ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಾಧನೆಗಿದೆ ನೂರೆಂಟು ದಾರಿ...

Last Updated 12 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಭವಿಷ್ಯದ ಬಗ್ಗೆ ಕನಸು ಕಾಣುವುದು ಸಹಜ. ಅದರಲ್ಲೂ ಯುವಜನತೆ ಕನಸುಗಳ ಬೆನ್ನು ಹತ್ತುವುದು, ಕನಸನ್ನು ನನಸು ಮಾಡಿಕೊಳ್ಳಲು ಏನೆಲ್ಲಾ ಪ್ರಯತ್ನ ನಡೆಸುವುದು.. ಅಂದುಕೊಂಡಿದ್ದು ಈಡೇರದಿದ್ದರೆ ಕ್ಷಣಕಾಲ ಹತಾಶರಾಗುವುದು ಬದುಕಿನ ಒಂದು ಭಾಗವೇ ಹೌದು. ಆದರೆ ಈ ವರ್ಷದ ಆರಂಭದಲ್ಲಿ ಬಹುತೇಕರು ಕೈಗೊಂಡಿದ್ದ ನಿರ್ಣಯಗಳಲ್ಲಿ ಜಾರಿಯಾಗಿದ್ದು ಮಾತ್ರ ಬೆರಳೆಣಿಕೆಯಲ್ಲಿ. ಕಾರಣ ಗೊತ್ತೇ ಇದೆ, ಅದು ಕೋವಿಡ್‌–19ನಿಂದಾಗಿ.

ಈ ಕೋವಿಡ್‌ ಹಲವರ ಉದ್ಯೋಗ, ಆದಾಯ, ನೆಮ್ಮದಿಯ ಬದುಕನ್ನು ಕಸಿದುಕೊಂಡುಬಿಟ್ಟಿದೆ. ಹಾಗಂತ ತಲೆಯ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳುವ, ಬದುಕೇ ಮುಗಿದೇ ಹೋಯಿತು ಎಂದು ಹತಾಶೆಯಲ್ಲಿ ಮುಳುಗಿ ಹೋಗುವ ಕಾಲವಿದಲ್ಲ. ಇತಿಹಾಸದಲ್ಲಿ ಇಂತಹ ನೂರಾರು ದಿಢೀರ್‌ ಆಘಾತಗಳನ್ನುಮನುಕುಲ ಎದುರಿಸಿ ನಿಂತಿದೆ ಮತ್ತೂ ನಿಲ್ಲಲೇಬೇಕಿದೆ.

ಯುವಶಕ್ತಿ ಈ ಸಂದರ್ಭದಲ್ಲಿ ಮುಚ್ಚಿ ಹೋಗಿರುವ ದುಡಿಮೆಯ ಹಾದಿಗೆ ಪರ್ಯಾಯ ಮಾರ್ಗಗಳನ್ನು ಶೋಧಿಸುತ್ತಾ ಮುನ್ನಡೆಯುತ್ತಿರುವ ನಿದರ್ಶನಗಳು ಕಣ್ಣೆದುರಿಗೆ ಇವೆ.

ಪ್ರಯತ್ನಕ್ಕೆ ಫಲ

ಈ ಇಬ್ಬರು ಸಹೋದರಿಯರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮೌನಿಕಾ, ಏರೋನಾಟಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ. ಇವರ ಅಕ್ಕ ಕುಸುಮಶ್ರೀ ಮೆಡಿಕಲ್‌ ‌ಕಾಲೇಜಿನಲ್ಲಿ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿನಿ. ತಂದೆಗೆ ನೆರವಾಗಲು ಈ ಇಬ್ಬರು ಸಹೋದರಿಯರು ತಾಯಿಯೊಂದಿಗೆ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಕುರಕಲು ತಿಂಡಿಗಳನ್ನು ಮಾಡಿಕೊಡುವ ಪ್ರಯತ್ನಕ್ಕೆ ಕೈಹಾಕಿದರು. ಈಗ ಈ ಸಹೋದರಿಯರ ತಿಂಗಳ ಗಳಿಕೆ ₹70 ಸಾವಿರದಿಂದ 80 ಸಾವಿರ ರೂಪಾಯಿ.

‘ನಾವು ಎಂಜಿನಿಯರಿಂಗ್‌, ಮೆಡಿಕಲ್‌ ಓದುತ್ತಿದ್ದೇವೆ. ನಾವು ಈ ಕೆಲಸ ಮಾಡಲು ಆಗುತ್ತದೆಯೇ ಎಂದು ಹಮ್ಮಿನಿಂದ ಕುಳಿತರೆ ಬದುಕು ನಡೆಯುವುದಿಲ್ಲ.‘ಲೇಬರ್‌ ಡಿಗ್ನಿಟಿ’ ವಿದೇಶಗಳಲ್ಲಿ ಅಷ್ಟಾಗಿ ಇಲ್ಲ. ಭಾರತದಲ್ಲಿ ಈ ಮನಸ್ಥಿತಿ ಬದಲಾಗಬೇಕು. ಎಲ್ಲರೂ ಎಲ್ಲಾಕೆಲಸ ಮಾಡಲೇಬೇಕು, ಇಂತಹ ಬದಲಾವಣೆಗೆ ನಾವೂ ಕಾರಣರಾಗಬೇಕು, ನಮ್ಮನ್ನು ನೋಡಿ ಕೆಲವರಾದರೂ ಬದಲಾಗಲೆಂದು ಕೊರೊನಾ ಕಾಲದಲ್ಲಿ ಈ ಪ್ರಯತ್ನ ಆರಂಭಿಸಿದ್ದೇವೆ’ಎನ್ನುತ್ತಾರೆ ಈ ಸಹೋದರರಿಯರು.

ಗ್ಲಾಮರ್‌ ಜಗತ್ತಿನಲ್ಲಿ ಒಳ್ಳೆಯ ಸಂಬಳದ ಕೆಲಸದಲ್ಲಿದ್ದ ಶಿವು (ಹೆಸರು ಬದಲಿಸಿದೆ) 3 ತಿಂಗಳ ಹಿಂದೆ ಕೆಲಸ ಕಳೆದುಕೊಂಡ. ಆತ ಕೈಕಟ್ಟಿ ಕೂರಲಿಲ್ಲ. ಬಿಟ್ಟುಬಂದ ಊರಿಗೆ ಹಿಂತಿರುಗಿದ, ಹಾಳು ಬಿದ್ದಿದ್ದ ಅಡಿಕೆ ತೋಟವನ್ನು ಮೂರು ತಿಂಗಳಲ್ಲಿ ಹದಕ್ಕೆ ತಂದ, ಬೇಸಾಯ ಕಾಣದೆ ಕುರುಚಲಿನಿಂದ ತುಂಬಿ ಹೋಗಿದ್ದ ಗದ್ದೆಯನ್ನು ಹಸನುಗೊಳಿಸಿ ಭತ್ತ ನಾಟಿ ಮಾಡಿದ, ಈಗ ಗದ್ದೆ ಪೈರಿನಿಂದ ನಳನಳಿಸುತ್ತಿದೆಯಂತೆ. ‘ಹರ್ಷದ ಕೂಳಿಗೆ ಬಂದು ವರ್ಷದ ಕೂಳು ಕಳೆದುಕೊಂಡಿದ್ದೆ. ಹೊಸ ಬದುಕು ಈಗ ಶುರುವಾಗಿದೆ. ಕೆಲಸ ಯಾವುದಾದರೇನು. ಮಾಡುವ ಶ್ರದ್ಧೆ ಇದ್ದರೆ ಸಾಕು. ಕೃಷಿಗೆ, ಹಳ್ಳಿಗೆ ಮರಳಿರುವುದಕ್ಕೆ ಅವಮಾನವಿಲ್ಲ’ ಎನ್ನುತ್ತಾನೆ ಶಿವು.

ಹಾಗೆಯೇ ಕಾನ್‌ಸ್ಟೆಬಲ್‌ ಆಗಿ ಪೊಲೀಸ್‌ ಇಲಾಖೆ ಸೇರಿದ್ದ ಶಿವಪ್ರಸಾದ್‌, ನಂತರಪಿಎಸ್‌ಐ ಆಗಿ ಆಯ್ಕೆಯೂ ಆದರು. ಆದರೆ ಸ್ವಂತ ಉದ್ಯೋಗದ ತುಡಿತದಲ್ಲಿದ್ದ ಅವರು ‘ನೆಲಮಂಗಲ ಫ್ರೆಷ್‌‌ ಫ್ರೂಟ್ಸ್‌ ಅಂಡ್‌ ವೆಜಿಟಬಲ್‌ ಕಂಪನಿ’ ಮತ್ತು ಸೂಪರ್‌ ಮಾರ್ಕೆಟ್‌ ಮಳಿಗೆಶುರು ಮಾಡಿದರು ಈಗ ವಹಿವಾಟು ₹5 ಕೋಟಿ ದಾಟಿದೆಯಂತೆ. ‘ಲಾಕ್‌ಡೌನ್‌ನಲ್ಲಿ ಬಹುತೇಕ ಎಲ್ಲರೂ ನಷ್ಟ ಅನುಭವಿಸಿದರು. ಆದರೆ, ನಮ್ಮ ವಹಿವಾಟುಐದು ಪಟ್ಟು ಹೆಚ್ಚಾಯಿತು’ ಎನ್ನುತ್ತಾರೆ.

ಈ ಕೋವಿಡ್‌ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಿಸುವವರಿಗೆ ಇವರೆಲ್ಲ ಮಾದರಿಯಲ್ಲವೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT