ನವದೆಹಲಿ: ಅಫ್ಗಾನಿಸ್ತಾನ ಮತ್ತುಸಮೀಪದ ಭಯೋತ್ಪಾದಕ ತಾಣಗಳ ಮೇಲೆ ವೈಮಾನಿಕ ಕಣ್ಗಾವಲು ಮತ್ತು ಉಗ್ರರ ಮೇಲೆ ಡ್ರೋನ್ ದಾಳಿ ನಡೆಸಲು ಭಾರತದ ವಾಯುನೆಲೆಗಳನ್ನು ಬಳಸಿಕೊಳ್ಳಲು ಭಾರತದ ಜೊತೆ ಅಮೆರಿಕ ಮಾತುಕತೆ ನಡೆಸುತ್ತಿದೆ ಎಂಬುದು ವರದಿಯಾಗಿದೆ.
ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತವುಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಂಡಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ತಿಳಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಮಾರ್ಕ್ ಇ. ಗ್ರೀನ್ ಪ್ರಶ್ನೆಗೆ ಉತ್ತರವಾಗಿ ಬ್ಲಿಂಕನ್ ಈ ವಿವರವನ್ನು ಬಹಿರಂಗಪಡಿಸಿದ್ದಾರೆ. ತಾಲಿಬಾನಿಗಳು ಹಾಗೂ ಪಾಕಿಸ್ತಾನದ ಐಎಸ್‌ಐ ನಡುವೆ ಬಾಂಧವ್ಯ ವೃದ್ಧಿಸಿಕೊಂಡಿರುವುದರಿಂದ ಅಮೆರಿಕ ಮೇಲಿನ ಸಂಭವನೀಯ ಬೆದರಿಕೆಯನ್ನು ತಟಸ್ಥಗೊಳಿಸಲು ಡ್ರೋನ್ ಬಳಕೆಗೆ ವಾಯುವ್ಯ ಭಾರತದಲ್ಲಿ ವೈಮಾನಿಕ ನೆಲೆ ಬಳಸುವುದಕ್ಕಾಗಿ ಬೈಡನ್ ಆಡಳಿತವು ಭಾರತದ ಜೊತೆ ಮಾತುಕತೆ ನಡೆಸುತ್ತಿದೆ.
ಆದ್ಯಾಗೂ ಅಫ್ಗಾನಿಸ್ತಾನದಲ್ಲಿ ಭಯೋತ್ಪಾದಕರ ಮೇಲೆ ನಿಗಾ ಇರಿಸಲು ಭಾರತದಿಂದ ಡ್ರೋನ್ ನೆಲೆ ಪ್ರಾರಂಭಿಸುವ ಕುರಿತು ಉಭಯ ದೇಶಗಳ ನಡುವಣ ಚರ್ಚೆಯ ವಿವರಗಳನ್ನು ಬಹಿರಂಗಪಡಿಸಲಿಲ್ಲ.
ಕಳೆದ ತಿಂಗಳು ಅಮೆರಿಕದಿಂದ ಸೇನೆ ಹಿಂತೆಗೆತದ ಬೆನ್ನಲ್ಲೇ ಅಫ್ಗಾನಿಸ್ತಾನವು ತಾಲಿಬಾನಿಗಳ ವಶವಾಗಿದೆ.
ಅಫ್ಗನ್‌ನಿಂದ ಸೇನೆ ಹಿಂತೆಗೆತದೊಂದಿಗೆ ಭಯೋತ್ಪಾದಕರ ಮೂಲಸೌಕರ್ಯಗಳನ್ನು ದಮನಿಸಲು ಈ ಹಿಂದೆ ಬಳಕೆ ಮಾಡುತ್ತಿದ್ದ ವಾಯುನೆಲೆಗಳು ಅಮೆರಿಕಕ್ಕೆ ಲಭ್ಯವಿಲ್ಲ. ಕತಾರ್, ಕುವೈತ್ ಮತ್ತು ಗಲ್ಫ್ ಸೇರಿದಂತೆ ಇತರ ದೇಶಗಳಲ್ಲಿರುವ ಅಮೆರಿಕ ನೆಲೆಯು ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದಿಂದ ದೂರದಲ್ಲಿದೆ.
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರತ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.