ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಳಿ ಹುಡುಗನ‘ಕ್ಯಾಮೆರಾ ಕಣ್ಚಳಕ’

ಅಕ್ಷರ ಗಾತ್ರ

ಹುಬ್ಬಳ್ಳಿಯ ಯುವಕನೊಬ್ಬ ದೂರದ ದುಬೈನಲ್ಲಿ ಫೋಟೊಗ್ರಫಿಯಲ್ಲಿ ಮಿಂಚುತ್ತಿದ್ದಾರೆ. ಎಲ್ಲ ಪ್ರಾಕಾರದ ಛಾಯಾಗ್ರಹಣದಲ್ಲೂ ‘ಸೈ’ ಎನಿಸಿಕೊಂಡಿರುವ ಅವರು, ದುಬೈ ಮಾಧ್ಯಮಲೋಕದಲ್ಲಿ ಫೋಟೊಗಳ ಮೂಲಕವೇ ಪರಿಚಿತರಾಗಿದ್ದಾರೆ!

ಹುಬ್ಬಳ್ಳಿ ನವನಗರದ ನಿವಾಸಿ ಆನಂದಕುಮಾರ ಮಹಾಂತೇಶ ಕೋಳಿವಾಡ, ದುಬೈ ಫೋಟೊಗ್ರಫಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕನ್ನಡಿಗ. ಎಂ.ಬಿ.ಎ– ಮಾರ್ಕೆಟಿಂಗ್‌ ಪದವಿ ಪಡೆದು, ಹಿಂದೂಸ್ತಾನ್ ಲೀವರ್, ಗರುಡಾ–ಟೆಕ್ ಕಾರ್ ಡೀಲರ್ಸ್‌, ಸೂದ್‌ಭವನ್ ಕಾರ್‌ ಡೀಲರ್ಸ್‌ (ಓಮನ್)ನಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಲೇ, ಹವ್ಯಾಸವಾಗಿ ಛಾಯಾಗ್ರಹಣ ಆರಂಭಿಸಿದರು. 2008ರಲ್ಲಿ ದುಬೈಗೆ ಹೋಗಿ ನೆಲೆಸಿದ ಅವರು, ಕೆಲ ಕಾಲ ‘ಅರೇಬಿಯನ್ ಆಟೊಮೊಬೈಲ್ಸ್‌’ ಹಾಗೂ ‘ಟೊಯೊಟೊ’ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದರು. ಸದ್ಯ ‘ಅಲ್‌ಗಾಂಧಿ ಗ್ರೂಪ್‌’ ಕಂಪನಿಯಲ್ಲಿ ಸೀನಿಯರ್ ಕಾರ್ಪೋರೇಟ್‌ ಡೀಲರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತನ್ನ ವೃತ್ತಿಯನ್ನು ಪ್ರೀತಿಸುವಷ್ಟೇ, ಪ್ರವೃತ್ತಿಯಾದ ಛಾಯಾಗ್ರಹಣ ವನ್ನು ಪ್ರೀತಿಸುತ್ತಾರೆ. ವೃತ್ತಿಜೀವನದಲ್ಲಿ ಕಂಡಿರುವಷ್ಟೇ ಯಶಸ್ಸನ್ನು ಪ್ರವೃತ್ತಿಯಲ್ಲೂ ಕಾಣುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕ್ಯಾಮೆರಾ ಹೆಗಲೇರಿಸಿ, ದುಬೈನ ಮರಳುಗಾಡಿಗೆ ಹೋಗುತ್ತಾರೆ. ಕೆಲಸದ ಒತ್ತಡದ ನಡುವೆ ಈ ‘ಕ್ಲಿಕ್‌ ಕ್ಲಿಕ್‌’ ಹವ್ಯಾಸ, ಅವರಿಗೆ ಒತ್ತಡ ನಿವಾರಿಸುವ ಚಟುವಟಿಕೆಯಾಗಿದೆ.

ಛಾಯಾಗ್ರಹಣಕ್ಕಾಗಿ ತಾಣಗಳ ಹುಡುಕಾಟ

ದುಬೈನಲ್ಲಿ ಛಾಯಾಗ್ರಹಣಕ್ಕಾಗಿಯೇ ಉತ್ತಮ ತಾಣಗಳಿವೆ. ವಿಶಾಲವಾದ ಮರಳುಗಾಡಿದೆ. ಅದರ ನಡುವಿರುವ ಒಯಸಿಸ್‌ನಂತೆಯೇ ಕೆಲ ಅತ್ಯುತ್ತಮ ‘ಫೋಟೊಗ್ರಫಿ ಸ್ಥಳಗಳೂ ಇಲ್ಲಿವೆ. ಸಲ್ಪ ಸಾಹಸ ಪ್ರವೃತ್ತಿ, ಹೊಸ ಪ್ರದೇಶಗಳಿಗೆ ಭೇಟಿ ನೀಡಬೇಕೆಂಬ ತುಡಿತವಿದ್ದರೆ, ದುಬೈ ಎಂಬ ಸ್ವರ್ಗವನ್ನು ನೀವು ಫೋಟೊಗ್ರಫಿಯಲ್ಲಿ ಅದ್ಭುತವಾಗಿ ಸೆರೆಹಿಡಿಯಬಹುದು’ ಎನ್ನುತ್ತಾರೆ ಆನಂದಕುಮಾರ.

ಪ್ರತಿ ವಾರಾಂತ್ಯವನ್ನೂ ಛಾಯಾಗ್ರಹಣಕ್ಕೆ ಮೀಸಲಿಡುವ ಆನಂದ್‌, ಪತ್ನಿ ಮಕ್ಕಳೊಂದಿಗೆ ಜೀಪ್‌ ಏರಿ ‘ಫೋಟೊಜೆನಿಕ್ ತಾಣ’ಗಳನ್ನು ಹುಡುಕುತ್ತಾ ಸಾಗುತ್ತಾರೆ. ಆನಂದ್ ಅವರ ದುಬೈ ಫೋಟೊಗ್ರಫಿಗೆ ಹನ್ನೊಂದು ವರ್ಷ.

ಎಲ್ಲ ಕಾಲದಲ್ಲೂ ದುಬೈನ ಅಪರೂಪದ ತಾಣಗಳನ್ನು ಸುತ್ತಾಡುತ್ತಾ, ಅಪರೂಪದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇಲ್ಲಿನ ವರ್ಣರಂಜಿತ ಮರಳುಗಾಡು, ಕಲಾಕೃತಿಗಳು, ಸಮುದ್ರ ಸೌಂದರ್ಯ, ಸಮುದ್ರದ ಒಳನೋಟ (ಅಂಡರ್ ವಾಟರ್), ನಿಸರ್ಗದ ಸೊಬಗು, ಸೂರ್ಯೋದಯ, ಸೂರ್ಯಾಸ್ತ, ವನ್ಯಜೀವಿಗಳು, ಬಾನಾಡಿಗಳು, ಹಾಟ್‌ಏರ್‌ ಬಲೂನ್, ಆಟೋಟ, ಸ್ಕೈ ಡೈವಿಂಗ್, ಮಿರಾಕಲ್‌ ಗಾರ್ಡನ್, ಗ್ಲೋಬಲ್‌ ವಿಲೇಜ್, ಬುರ್ಜ್‌ ಅಲ್‌ ಅರಬ್‌.. ಹೀಗೆ ಆನಂದ್ ತೆಗೆದ ಚಿತ್ರಗಳನ್ನು ನೋಡಿದರೆ ಅಚ್ಚರಿ ಎನ್ನಿಸುತ್ತದೆ. ಪ್ರತಿ ತಾಣವನ್ನು ವೈವಿಧ್ಯಮಯವಾಗಿ ಸೆರೆಹಿಡಿದಿದ್ದಾರೆ. ‘ಖಾಸಗಿ ಕಾರ್ಯಕ್ರಮವೊಂದರಲ್ಲಿ ದುಬೈ ಮಹಾರಾಜರ ಚಿತ್ರಗಳನ್ನು ಸೆರೆ ಹಿಡಿದಿರುವುದು ನನ್ನ ಛಾಯಾಗ್ರಹಣದ ಹವ್ಯಾಸದಲ್ಲೇ ವಿಶಿಷ್ಟ ಎನ್ನಿಸುವಂಥದ್ದು’ ಎನ್ನುತ್ತಾರೆ ಅವರು.

ದುಬೈ ಮಾಧ್ಯಮದಲ್ಲಿ ಪ್ರಕಟ

ಆನಂದಕುಮಾರ ಸೆರೆಹಿಡಿದ ಅದೆಷ್ಟೋ ಚಿತ್ರಗಳು ದುಬೈನ ರಾಷ್ಟ್ರೀಯ ದಿನಪತ್ರಿಕೆ ‘ಗಲ್ಫ್‌ ನ್ಯೂಸ್‌’ನಲ್ಲಿ ಪ್ರಕಟಗೊಂಡಿವೆ. ಇದಲ್ಲದೇ ಅವರು ಫೋಟೋ ವಾಕ್‌– ದುಬೈ, ದುಬೈ ಫೋಟೊಗ್ರಫಿ ಎಸ್ಸೇ, ಟಾಪ್‌ 100– ಇಂಡಿಯಾ, ದುಬೈ– ಇಂಡಿಯಾ ಕ್ಲಿಕ್... ಇತ್ಯಾದಿ ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ರಾಷ್ಟ್ರೀಯ, ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದಾರೆ. ಪ್ರತಿಷ್ಠಿತ ‘ನಿಕಾನ್‌’ ಕಂಪನಿ ಆನಂದಕುಮಾರ ಸೆರೆಹಿಡಿದ ಹಲವು ಚಿತ್ರಗಳನ್ನು ತಮ್ಮ ಜಾಹೀರಾತಿಗೆ ಬಳಸಿಕೊಂಡಿದೆ.

ಬರಿ ದುಬೈನಲ್ಲಿ ಮಾತ್ರವಲ್ಲದೇ ಕರ್ನಾಟಕದ ಪ್ರಮುಖ ಪ್ರವಾಸಿತಾಣಗಳಾದ ಅತ್ತಿವೇರಿ ಪಕ್ಷಿಧಾಮ, ಕಬಿನಿ ಹಿನ್ನೀರು ಪ್ರದೇಶಗಳಲ್ಲೂ ಛಾಯಾಗ್ರಹಣ ಮಾಡಿದ್ದಾರೆ. ದೆಹಲಿ, ಆಗ್ರಾಗಳಲ್ಲಿರುವ ತಾಣಗಳ ಚಿತ್ರಗಳನ್ನು ತಗೆದಿದ್ದಾರೆ. ಮುಂದೆ ಜರ್ಮನ್, ಯುರೋಪ್‌ಗಳಲ್ಲಿ ಫೋಟೊಗ್ರಫಿ ಮಾಡಬೇಕೆಂಬುದು ಅವರ ಅಪೇಕ್ಷೆ. ಲ್ಯಾಂಡ್‌ಸ್ಕೇಪ್‌, ಪೋರ್ಟ್ರೈಟ್, ಕ್ರಿಯೇಟಿವ್ ಜತೆಗೆ, ಸ್ಫೋರ್ಟ್ಸ್‌ ಹಾಗೂ ಆ್ಯಕ್ಷನ್‌ ಫೋಟೊಗ್ರಫಿಯಲ್ಲೂ ಅವರಿಗೆ ಆಸಕ್ತಿ ಇದೆ.

‘ಅತ್ಯುತ್ತಮ ಚಿತ್ರ ತೆಗೆಯಲು ಅತ್ಯುತ್ತಮ ತಂತ್ರಜ್ಞಾನ ಸಹಕಾರಿಯಾಗಿದೆ ಎನ್ನುವ ಅವರು ₹ 35 ಸಾವಿರದಿಂದ ₹ 1.5 ಲಕ್ಷ ಮೌಲ್ಯದ ಲೆನ್ಸ್‌ಗಳನ್ನು ಇಟ್ಟುಕೊಂಡಿದ್ದಾರೆ.₹3 ಲಕ್ಷ, ₹2 ಲಕ್ಷ, ₹1 ಲಕ್ಷ ಬೆಲೆಬಾಳುವ 3 ಕ್ಯಾಮೆರಾಗಳಿವೆ. ‘ಈ ಉತ್ಕೃಷ್ಟ ಸಾಧನಗಳ ಸಹಾಯದಿಂದ ನಾನು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗಿದೆ’ ಎನ್ನುತ್ತಾರೆ ಆನಂದಕುಮಾರ.

ಯೂಟ್ಯೂಬ್‌ ಗುರು

ಆನಂದ್‌ ಛಾಯಾಗ್ರಹಣವನ್ನು ಯಾವುದೇ ಕೋರ್ಸ್‌ ಮೂಲಕವಾಗಲಿ, ಕಾಲೇಜಿಗೆ ಹೋಗಿಯಾಗಲಿ ಕಲಿತಿಲ್ಲ. ಇವರ ಇಡೀ ಛಾಯಾಗ್ರಹಣದ ಕಲಿಕೆ ಯೂಟ್ಯೂಬ್‌ ಮೂಲಕವೇ ನಡೆದಿದೆ. ‘ಅತ್ಯುತ್ತಮ ಅಥವಾ ಬೆಲೆಬಾಳುವ ಕ್ಯಾಮೆರಾ ಇದ್ದ ಮಾತ್ರಕ್ಕೆ ಎಲ್ಲರೂ ಉತ್ತಮ ಫೋಟೊಗ್ರಾಫರ್‌ ಆಗಲು ಸಾಧ್ಯವಿಲ್ಲ. ಉತ್ತಮ ಫೋಟೋಗ್ರಫಿ ಮಾಡಲು ‘ಟೇಸ್ಟ್‌ ಆಫ್‌ ಫೋಟೊಗ್ರಫಿ’ ಇರಬೇಕು. ಅದನ್ನೂ ಮೀರಿ ಕ್ಯಾಮೆರಾವನ್ನು ನಿರ್ವಹಿಸುವ ತಂತ್ರಜ್ಞಾನದ ಅರಿವು, ಸುತ್ತಾಡಲು ಸಮಯ, ಸರಿಯಾದ ಕ್ಷಣಕ್ಕಾಗಿ ಕಾಯುವ ತಾಳ್ಮೆ ಇರಬೇಕು. ಆ ತಾಳ್ಮೆ 10 ನಿಮಿಷ, ಒಂದು ಗಂಟೆ ಅಥವಾ ಇಡೀ ದಿನವೇ ಆಗಬಹುದು’ ಎಂಬುದು ಅವರ ಅಭಿಪ್ರಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT