ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಹಂದಿಗಳಿಂದ ಪರಿಸರ ಮಾಲಿನ್ಯ: 10 ಲಕ್ಷ ಕಾರು ಉಗುಳುವ ಹೊಗೆಗೆ ಸಮ!

Last Updated 20 ಜುಲೈ 2021, 10:30 IST
ಅಕ್ಷರ ಗಾತ್ರ

ಮೆಲ್ಬೋರ್ನ್‌: ಕೃಷಿ ಬೆಳೆಗಳನ್ನು ಹಾಳು ಮಾಡುವ ಮೂಲಕ ರೈತರಿಗೆ ಸದಾ ತೊಂದರೆ ಕೊಡುವ ಕಾಡು ಹಂದಿಗಳು ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿಗಳು ಎಂದು ಗುರುತಿಸಿಕೊಂಡಿವೆ. ಸ್ಥಳೀಯ ವನ್ಯ ಸಸ್ಯವರ್ಗದ ಮೇಲೂ ಹಾನಿಯೆಸಗುವ ಕಾಡು ಹಂದಿಗಳು ಅತಿಹೆಚ್ಚು ಇಂಗಾಲದ ಡೈ ಆಕ್ಸೈಡ್‌ ಹೊರ ಸೂಸುವಿಕೆಗೂ ಕಾರಣವೆಂದು ತಜ್ಞರು ಹೇಳಿದ್ದಾರೆ.

ತೈವಾನ್‌ ಪ್ರದೇಶವೊಂದರಲ್ಲಿ ಕಾಡು ಹಂದಿಗಳಿಂದಾಗಿ ಒಂದು ವರ್ಷದಲ್ಲಿ ಪರಿಸರಕ್ಕೆ ಸೇರಿದ ಇಂಗಾಲದ ಡೈಆಕ್ಸೈಡ್‌ ಪ್ರಮಾಣವು 49 ಲಕ್ಷ ಟನ್‌. ಇದು 10 ಲಕ್ಷ ಕಾರುಗಳಿಂದ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ಗೆ ಸಮ ಎಂದು ಸಂಶೋಧಕರು ಹೇಳಿದ್ದಾರೆ.

ಆಸ್ಟ್ರೇಲಿಯಾವನ್ನು ಒಳಗೊಂಡ ಒಶಾನಿಯಾದಲ್ಲಿ ಕಾಡು ಹಂದಿಗಳಿಂದಾಗಿ ಪರಿಸರದ ಮೇಲೆ ಹಾನಿ ಹೆಚ್ಚು ಸಂಭವಿಸುತ್ತಿದೆ ಎಂಬುದನ್ನು ತಜ್ಞರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಕಾಡು ಹಂದಿಗಳು ಅತ್ಯಂತ ಅಪಾಯಕಾರಿ ಎಂದೆನಿಸಿಕೊಳ್ಳಲು ಪ್ರಮುಖ ಕಾರಣ ಟ್ರ್ಯಾಕ್ಟರ್‌ಗಳಂತೆ ಮಣ್ಣು ಕೆದಕಿ, ಗುಂಡಿ ಮಾಡುವುದಾಗಿದೆ. ಅಪಾರ ಪ್ರಮಾಣದ ಪ್ರದೇಶದಲ್ಲಿ ಹೀಗೆ ಮಣ್ಣನ್ನು ಕೆದಕುವುದರಿಂದ ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಹೆಚ್ಚಿದೆ ಎಂಬುದು ತಜ್ಞರ ವಾದವಾಗಿದೆ.

ಮಣ್ಣಿನ ಅಡಿದಲ್ಲಿ ದೊಡ್ಡ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ ಶೇಖರಗೊಂಡಿರುತ್ತದೆ. ಹಂದಿಗಳು ಕೋರೆಗಳಿಂದ ಗುಂಡಿ ಹೊಡೆದಾಗ ಬಿಡುಗಡೆಯಾಗುವ ಅಲ್ಪ ಪ್ರಮಾಣದ ಇಂಗಾಲದ ಡೈಆಕ್ಸೈಡ್‌ ಕೂಡ ಪರಿಸರದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ ಎಂದು ತಜ್ಞರಾದ ಕ್ರಿಸ್ಟೋಫರ್‌ ಜೆ ಒಬ್ರಯನ್‌, ಈವ್‌ ಮೆಕ್‌ಡೊನಾಲ್ಡ್‌-ಮ್ಯಾಡನ್‌, ಜಿಮ್‌ ಹೋನ್‌, ಮ್ಯಾಥ್ಯೂ ಎಚ್‌ ಹೋಲ್ಡನ್‌, ನಿಕೋಲಸ್‌ ಆರ್‌ ಪ್ಯಾಟನ್‌ ನಡೆಸಿದ ಸಂವಾದದಲ್ಲಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಮೊದಲೆಲ್ಲ ಯುರೋಪ್‌ ಮತ್ತು ಏಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯ ಕಾಡು ಹಂದಿಗಳು ಕಾಣಸಿಗುತ್ತಿದ್ದವು. ಆದರೆ ಈಗ ಅಂಟಾರ್ಟಿಕಾ ಒಂದು ಬಿಟ್ಟು ಬೇರೆಲ್ಲ ಖಂಡಗಳಲ್ಲೂ ಕಾಡು ಹಂದಿಗಳು ವಿಸ್ತರಿಸಿಕೊಂಡಿವೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ವಿಸ್ತರಿಸಿಕೊಳ್ಳುತ್ತಿರುವ ಸಸ್ತನಿಗಳ ಪೈಕಿ ಕಾಡು ಹಂದಿ ಒಂದಾಗಿದೆ. ಬರೀ ಆಸ್ಟ್ರೇಲಿಯಾ ಒಂದರಲ್ಲೇ 30 ಲಕ್ಷ ಕಾಡು ಹಂದಿಗಳಿವೆ.

ಆಸ್ಟ್ರೇಲಿಯಾದಲ್ಲಿ ಕಾಡು ಹಂದಿಗಳಿಂದಾಗಿ ಪ್ರತಿ ವರ್ಷ ಸುಮಾರು 7.4 ಕೋಟಿ ಡಾಲರ್‌ ಮೌಲ್ಯದ ಬೆಳೆಗಳು ನಾಶವಾಗುತ್ತಿವೆ. ಅಮೆರಿಕದಲ್ಲಿ 2.7 ಕೋಟಿ ಡಾಲರ್‌ ಮೌಲ್ಯದ ಕೃಷಿ ಬೆಳೆ ನಾಶವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

54 ವಿವಿಧ ದೇಶಗಳಲ್ಲಿರುವ 672 ಕಶೇರುಕ ಪ್ರಾಣಿಗಳು ಮತ್ತು ಸಸ್ಯ ಪ್ರಭೇದಗಳು ಅಳಿವಿನಂಚಿಗೆ ಸಾಗಲು ಕಾಡು ಹಂದಿಗಳೇ ನೇರ ಕಾರಣವಾಗಿವೆ. ಪ್ರಮುಖವಾಗಿ ಆಸ್ಟ್ರೇಲಿಯಾದ ನೆಲ ಕಪ್ಪೆಗಳು ಹಾಗೂ ಮರ ಕಪ್ಪೆಗಳ ಆಹಾರ ಹಾಗೂ ವಾಸಸ್ಥಾನಗಳನ್ನು ಕಾಡು ಹಂದಿಗಳು ನಾಶಪಡಿಸುತ್ತಿವೆ. ಕಾಡು ಹಂದಿಗಳ ಸಂತತಿ ವಿಪರೀತ ಹೆಚ್ಚಾದಂತೆ ಪ್ರಾಕೃತಿಕ ಅಸಮಾತೋಲನಕ್ಕೆ ಕಾರಣವಾಗುತ್ತದೆ. ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಜಾಗತಿಕವಾಗಿ ಕಾಡು ಹಂದಿಗಳು ಪ್ರತಿವರ್ಷ 36,214 ರಿಂದ 1,23,517 ಚದರ ಕಿ.ಮೀಗಳಷ್ಟು ಪ್ರದೇಶದ ನೆಲವನ್ನು ಅಗೆದು ಹಾಕುತ್ತವೆ. ಇದು ತೈವಾನ್‌ ನಿಂದ ಇಂಗ್ಲೆಂಡ್‌ನಷ್ಟು ಭೂಪ್ರದೇಶವಾಗಿದೆ.

ಕಾಡು ಹಂದಿಗಳು ಅತಿ ಚತುರ ಬುದ್ಧಿಯುಳ್ಳವು. ಒಂದು ಬಾರಿ ಬೇಟೆಗಾರರಿಂದ ಬಲಿಯಾದರೆ ಮತ್ತೊಂದು ಬಾರಿಗೆ ಉಳಿದ ಕಾಡು ಹಂದಿಗಳು ಬೇಟೆಗಾರರ ಸಂಚನ್ನು ಅರ್ಥೈಸಿಕೊಂಡು ತಪ್ಪಿಸಿಕೊಳ್ಳುತ್ತವೆ. ಹಾಗಾಗಿ ಕಾಡು ಹಂದಿಗಳ ಸಂತತಿಗೆ ತಡೆಯೊಡ್ಡುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT