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೊ ಬೈಡನ್‌ ಅವರು ಆ್ಯಮಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ನವೆಂಬರ್‌ 3ರ ಚುನಾವಣೆಯಲ್ಲಿ ಗೆದ್ದವರು ನೂತನ ನ್ಯಾಯಮೂರ್ತಿಯನ್ನು ಆಯ್ಕೆ ಮಾಡಬೇಕಿತ್ತು’ ಎಂದು ಅವರು ಕಿಡಿಕಾರಿದ್ದಾರೆ.

ಆದರೆ ಟ್ರಂಪ್‌ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ‘ಇದು ಅತ್ಯಂತ ವಿಶೇಷ ಮತ್ತು ಮಹತ್ವದ ಸಮಾರಂಭ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಆ್ಯಮಿ ಮೇಲೆ ಸೆನೆಟ್‌ ಇಟ್ಟ ನಂಬಿಕೆ ಕಂಡು ಖುಷಿಯಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು