ಬುಧವಾರ, ಅಕ್ಟೋಬರ್ 5, 2022
26 °C

ಹಣದುಬ್ಬರ, ಜೀವನವೆಚ್ಚ ಏರಿಕೆ ಕುರಿತು ಸುನಕ್ –ಟ್ರುಸ್‌ ನಡುವೆ ಬಿಸಿ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಬ್ರಿಟನ್‌ನ ಪ್ರಧಾನಿ ಸ್ಥಾನದ ಸ್ಪರ್ಧೆಯಲ್ಲಿರುವ ರಿಷಿ ಸುನಕ್‌ ಮತ್ತು ಲಿಜ್‌ ಟ್ರುಸ್ ಅವರು, ಹಣದುಬ್ಬರ ಮತ್ತು ದೇಶದಲ್ಲಿ ಜೀವನವೆಚ್ಚದ ತೀವ್ರ ಏರಿಕೆಗೆ ಕಡಿವಾಣ ಹಾಕುವ ತಮ್ಮ ಪ್ರಸ್ತಾವ ಕುರಿತಂತೆ ವಾಕ್ಸಮರ ನಡೆಸಿದ್ದಾರೆ.

ಏರುತ್ತಿರುವ ಹಣದುಬ್ಬರ ಮತ್ತು ಅದಕ್ಕೆ ಕಡಿವಾಣ ಹಾಕುವ ಕ್ರಮವು ಉಭಯ ಸ್ಪರ್ಧಿಗಳ ನಡುವಿನ ಬಿಸಿ ಚರ್ಚೆಗೆ ಈಗ ವಸ್ತುವಾಗಿದೆ. ಉಭಯ ನಾಯಕರು ಭಿನ್ನ ಪರಿಹಾರ ಕ್ರಮಗಳನ್ನು ಮುಂದಿಟ್ಟಿದ್ದಾರೆ.

ಆಯ್ಕೆಯಾದಲ್ಲಿ ಹಣದುಬ್ಬರಕ್ಕೆ ಕಡಿವಾಣ ಹಾಕಲು ತ್ವರಿತಗತಿಯಲ್ಲಿ ತೆರಿಗೆ ಕಡಿತ ಮಾಡುವ ಪ್ರಸ್ತಾವವನ್ನು ಟ್ರುಸ್‌ ಮುಂದಿಟ್ಟಿದ್ದರೆ, ತೆರಿಗೆ ಕಡಿತದ ಜೊತೆಗೆ ಬಾಧಿತ ಕುಟುಂಬಗಳಿಗೆ ಅಗತ್ಯ ನೆರವು ನೀಡುವ ಭರವಸೆಯನ್ನು ರಿಷಿ ಸುನಕ್ ನೀಡಿದ್ದಾರೆ.

‘ಸುದೀರ್ಘ ಚಳಿಗಾಲ, ಬೆಲೆ ಏರಿಕೆಯಿಂದ ಹಲವು ಕುಟುಂಬಗಳು ಬಾಧಿತವಾಗಿವೆ. ತೆರಿಗೆ ಕಡಿತದಿಂದ ವಾಣಿಜ್ಯ ವರ್ಗಕ್ಕೆ ಹೆಚ್ಚು ನೆರವಾಗಬಹುದು. ಬಾಧಿತ ಕುಟುಂಬಗಳಿಗೆ ಹೆಚ್ಚು ನೆರವಾಗಲು ದಿಟ್ಟ ನಿರ್ಧಾರ ಅಗತ್ಯವಾಗಿದೆ’ ಎಂದು ಸುನಕ್ ಪ್ರತಿಪಾದಿಸಿದ್ದಾರೆ. 

ಇನ್ನೊಂದೆಡೆ, ತೆರಿಗೆ ಕಡಿತ ಕುರಿತಂತೆ ಟ್ರುಸ್‌ ಅವರು ಕಳೆದ ವಾರಾಂತ್ಯ ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರ ಬೆಂಬಲಿಗರು ಪ್ರತಿಪಾದಿಸಿದ್ದಾರೆ. 

ಬಾಧಿತ ಕುಟುಂಬಗಳಿಗೆ ಹೆಚ್ಚು ನೆರವಾಗಲು ಟ್ರುಸ್ ಬದ್ಧರಾಗಿದ್ದಾರೆ. ಜನರಲ್ಲಿ ಹೆಚ್ಚಿನ ಹಣದ ಹರಿವು ಇರಬೇಕು, ಪೂರಕವಾಗಿ ಜನರು ಹೆಚ್ಚಿನ ಅವಧಿ ಕೆಲಸ ಮಾಡಬೇಕು ಎಂಬುದು ಅವರ ನಿಲುವಾಗಿದೆ ಎಂದು ಉತ್ತರ ಐರ್ಲೆಂಡ್‌ನ ಕಾರ್ಯದರ್ಶಿ ಬ್ರಾಂಡನ್‌ ಲೂಯಿಸ್‌ ಹೇಳಿದರು.

ಮಾಜಿ ಪ್ರಧಾನಿಯೂ ಆಗಿರುವ ಲೇಬರ್‌ ಪಕ್ಷದ ಗೋರ್ಡನ್ ಬ್ರೌನ್‌ ಅವರು, ಜೀವನವೆಚ್ಚ ಏರಿಕೆಯಿಂದ ಮೂಡಿರುವ ಬಿಕ್ಕಟ್ಟು ಗಂಭೀರವಾದುದು. ಹೊಸ ಪ್ರಧಾನಿ ಅಧಿಕಾರ ಸ್ವೀಕರಿಸುವ ಅವಧಿಯವರೆಗೂ ಇದು ಬಾಧಿಸಲಿದೆ ಎಂದು ಹೇಳಿದ್ದಾರೆ. 

ಈ ಮಧ್ಯೆ, ಉಭಯ ಸ್ಪರ್ಧಿಗಳ ಪೈಕಿ ಟ್ರುಸ್‌ ಅವರಿಗೆ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ ಎಂದು ಬೆಟ್ಟಿಂಗ್‌ ಮಾಡಲಾಗುತ್ತಿದೆ. ಅವರ ಪ್ರಕಾರ, ಟ್ರುಸ್ ಅವರ ಗೆಲುವಿನ ಸಾಧ್ಯತೆಗಳು ಶೇ 87ರಷ್ಟಿದ್ದರೆ, ಸುನಕ್‌ ಅವರ ಗೆಲುವಿನ ಸಾಧ್ಯತೆಗಳು ಶೇ 13 ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು