ಮಂಗಳವಾರ, ಜುಲೈ 27, 2021
28 °C
ಚೀನಾ ವಸ್ತುಗಳ ಆಮದಿನ ಮೇಲೆ ನಿರ್ಬಂಧದ ಪರಿಣಾಮ

ಆನ್‌ಲೈನ್ ಕ್ಲಾಸ್‌: ಅಮೆರಿಕದಲ್ಲೂ ಲ್ಯಾಪ್‌ಟಾಪ್ ಕೊರತೆ

ಎಪಿ Updated:

ಅಕ್ಷರ ಗಾತ್ರ : | |

laptop

ಸ್ಯಾನ್‌ಫ್ರಾನ್ಸಿಸ್ಕೊ: ಅಮೆರಿಕದಲ್ಲೂ ಆನ್‌ಲೈನ್‌ನಲ್ಲಿ ಕ್ಲಾಸ್‌ ಕೇಳುವ ಮಕ್ಕಳಿಗೆ ಲ್ಯಾಪ್‌ಟಾಪ್‌ ಕೊರತೆ ಎದುರಾಗಿದೆ. ಇದು ಇನ್ನೂ ಕೆಲವು ತಿಂಗಳುಗಳ ಕಾಲ ಮುಂದುವರಿಯಬಹುದೆಂಬ ಎಂಬ ಮಾಹಿತಿಯೂ ಲಭ್ಯವಾಗಿದೆ.

ಅಸೋಸಿಯೇಟೆಡ್‌ ಪ್ರೆಸ್‌ ಸುದ್ದಿ ಸಂಸ್ಥೆ ನಡೆಸಿರುವ ತನಿಖೆಯಿಂದ ಈ ಮಾಹಿತಿ ಬಹಿರಂಗಗೊಂಡಿದೆ. ಡಿಜಿಟಲ್ ಉಪಕರಣಗಳ ಕೊರತೆಯಿಂದಾಗಿ ಅಮೆರಿಕದಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲು ತುಂಬಾ ಕಷ್ಟವಾಗಿದೆ ಎಂದು ಶಾಲೆಗಳ ಆಡಳಿತ ಮಂಡಳಿಯವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದ ಮೂರು ದೊಡ್ಡ ಕಂಪ್ಯೂಟರ್ ಕಂಪನಿಗಳಾದ ಲೆನೊವೊ, ಎಚ್‌ಪಿ ಮತ್ತು ಡೆಲ್ ಕಂಪನಿಗಳು ಸುಮಾರು 5 ಕೋಟಿ ಲ್ಯಾಪ್‌ಟಾಪ್‌ಗಳ ಕೊರತೆ ಎದುರಿಸುತ್ತಿರುವುದಾಗಿ ಶಾಲಾ ಕಾಲೇಜುಗಳಿಗೆ ತಿಳಿಸಿವೆ. ಚೀನಾದಿಂದ ಕಂಪ್ಯೂಟರ್ ಪೂರೈಸುವ ಕಂಪನಿಗಳ ಮೇಲೆ ನಿರ್ಬಂಧ ಹೇರಿದ ಪರಿಣಾಮವೂ ಲ್ಯಾಪ್‌ಟಾಪ್‌ಗಳ ಕೊರತೆಗೆ ಕಾರಣ ಎಂದು ಅಮೆರಿಕದ ಹದಿನೈದು ರಾಜ್ಯಗಳ ಇಪ್ಪತ್ನಾಲ್ಕಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷರು, ಕಂಪ್ಯೂಟರ್ ಕಂಪನಿಗಳು, ಉದ್ಯಮ ವಿಶ್ಲೇಷಕರೊಂದಿಗೆ ತನಿಖೆ ವೇಳೆ ಸಂಗ್ರಹಿಸಿರುವ ಮಾಹಿತಿಯಿಂದ ತಿಳಿದುಬಂದಿದೆ.

ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಎಲ್ಲೆಡೆ ವರ್ಚುವಲ್‌ ತರಗತಿಗಳು ಆರಂಭವಾಗಿದೆ. ಈಗ ಕಂಪ್ಯೂಟರ್ ಕೊರತೆಯಾಗಿರುವುದರಿಂದ ವಿದ್ಯಾರ್ಥಿಗಳ ನಡುವೆ ಅಸಮಾನತೆಯ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಶಿಕ್ಷಕರು ಮತ್ತು ಪೋಷಕರಿಗೆ ದೊಡ್ಡ ತಲೆನೋವಾಗಿದೆ ಎಂದು ಶಿಕ್ಷಣ ತಜ್ಞರು ವಿಶ್ಲೇಷಿಸಿದ್ದಾರೆ. 

’ಇದು ಹೇಗಿದೆ ಎಂದರೆ, ಕಲಾವಿದನೊಬ್ಬನಿಗೆ ಬಣ್ಣವನ್ನು ಕೊಡದೇ ಚಿತ್ರವನ್ನು ಬರೆ ಎಂದು ಹೇಳಿದಂತಾಗಿದೆ. ಕಂಪ್ಯೂಟರ್ ಇಲ್ಲದೇ ಮಗುವಿಗೆ ದೂರಶಿಕ್ಷಣ ನೀಡುವುದು ಅಸಾಧ್ಯ’ ಎಂದು ಕ್ಯಾಲಿಫೋರ್ನಿಯಾದ ಮೊಜವೆ ಡೆಸರ್ಟ್‌ನ ಮೊರೊನೊ ಕೌಂಟಿ ಶಾಲೆಯ ಸೂಪರಿಂಟೆಂಡ್‌ ಟಾಮ್‌ ಬೌಮ್ಗಾರ್ಟನ್‌ ಹೇಳಿದ್ದಾರೆ. ಈ ಶಾಲೆಯಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ಗಳಲ್ಲಿ ಭಾಗವಹಿಸಬೇಕಾಗಿದೆ. ಬೌಮ್ಗಾರ್ಟನ್‌ ಅವರು, ತಮ್ಮ ಶಾಲೆಗೆ 5 ಸಾವಿರ ಲೆನೊವೊ ಕ್ರೋಮ್‌ ಬುಕ್‌ ಕಂಪ್ಯೂಟರ್‌ಗಳಿಗಾಗಿ ಜುಲೈ ತಿಂಗಳಲ್ಲಿ ಲೆನೊವಾ ಕಂಪನಿಗೆ ಬೇಡಿಕೆ ಸಲ್ಲಿಸಿದ್ದರು. ಚೀನಾದಿಂದ ಕಂಪ್ಯೂಟರ್‌ ಖರೀದಿಗೆ ಸರ್ಕಾರ ನಿಷೇಧ ಹೇರಿದ ಕಾರಣ, ಆ ಕಂಪನಿಯವರು ಶಾಲೆಗಳಿಗೆ ಕಂಪ್ಯೂಟರ್ ಪೂರೈಸಲಾಗುತ್ತಿಲ್ಲ ಎಂದು ಹೇಳಿದ್ದಾರೆ. ‌ ನಂತರ ಅವರು ತಮ್ಮ ಆರ್ಡರ್‌ ಅನ್ನು ಎಚ್‌ಪಿ ಕಂಪನಿಗೆ ವರ್ಗಾಯಿಸಿದ್ದಾರೆ. ಆ ಕಂಪನಿಯವರು ಮೊದಲು ಆಗಸ್ಟ್ 26ರೊಳಗೆ ಕಂಪ್ಯೂಟ್ ಪೂರೈಸುವುದಾಗಿ ಹೇಳಿ, ನಂತರ ಪೂರೈಕೆ ದಿನಾಂಕವನ್ನು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿಗೆ ಮುಂದೂಡುತ್ತಲೇ ಹೋಗಿದ್ದಾರೆ. ಸದ್ಯ ನಮ್ಮ ಶಾಲೆಯಲ್ಲಿ 4ಸಾವಿರ ಹಳೆಯ ಲ್ಯಾಪ್‌ಟಪ್‌ಗಳಿವೆ. ಉಳಿದ ಮಕ್ಕಳಿಗೆ ಏನು ಮಾಡುವುದು’ ಎಂದು ಪ್ರಶ್ನಿಸುತ್ತಾರೆ ಬೌಮ್ಗಾರ್ಟನ್‌.

ಟ್ರಂಪ್ ಆಡಳಿತ ಜುಲೈ 20 ರಂದು ಚೀನಾದ ವಸ್ತುಗಳ ಪೂರೈಕೆಗೆ ನಿರ್ಬಂಧ ವಿಧಿಸಿದೆ. ಸುಮಾರು 11 ಕಂಪನಿಗಳ ವಸ್ತುಗಳ ಸರಬರಾಜಿನ ಮೇಲೆ ಅಮೆರಿಕದ ವಾಣಿಜ್ಯ ಇಲಾಖೆ ನಿರ್ಬಂಧ ವಿಧಿಸಿದೆ.

ಇತ್ತೀಚೆಗೆ ಭಾರತದಲ್ಲಿ ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆಯಲ್ಲಿ ಶೇ 27 ಮಕ್ಕಳಿಗೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ಪೋನ್ ಕೊರತೆಯಿಂದ ಆನ್‌ಲೈನ್‌ ಕ್ಲಾಸ್‌ ಕೇಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿತ್ತು. ಈಗ ಅಮೆರಿಕದಲ್ಲಿ, ಚೀನಾ ವಸ್ತುಗಳ ಆಮದಿನ ಮೇಲಿನ ನಿರ್ಬಂಧದಿಂದಾಗಿ ಆನ್‌ಲೈನ್ ಕ್ಲಾಸ್‌ಗಳಿಗೆ ಬೇಕಾದ ಡಿಜಿಟಲ್ ಉಪಕರಣಗಳ ಕೊರತೆ ಎದುರಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು