ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಕೊರೊನಾ ಹಾವಳಿ ತೀವ್ರ: ದಿನಕ್ಕೆ 2 ಲಕ್ಷಕ್ಕೂ ಹೆಚ್ಚು ಪ್ರಕರಣ ವರದಿ

Last Updated 18 ಡಿಸೆಂಬರ್ 2020, 2:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ಲಸಿಕೆ ಲಭ್ಯತೆಯ ಭರವಸೆ, ರಜೆಗಳ ಅವಧಿಗೆ ಸಿದ್ಧತೆ ನಡುವೆಯೇ ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದೆ.

ಅಮೆರಿಕದಲ್ಲಿ ಬುಧವಾರ ಒಂದೇ ದಿನ 2,45,000 ಪ್ರಕರಣಗಳು ದೃಢಪಟ್ಟಿದ್ದು, 3,600 ಮಂದಿ ಮೃತಪಟ್ಟಿದ್ದಾರೆ ಎಂದು ‘ಇಂಟರ್‌ನ್ಯಾಷನಲ್ ನ್ಯೂಯಾರ್ಕ್‌ ಟೈಮ್ಸ್’ ವರದಿ ಮಾಡಿದೆ.

ಕಳೆದ ಶುಕ್ರವಾರ 2,36,800 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಮೂರು ತಿಂಗಳ ಹಿಂದೆ ಸೋಂಕಿನಿಂದಾಗಿ ಸಾವಿಗೀಡಾಗುತ್ತಿದ್ದವರಿಗಿಂತ ಈಗ ಮೃತಪಡುತ್ತಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೊಸದಾಗಿ ಸೋಂಕಿತರಾಗುತ್ತಿರುವವರ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ವಾರ ಒಟ್ಟು ಕೋವಿಡ್‌ ಸಾವಿನ ಶೇ 30ರಷ್ಟು ದಕ್ಷಿಣ ಅಮೆರಿಕದಲ್ಲಿ ವರದಿಯಾಗಿದ್ದರೆ, ಉತ್ತರದಲ್ಲಿ ಶೇ 30ರಷ್ಟು ವರದಿಯಾಗಿತ್ತು. ಪೆನ್ಸಿಲ್ವೇನಿಯಾ, ಅರಿಜೋನಾ, ಕನ್ಸಾಸ್‌ನಲ್ಲಿ ಕಳೆದ ಏಳು ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಉತ್ತರ ಡಕೋಟ ಮತ್ತು ದಕ್ಷಿಣ ಡಕೋಟದಲ್ಲಿ ಹೆಚ್ಚು ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ನೆವಾಡಾದಲ್ಲಿ ಒಂದೇ ದಿನ 57 ಸಾವು ಸಂಭವಿಸಿದೆ. ಕ್ಯಾಲಿಫೋರ್ನಿಯಾದಲ್ಲಿ ದಿನವೊಂದರಲ್ಲಿ ಸಂಭವಿಸುವ ಸಾವಿನ ಸಂಖ್ಯೆ ಈಚೆಗೆ ಸರಾಸರಿ 200ಕ್ಕೆ ತಲುಪಿತ್ತು.

ವರ್ಲ್ಡೊ ಮೀಟರ್ ವೆಬ್‌ಸೈಟ್ ದತ್ತಾಂಶಗಳ ಪ್ರಕಾರ ಅಮೆರಿಕದಲ್ಲಿ ಈವರೆಗೆ 1.76 ಕೋಟಿಗೂ ಹೆಚ್ಚು ಮಂದಿ ಸೋಂಕಿತರಾಗಿದ್ದು, 3.17 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1 ಕೋಟಿಗೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ. 70 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.

ಪ್ರಸ್ತುತ, ವಿಶ್ವದಾದ್ಯಂತ 2 ಕೋಟಿಗೂ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT