ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಮೇಲೆ ಬಾಂಬ್‌ ಸುರಿಮಳೆ: ಮರಿಯುಪೊಲ್‌ಗಾಗಿ ರಷ್ಯಾ ಭೀಕರ ಕಾಳಗ

ಡೊನೆಟ್‌ಸ್ಕ್‌, ಹಾರ್ಕಿವ್‌ನಲ್ಲಿ 9 ನಾಗರಿಕರು ಸಾವು
Last Updated 22 ಮಾರ್ಚ್ 2022, 20:24 IST
ಅಕ್ಷರ ಗಾತ್ರ

ಕೀವ್‌, ಲುವಿವ್‌, ಮರಿಯುಪೊಲ್‌ (ಎಎಫ್‌ಪಿ/ ರಾಯಿಟರ್ಸ್‌):ಉಕ್ರೇನ್‌ನ ಯುದ್ಧಪೀಡಿತ ನಗರಗಳ ಮೇಲೆ ರಷ್ಯಾ ನಿರಂತರ ನಡೆಸುತ್ತಿರುವ ವೈಮಾನಿಕ ಮತ್ತು ಕ್ಷಿಪಣಿ ದಾಳಿಯಲ್ಲಿ 9 ನಾಗರಿಕರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ಕೀವ್‌ನ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಡೊನೆಟ್‌ಸ್ಕ್‌ಪ್ರದೇಶದ ಅವ್‌ಜೀವ್‌ಕ ನಗರದ ಮೇಲೆ ರಷ್ಯಾ ಪಡೆಗಳಿಂದ ಸೋಮವಾರ ತಡರಾತ್ರಿ ವೈಮಾನಿಕ ದಾಳಿ ನಡೆಯಿತು ಎಂದು ಉಕ್ರೇನ್‌ನ ಲೋಕ ಪಾಲರಾದಲ್ಯುಡ್ಮಿಲಾ ಡೆನಿಸೋವಾ ತಿಳಿಸಿದರು.

ಅಲ್ಲದೇ, ಹಾರ್ಕಿವ್‌ನಲ್ಲಿ ರಷ್ಯಾ ಪಡೆಗಳು ನಾಗರಿಕರನ್ನು ಗುರಿಯಾಗಿಸಿ ನಡೆಸಿದ ಟ್ಯಾಂಕ್‌ ದಾಳಿಯಿಂದ ಒಂದು ಮಗು ಮತ್ತು ಮೂವರು ನಾಗರಿಕರು ಮೃತಪಟ್ಟರು ಎಂದುಡೆನಿಸೋವಾ ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.

ಕೆರ್ಸಾನ್‌ನಲ್ಲಿ ಉಕ್ರೇನ್‌ ಪರ ರ‍್ಯಾಲಿ ನಡೆಸುತ್ತಿದ್ದ ಪ್ರತಿಭಟನಕಾರರ ಮೇಲೆ ರಷ್ಯಾ ಪಡೆಗಳು ಮಂಗಳವಾರ ಗ್ರೆನೇಡ್‌ ಮತ್ತು ಗುಂಡಿನ ದಾಳಿ ನಡೆಸಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ನಾಗರಿಕರ ಮೇಲಿನ ದಾಳಿಯನ್ನು ಅಲ್ಲಗಳೆದಿರುವ ರಷ್ಯಾ ಪಡೆಗಳು, ಉಕ್ರೇನ್‌ ಪಡೆಗಳು ನಾಗರಿಕರನ್ನು ಮಾನವ ಗುರಾಣಿಯಂತೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿವೆ.

ಕಾರ್ಯತಂತ್ರದ ಪ್ರಮುಖ ಬಂದರು ನಗರ ಮರಿಯುಪೋಲ್‌ ವಶಕ್ಕಾಗಿ ರಷ್ಯಾ ಭೀಕರ ದಾಳಿ ಮುಂದುವರಿಸಿದೆ. ಈ ನಗರದ ಮೇಲೆ ನಿರಂತರ ಬಾಂಬ್ ದಾಳಿ ಮತ್ತು ಬೀದಿ ಕಾಳಗ ನಡೆಸಿಯೂ ರಷ್ಯಾ ಪಡೆಗಳಿಗೆ ಯಶಸ್ಸು ಸಿಕ್ಕಿಲ್ಲ. ಉಕ್ರೇನ್‌ ತೀವ್ರ ಪ್ರತಿರೋಧ ತೋರಿ, ಮರಿಯುಪೊಲ್‌ರಕ್ಷಿಸಿಕೊಳ್ಳುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ.

ರಾಜಧಾನಿ ಕೀವ್‌ ನಗರ ಹೊರವಲಯದ ಉಪನಗರಗಳ ಮೇಲೂ ರಷ್ಯಾದಿಂದ ವೈಮಾನಿಕ ಮತ್ತು ರಾಕೆಟ್‌ ದಾಳಿ ಮುಂದುವರಿದಿದೆ. ಕೀವ್‌ನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸಿತು ಎಂದು ಸ್ಥಳೀಯರು ಹೇಳಿದ್ದಾರೆ. ಹಾನಿಯ ಬಗ್ಗೆ ವಿವರ ಇನ್ನೂ ಸಿಕ್ಕಿಲ್ಲ.

‘ರಷ್ಯಾದಿಂದ ಜೈವಿಕ ಅಸ್ತ್ರ ಬಳಕೆ’: ನಾಲ್ಕು ವಾರ ಆದರೂ ಉಕ್ರೇನ್‌ನ ಯಾವುದೇ ಪ್ರಮುಖ ನಗರವನ್ನು ರಷ್ಯಾ ಪಡೆಗಳಿಗೆ ವಶಕ್ಕೆ ತೆಗೆದುಕೊಳ್ಳಲು ಆಗಿಲ್ಲ. ಇದರಿಂದ ಹತಾಶರಾಗಿರುವ ಪುಟಿನ್‌, ಉಕ್ರೇನ್‌ ಮೇಲೆ ರಾಸಾಯನಿಕ ಮತ್ತು ಜೈವಿಕ ಅಸ್ತ್ರ ಬಳಸುವ ಸಿದ್ಧತೆಯಲ್ಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಸಿದ್ದಾರೆ.

ಯುರೋಪಿನಲ್ಲಿ ಮತ್ತು ಉಕ್ರೇನಿನಲ್ಲಿ ಅಮೆರಿಕ ಜೈವಿಕ ಅಸ್ತ್ರಗಳ ಪ್ರಯೋಗಾಲಯ ಹೊಂದಿದೆ ಎಂದು ಪುಟಿನ್‌ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.

ಅಲ್ಲದೇ, ರಷ್ಯಾದ ಹ್ಯಾಕರ್‌ಗಳಿಂದ ಅಮೆರಿಕದ ಪ್ರಮುಖ ಕಂಪನಿಗಳನ್ನು ಗುರಿಯಾಗಿಸಿಕೊಂಡು ಸೈಬರ್‌ ದಾಳಿ ನಡೆಯುವ ಸಾಧ್ಯತೆ ಇದೆ. ಕಂಪನಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬೈಡನ್‌ ಸೂಚಿಸಿದ್ದಾರೆ.

ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಕೂಡ ಉಕ್ರೇನ್‌ ಮೇಲೆ ರಷ್ಯಾ ಸೈಬರ್‌ ದಾಳಿ ನಡೆಸುವ ಸಂಭವ ಇದೆ ಎಂದಿದ್ದಾರೆ. ಸೈಬರ್‌ ದಾಳಿಯ ಯೋಜನೆಯನ್ನು ರಷ್ಯಾದ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್‌ ಅಲ್ಲಗಳೆದಿದ್ದಾರೆ.

ಇಂದು ಸಭೆ: ಉಕ್ರೇನ್‌ ಬಗ್ಗೆ ಚರ್ಚಿಸಲು ಫ್ರಾನ್ಸ್‌, ಅಮೆರಿಕ, ಬ್ರಿಟನ್‌ ಸೇರಿ 22 ರಾಷ್ಟ್ರಗಳ ಕೋರಿಕೆಯಂತೆ ಬುಧವಾರ ವಿಶ್ವಸಂಸ್ಥೆಯಲ್ಲಿತುರ್ತುವಿಶೇಷ ಅಧಿವೇಶನ ನಡೆಯಲಿದೆ.

ಭಾರತ ಟೀಕಿಸಿದ ಜೋ ಬೈಡನ್‌
ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸದ ಭಾರತದ ‘ತಟಸ್ಥ’ ನಿಲುವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಟೀಕಿಸಿದ್ದಾರೆ.

ರಷ್ಯಾ ಆಕ್ರಮಣ ಖಂಡಿಸುವ ವಿಚಾರದಲ್ಲಿ ಭಾರತದ ನಿಲುವು ಅಸ್ಥಿರವಾಗಿದೆ ಎಂದು ಹೇಳಿದ್ದಾರೆ. ಬೈಡನ್‌ ಟೀಕೆಗೆ ಭಾರತ ಪ್ರತಿಕ್ರಿಯಿಸಿಲ್ಲ.

‘ಪುಟಿನ್ ಅವರ ಆಕ್ರಮಣಶೀಲತೆಗೆ ಪ್ರತಿಕ್ರಿಯೆಯಾಗಿ ನಾವು ನ್ಯಾಟೊ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದೇವೆ. ಕ್ವಾಡ್ ದೇಶಗಳ ಪೈಕಿ ಭಾರತ ಹೊರತುಪಡಿಸಿ ಜಪಾನ್ ಮತ್ತು ಆಸ್ಟ್ರೇಲಿಯಾ ಕೂಡ ಪ್ರಬಲವಾಗಿ ಪುಟಿನ್‌ ವಿರುದ್ಧ ನಿಂತಿವೆ’ಎಂದರು.

27ನೇ ದಿನದ ಬೆಳವಣಿಗೆಗಳು

*ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಭಾರತ ಮತ್ತು ಆಸ್ಟ್ರೇಲಿಯಾ ಕಳವಳ ವ್ಯಕ್ತಪಡಿಸಿವೆ. ತಕ್ಷಣವೇ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿವೆ.

*ಉಕ್ರೇನ್‌ ನಿರಾಶ್ರಿತರಲ್ಲಿ 5 ಲಕ್ಷ ಮಂದಿಗೆ ಮಾನಸಿಕ ಸಮಸ್ಯೆ, ಇದರಲ್ಲಿ 30 ಸಾವಿರ ಮಂದಿಗೆ ಗಂಭೀರ ಮಾನಸಿಕ ಕಾಯಿಲೆ ಇದೆ – ವಿಶ್ವ ಆರೋಗ್ಯ ಸಂಸ್ಥೆ

*ರಷ್ಯಾ ಪಡೆಗಳ ನಿಯಂತ್ರಣದಲ್ಲಿರುವ ಚೆರ್ನೊಬಿಲ್‌ ಅಣು ಸ್ಥಾವರದ (ಇದು ಸದ್ಯ ಕಾರ್ಯನಿರ್ವಹಿಸುತ್ತಿಲ್ಲ) ಬಳಿ ಕಾಳ್ಗಿಚ್ಚು ಹರಡಿದೆ.

*ಉಕ್ರೇನ್‌ – ರಷ್ಯಾ ಸಂಘರ್ಷ ಶಮನಗೊಳಿಸಲು ಪೋಪ್‌ ಫ್ರಾನ್ಸಿಸ್‌ ಮಧ್ಯಸ್ಥಿಕೆ ವಹಿಸುವಂತೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಒತ್ತಾಯ

*ಕೀವ್ ಹೊರ ವಲಯದ ಮಕರೀವ್‌ ಅನ್ನು ರಷ್ಯಾ ಪಡೆಗಳ ನಿಯಂತ್ರಣದಿಂದ ಮರಳಿ ಪಡೆದಿರುವುದಾಗಿ ಉಕ್ರೇನ್‌ ರಕ್ಷಣಾ ಸಚಿವಾಲಯ ಹೇಳಿಕೆ

*ರಷ್ಯಾದ ನಗರಗಳಲ್ಲಿ ನಾಗರಿಕರು ಮಾಲ್‌ಗಳಲ್ಲಿ ಗೋಧಿ ಮತ್ತು ಸಕ್ಕರೆಯನ್ನು ಮುಗಿಬಿದ್ದು ಖರೀದಿಸಿದರು

*ಉಕ್ರೇನ್‌ನಮಕೆವೆಕಾ ನಗರದ ವಸತಿ ಕಟ್ಟಡಕ್ಕೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.

*ಜಪಾನ್ ಜತೆಗಿನ ಕುರ್ಲಿ ದ್ವೀಪ ಸಂಬಂಧದ ಶಾಂತಿ ಮಾತುಕತೆ ಮತ್ತು ಆರ್ಥಿಕ ಪಾಲುದಾರಿಕೆಯನ್ನು ರಷ್ಯಾ ಕಡಿದುಕೊಂಡಿದೆ

*ಉಕ್ರೇನ್‌ನ ನಟರು, ರಂಗಭೂಮಿ ಕಲಾವಿದರು, ಸಿನಿಮಾ ನಿರ್ಮಾಪಕರಲ್ಲಿ ಹಲವು ಮಂದಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ ಸೇನೆ ಸೇರಿದ್ದಾರೆ

*ರಷ್ಯಾ– ಉಕ್ರೇನ್‌ ಯುದ್ಧದ ಪರಿಣಾಮ ಭಾರತ ಮತ್ತು ಆಸ್ಟ್ರೇಲಿಯಾದಿಂದ ಗೋಧಿ ಹಾಗೂ ಇನ್ನಿತರ ಧಾನ್ಯಗಳ ರಫ್ತು ಹೆಚ್ಚಾಗಿದೆ

*ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯ ಸಹ ವಿಜೇತರಾದ ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೊವ್ ಉಕ್ರೇನ್‌ ನಿರಾಶ್ರಿತರಿಗೆ ನಿಧಿ ಸಂಗ್ರಹಕ್ಕೆತಮ್ಮ ನೊಬೆಲ್ ಪದಕ ಹರಾಜಿಗೆ ಇಡುವುದಾಗಿ ಘೋಷಿಸಿದ್ದಾರೆ

* ಪೋಲೆಂಡ್‌ನ ಹೋಮ್‌ಗ್ರೋನ್ ಹಾಸ್ಪಿಟಾಲಿಟಿ ತಂತ್ರಜ್ಞಾನ ಕಂಪನಿ ಓಯೊಯಿಂದ ಉಕ್ರೇನ್‌ ನಿರಾಶ್ರಿತರಿಗೆ ಉಚಿತ ವಸತಿ ಸೌಕರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT