ಬುಧವಾರ, ಫೆಬ್ರವರಿ 1, 2023
26 °C
ವಿಶ್ವ ಆರೋಗ್ಯ ಸಂಸ್ಥೆಯ ವರದಿ

350 ಕೋಟಿ ಜನರಿಗೆ ಬಾಯಿ ಅನಾರೋಗ್ಯ: ವಿಶ್ವ ಆರೋಗ್ಯ ಸಂಸ್ಥೆಯ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಯಿ ಕ್ಯಾನ್ಸರ್‌, ವಸಡಿನಲ್ಲಿ ಊತ, ಹಲ್ಲುಗಳಲ್ಲಿ ಸೋಂಕು ಮೊದಲಾದ ಬಾಯಿಗೆ ಸಂಬಂಧಿಸಿದ ಕಾಯಿಲೆಗಳಿಂದ ಜಗತ್ತಿನ ಅರ್ಧದಷ್ಟು ಜನರು ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.

ಬಾಯಿ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಎಲ್ಲ ಕಡೆಯೂ ಒಂದೇ ತೆರನಾಗಿ ದೊರೆಯುತ್ತಿಲ್ಲ ಎಂದು ಹೇಳಿರುವ ಸಂಸ್ಥೆ, ದುರ್ಬಲ ವರ್ಗದವರು ಹಾಗೂ ಸೌಲಭ್ಯ ವಂಚಿತ ಜನರಲ್ಲಿ ಈ ಸಮಸ್ಯೆಗಳು ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ‘ಎಲ್ಲರಿಗೂ ಬಾಯಿ ಆರೋಗ್ಯದ ಅವಕಾಶಗಳು ಮತ್ತು ಸವಾಲುಗಳು’ ಎಂಬ ವರದಿಯಲ್ಲಿ ತಿಳಿಸಿದೆ.

ಜಗತ್ತಿನ ಜನಸಂಖ್ಯೆಯ ಪೈಕಿ 350 ಕೋಟಿ ಜನರು (ಶೇ 45) ಹಲ್ಲಿನ ಸೋಂಕು, ವಸಡಿನ ಊತ ಹಾಗೂ ಬಾಯಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವಿಚಾರದಲ್ಲಿ 194 ದೇಶಗಳ ಸ್ಥಿತಿಗತಿ ತಿಳಿಸುವ ವರದಿಯನ್ನು ಪ್ರಕಟಿಸಿರುವ ಡಬ್ಲ್ಯುಎಚ್‌ಒ, ಕಳೆದ 30 ವರ್ಷಗಳಲ್ಲಿ ಇಂತಹ 100 ಕೋಟಿ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದೆ.

ವಸಡಿನಲ್ಲಿ ಊತ ಕಾಣಿಸಿಕೊಳ್ಳುವುದು, ಸೋಂಕು ಕಾಣಿಸಿಕೊಂಡು ಹಲ್ಲುಗಳು ಹುಳುಕಾಗುವುದು, ಬಾಯಿ ಕ್ಯಾನ್ಸರ್‌ ಉಂಟಾಗುವ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಹಲ್ಲಿನ ಸವೆತ ಎಂಬುದು ಅತಿ ಸಾಮಾನ್ಯವಾಗಿರುವ ವಿಚಾರ. ಜಗತ್ತಿನ ಸುಮಾರು 250 ಕೋಟಿ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ವಸಡಿನಲ್ಲಿ ಗಂಭೀರವಾಗಿ ಊತ ಕಾಣಿಸಿಕೊಂಡಿರುವ 100 ಕೋಟಿ ಜನರು ಇದ್ದಾರೆ. ಪ್ರತೀ ವರ್ಷ ಜಗತ್ತಿನಾದ್ಯಂತ ಬಾಯಿ ಕ್ಯಾನ್ಸರ್‌ನ 3.8 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲೇ ಈ ಸಮಸ್ಯೆ ಅಧಿಕವಾಗಿದೆ. ನಾಲ್ಕನೇ ಮೂರು ಭಾಗದಷ್ಟು ಇಂತಹ ಸಮಸ್ಯೆಗಳು ಈ ರೀತಿಯ ದೇಶಗಳಲ್ಲೇ ವರದಿಯಾಗಿವೆ. ಎಲ್ಲ ದೇಶಗಳಲ್ಲೂ ಕಡಿಮೆ ಆದಾಯ ಹೊಂದಿರುವ, ಅಶಕ್ತ, ವಯಸ್ಸಾದ, ಏಕಾಂಗಿಯಾದ, ವೃದ್ಧಾಶ್ರಮಗಳಲ್ಲಿ ವಾಸಿಸುತ್ತಿರುವ ಜನರು ಬಾಯಿ ಆನಾರೋಗ್ಯದ ದೊಡ್ಡ ಸಂತ್ರಸ್ತರು ಎಂದು ತಿಳಿಸಿದೆ. 

ಹೆಚ್ಚಿನ ಪ್ರಮಾಣದ ಸಕ್ಕರೆ ಬಳಕೆ, ತಂಬಾಕು ಮತ್ತು ಮದ್ಯ ಬಳಕೆಯಿಂದ ಸಮಸ್ಯೆಗಳು ಎದುರಾಗುತ್ತವೆ. ಬಾಯಿ ಅನಾರೋಗ್ಯಕ್ಕೂ ಇವು ಕಾರಣವಾಗಿವೆ. 

ಕಾಯಿಲೆಯ ಬಗ್ಗೆ ಮಾಹಿತಿಯ ಕೊರತೆ ಹಾಗೂ ಅಸಮರ್ಪಕ ನಿಗಾ ವ್ಯವಸ್ಥೆಯಿಂದ ಬಹಳ ಜನರು ಸೋಂಕು ತಗುಲಿದ ಎಷ್ಟೋ ಸಮಯದ ಬಳಿಕ ಚಿಕಿತ್ಸೆಗೆ ಮುಂದಾಗುತ್ತಾರೆ. ಹೀಗಾಗುವುದನ್ನು ತಡೆಯಬೇಕಾದರೆ ಎಲ್ಲ ದೇಶಗಳು ತಮ್ಮ ಪ್ರಾಥಮಿಕ ಆರೋಗ್ಯ ಕಾರ್ಯಕ್ರಮದಲ್ಲಿ ಬಾಯಿ ಆರೋಗ್ಯವನ್ನು ಸೇರಿಸಿ ಅನುಷ್ಠಾನಕ್ಕೆ ತರಬೇಕು ಎಂದು ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

ದೇಶದಲ್ಲೂ ಗಂಭೀರ ಸಮಸ್ಯೆ

ಭಾರತದಲ್ಲಿ ಪತ್ತೆಯಾಗುವ ಕ್ಯಾನ್ಸರ್ ಪ್ರಕರಣಗಳಲ್ಲಿ ಬಾಯಿ ಕ್ಯಾನ್ಸರ್‌ ಪ್ರಕರಣಗಳ ಪ್ರಮಾಣ
ಶೇ 30ರಷ್ಟಿದೆ ಎಂದು ವರದಿ ಯಾಗಿದೆ. 2020ರಲ್ಲಿ 1.30 ಲಕ್ಷ ಜನರಲ್ಲಿ ಬಾಯಿ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು ಎಂದು ಜಾಗತಿಕ ಕ್ಯಾನ್ಸರ್ ಮೇಲ್ವಿಚಾರಣೆ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ತಂಬಾಕು ಬಳಸುವ ಪ್ರವೃತ್ತಿ ವ್ಯಾಪಕವಾಗಿದೆ. ಈ ಪ್ರವೃತ್ತಿಯು ಬಾಯಿ ಕ್ಯಾನ್ಸರ್‌ನ ಅಪಾಯಕ್ಕೆ ಒಡ್ಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. 

ಆಧಾರ: ಎಎಫ್‌ಪಿ, ಬಾಯಿ ಆರೋಗ್ಯ ಸ್ಥಿತಿಗತಿ ಕುರಿತ ಡಬ್ಲ್ಯುಎಚ್‌ಒ ವರದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು