ಬುಧವಾರ, ಜನವರಿ 20, 2021
21 °C

ಚೀನಾ ಉತ್ಪಾದಿತ ಕೋವಿಡ್‌ ಲಸಿಕೆ ಶೇ 86ರಷ್ಟು ಪರಿಣಾಮಕಾರಿ: ಯುಎಇ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಚೀನಾ ಮೂಲದ ಸೈನೊಫಾರ್ಮ್‌ ಸಿಎನ್‌ಬಿಜಿ ಕಂಪನಿ ಉತ್ಪಾದಿಸಿರುವ ಕೋವಿಡ್‌ ಲಸಿಕೆ ಶೇ 86ರಷ್ಟು ಪರಿಣಾಮಕಾರಿ ಎಂದು ಯುಎಇಯ ಆರೋಗ್ಯ ಸಚಿವಾಲಯ ಹೇಳಿದೆ.

ಈ ಲಸಿಕೆಯನ್ನು ಸ್ವಯಂ ಸೇವಕರಿಗೆ ನೀಡಿದಾಗ ಯಾವುದೇ ಗಂಭೀರ ಸ್ವರೂಪದ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದೂ ಸಚಿವಾಲಯದ ಪ್ರಕಟಣೆ ತಿಳಿಸಿದೆ.

125 ದೇಶಗಳ 18 ರಿಂದ 60 ವರ್ಷ ವಯೋಮಾನದ 31,000 ಸ್ವಯಂ ಸೇವಕರನ್ನು ಲಸಿಕೆಯ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿತ್ತು. 28 ದಿನಗಳ ಅವಧಿಯಲ್ಲಿ ಈ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗಿತ್ತು.

ದುಬೈ ಆಡಳಿತ ಚುಕ್ಕಾಣಿ ಹಿಡಿದಿರುವ ಶೇಖ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ತೌಮ್‌ ಹಾಗೂ ಉನ್ನತ ಅಧಿಕಾರಿಗಳು ಪ್ರಾಯೋಗಿಕ ಲಸಿಕೆಯನ್ನು ಪಡೆದಿದ್ದರು.

ಆದರೆ, ಯುಎಇಯಲ್ಲಿ ನಡೆದ ಲಸಿಕೆಯ ಪ್ರಯೋಗಗಳ ಫಲಿತಾಂಶವನ್ನು ಮಾತ್ರ ಆಧರಿಸಿ ಈ ಅಭಿಪ್ರಾಯವನ್ನು ನೀಡಲಾಗಿದೆಯೋ ಅಥವಾ ಚೀನಾದಲ್ಲಿ ನಡೆದ ಪ್ರಯೋಗಗಳ ಫಲಿತಾಂಶವನ್ನು ಸಹ ಈ ವರದಿ ಒಳಗೊಂಡಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಮೂಲಗಳು ಹೇಳಿವೆ.

ಸೈನೊಫಾರ್ಮ್‌ ಕಂಪನಿ ಉತ್ಪಾದಿಸಿರುವ ಕೋವಿಡ್‌ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಕೆಲವು ದೇಶಗಳು ಅನುಮತಿ ನೀಡಿವೆ. ಈ ಲಸಿಕೆಯನ್ನು ದೇಶದ ಶೇ 80ರಷ್ಟು ಜನರಿಗೆ ನೀಡಲು ಮೊರೊಕ್ಕೊ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು