ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆನಲ್ಲಿ 50 ಸಾವಿರ ರೈಲ್ವೆ ಉದ್ಯೋಗಿಗಳಿಂದ ಬೃಹತ್ ಮುಷ್ಕರ: ಕಾರಣ ಏನು?

Last Updated 22 ಜೂನ್ 2022, 4:45 IST
ಅಕ್ಷರ ಗಾತ್ರ

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನ (ಯು.ಕೆ) ಇತ್ತೀಚಿನ ದಶಕಗಳಲ್ಲಿಯೇ ಅತಿದೊಡ್ಡ ಮುಷ್ಕರವನ್ನು ರೈಲ್ವೆ ಉದ್ಯೋಗಿಗಳು ಆರಂಭಿಸಿದ್ದಾರೆ. ಇದರಿಂದ ಕಳೆದ ಮೂರು ದಿನಗಳಿಂದ ಲಂಡನ್‌ ಸೇರಿದಂತೆ ಅನೇಕ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಅಪಾರ ವ್ಯತ್ಯಯವಾಗಿದೆ.

ಸುಮಾರು 50 ಸಾವಿರ ಆರ್‌ಎಂಟಿರೈಲ್ವೆ (RMT-National Union of Rail, Maritime and Transport Workers) ಉದ್ಯೋಗಿಗಳು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ.

ಯು.ಕೆ ದೇಶದ 40 ವರ್ಷಗಳ ಇತಿಹಾಸದಲ್ಲಿಯೇ ರೈಲ್ವೆ ಇಲಾಖೆಯ ಅತಿದೊಡ್ಡ ಮುಷ್ಕರ ಇದು ಎನ್ನಲಾಗಿದೆ.

ಸೋಮವಾರದಿಂದಲೇ ಉದ್ಯೋಗಿಗಳು ಮುಷ್ಕರ ನಡೆಸುತ್ತಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೇ ಕೆಲವು ರೈಲುಗಳು ಓಡಾಡುತ್ತಿವೆ. ಇದರಿಂದ ಬೆಳಿಗ್ಗೆಯಿಂದಲೇ ಅನೇಕ ರೈಲು ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.

ಶನಿವಾರದವರೆಗೂ ಮುಷ್ಕರ ನಡೆಯಬಹುದು, ಹಾಗಾಗಿ ಪ್ರಯಾಣವನ್ನು ಮುಂದೂಡಿ ಎಂದು ಅಲ್ಲಿನ ರೈಲ್ವೆ ಕಂಪನಿಗಳು ಜನರಿಗೆ ಹೇಳಿವೆ.

ಏತನ್ಮಧ್ಯೆ ರೈಲ್ವೆ ಕಂಪನಿಗಳು ಹಾಗೂ ಯೂನಿಯನ್‌ಗಳ ನಾಯಕರ ನಡುವಿನ ಮೊದಲ ಸುತ್ತಿನ ಮಾತುಕತೆ ವಿಫಲವಾಗಿದ್ದು. ಬುಧವಾರ ಮತ್ತಷ್ಟು ಉದ್ಯೋಗಿಗಳು ಕೆಲಸದಿಂದ ದೂರ ಉಳಿದಿದ್ದಾರೆ. ಕೂಡಲೇ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿ ಎಂದು ರೈಲ್ವೆ ಕಂಪನಿಗಳು ಎಚ್ಚರಿಸಿವೆ.

ಮುಷ್ಕರದಿಂದ ಪ್ರಯಾಣಿಕರು ವಿಮಾನ, ಬಸ್, ಕ್ಯಾಬ್, ಕಾರ್ ಹಾಗೂ ಸೈಕಲ್, ಬೈಸಿಕಲ್‌ಗಳ ಮೊರೆ ಹೋಗಿದ್ದಾರೆ. ಎಲ್ಲ ಬಸ್‌ ನಿಲ್ದಾಣಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುತ್ತಿರುವುದು ಕಂಡು ಬಂದಿದೆ.

ರೈಲು ಮುಷ್ಕರದ ಬಗ್ಗೆ ಮಾತನಾಡಿದ ಪಶ್ಚಿಮ ಹ್ಯಾಂಪ್‌ಶೇರ್‌ನ 24 ವರ್ಷದ ಅಂಬರ್ ಜಿಟೊ, ‘ಅಯ್ಯೋ ನಂಗೆ ಕೆಲಸಕ್ಕೆ ಹೋಗಲು ಮೂರು ದಿನದಿಂದ ರೈಲು ಪ್ರಯಾಣ ಸಾಧ್ಯವಾಗುತ್ತಿಲ್ಲ. ಇದರಿಂದ ತಲೆ ಕೆಟ್ಟು ಹೋಗಿದೆ. ಆದರೆ, ನಾನು ಮುಷ್ಕರವನ್ನು ಬೆಂಬಲಿಸುತ್ತೇನೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ‍ಪ್ರಧಾನಿ ಬೋರಿಸ್ ಜಾನ್ಸ್‌ನ್ ಅವರು ರೈಲು ಕಂಪನಿಗಳಿಗೆ ಹಾಗೂ ಯೂನಿಯನ್‌ಗಳ ಮುಖಂಡರಿಗೆ ಎಚ್ಚರಿಕೆ ನೀಡಿದ್ದು, ಕೂಡಲೇ ಸಮಸ್ಯೆ ಬಗೆಹರಿಸಿಕೊಂಡು ಮುಷ್ಕರ ಕೈ ಬೀಡಬೇಕು ಎಂದು ತಾಕೀತು ಮಾಡಿದ್ದಾರೆ.

ಯು.ಕೆನಲ್ಲಿ ಹಣದುಬ್ಬರ ಕಳೆದ ಒಂದು ವರ್ಷದಿಂದ ನಿರಂತರ ಗತಿಯಲ್ಲಿ ಏರುತ್ತಿದ್ದು ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ವೇತನ ಹೆಚ್ಚಳ ಮಾಡಬೇಕು ಎಂದುRMT ಉದ್ಯೋಗಿಗಳು ಒತ್ತಾಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT