ಭಾನುವಾರ, ಮೇ 16, 2021
24 °C
ಅಮೆರಿಕದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದವರಿಗೆ ಮಹತ್ವದ ಸ್ಥಾನ

ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತ ನೇಮಕ‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕದ ಖ್ಯಾತ ನಾಗರಿಕ ಹಕ್ಕುಗಳ ವಕೀಲರಾದ ವನಿತಾ ಗುಪ್ತ ಅವರು ದೇಶದ ಮೂರನೇ ಅತಿ ದೊಡ್ಡ ನ್ಯಾಯಾಂಗ ಹುದ್ದೆಯಾಗಿರುವ ಸಹ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಸೆನೆಟ್‌ನಲ್ಲಿ ಬುಧವಾರ ನಡೆದ ಮತದಾನದಲ್ಲಿ ರಿಪಬ್ಲಿಕನ್ ಸೆನೆಟ್‌ ಸದಸ್ಯೆ ಲಿಸಾ ಮಾರ್ಕೋವ್‌ಸ್ಕಿ ಅವರು ತಮ್ಮ ಪಕ್ಷದ ನಿಲುವಿನಿಂದ ಹೊರಬಂದು ವನಿತಾ ಗುಪ್ತ  (46) ಅವರಿಗೆ ಮತ ಚಲಾಯಿಸಿದರು. ಹೀಗಾಗಿ 51–49 ಮತಗಳ ಅಂತರದಿಂದ ಅವರು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು.  ಸೆನೆಟ್‌ನಲ್ಲಿ ಉಭಯ ಪಕ್ಷಗಳೂ ತಲಾ 50 ಸ್ಥಾನಗಳನ್ನು ಹೊಂದಿವೆ. ಮತದಾನ ವೇಳೆ ಟೈ ಆದರೆ ಮತ ಚಲಾಯಿಸುವ ಸಲುವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ಸಹ ಸೆನೆಟ್‌ನಲ್ಲಿ ಹಾಜರಿದ್ದರು.

ವನಿತಾ ಗುಪ್ತ ಅವರನ್ನು ಅಭಿನಂದಿಸಿರುವ ಅಧ್ಯಕ್ಷ ಜೋ ಬೈಡನ್‌, ‘ಜನಾಂಗೀಯ ಸಮಾನತೆ ಮತ್ತು ನ್ಯಾಯ ಕ್ಷೇತ್ರದಲ್ಲಿ ಅರ್ಪಣೆಯಿಂದ ಕೆಲಸ ಮಾಡುವ ಹೊಣೆಗಾರಿಕೆ ವನಿತಾ ಗುಪ್ತ ಮತ್ತು ಕ್ರಿಸ್ಟಿನ್ ಕ್ಲರ್ಕ್‌ ಅವರಿಗೆ ದೊರೆತಿದೆ. ಸೆನೆಟ್‌  ಇವರಿಗೆ ಸಹಕಾರ ನೀಡಬೇಕು’ ಎಂದು ಕೇಳಿಕೊಂಡಿದ್ದಾರೆ.

ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್‌ ಹುದ್ದೆ ಬಹಳ ಪ್ರತಿಷ್ಠಿತವಾಗಿದ್ದು, ಸಹ ಅಟಾರ್ನಿ ಜನರಲ್‌ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂರನೇ ಅತಿ ಪ್ರಮುಖ ಹುದ್ದೆಯಾಗಿದೆ. 2014–17ರಲ್ಲಿ  ಅವರು ಬರಾಕ್‌ ಒಬಾಮಾ ಅವಧಿಯಲ್ಲಿ ನಾಗರಿಕ ಹಕ್ಕುಗಳ ಸಹಾಯಕ ಅಟಾರ್ನಿ ಜನರಲ್ ಆಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು