ಕೋವಿಡ್ ಮೂಲ ಪತ್ತೆ ತನಿಖೆಗೆ ಚೀನಾದ ಸಹಕಾರ ಅಗತ್ಯ: ಡಬ್ಲ್ಯೂಎಚ್‌ಒ

ವಾಷಿಂಗ್ಟನ್: ಕೊರೊನಾವೈರಸ್‌ನ ಮೂಲ ಪತ್ತೆಗಾಗಿ ನಡೆಯುತ್ತಿರುವ ತನಿಖೆಗೆ ಚೀನಾ ಸಹಕರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಗೆಬ್ರೆಯೆಸಸ್ ಹೇಳಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ 'ಜಿ7' (ಗ್ರೂಪ್ ಆಫ್ ಸೆವೆನ್) ಸಮ್ಮೇಳನದ ವೇಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಶನಿವಾರ ಮಾತನಾಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ವೈರಸ್ ಮೂಲ ಪತ್ತೆ ತನಿಖೆಯ ಮುಂದಿನ ಹಂತದ ವೇಳೆ ಚೀನಾದಿಂದ ಉತ್ತಮ ಸಹಕಾರ ಮತ್ತು ಪಾರದರ್ಶಕತೆಯನ್ನು ನಿರೀಕ್ಷಿಸಿರುವುದಾಗಿ ಟೆಡ್ರೋಸ್ ತಿಳಿಸಿದ್ದಾರೆ.
ತನಿಖೆಯ ಮುಂದಿನ ಹಂತಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದ ಅವರು ಇದೇ ವಿಚಾರವಾಗಿ ಜಿ7 ನಾಯಕರ ಜೊತೆ ಚರ್ಚಿಸಿದರು. ʼನಿಮಗೇ ತಿಳಿದಿರುವಂತೆ ನಮಗೆ ಚೀನಾ ಕಡೆಯಿಂದ ಸಹಕಾರದ ಅಗತ್ಯವಿದೆ. ವೈರಸ್‌ನ ಮೂಲವನ್ನು ಅರ್ಥಮಾಡಿಕೊಳ್ಳಲು ಇಲ್ಲವೇ ಪತ್ತೆ ಹಚ್ಚಲು ಅಥವಾ ಕಂಡುಹಿಡಿಯಲು ಪಾರದರ್ಶಕತೆ ಬೇಕುʼ ಎಂದಿದ್ದಾರೆ.
ಈ ವಾರದ ಆರಂಭದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್, ಡಬ್ಲ್ಯೂಎಚ್‌ಒದ ʼಸಮಯೋಚಿತ, ಪಾರದರ್ಶಕ ಮತ್ತು ಸಾಕ್ಷ್ಯಾಧಾರ ಸಹಿತ ಸ್ವತಂತ್ರ ತನಿಖೆ ಪ್ರಕ್ರಿಯೆʼಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದವು.
ಇದನ್ನೂ ಓದಿ: ಕೋವಿಡ್ ಮೂಲದ ಪತ್ತೆಗೆ ಬೈಡನ್ ಸೂಚನೆ
ಕೊರೊನಾವೈರಸ್ ಸೋಂಕು ಪ್ರಕರಣ 2019ರ ಅಂತ್ಯದ ವೇಳೆ ಮೊದಲ ಬಾರಿಗೆ ಚೀನಾದಲ್ಲಿ ಪತ್ತೆಯಾಗಿತ್ತು. ಈ ವೈರಾಣುವಿನ ಮೂಲ ಪತ್ತೆಗಾಗಿ ತನಿಖೆ ನಡೆಸಲು ಮತ್ತಷ್ಟು ಪ್ರಯತ್ನ ಮಾಡಬೇಕು ಎಂದು ಅಧ್ಯಕ್ಷ ಜೋ ಬೈಡನ್ ಅವರು ಅಮೆರಿಕದ ಗುಪ್ತಚರ ಇಲಾಖೆಗೆ ಇತ್ತೀಚೆಗೆ ಹೇಳಿದ್ದರು.
ಇದೀಗ ಹಲವು ವಿಜ್ಞಾನಿಕಗಳು ಮತ್ತು ಜಾಗತಿಕ ನಾಯಕರು, ವೈರಸ್ ನೈಸರ್ಗಿಕವಾದುದ್ದೇ ಅಥವಾ ವುಹಾನ್ ಪ್ರಯೋಗಾಲಯದಿಂದ ಸೋರಿಕೆಯಾದುದೇ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.