ಸೋಮವಾರ, ಜನವರಿ 25, 2021
21 °C

ಕೋವಿಡ್‌ ಮೂಲಸ್ಥಾನ ಪರೀಕ್ಷೆ ಅನುಮತಿ ವಿಳಂಬ: ಚೀನಾ ವಿರುದ್ಧ ಡಬ್ಲ್ಯುಎಚ್‌ಒ ಬೇಸರ

ಎಪಿ Updated:

ಅಕ್ಷರ ಗಾತ್ರ : | |

Prajavani

ಜಿನೀವಾ: ವಿಶ್ವವನ್ನೇ ಹೈರಾಣಾಗಿಸಿರುವ ಕೊರೊನಾ ವೈರಸ್‌ನ ಮೂಲವನ್ನು ಪರೀಕ್ಷಿಸಲು ತಜ್ಞರ ತಂಡಕ್ಕೆ ಅನುಮತಿ ನೀಡುವುದನ್ನು ಅಂತಿಮಗೊಳಿಸದ ಚೀನಾ ಸರ್ಕಾರದ ಕ್ರಮ, ತಮ್ಮನ್ನು ತೀವ್ರ ನಿರಾಸೆಗೊಳಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

‘ಕೋವಿಡ್ 19 ಮೂಲ ಪರೀಕ್ಷಿಸುವ ಸಂಬಂಧ, ಅಂತರರಾಷ್ಟ್ರೀಯ ವೈಜ್ಞಾನಿಕ ತಂಡದ ಸದಸ್ಯರು, ತಮ್ಮ ತವರು ರಾಷ್ಟ್ರಗಳಿಂದ ಚೀನಾದತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ, ಪರೀಕ್ಷೆಗೆ ಅನುಮತಿ ನೀಡುವ ಕುರಿತು ಚೀನಾ ಸರ್ಕಾರ ಯಾವುದೇ ಅಂತಿಮ ತೀರ್ಮಾನ ಪ್ರಕಟಿಸಿಲ್ಲ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಜನರಲ್ ಟೆಡ್ರೋಸ್‌ ಅಧನಾಮ್‌ ಗೆಬ್ರೆಯೆಸಸ್ ತಿಳಿಸಿದ್ದಾರೆ.

ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೆಡ್ರೋಸ್‌‌ ‘ಚೀನಾದ ಅಧಿಕಾರಿಗಳು, ಅಂತರರಾಷ್ಟ್ರೀಯ ವೈಜ್ಞಾನಿಕ ತಂಡಕ್ಕೆ ಅನುಮತಿಯನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಗೊತ್ತಾಗಿದೆ. ಇದರಿಂದ ನಮಗೆ ತುಂಬಾ ನಿರಾಸೆಯಾಗಿದೆ. ತಂಡದ ಇಬ್ಬರು ಸದಸ್ಯರು ಈಗಾಗಲೇ ಪ್ರಯಾಣವನ್ನು ಆರಂಭಿಸಿದ್ದಾರೆ. ಕೆಲವರಿಗೆ ಕೊನೆಗಳಿಗೆಯಲ್ಲಿ ಹೊರಡಲು ಸಾಧ್ಯವಾಗಿಲ್ಲ. ಆದರೆ ಅವರೆಲ್ಲ ಚೀನಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರು‘ ಎಂದು ವಿವರಿಸಿದರು.‌

‘ಈ ಮಿಷನ್ ವಿಶ್ವ ಆರೋಗ್ಯ ಸಂಸ್ಥೆಯ ಆದ್ಯತಾ ವಿಷಯವಾಗಿದೆ’ ಎಂದು ಸ್ಪಷ್ಟಪಡಿಸಿರುವ ಟೆಡ್ರೋಸ್‌ ಅವರು, ‘ಚೀನಾ ಸರ್ಕಾರ, ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಆಂತರಿಕ ಕಾರ್ಯವಿಧಾನಗಳನ್ನು ವೇಗಗೊಳಿಸುವ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

‘ನಾವು ಆದಷ್ಟು ಶೀಘ್ರದಲ್ಲೇ ಈ ಯೋಜನೆ ಪ್ರಕ್ರಿಯೆ ನಡೆಯಲು ಉತ್ಸುಕರಾಗಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ವಿಶ್ವದ ವಿವಿಧ ಭಾಗಗಳ ತಜ್ಞರು ಕೊರೊನಾ ಸೋಂಕು ಮೊದಲ ಬಾರಿಗೆ ಪತ್ತೆಯಾದ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ವುಹಾನ್‌, ಒಂದು ವರ್ಷದ ಹಿಂದೆ ಕೊರೊನಾ ವೈರಸ್ ಮೊದಲು ಹೊರಹೊಮ್ಮಿದ ಸ್ಥಳವೆಂದು ಶಂಕಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು