ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಏನಿದು ಜಿ–7 ಶೃಂಗಸಭೆ? ಕಾರ್ಯಸೂಚಿ, ಕೀ ಪಾಯಿಂಟ್ಸ್‌ಗಳ ಮಾಹಿತಿ...

ಅಕ್ಷರ ಗಾತ್ರ

ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟವೇ ಜಿ–7 ಗುಂಪು. ಯುರೋಪಿಯನ್‌ ಒಕ್ಕೂಟದ ಸದಸ್ಯ ರಾಷ್ಟ್ರಗಳು, ಇತರೆ ಆಹ್ವಾನಿತ ದೇಶಗಳೊಂದಿಗೆ ಪ್ರತಿ ವರ್ಷ ವಾರ್ಷಿಕಜಿ–7 ಶೃಂಗಸಭೆ ನಡೆಸುತ್ತವೆ.

ಜಿ–7 ಸದಸ್ಯ ರಾಷ್ಟ್ರಗಳ ಒಟ್ಟಾರೆ ಜಾಗತಿಕ ಜಿಡಿಪಿ ಶೇ. 40 ರಷ್ಟಿದೆ. ವಿಶ್ವದ ಜನಸಂಖ್ಯೆಯ ಶೇ.10 ರಷ್ಟನ್ನು ಈ ದೇಶಗಳು ಪ್ರತಿನಿಧಿಸುತ್ತವೆ. ನ್ಯಾಟೋ ಗುಂಪಿನಂತೆ ಜಿ–7 ಗೆ ಯಾವುದೇ ಕಾನೂನು ಅಸ್ತಿತ್ವ, ಶಾಶ್ವತ ಸಚಿವಾಲಯ ಅಥವಾ ಅಧಿಕೃತ ಸದಸ್ಯರಿಲ್ಲ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು, ಮಾಡಿಕೊಳ್ಳಲಾದ ಒಪ್ಪಂದಗಳನ್ನು ಆಯಾ ದೇಶಗಳ ಆಡಳಿತ ಮಂಡಳಿಗಳು ಅನುಮೋದಿಸಬೇಕಾಗುತ್ತದೆ.

ಯುರೋಪಿಯನ್‌ ದೇಶಗಳ ಜಿ ಗುಂಪು ಅಸ್ತಿತ್ವಕ್ಕೆ ಬಂದಿದ್ದು 1975ರಲ್ಲಿ. 1977ರಲ್ಲಿ ಕೆನಡಾ ದೇಶ ಈ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರವೇ ಜಿ–7 ಗುಂಪು ರಚನೆಯಾಯಿತು. ನಂತರ ನಿಯಮಿತವಾಗಿ ವಾರ್ಷಿಕ ಶೃಂಗಸಭೆಗಳು ನಡೆದವು. 1998ರಲ್ಲಿ ರಷ್ಯಾ ಈ ಗುಂಪಿಗೆ ಸೇರ್ಪಡೆಯಾಯಿತು. ಆಗ ಸದಸ್ಯ ದೇಶಗಳ ಸಂಖ್ಯೆ 8ಕ್ಕೆ ಏರಿಕೆಯಾಯಿತು. 2014ರ ವರೆಗೂ ಜಿ–8 ಎಂದೇ ಕರೆಯಲಾಗುತ್ತಿತ್ತು. ರಷ್ಯಾ ದೇಶವು ಉಕ್ರೇನ್‌ ಮೇಲೆ ಅತಿಕ್ರಮಣ ಮಾಡಿದಾಗ ಆ ದೇಶವನ್ನು ಗುಂಪಿನಿಂದ ಹೊರಹಾಕಲಾಯಿತು. ಆಗ ಮತ್ತೆ ಜಿ ಗುಂಪಿನಲ್ಲಿ 7 ದೇಶಗಳು ಉಳಿದವು.

ಸದ್ಯ ಬಿಟ್ರನ್‌ ಕಡಲತೀರದ ನಗರ ಎಂದೇ ಖ್ಯಾತಿಯಾಗಿರುವಕಾರ್ನ್‌ವೆಲ್‌ನಲ್ಲಿ 47ನೇ ಜಿ–7 ಶೃಂಗಸಭೆ(ಜೂನ್‌ 11 ರಿಂದ 13) ನಡೆಯುತ್ತಿದೆ. ಭಾರತ ಸೇರಿದಂತೆಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ದೇಶಗಳನ್ನು ಅತಿಥಿ ರಾಷ್ಟ್ರಗಳಾಗಿ ಶೃಂಗಸಭೆಗೆ ಆಹ್ವಾನಿಸಲಾಗಿದೆ.

ಸದಸ್ಯ ದೇಶಗಳ ಪೈಕಿ ಪ್ರತಿ ವರ್ಷ ಒಂದೊಂದು ದೇಶ ಶೃಂಗಸಭೆಯನ್ನು ಆಯೋಜಿಸುತ್ತವೆ. ಈ ವರ್ಷ ಬ್ರಿಟನ್‌ ದೇಶ ಪ್ರಸ್ತುತ ನಡೆಯುತ್ತಿರುವ ಸಭೆಯನ್ನು ಆಯೋಜಿಸಿದೆ. ಮೂರು ದಿನಗಳ ಕಾಲದ ಈ ಸಭೆಯಲ್ಲಿ ವ್ಯಾಪಾರ, ಹಣಕಾಸು, ತಂತ್ರಜ್ಞಾನ, ಇಂಧನ ಹಂಚಿಕೆ ಸೇರಿದಂತೆ ಸಹಕಾರ ಮತ್ತು ಅಭಿವೃದ್ಧಿ ಕುರಿತಾಗಿ ಚರ್ಚೆ ನಡೆಸಲಾಗವುದು.

ಜಿ–7 ಕಾರ್ಯಸೂಚಿಗಳು...

70ರ ದಶಕದಲ್ಲಿ ಸದಸ್ಯ ದೇಶಗಳೊಂದಿಗಿನ ಪರಸ್ಪರ ಸಹಕಾರ ಮತ್ತು ಅಭಿವೃದ್ದಿ ಜಿ–7 ಶೃಂಗಸಭೆಯ ಪ್ರಮುಖ ಕಾರ್ಯಸೂಚಿಯಾಗಿತ್ತು. ನಂತರದ ದಿನಗಳಲ್ಲಿ ಅಂತರರಾಷ್ಟ್ರೀಯ ಆರ್ಥಿಕ ನೀತಿ, ವಿದೇಶಾಂಗ ನೀತಿ ಹಾಗೂ ಭದ್ರತೆಯನ್ನು ಕಾರ್ಯಸೂಚಿ ವ್ತಾಪ್ತಿಗೆ ತರಲಾಯಿತು.

ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆ ನಿಗ್ರಹ, ಶಿಕ್ಷಣ, ಆರೋಗ್ಯ, ಮಾನವ ಹಕ್ಕುಗಳು ಮತ್ತು ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆ ಮತ್ತು ಸವಾಲುಗಳನ್ನು ಕಾರ್ಯಸೂಚಿಯಲ್ಲಿ ಸೇರಿಸಲಾಗಿದೆ. ಸಭೆ ಮುಗಿದ ಬಳಿಕ ಸದಸ್ಯ ದೇಶಗಳು ತೆಗೆದುಕೊಂಡಿರುವ ನಿರ್ಧಾರ ಹಾಗೂ ಮಾಡಿಕೊಂಡಿರುವ ವ್ಯವಹಾರಿಕ ಒಪ್ಪಂದದ ಸಾರಾಂಶವನ್ನು ಬಿಡುಗಡೆ ಮಾಡಲಾಗುವುದು.

ಪ್ರಮುಖ ಬೆಳವಣಿಗೆಗಳು...

ಜಿ–7 ಶೃಂಗಸಭೆಯಲ್ಲಿ ಹಲವಾರು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಹಾಗೆಯೇ ಸಂತ್ರಸ್ತ ದೇಶಗಳಿಗೆ ಹಣಕಾಸು ನೇರವು ನೀಡಲಾಗಿದೆ. 1997ರಲ್ಲಿ ಸಂಭವಿಸಿದ ಚರ್ನೋಬಿಲ್‌ ಪರಮಾಣು ದುರಂತದ ಬಳಿಕ ಅಭಿವೃದ್ಧಿ ಕೆಲಸಗಳಿಗಾಗಿ ಜಿ ಗುಂಪಿನಿಂದ ₹ 20 ಸಾವಿರಾರು ಕೋಟಿ ನೆರವು ನೀಡಲಾಗಿದೆ.

2002ರ ಶೃಂಗಸಭೆಯಲ್ಲಿ ಏಡ್ಸ್, ಮಲೇರಿಯಾ ಮತ್ತು ಆಸ್ತಮಾ ನಿರ್ಮೂಲನೆಯ ಸಂಘಟಿತ ಹೋರಾಟಕ್ಕೆ ಕರೆ ನೀಡಲಾಯಿತು. ಇದರ ಪರಿಣಾಮ ಜಾಗತಿಕ ನಿಧಿ ಸಂಗ್ರಹಣೆ ಸಮಿತಿ ರಚನೆಯಾಯಿತು. ಈ ನಿಧಿಗೆ ವಿವಿಧ ದೇಶಗಳು ದೇಣಿಗೆ ನೀಡಿವೆ. ಜಾಗತಿಕವಾಗಿ 38 ಕೋಟಿಗೂ ಹೆಚ್ಚು ಜನರು ಜಿ–7 ದೇಶಗಳಿಂದ ನೆರವು ಪಡೆದಿದ್ದಾರೆ.

2015ರ ಶೃಂಗಸಭೆಯಲ್ಲಿ ಶುದ್ಧ ಇಂಧನ ಹಾಗೂ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಆಪೋಲೊ ಕಾರ್ಯಕ್ರಮವನ್ನು ಘೋಷಣೆ ಮಾಡಲಾಗಿದೆ. ಇದರ ಪ್ರಕಾರ ಸದಸ್ಯ ದೇಶಗಳು ತಮ್ಮ ಜಿಡಿಪಿಯಲ್ಲಿ ಶೇ 2ರಷ್ಟುನ್ನು ಖರ್ಚು ಮಾಡುತ್ತಿವೆ. ಈ ಅಪೋಲೊ ಯೋಜನೆ 2025ರವರೆಗೂ ಜಾರಿಯಲ್ಲಿ ಇರಲಿದೆ.

ರಚನಾತ್ಮಕ ಕೆಲಸ ಕಾರ್ಯಗಳ ನಡುವೆಯೂ ಜಿ–ಗುಂಪು ಹಲವು ವಿವಾದಗಳಿಗೂ ಕಾರಣವಾಗಿದೆ. 1985ರ ಬಳಿಕ ನಡೆದ ಹಲವು ಶೃಂಗಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಜಾಗತಿಕವಾಗಿ ಹಾಗೂ ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಿವೆ.

ಜಿ–7 ಗುಂಪಿನಲ್ಲಿ ಭಾರತ

ಭಾರತ ಮತ್ತು ಚೀನಾ ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶಗಳಾಗಿವೆ. ಈ ರಾಷ್ಟ್ರಗಳನ್ನು ಗುಂಪಿನಿಂದ ಹೊರಗಿಟ್ಟಕಾರಣ ಇತ್ತೀಚಿನ ದಶಕಗಳಲ್ಲಿ ಜಿ–7 ಗುಂಪಿನ ವರ್ಚಸ್ಸು ಕಡಿಮೆಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಭಾರತವನ್ನು ಈ ಗುಂಪಿಗೆ ಸೇರಿಸಬೇಕು ಎಂದು ಅಂತರರಾಷ್ಟ್ರೀಯ ಆರ್ಥಿಕ ಚಿಂತಕರು ಸಲಹೆ ನೀಡಿದ್ದಾರೆ. ಆದರೆ ಭಾರತದ ತಲಾ ಆದಾಯ ಕಡಿಮೆ ಇರುವುದರಿಂದ ಈ ಗುಂಪಿಗೆ ಸೇರಿಸುವುದು ಬೇಡ ಎಂದು ಕೆಲವರು ವಾದಿಸುತ್ತಿದ್ದಾರೆ.

ಭಾರತವನ್ನು 2021ರ ಜಿ–7 ಶೃಂಗಸಭೆಗೆ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ. ಈ ಸಭೆಯಲ್ಲಿ ಕೋವಿಡ್‌ ಲಸಿಕೆ ಕುರಿತಂತೆ ಭಾರತ ವಿಶ್ವದ ಗಮನ ಸೆಳೆಯುವ ಸಾಧ್ಯತೆ ಇದೆ. ಭಾರತ ವಿಶ್ವದ ಒಟ್ಟಾರೆ ಲಸಿಕೆ ಪ್ರಮಾಣದಲ್ಲಿ ಶೇ 50ರಷ್ಟನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾಹಿತಿ: ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT