ಬುಧವಾರ, ಏಪ್ರಿಲ್ 21, 2021
25 °C

ಎಸ್‌ಎಸ್‌ಎಲ್‌ಸಿ ಪಾಸ್... 14 ಕಂಪನಿಗಳಿಗೆ ಬಾಸ್‌!

ಪೃಥ್ವಿರಾಜ್ Updated:

ಅಕ್ಷರ ಗಾತ್ರ : | |

Prajavani

ಮೂವತ್ತೈದು ವರ್ಷದ ಯುವಕನಾದರೂ ಅಂಬಾನಿ, ಅದಾನಿಗಳಂತೆ ಕೆಲಸ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಬಿಲ್‌ಗೇಟ್ಸ್‌, ಎಲೆನ್‌ಮಸ್ಕ್ ಅವರ ವ್ಯಾಪಾರ ಶೈಲಿಗಳನ್ನು ಅನುಸರಿಸುತ್ತಾ ತಮ್ಮ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡುತ್ತಿರುವ ಈ ಯುವಕ ಓದಿದ್ದು 10ನೇ ತರಗತಿ. ಆ ಸರ್ಟಿಫಿಕೇಟ್‌ ಇಟ್ಟುಕೊಂಡೇ ಮೈಕ್ರೊಸಾಫ್ಟ್‌ನಲ್ಲಿ ಕೆಲಸ ಗಿಟ್ಟಿಸಿ ಅಮೆರಿಕಕ್ಕೆ ಹಾರಿದ್ದರು. ಆ ಕಂಪನಿಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ಭಾರತಕ್ಕೆ ಬಂದು ಸ್ವಂತ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. ಪ್ರಸ್ತುತ ಅವರು ಒಂದಲ್ಲಾ ಎರಡಲ್ಲ ಬರೊಬ್ಬರಿ 14 ಕಂಪನಿಗಳಿಗೆ ಬಾಸ್‌!

ನಮ್ಮ ನೆರೆಯ ರಾಜ್ಯ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ಬಳಿಯ ಗ್ರಾಮದ ಕೋಟಿರೆಡ್ಡಿ ಸರಿಪಲ್ಲಿ ಈ ಸಾಧಕ. ಬಡಕುಟುಂಬದಲ್ಲಿ ಜನಿಸಿದ ಅವರು, 10ನೇ ತರಗತಿ ಪಾಸಾದ ಮೇಲೆ ಎಂಸಿಎ ಮಾಡಿ, ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಂಡಿದ್ದರು. ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಕಾಲೇಜು ಮೆಟ್ಟಿಲುಗಳನ್ನು ಏರಲು ಅಡ್ಡಿಯಾಯಿತು.

ಸಂಕಟಗಳು ಎದುರಾದಾಗ, ಅವುಗಳಿಗೆ ಬೆನ್ನು ಹಾಕುವವರೇ ಹೆಚ್ಚು. ಆದರೆ ಕೋಟಿರೆಡ್ಡಿ ಹಾಗೆ ಮಾಡಲಿಲ್ಲ. ಎದುರಾದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿದರು. ಒಂದಷ್ಟು ದಿನ ಬೇಸಾಯ ಮಾಡಿದರು. ‘ಒಳ್ಳೆ ದಿನ ಬಂದೇ ಬರುತ್ತದೆ’ ಎಂಬ ಆಶಾಭಾವನೆಯಿಂದ ಕಾಯುತ್ತಿದ್ದರು. ‘ನಾವು ಕಂಪ್ಯೂಟರ್ ಯುಗದಲ್ಲಿ ಇದ್ದೇವೆ. ಕಂಪ್ಯೂಟರ್ ಮೇಲೆ ಹಿಡಿತ ಸಾಧಿಸಿದರೆ ಸಾಧನೆಗೆ ಅದೇ ದಾರಿ ತೋರಿಸುತ್ತದೆ’ ಎಂಬುದು ಅವರ ದೃಢವಾದ ನಂಬಿಕೆಯಾಗಿತ್ತು.

ಹೀಗೆ ಯಶಸ್ಸಿನ ಶಿಖರವನ್ನು ಏರಲೇಬೇಕು ಎಂಬ ದೃಢ ಸಂಕಲ್ಪದಿಂದ ಕಿಸೆಯಲ್ಲಿ ₹700 ಇಟ್ಟುಕೊಂಡು ಹೈದರಾಬಾದ್‌ಗೆ ಬಂದರು. ಅಲ್ಲಿ ಅಕ್ಕನ ಮನೆಯಲ್ಲಿ ಇದ್ದುಕೊಂಡು, ಕಂಪ್ಯೂಟರ್‌ಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಿದರು. ಹಲವು ಕಂಪನಿಗಳನ್ನು ಆರಂಭಿಸಿ ಕೆಲವರಿಗೆ ಉದ್ಯೋಗ ನೀಡಿ, ನಷ್ಟ ಅನುಭವಿಸಿ ಕೈ ಸುಟ್ಟುಕೊಂಡರು. ಈ ಕಹಿ ಅನುಭವಗಳು ‘ವ್ಯಾಪಾರ ಮಾಡುವುದಕ್ಕೆ ನೈಪುಣ್ಯವೊಂದೇ ಸಾಲದು’ ಎಂಬುದನ್ನು ತಿಳಿಸಿಕೊಟ್ಟವು. ಇದರಿಂದ ಮತ್ತೆ ಉದ್ಯೋಗ ಬೇಟೆಯಲ್ಲಿ ತೊಡಗಿದರು. ಇದಕ್ಕಾಗಿ ಜಾವಾ ಕೋರ್ಸ್‌ ಪೂರ್ಣಗೊಳಿಸಿ ಈ ಕೋರ್ಸ್ ಮಾಡಿದ ಅತಿ ಕಿರಿಯ ವ್ಯಕ್ತಿಯಾಗಿಯೂ ಸುದ್ದಿಯಾದರು.

ಈ ಕೋರ್ಸ್‌ನಿಂದಾಗಿ ಹೈದರಾಬಾದ್‌ ಕಂಪನಿಯಲ್ಲಿ ಅವರಿಗೆ ಕೆಲಸ ಸಿಕ್ಕಿತು. ಆದರೆ ಅಲ್ಲಿ ಎಲ್ಲರೂ ಇಂಗ್ಲಿಷ್ ಮಾತನಾಡುತ್ತಿದ್ದರು. ಅವರೊಂದಿಗೆ ವ್ಯವಹರಿಸಲು ಸಾಧ್ಯವಾಗದೇ, ಊರಿಗೆ ವಾಪಸ್ ಹೋಗುವ ನಿರ್ಧಾರ ಮಾಡಿದ್ದರು. ‘ಊರಿಗೆ ಹೋದರೆ ಏನು ಸಾಧಿಸಿದಂತಾಗುತ್ತದೆ’ – ಮತ್ತೆ ಅವರ ತಲೆಯಲ್ಲಿ ಯೋಚನೆ ಶುರುವಾಯಿತು. ನಂತರ ಅವರಿಗೆ ಅವರೇ ಸಮಾಧಾನ ಹೇಳಿಕೊಂಡರು. ಇದೇ ವೇಳೆಗೆ ಮೈಕ್ರೊಸಾಫ್ಟ್‌ ಸಂಸ್ಥೆಯಲ್ಲಿ ಕೆಲಸಕ್ಕಾಗಿ ಅರ್ಜಿ ಹಾಕಿದರು.

‘10ನೇ ತರಗತಿ ಓದಿದವರಿಗೆ ನಮ್ಮಲ್ಲಿ ಕೆಲಸ ಇಲ್ಲ’ ಎಂದು ಸಂಸ್ಥೆಯವರು ಕಡ್ಡಿ ಮುರಿದ ಹಾಗೆ ಹೇಳಿದರು. ಓದಿದ್ದು ಕಡಿಮೆಯಾದರೂ, ಅನುಭವ, ಜ್ಞಾನದಲ್ಲಿ ಜಾಣನಾಗಿದ್ದ ಕೋಟಿರೆಡ್ಡಿ, ಅದಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತಾ, ‘ಈ ಕಂಪನಿ ಸ್ಥಾಪಕ ಬಿಲ್‌ಗೇಟ್ಸ್‌ ಅರ್ಧಕ್ಕೆ ಕಾಲೇಜು ಬಿಟ್ಟವರಲ್ಲವೇ. ಇಂಥ ಸಂಸ್ಥೆಯಲ್ಲಿ ನನ್ನಂಥವನಿಗೆ ಯಾಕೆ ಕೆಲಸ ಕೊಡೋದಿಲ್ಲ’ – ನೇರವಾಗಿ, ಖಡಕ್‌ ಆಗಿ ಕಂಪನಿಯವರನ್ನು ಪ್ರಶ್ನಿಸಿದರು. ಈ ಪ್ರಶ್ನೆ ಕಂಪನಿಯವರ ಮನಸು ಬದಲಿಸಿತು. ಅಲ್ಲೇ ಕೆಲಸವನ್ನು ಕೊಡಿಸಿತು.

ಕೋಟಿರೆಡ್ಡಿ ಕೆಲಸಕ್ಕೆ ಸೇರಿದ ವೇಳೆ, ಆ್ಯಪಲ್‌ ಐಫೋನ್‌ಗಳ ದಾಳಿಯಿಂದ ಮೈಕ್ರೊಸಾಫ್ಟ್‌ಗೆ ಪೆಟ್ಟು ಬಿದ್ದಿತ್ತು. ಈ ನಷ್ಟವನ್ನು ಸರಿದೂಗಿಸಿಲು 140 ದೇಶಗಳಿಂದ ಸುಮಾರು 2 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮೈಕ್ರೊಸಾಫ್ಟ್ ನಿರ್ಧರಿಸಿತ್ತು. ಆಗ ಭಾರತದಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಇದೇ ರೆಡ್ಡಿ. ಮುಂದೆ ಮೈಕ್ರೊಸಾಫ್ಟ್‌ನಲ್ಲಿ ಕೆಲಸ ಮಾಡುತ್ತಾ, ಅಮೆರಿಕದಲ್ಲೇ ಪದವಿ ಪೂರ್ಣಗೊಳಿಸಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು. ಅಲ್ಲಿ 10 ವರ್ಷ ಕೆಲಸ ಮಾಡಿ ಭಾರತಕ್ಕೆ ಮರಳಿದರು.

ಸ್ವಂತವಾಗಿ ಕಂಪನಿ ನಡೆಸಬೇಕೆಂಬ ಕನಸು ಅವರನ್ನು ಕಾಡುತ್ತಲೇ ಇತ್ತು. ಈ ಪ್ರೇರಣೆಯಿಂದಲೇ ಕೋಟಿ ವೆಂಚರ್ಸ್‌ ಕಂಪನಿ ಸ್ಥಾಪಿಸಿದರು. ಕೇವಲ ಮೂವರು ಉದ್ಯೋಗಿಗಳಿಂದ ಸ್ಥಾಪನೆಯಾದ ಈ ಕಂಪನಿಯಲ್ಲಿ ಪ್ರಸ್ತುತ 500 ಜನ ಕೆಲಸ ಮಾಡುತ್ತಿದ್ದಾರೆ. 14 ಕಂಪನಿಗೊಳೊಂದಿಗೆ ಒಪ್ಪಂದ ಮಾಡಿಕೊಂಡು ವಾರ್ಷಿಕ ₹750 ಕೋಟಿ ವಹಿವಾಟು ನಡೆಸುತ್ತಿರುವ ಕಂಪನಿ ಒಡೆಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಅಂಬಾನಿಯಂತೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಸರು ಗಳಿಸಬೇಕು ಎಂಬ ಆಸೆ ಇಟ್ಟುಕೊಂಡಿರುವ ಕೋಟಿರೆಡ್ಡಿ ಅವರು, ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು