ಮಂಗಳವಾರ, ಸೆಪ್ಟೆಂಬರ್ 22, 2020
25 °C

ಹರಟೆ ಕಟ್ಟೆಗಳು...

ರಶ್ಮಿ ಕೆ Updated:

ಅಕ್ಷರ ಗಾತ್ರ : | |

ಕಥೆ, ಕವಿತೆ ವಾಚನ, ಸಮಕಾಲೀನ ವಿಚಾರಗಳನ್ನು ಮುಖಾಮುಖಿ ಚರ್ಚಿಸುವಂತಹ ಒಂದಷ್ಟು ಪ್ರಯತ್ನಗಳು ಹಲವೆಡೆ ಸಕ್ರಿಯವಾಗಿ ನಡೆಯುತ್ತಿವೆ. ಗಮನಸೆಳೆದಿರುವ ಇಂಥ ಕೆಲವು ಗುಂಪುಗಳ ರೂವಾರಿಗಳು ತಮ್ಮ ಗುಂಪಿನ ಉದ್ದೇಶ, ಮಾತುಕತೆ, ಚರ್ಚೆಗಳ ಸ್ವರೂಪವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
 

ಸಮಕಾಲೀನ ವಿಚಾರಗಳು ಸೇರಿದಂತೆ ಸಾಹಿತ್ಯ–ಸಂಸ್ಕೃತಿ ವಿಷಯಗಳನ್ನು ಚರ್ಚಿಸುವ ವೇದಿಕೆಯೇ ‘ಸಂಕಥನ’. ಇಲ್ಲಿ ಇಂಥದ್ದೇ ಥೀಮ್ ಎಂಬುದಿಲ್ಲ. ಭಾಗವಹಿಸುವವರಿಗೂ ಯಾವುದೇ ನಿರ್ಬಂಧಗಳು ಇಲ್ಲ. ಸಂಕಥನದಲ್ಲಿ ಯಾರು ಬೇಕಾದರೂ ಮಾತನಾಡಬಹುದು. ಅತಿಥಿಗಳಾಗಿ ಬರುವವರು ಚರ್ಚೆಗಳಿಗೆ ಚಾಲನೆ ಕೊಡುತ್ತಾರಷ್ಚೇ. ಮಾಹಿತಿಗಳ ಸಂವಹನವೇ ಇಲ್ಲಿ ಪ್ರಾಧಾನ್ಯ.

2014ರಲ್ಲಿ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಮೊದಲ ಸಂಕಥನ ನಡೆದಿತ್ತು. ಆಮೇಲೆ ಎಡ- ಬಲ- ಮಧ್ಯಮ ಪಂಥೀಯ ವಿಚಾರಧಾರೆಗಳು ಅಂತ ಒಂದಷ್ಟು ಜನ ಚದುರಿ ಹೋದರು. ಇತ್ತ ಸಂಕಥನ ಪುಸ್ತಕ ಪ್ರಕಾಶನದ ಕೆಲಸವನ್ನೂ ಆರಂಭಿಸಿತು.

ಸಂಕಥನದಲ್ಲಿ ಎಲ್ಲ ರೀತಿಯ ಜನರೂ ಭಾಗವಹಿಸುತ್ತಿರುತ್ತಾರೆ. ಪ್ರತಿ ಕಾರ್ಯಕ್ರಮವೂ ಹೊಸ ಜನರನ್ನು ಕರೆ ತಂದಿದೆ. ಒಮ್ಮೆ ನಿಂತು ಹೋಗಿದ್ದ ಸಂಕಥನ ಕಾರ್ಯಕ್ರಮ 2019ರಲ್ಲಿ ಮತ್ತೆ ಚುರುಕುಗೊಂಡಿತು. ‘ಮತ್ತೆ ಒಂದಾಗೋಣ’ ಎಂಬ ಕರೆಯ ಮೂಲಕ ಹೊಸ ಹುರುಪಿನೊಂದಿಗೆ ಸಂಕಥನ ಮುನ್ನಡೆಯುತ್ತಿದೆ. ಪ್ರತಿ ತಿಂಗಳ ಒಂದು ಭಾನುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿರುತ್ತದೆ. ಫೇಸ್‌ಬುಕ್ ಮೂಲಕ ಕಾರ್ಯಕ್ರಮದ ಮಾಹಿತಿ, ಪ್ರಚಾರ ನಡೆಯುತ್ತದೆ.

ಇದು ನಕಲಿ ಜ್ಞಾನದ ಕಾಲ. ಬಿತ್ತರವಾಗುವ ಮಾಹಿತಿಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವುದು ಕಷ್ಟ. ಸಾಮಾಜಿಕ ಮಾಧ್ಯಮದಂತಹ Virtual world ನಲ್ಲಿ ಸಂಪರ್ಕ ಸಾಧಿಸುತ್ತಿದ್ದರೂ ನಾವು ಮನುಷ್ಯತ್ವವನ್ನು ಕೊಲ್ಲುತ್ತಿದ್ದೇವೆ. ಮುಖತಃ ಭೇಟಿಯಾಗಿ ಚರ್ಚೆ ನಡೆಸುವಾಗ ಇಲ್ಲಿ ಹೆಚ್ಚಿನ ಸ್ಪಷ್ಟತೆ ಸಿಕ್ಕಿ ಬಿಡುತ್ತದೆ. ಸಂಕಥನ ಸಾಹಿತ್ಯ ಪತ್ರಿಕೆ ಜತೆಗೆ ‘ಅನೇಕ’ ತಂಡವು ಪುಸ್ತಕಗಳನ್ನು ಪ್ರಕಟಿಸುತ್ತಿದ್ದು, ಕವಿತೆಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಯಾಕೆಂದರೆ ಕವಿತೆಗಳನ್ನು ಪ್ರಕಟಿಸಲು ಯಾರೂ ಮುಂದೆ ಬರುವುದಿಲ್ಲ. ಇದಲ್ಲದೆ ಗದ್ಯ, ಆತ್ಮಕತೆ, ಪ್ರಬಂಧ ಸಂಕಲನಗಳನ್ನು ನಾವು ಪ್ರಕಟಿಸಿದ್ದೇವೆ.

– ರಾಜೇಂದ್ರ ಪ್ರಸಾದ್, ಮಂಡ್ಯ, ಸಂಕಥನ ರೂವಾರಿ

https://www.facebook.com/sankathan/

*******

ಮಾತುಕತೆ

ಹೆಸರೇ ಹೇಳುವಂತೆ ಇದು ಮಾತುಕತೆಯ ವೇದಿಕೆ. ಸಾಹಿತಿ ಎಂ. ಆರ್.ಕಮಲ ಅವರ ಮನೆಯಂಗಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ. ಸಾಹಿತ್ಯ,ವಿಜ್ಞಾನ, ಕಲೆ,ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯ ವಿನಿಮಯ ಮಾತ್ರವಲ್ಲ ಒಂದು ಆಪ್ತ ವಲಯವನ್ನು, ಜನರನ್ನು ಬೆಸೆಯುವ ಕೊಂಡಿಯಾಗಿದೆ.

ರಾಜಾಜಿನಗರ 1ನೇ ಎನ್‌ ಬ್ಲಾಕ್ ನಲ್ಲಿರುವ ಕಮಲ ಅವರ ಮನೆಯಲ್ಲಿ ಪ್ರತಿ ತಿಂಗಳ ಒಂದು ಶನಿವಾರ ಸಂಜೆ 6.30ಕ್ಕೆ ಈ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಅತಿಥಿಗಳೊಬ್ಬರು ನಿಗದಿತ ವಿಷಯದ ಬಗ್ಗೆ ಮಾತು–ಕತೆ ಆರಂಭಿಸುತ್ತಾರೆ. ಅಂದ ಹಾಗೆ ಇದು ಬರೀ ಹರಟೆಯಲ್ಲ. ಇಲ್ಲಿ ಪ್ರಾತ್ಯಕ್ಷಿಕೆ ಮತ್ತು ಕಲಾ ಪ್ರದರ್ಶನವೂ ಇರುತ್ತದೆ. ಇಲ್ಲಿಯವರೆಗೆ 27 ಸಂಚಿಕೆಗಳನ್ನು ನಡೆಸಿಕೊಂಡು ಬಂದಿರುವ ಮಾತುಕತೆ ನಿರ್ದಿಷ್ಟ ಕ್ಷೇತ್ರ ಅಥವಾ ವಿಷಯಕ್ಕೆ ಸೀಮಿತವಾಗಿಲ್ಲ. ಕಾರ್ಯಕ್ರಮದ ಅತಿಥಿ ಮೊದಲು ಮಾತನಾಡುತ್ತಾರೆ. ಆಮೇಲೆ ಸಂವಾದ. ವೈಚಾರಿಕ ತಿಳಿವಳಿಕೆ ಜತೆ ಹೊಸ ವಿಷಯಗಳನ್ನು ಅರಿತುಕೊಳ್ಳಲು ಮಾತುಕತೆ ಸಹಾಯ ಮಾಡುತ್ತದೆ.

ಸಮಾಜವನ್ನು ಆರೋಗ್ಯಕರವಾಗಿರಿಸಬೇಕು, ನೇರ ಭೇಟಿಗಳಿಂದ ಸಂಬಂಧಗಳು ಬೆಳೆಯುತ್ತವೆ. ಜನ ಜೀವನವನ್ನು ಒಳಗೊಂಡಿರುವ ವಿಷಯಗಳೇ ಇಲ್ಲಿನ ಆಕರ್ಷಣೆ. ನಮ್ಮ ಸುತ್ತ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿ ಕೂಡಾ. ಒಳ್ಳೆಯ ಕೆಲಸಗಳು ಸಾಂಕ್ರಮಿಕ ಆಗಿರಬೇಕು. ಇಂಟರ್ನೆಟ್ ಪರಸ್ಪರ ಜನರನ್ನು ಬೆಸೆಯುತ್ತದೆ. ಆದರೆ ಜತೆಯಾಗಿ ನಾವು ಸೇರಿದಾಗ ಅಲ್ಲಿ ಆತ್ಮೀಯತೆಯ ವಾತಾವರಣ ಸೃಷ್ಟಿಯಾಗುತ್ತದೆ.

ಎಂ. ಆರ್.ಕಮಲ, ಸಾಹಿತಿ

https://www.facebook.com/KathanaVisuals/

*****
ಈ ಹೊತ್ತಿಗೆ

ಇದು ಓದುಗರ ಗುಂಪು. ‘ಈ ಹೊತ್ತಿಗೆ’ ಎಂಬ ಹೆಸರೇ ಸೂಚಿಸುವಂತೆ ಇಲ್ಲಿ ಪುಸ್ತಕವೊಂದರ ಕುರಿತು ಚರ್ಚೆ, ಸಂವಾದಗಳು ನಡೆಯುತ್ತವೆ. ಈ ಗುಂಪಿನಲ್ಲಿ ಒಂದು ಪುಸ್ತಕವನ್ನು ಓದಿಕೊಂಡು ಬರುವಂತೆ ಸದಸ್ಯರಿಗೆ ತಿಳಿಸಲಾಗುತ್ತದೆ. ಆ ಪುಸ್ತಕವನ್ನು ಓದಿದವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಇಲ್ಲಿ ಅವಕಾಶವಿರುತ್ತದೆ.

ಮೊದಲು ಓದುಗರು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಮಂಡಿಸುತ್ತಾರೆ. ಈ ರೀತಿ ಜತೆಗೆ ಕುಳಿತು ಒಂದು ಪುಸ್ತಕದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸುವಾಗ ನಾವು ಪುಸ್ತಕಗಳನ್ನು ಗ್ರಹಿಸುವ ಮತ್ತು ಅರ್ಥ ಮಾಡಿಕೊಳ್ಳುವ ಆಯಾಮಗಳ ಬಗ್ಗೆ ಹೊಸತೊಂದು ಲೋಕ ತೆರೆದುಕೊಳ್ಳುತ್ತದೆ. ತಿಂಗಳ ಭಾನುವಾರದಂದು ಸಂಜೆ 4 ಗಂಟೆಗೆ ಜಯನಗರ 4ನೇ ಬ್ಲಾಕ್‌, 34 ಅಡ್ಡರಸ್ತೆಯಲ್ಲಿರುವ ‘ಸಿರಿಸಂಪಿಗೆ’ಯಲ್ಲಿ ‘ಈ ಹೊತ್ತಿಗೆ’ ಕಾರ್ಯಕ್ರಮ ನಡೆಯುತ್ತದೆ.

ಈ ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರನ್ನೂ ಆಹ್ವಾನಿಸಲಾಗುತ್ತದೆ. ಲೇಖಕರ ಮುಂದೆ ಓದುಗನಿಗೆ ಮುಕ್ತವಾಗಿ ಅಭಿಪ್ರಾಯಗಳನ್ನು ಹೇಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡು ಓದುಗರ ಚರ್ಚೆ ಮುಗಿದ ನಂತರ ಲೇಖಕರೊಂದಿಗೆ ಸಂವಾದ ಏರ್ಪಡಿಸಲಾಗುತ್ತದೆ. 

 2013 ಫೆಬ್ರುವರಿ 10ರಲ್ಲಿ ‘ಈ ಹೊತ್ತಿಗೆ’ ಆರಂಭವಾಯಿತು. ಇಲ್ಲಿವರೆಗೂ 71 ಪುಸ್ತಕಗಳ ಬಗ್ಗೆ ಚರ್ಚೆಯಾಗಿದೆ. ಇದರಲ್ಲಿ ಸುಮಾರು 50 ಲೇಖಕರು ತಮ್ಮ ಪುಸ್ತಕಗಳ ಚರ್ಚೆಗೆ ಬಂದಿದ್ದಾರೆ. ಈ ವೇದಿಕೆ ಪುಸ್ತಕಗಳ ಚರ್ಚೆಗಷ್ಟೇ ಸೀಮಿತವಾಗಿರದೆ ರಾಜ್ಯ ಮಟ್ಟದ ಕಥಾ ಕಮ್ಮಟ, ವಿಮರ್ಶಾ ಕಮ್ಮಟ ಮತ್ತು ಕಥಾ ಸ್ಪರ್ಧೆಗಳನ್ನೂ ಆಯೋಜಿಸಿದೆ. ಸುಮಾರು 45 ಮಂದಿ ಸದಸ್ಯರಿದ್ದಾರೆ. ಇದರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು.

- ಜಯಲಕ್ಷ್ಮಿ ಪಾಟೀಲ್, ಕಿರುತೆರೆ ನಟಿ, ಸಾಹಿತಿ

 https://bit.ly/30CgCTq

****

ಆಕೃತಿ ಸಂವಾದ

ಬೆಂಗಳೂರಿನ ರಾಜಾಜಿನಗರದ 3ನೇ ಬ್ಲಾಕ್‌ನಲ್ಲಿರುವ ‘ಆಕೃತಿ’ ಪುಸ್ತಕ ಮಳಿಗೆಯಲ್ಲಿ ನಡೆಯುವ ಕಾರ್ಯಕ್ರಮವೇ ‘ಆಕೃತಿ ಸಂವಾದ’ ಇಲ್ಲಿ ವಿವಿಧ ಕ್ಷೇತ್ರ ಮತ್ತು ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತದೆ. 2010 ಡಿಸೆಂಬರ್‌ನಲ್ಲಿ ಆರಂಭವಾದ ಈ ವೇದಿಕೆಯಲ್ಲಿ ಈವರೆಗೆ 90 ಸಂವಾದಗಳು ನಡೆದಿವೆ. ಸಾಹಿತ್ಯ, ವೈಚಾರಿಕ ಅಥವಾ ರಾಜಕಾರಣವೇ ಆಗಿರಲಿ ಅದರ ಬಗ್ಗೆ ಮಾಹಿತಿ ನೀಡಲು ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತದೆ. ಇಲ್ಲಿ ಮಾಹಿತಿ ಪೂರ್ಣ ಚರ್ಚೆಗೆ ಮಾತ್ರ ಅವಕಾಶವಿದೆ. ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ ಮೂಲಕ ಕಾರ್ಯಕ್ರಮದ ಮಾಹಿತಿಗಳನ್ನು ನೀಡಲಾಗುತ್ತದೆ.

ಮುಖತಃ ಭೇಟಿಯಾದಾಗ ತಿಳಿವಳಿಕೆ ಮತ್ತು ಗ್ರಹಿಕೆಗಳನ್ನು ತಿಳಿಗೊಳಿಸುತ್ತವೆ. ಇಲ್ಲಿ ಸಾಹಿತ್ಯ, ಪುಸ್ತಕ ಮತ್ತು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಚರ್ಚೆಯ ಜತೆಗೆ ನಿಖರ ಮಾಹಿತಿಗಳು ಜನರಿಗೆ ತಲುಪಬೇಕು. ಅದಕ್ಕಾಗಿ ತಜ್ಞರನ್ನೇ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ.

- ಗುರುಪ್ರಸಾದ್, ಆಕೃತಿ ಪುಸ್ತಕ ಮಳಿಗೆ ಮಾಲೀಕರು

*****

ಪದ್ಯ

ಹೆಸರೇ ಸೂಚಿಸುವಂತೆ ಇದು ಕಾವ್ಯಾಸಕ್ತರ ಗುಂಪು. ಇಲ್ಲಿ ಬೇರೆ ಬೇರೆ ಭಾಷೆಯ ಕವಿತೆಗಳ ಬಗ್ಗೆ ಓದು ಮತ್ತು ಸಂವಾದ ನಡೆಯುತ್ತದೆ. ಕನ್ನಡ ಕಾವ್ಯ ಲೋಕದ ಹೊರಗೆ ಬೇರೆ ಬೇರೆ ಭಾಷೆಗಳಲ್ಲಿ ಏನು ನಡೆಯುತ್ತಿದೆ ? ಅಲ್ಲಿನ ಕಾವ್ಯಲೋಕ ಹೇಗಿದೆ, ಅಲ್ಲಿನ ಕವಿಗಳು ಹೇಗೆ ಬರೆಯುತ್ತಾರೆ ಎಂಬುದನ್ನು ನೋಡುವ ಉದ್ದೇಶದಿಂದ ಹುಟ್ಟು ಹಾಕಿದ ಗುಂಪು ‘ಪದ್ಯ’.

ಅನೌಪಚಾರಿಕ ರೀತಿಯಲ್ಲಿ ನಡೆಯುವ ಕಾರ್ಯಕ್ರಮ ಇದು. ಅದು ಕಾವ್ಯಾಸಕ್ತರ ಮನೆಯಲ್ಲಿಯೇ ನಡೆಯುತ್ತದೆ. ಪ್ರತಿ ತಿಂಗಳ 25ರಂದು ಕಾರ್ಯಕ್ರಮ ನಡೆಯುತ್ತದೆ. ಇಲ್ಲಿ ಮೈಕ್, ವೇದಿಕೆ ಇರುವುದಿಲ್ಲ. ಕವಿತೆಗಳಿಗಷ್ಟೇ ಇಲ್ಲಿ ಆದ್ಯತೆ.

ಪ್ರತಿ ಸಂಚಿಕೆಯಲ್ಲಿಯೂ ನಿರ್ದಿಷ್ಟ ಭಾಷೆಯ ಸಮಕಾಲೀನ ಕವಿತೆಗಳನ್ನು ಆಯ್ಕೆ ಮಾಡಲಾಗುತ್ತದೆ. ಭಾಷೆಯ ಅನುವಾದಿತ ಕವಿತೆಗಳನ್ನು, ಮೂಲ ಕವಿತೆಗಳನ್ನು ಇಲ್ಲಿ ಓದಲಾಗುತ್ತದೆ. ಕವಿತೆಯ ಓದು ಮುಗಿದ ನಂತರ ಅತಿಥಿಗಳು ಅವರಿಗಿಷ್ಟವಾದ ಕವಿತೆ ಮತ್ತು ಅಲ್ಲಿನ ಕವಿತೆಗಳ ಬಗ್ಗೆ ಮಾತನಾಡುತ್ತಾರೆ.

ಬೆಂಗಳೂರಿನಲ್ಲಿ ಮಾತ್ರವಲ್ಲದೆ ಹೂವಿನ ಹಡಗಲಿ, ಮೈಸೂರು, ಹಾಸನದಲ್ಲಿಯೂ ’ಪದ್ಯ’ ತಂಡಗಳಿವೆ. ತಿಂಗಳ ಕಾರ್ಯಕ್ರಮವನ್ನು ಬೆಂಗಳೂರಿನ ತಂಡ ಆಯ್ಕೆ ಮಾಡುತ್ತಿದ್ದು, ಇನ್ನುಳಿದ ತಂಡಗಳು ತಮ್ಮ ಪ್ರದೇಶಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತವೆ. ‘ಪದ್ಯ’ಕ್ಕೆ ಈಗ ಒಂದು ವರ್ಷದ ತುಂಬಿದೆ.

ಇದು ಅತಿಥಿ ಕೇಂದ್ರಿತ ಕಾರ್ಯಕ್ರಮವಲ್ಲ, ಇಲ್ಲಿ ಕವಿತೆಯೇ ಜೀವಾಳ. ಇಲ್ಲಿ ಯಾರೂ ಅವರವರ ಕವಿತೆಗಳನ್ನು ಓದುವುದಿಲ್ಲ. ಇತರರ ಕವಿತೆಗಳನ್ನು ಪ್ರೀತಿಯಿಂದ ಓದುತ್ತಾರೆ. ಪ್ರತಿ ಕಾರ್ಯಕ್ರಮದಲ್ಲಿಯೂ ಸರಿ ಸುಮಾರು 30-35 ಕಾವ್ಯಾಸಕ್ತರು ಭಾಗವಹಿಸುತ್ತಾರೆ. ಇಲ್ಲಿಯವರೆಗೆ 1500 ಜನರನ್ನು ನಾವು ತಲುಪಿದ್ದೇವೆ. ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಪ್ರತಿ ತಿಂಗಳು 25ರ ಸಂಜೆ 6.30ಕ್ಕೆ ಪದ್ಯದಲ್ಲಿ ಕಾಣಿಸಕೊಳ್ಳಬಹುದು.

ಸಹ್ಯಾದ್ರಿ ನಾಗರಾಜ್ , ಪದ್ಯ ತಂಡದ ರೂವಾರಿ

****

ಬೆಂಗ್ಳೂರಾಗೂ ಬೇಂದ್ರೆ

ಬೇಂದ್ರೆ ಬದುಕು- ಬರಹ, ಬೇಂದ್ರೆ ಪದ್ಯಗಳ ಓದು, ಹಾಡು, ವಿಮರ್ಶೆ ಎಲ್ಲವೂ ಇರುವ ಸಾಹಿತ್ಯ ವೇದಿಕೆ ‘ಬೆಂಗ್ಳೂರಾಗೂ ಬೇಂದ್ರೆ’. ವರಕವಿ ಬೇಂದ್ರೆಯ ಬಗ್ಗೆ ಯುವಪೀಳಿಗೆಗೆ ಅರಿವು ನೀಡುವ ಕಾರ್ಯಕ್ರಮ ಇದು. ಇಲ್ಲಿಯವರಿಗೆ ಐದು ಸಂಚಿಕೆಗಳನ್ನು ಪೂರೈಸಿದೆ. ಬೇಂದ್ರೆಯವರ 5 ಕವಿತೆ, 5 ಹಾಡುಗಳನ್ನು ಆಯ್ಕೆ ಮಾಡಿ ಅಲ್ಲಿ ಈ ಕವಿತೆಗಳನ್ನು ಓದಲಾಗುತ್ತದೆ. ಪ್ರತಿ ತಿಂಗಳ ಒಂದು ಭಾನುವಾರ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00 ಗಂಟೆವರೆಗೆ ಈ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮಗಳು ತುಮಕೂರು ಮತ್ತು ಚಾಮರಾಜನಗರದಲ್ಲೂ ನಡೆಯುತ್ತಿವೆ. ಕಾರ್ಯಕ್ರಮ ಮುಗಿದ ನಂತರ ಯುಟ್ಯೂಬ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡುತ್ತಾರೆ.

ಜನವರಿ 30ರಂದು ಬೇಂದ್ರೆ ಹುಟ್ಟುಹಬ್ಬ. ಈ ಪ್ರಯುಕ್ತ ವೆಬ್‌ಸೈಟ್ ಆರಂಭಿಸುವ ಕಾರ್ಯ ನಡೆಯುತ್ತಿದೆ. ಬೇಂದ್ರೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕಳೆದ ಕಾರ್ಯಕ್ರಮದಲ್ಲಿ 68 ಮಂದಿ ಭಾಗಿಯಾಗಿದ್ದರು. ಫೇಸ್‌ಬುಕ್‌ನಲ್ಲಿ ಕಾರ್ಯಕ್ರಮದ ಮಾಹಿತಿ ನೀಡುತ್ತಿದ್ದು, ತಿಂಗಳ ಎರಡನೇ ಅಥವಾ ಮೂರನೇ ಭಾನುವಾರ ಈ ಕಾರ್ಯಕ್ರಮ ನಡೆಯುತ್ತದೆ. ಕವಿ, ಸಾಹಿತಿ ರಾಜಕುಮಾರ ಮಡಿವಾಳರ ಅವರು ಈ ಕಾರ್ಯಕ್ರಮದ ರೂವಾರಿ. ಕವಿತೆಗಳನ್ನು ಆಯ್ಕೆ ಮಾಡುವವರು ಕೂಡಾ ಅವರೇ. ಅವರ ನಿರ್ದೇಶನದಂತೆ ನಾವು ಕಾರ್ಯಕ್ರಮ ನಡೆಸುತ್ತೇವೆ.

- ಮೌನೇಶ ಕನಸುಗಾರ, ಕಾರ್ಯಕ್ರಮ ಸಂಚಾಲಕರು

 https://bit.ly/2RwMK6V

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.