ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಕೆಲವು ದಿನದ ಯುದ್ಧ ನಿರ್ಣಾಯಕ: ಝೆಲನ್‌ಸ್ಕಿ ಎಚ್ಚರಿಕೆ

ದೇಶದ ಪೂರ್ವ ಭಾಗದಲ್ಲಿ ರಷ್ಯಾದ ಕಾರ್ಯತಂತ್ರ– ಉಕ್ರೇನ್ ಜನತೆಗೆ ಅಧ್ಯಕ್ಷ ಝೆಲನ್‌ಸ್ಕಿ ಎಚ್ಚರಿಕೆ
Last Updated 11 ಏಪ್ರಿಲ್ 2022, 14:28 IST
ಅಕ್ಷರ ಗಾತ್ರ

ಕೀವ್‌/ಲಿವಿವ್ (ಎಪಿ): ದೇಶದ ಮೇಲೆ ದಾಳಿ ನಡೆಸುತ್ತಿರುವ ರಷ್ಯಾದ ಪಡೆಗಳು ನಮ್ಮ ದೇಶದ ಪೂರ್ವ ಭಾಗದಲ್ಲಿ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಹೀಗಾಗಿ ಮುಂದಿನ ಕೆಲ ದಿನಗಳು ಬಹು ಮಹತ್ವದ್ದಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಅಲ್ಲದೆ ಯುದ್ಧದ ಅಪರಾಧಗಳ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರಷ್ಯಾ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಭಾನುವಾರ ತಡರಾತ್ರಿ ದೇಶವನ್ನುದ್ದೇಶಿಸಿ ಸುಮಾರು ಒಂದು ಗಂಟೆ ಮಾತನಾಡಿದ ಅವರು, 'ಜನರು ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳದೆ, ಕ್ಷಮಾಪಣೆ ಕೇಳುವ ಧೈರ್ಯ ತೋರದೆ ಇದ್ದಾಗ ಹಾಗೂ ನಿಜ ಸ್ಥಿತಿಯನ್ನು ಒಪ್ಪಿಕೊಳ್ಳದೆ ಇದ್ದಗ ರಾಕ್ಷಸರಾಗುತ್ತಾರೆ. ಜಗತ್ತು ಇದನ್ನು ನಿರ್ಲಕ್ಷಿಸಿದಾಗ, ಇದೇ ಜಗತ್ತು ಎಂದು ರಾಕ್ಷಸರು ಭಾವಿಸುತ್ತಾರೆ. ಆದರೆ ಈ ಎಲ್ಲಾ ತಪ್ಪುಗಳನ್ನು ತಾವಾಗಿಯೇ ಒಪ್ಪಿಕೊಳ್ಳುವ ದಿನ ಬರಲಿದ್ದು, ಸತ್ಯವನ್ನು ಒಪ್ಪಿಕೊಳ್ಳಲಿದ್ದಾರೆ' ಎಂದು ಹೇಳಿದರು.

ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್‌ಗೆ ಬೇಕಿರುವ ಯುದ್ಧ ಸಲಕರಣೆಗಳು ಸೇರಿದಂತೆ ಇನ್ನಿತರ ನೆರವುಗಳನ್ನು ನೀಡಬೇಕು ಎಂದು ಜರ್ಮನಿ ಸೇರಿದಂತೆ ಇನ್ನಿತರ ದೇಶಗಳಿಗೆ ಮನವಿ ಮಾಡಿದರು.

ಪೂರ್ತಿ ನೆರವು ಅನುಮಾನ:'ಹಿಂದೆಂದಿಗಿಂತಲೂ ಹೆಚ್ಚು ಪರಾಕ್ರಮವಾಗಿ ದಾಳಿ ನಡೆಸುತ್ತಿರುವ ರಷ್ಯಾದ ಪಡೆಗಳನ್ನು ಹಿಮ್ಮೆಟ್ಟಿಸಲು ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚಿನ ನೆರವಿನ ಅಗತ್ಯವಿದೆ. ನಾವು ಅಪೇಕ್ಷಿಸಿದ ನೆರವು ಸಿಗಲಿದೆಯೇ ಇಲ್ಲವೊ ಎಂಬುದು ಗೊತ್ತಿಲ್ಲ. ಈ ಬಗ್ಗೆ ನನಗೆ ವಿಶ್ವಾಸವೇ ಇಲ್ಲ' ಎಂದು ಝೆಲನ್‌ಸ್ಕಿ ಹೇಳಿದ್ದಾರೆ.

ರಕ್ಷಣಾ ವ್ಯವಸ್ಥೆ ಧ್ವಂಸ: ಉಕ್ರೇನ್‌ನ ಡಿನಿಪ್ರೊ ಕೇಂದ್ರ ನಗರದ ದಕ್ಷಿಣ ಹೊರ ವಲಯದಲ್ಲಿದ್ದ ನಾಲ್ಕು ಎಸ್-300 ವಾಯು ರಕ್ಷಣಾ ಕ್ಷಿಪಣಿ ಲಾಂಚರ್‌ಗಳನ್ನು ಕ್ರೂಸ್ ಕ್ಷಿಪಣಿಗಳ ಮೂಲಕ ಹೊಡೆದುರುಳಿಸಿದ್ದಾಗಿ ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರಮೇಜರ್ ಜನರಲ್ ಐಗರ್ ಕೊಣಶೇನ್‌ಕೋವ್ ಹೇಳಿದ್ದಾರೆ.

ಅವುಗಳನ್ನು ಇತ್ತೀಚೆಗೆ ಯುರೋಪ್ ದೇಶವೊಂದು ಉಕ್ರೇನ್‌ಗೆ ಪೂರೈಸಿತ್ತು ಎಂದಿದ್ದಾರೆ. ಅಲ್ಲದೆ,ಭಾನುವಾರದ ದಾಳಿಯಲ್ಲಿ ಉಕ್ರೇನ್‌ನ 25 ಪಡೆಗಳನ್ನು ಹೊಡೆದುರುಳಿಸಿರುವುದಾಗಿ ಅವರು ಇದೇ ವೇಳೆ ತಿಳಿಸಿದ್ದಾರೆ.

ಆದರೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸ್ಲೊವೇಕಿಯಾ, ತಾನು ಉಕ್ರೇನ್‌ಗೆ ನೀಡಿದ್ದ ಕ್ಷಿಪಣಿ ವ್ಯವಸ್ಥೆಯನ್ನು ರಷ್ಯಾ ಧ್ವಂಸಗೊಳಿಸಿದ್ದಕ್ಕೆ ಸಾಕ್ಷಿ ಇಲ್ಲ ಎಂದು ತಿಳಿಸಿದೆ. ಮೈಕೊಲೇವ್‌ ಮತ್ತು ಹಾರ್ಕಿವ್ ಪ್ರದೇಶದಲ್ಲಿ ಸಹ ಇಂತಹದೇವಾಯು ರಕ್ಷಣಾ ಕ್ಷಿಪಣಿ ಲಾಂಚರ್‌ಗಳನ್ನು ನಾಶಪಡಿಸಿದ್ದಾಗಿ ರಷ್ಯಾ ಹೇಳಿಕೊಂಡಿದೆ.

ಪೂರ್ವದ ಡೊನ್‌ಬಾಸ್ ಪ್ರಾಂತ್ಯದಲ್ಲಿ ಉಕ್ರೇನ್ ವಿರೋಧಿ ನಿಲುವು ಹೊಂದಿದ ಉಕ್ರೇನ್‌ನ ಪ್ರತ್ಯೇಕತಾವಾದಿಗಳನ್ನು ಒಟ್ಟುಗೂಡಿಸಿಕೊಂಡು, ಉಕ್ರೇನ್ ವಿರುದ್ಧದ ದಾಳಿಯನ್ನು ರಷ್ಯಾ ಮತ್ತೆ ತೀವ್ರಗೊಳಿಸಿದೆ. ಅಲ್ಲದೆ ಈ ಭಾಗದಲ್ಲಿ ಸೈನ್ಯವನ್ನು ಮುನ್ನಡೆಸಲು ರಷ್ಯಾ ಯುದ್ಧದಲ್ಲಿ ನುರಿತ ಚೆಚನ್‌ ಬಂಡುಕೋರರನ್ನು ಹಾಗೂ ಅಧಿಕಾರಿಯೊಬ್ಬರನ್ನು ನೇಮಿಸಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಒಬ್ಬ ವ್ಯಕ್ತಿಯ ನೇಮಕಾತಿಯಿಂದ ಅಂಥದ್ದೇನೂ ಪರಿಣಾಮವಾಗದು ಎಂದು ಅಮೆರಿಕ ಹೇಳಿದೆ.

ಉಗ್ರ ಪ್ರತಿರೋಧ: ಪೂರ್ವ ಭಾಗದ ಡೊನೆಟ್‌ಸ್ಕ್‌ ಮತ್ತು ಲುಹಾನ್‌ಸ್ಕ್‌ ಪ್ರದೇಶಗಳಲ್ಲಿ ಉಕ್ರೇನ್‌ ಕೆಚ್ಚೆದೆಯಿಂದ ಹೋರಾಡುತ್ತಿದೆ, ಇದರಿಂದ ರಷ್ಯಾದ ಹಲವು ಟ್ಯಾಂಕ್‌ಗಳು, ವಾಹನಗಳು ಮತ್ತು ಫಿರಂಗಿಗಳು ಧ್ವಂಸಗೊಂಡಿವೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ.

ಮುಂದುವರಿದ ಸಂಕಷ್ಟ: ರಷ್ಯಾದಿಂದ ಹಾರ್ಕಿವ್‌ನಲ್ಲಿ ಶೆಲ್‌ ದಾಳಿ ಮುಂದುವರಿದಿದ್ದು, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಮರಿಯುಪೊಲ್‌ ಮತ್ತು ಡಾನ್‌ಬಾಸ್‌ ಬಂದರಿನ ಮೇಲಿನ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಮರಿಯುಪೊಲ್‌ನಲ್ಲಿ ಸಾವಿರಾರು ಮಂದಿ ಅನ್ನ, ನೀರಿಗಾಗಿ ಪರದಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT