ಸೋಮವಾರ, ಫೆಬ್ರವರಿ 24, 2020
19 °C

Valentine Day | ಮಧುರ ದಿನದ ನೆನಪು

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಹತ್ತನೆಯ ತರಗತಿಯವರೆಗೂ ಬಾಲಕರ ಶಾಲೆಯಲ್ಲಿ ಓದಿದ್ದ ನನಗೆ ತುಂಬಾ ಹತ್ತಿರವಾಗಿದ್ದ ಹೆಂಗಸರೆಂದರೆ ನನ್ನ ಅಕ್ಕ ಮತ್ತು ಅಮ್ಮ. ಹತ್ತನೆಯ ತರಗತಿಯಲ್ಲಿ ಸಂಬಂಧಿಕರೆಲ್ಲ ನಿಬ್ಬೆರಗಾಗುವಷ್ಟು ಅಂಕವನ್ನು ಗಳಿಸಿದ ನಾನು ತಾಯಿಯ ಇಚ್ಛೆಯಂತೆ ಬೆಂಗಳೂರಿನ ಹೆಸರಾಂತ ವಿದ್ಯಾಸಂಸ್ಥೆಯೊಂದರಲ್ಲಿ ಪಿ.ಯು.ಸಿ ಗೆ ದಾಖಲಾದೆ. ಯಾರೊ ಬರೆದಿಟ್ಟಿರುವ ನಿಯಮದಂತೆ ಹೆಚ್ಚು ಅಂಕ ಗಳಿಸಿದ ನಾನು ವಿಜ್ಞಾನ ವಿಷಯವನ್ನು ಆರಿಸಿಕೊಂಡೆ. ಕಾಲೇಜ್‍ನ ಮೊದಲನೆಯ ದಿನದಂದು ಆಡಿಟೋರಿಯಂ ಪೂರ್ತಿ ಶಾಲಾ ಘಟ್ಟವನ್ನು ದಾಟಿ ಜೀವನದಲ್ಲಿ ಹೊಸ ಘಟ್ಟಕ್ಕೆ ಕಾಲಿಡುತ್ತಿದ್ದ ಯುವಕ ಯುವತಿಯರಿಂದ ತುಂಬಿ ಹೋಗಿತ್ತು. ಪೋಷಕರನ್ನೆಲ್ಲ ಬಾಲ್ಕನಿಯಲ್ಲಿ ಕುಳ್ಳಿರಿಸಿ ವಿದ್ಯಾರ್ಥಿಗಳನ್ನು ವೇದಿಕೆಯ ಮುಂಭಾಗಕ್ಕೆ ಕೂರಿಸುವ ವ್ಯವಸ್ಥೆ ಆಗಿತ್ತು. ವಿಜ್ಞಾನ ವಿಭಾಗದಲ್ಲಿ ‘ಎ’ ಇಂದ ‘ಜಿ’ ವರೆಗೂ ಒಟ್ಟು ಏಳು ಸೆಕ್ಷನ್‍ಗಳಿದ್ದವು. ನಾನು ‘ಡಿ’ ಸೆಕ್ಷನ್‍ಗೆ ಸೇರಿದವನಾಗಿದ್ದೆ. ಬರುವ ಸೋಮವಾರದಿಂದ ಕಾಲೇಜ್ ಶುರುವಾಗುತ್ತದೆಂದು ಪ್ರಾಂಶುಪಾಲರು ಸಮಾರಂಭದಲ್ಲಿ ಹೇಳಿದರು. ಕಾಲೇಜ್ ಶುರುವಾಗುವವರೆಗು ನಾನು “ಕಾಲೇಜಿನಲ್ಲಿ ಒಳ್ಳೇ ಸ್ನೇಹಿತರು ಸಿಗುತ್ತಾರೋ? ವಿಜ್ಞಾನ ವಿಷಯವನ್ನು ಆರಿಸಿಕೊಂಡು ತಪ್ಪು ಮಾಡಿದೆನೋ?” ಎಂಬ ಚಿಂತೆಯಲ್ಲಿದ್ದೆ. ಕೊನೆಗೂ ಸೋಮವಾರ ಬಂತು ಕಾಲೇಜಿನ ಮೊದಲ ದಿನವಾದ್ದರಿಂದ ಮನೆಯಿಂದ ಆದಷ್ಟು ಬೇಗವೇ ಹೊರಟೆ. ನೀಲಿ ಬಣ್ಣದ ಅಂಗಿ,ಕಪ್ಪು ಬಣ್ಣದ ಪ್ಯಾಂಟು, ಕಾಲಿಗೆ ಚೀಲ ಮತ್ತು ಬೂಟು ಧರಿಸಿ ಹೊರಟೆ. ಹೊಸಲು ದಾಟುವ ಮುನ್ನ ಅಮ್ಮ ದೃಷ್ಟಿ ತೆಗೆದಳು. ಆ ದಿನ ಬೇಗನೆ ಕಳೆದುಹೊಯಿತು. ನಾನು ಮನೆಗೆ ಮರಳಿದೆ. ಮೊದಲ ದಿನ ಪರಿಚಯವಾದ ಹುಡುಗರನ್ನು ಬಿಟ್ಟು ಬೇರೆಯವರೊಂದಿಗೆ ನಾನು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಶಾಲೆಯಲ್ಲಿ ಬರಿ ಹುಡುಗರೊಂದಿಗೆ ಇದ್ದ ಕಾರಣ ನನಗೆ ಹುಡುಗಿಯರೊಂದಿಗೆ ಮಾತನಾಡಲು ಆಗುತ್ತಿರಲಿಲ್ಲ. ಕೆಲವು ಹುಡುಗಿಯರು ಅವರೇ ಬಂದು ಮಾತನಾಡಿಸುತ್ತಿದ್ದ ಕಾರಣ ಒಂದೆರೆಡು ಮಾತುಗಳನ್ನಾಡಿ ಸುಮ್ಮನಾಗುತ್ತಿದ್ದೆ.

ಹೀಗಿರುವಾಗ ನಮ್ಮ ಯುವಪೀಳಿಗೆ ತಮ್ಮ ಸಂಸ್ಕೃತಿಯನ್ನು ಮರೆತುಹೋಗದಿರಲಿ ಎಂಬ ಕಾರಣಕ್ಕೆ ವರುಷದಲ್ಲಿ ಒಂದು ದಿನವನ್ನು ಕಾಲೇಜಿನ ಆಡಳಿತ ಮಂಡಳಿ “ಎಥ್ನಿಕ್ ಡೇ” ಎಂದು ಆಚರಿಸುತ್ತಿತ್ತು. ಆ ದಿನ ವಿದ್ಯಾರ್ಥಿಗಳೆಲ್ಲ ತಮಗೆ ಇಷ್ಟವಾದ ಅವರವರ ಸಂಸ್ಕೃತಿಯನ್ನು ಬಿಂಬಿಸುವಂತಹ ಉಡುಗೆಯನ್ನು ತೊಟ್ಟು ಬರಬಹುದಿತ್ತು. ಆ ದಿನ ಪಾಠಗಳಿರುತ್ತಿರಲಿಲ್ಲ ಆಡಿಟೋರಿಯಂನಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೋಡಿಕೊಂಡು ಕಾಲೇಜಿನ ಕ್ವಾಡ್ರಾಂಗಲ್ನ್‍ಲ್ಲಿ ಸೇರಬೇಕಿತ್ತು. 

ನಮ್ಮ ಕ್ಲಾಸಿನ ಹುಡುಗಿಯರನ್ನೆಲ್ಲ ನೋಡುತ್ತ ಹೋದ ಹಾಗೆ ನನ್ನ ದೃಷ್ಟಿ ಒಬ್ಬಳ ಮೇಲೆ ನಿಂತಿತು. ಆಕೆಯನ್ನು ನೋಡಿದ ತಕ್ಷಣ ನನ್ನ ಸುತ್ತಮುತ್ತಲಿನ ವಾತಾವರಣದ ಮೇಲೆ ನನಗೆ ಅರಿವೇ ಇಲ್ಲದಂತಾಯಿತು. ಸಾಮಾನ್ಯವಾಗಿ ಕ್ಲಾಸಿಗೆ ಚೂಡಿದಾರ ಧರಿಸಿ ಬರುತ್ತಿದ್ದ ಆಕೆಯನ್ನು ನಾನು ಕೆಲವೊಮ್ಮೆ ಲ್ಯಾಬ್ನಲ್ಲಿ ಮಾತನಾಡಿಸಿದ್ದೆ ಆದರೆ ಆ ಚೂಡಿದಾರ ಧರಿಸಿದ ಯುವತಿಯೂ ಮತ್ತು ಈಗ ನೇರಳೆ ಬಣ್ಣದ ಬಾರ್ಡರ್ ಉಳ್ಳ ಕಪ್ಪು ಬಣ್ಣದ ಸೀರೆಯನ್ನು ಧರಿಸಿದ್ದ ಹುಡುಗಿಯೂ ಇಬ್ಬರು ಬೇರೆ ಬೇರೆ ವ್ಯಕ್ತಿಗಳಂತೆ ಕಂಡರು. ತನ್ನ ನೀಳವಾದ ಕಪ್ಪುಕೂದಲನ್ನು ಸ್ವತಂತ್ರವಾಗಿ ಹಾರಲು ಬಿಟ್ಟು, ಕಿವಿಗೆ ಸಾಧಾರಣ ಓಲೆಯನ್ನು ಚುಚ್ಚಿ, ಮುಖಕ್ಕೆ ಹೆಚ್ಚು ಫೌಂಡೆಷನ್ನನ್ನು ಮೆತ್ತದೆ, ತುಟಿಗಳಿಗೆ ಗುಲಾಬಿ ಬಣ್ಣದ ಲಿಪ್‍ಸ್ಟಿಕ್‍ಅನ್ನು ಹಚ್ಚಿ, ಮೂಗಿನ ಮೇಲೆ ಚೌಕಾಕಾರದ ಕಪ್ಪು ಫ್ರೇಂ ಉಳ್ಳ ಕನ್ನಡಕವನ್ನು ಧರಿಸಿದ ಆಕೆ ಅಂದು ನನಗೆ ನಾನು ನನ್ನ ಜೀವಮಾನದಲ್ಲೇ ಎಂದು ನೋಡಿರದ ಸುಂದರಿಯಾಗಿ ಕಂಡಳು. ಆ ದಿನದ ಮನೆಗೆ ಮರಳಿದ್ದು ನನ್ನ ದೇಹ ಮಾತ್ರ ಮನಸ್ಸು ಅವಳ ಸೌಂದರ್ಯವನ್ನು ನೆನಪಿಸಿಕೊಳ್ಳುತ್ತ ಯಾವುದೋ ಲೋಕದಲ್ಲಿತ್ತು. ಪಿ.ಯು.ಸಿ ಎರಡೆನೆಯ ವರ್ಷವೆಲ್ಲ ಅವಳನ್ನು ನೋಡುತ್ತಲ್ಲೆ ಇದ್ದೆ ಒಂದೆರೆಡು ಬಾರಿ ಮಾತನಾಡಿಸುವ ಧೈರ್ಯ ಮಾಡಿದೆ.ಆಕೆ ಕ್ಲಾಸಿನಿಂದ ಹೋಗುವಾಗ ಮತ್ತು ಬರುವಾಗ ನಾನು ಅವಳನ್ನು ಅವಳಿಗೆ ತಿಳಿಯದಂತೆ ನೋಡುತ್ತಿದ್ದೆ. ಹೀಗೆ ವರುಷ ಪೂರ್ತಿ ಸಾಧ್ಯವಾದಷ್ಟು ಸಮಯವನ್ನು ಅವಳನ್ನು ನೋಡುತ್ತಲೆ ಕಳೆದೆ. ಬರುವ “ಎಥ್ನಿಕ್ ಡೇ”ಗೆ ಆಕೆಗೆ ಪ್ರೊಪೋಸ್ ಮಾಡಲು ನಿರ್ಧರಿಸಿದೆ.

ಆ ವರ್ಷದ “ಎಥ್ನಿಕ್ ಡೇ” ಗೆ ಆಕೆ ಹಸಿರು ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದಳು. ಈ ವರುಷ ಆಕೆ ಸ್ವಲ್ಪ ಮಾಡ್ರನ್ ಆಗಿದ್ದಳು. ತನ್ನ ನೀಳವಾದ ಕೂದಲನ್ನು ‘ವಿ’ ಆಕಾರದಲ್ಲಿ ಕಟ್ ಮಾಡಿಸಿ, ಕಣ್ಣುಬ್ಬುಗಳನ್ನು ಕೆತ್ತಿಸಿ, ಹೊಸ ಕನ್ನಡಕ ಧರಿಸಿದ್ದಳು.ಆದರೆ ಈ ವರ್ಷ ಆಕೆ ಇನ್ನಷ್ಟು ಸುಂದರವಾಗಿ ಕಂಡಳು. ಜೋತೆಗೆ ಆ ದಿನವೇ ನಮಗೆ ಕಾಲೇಜಿನ ಕಡೆ ದಿನ. ನಾನು ಆ ದಿನವನ್ನು ಬಿಟ್ಟರೆ ಇನ್ನಾವತ್ತು ಆಕೆಯನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ನಾನು ಆಕೆ ಅವಳ ಗೆಳೆತಿಯರ ಛಾಯಾಚಿತ್ರವನ್ನು ಸೆರೆಹಿಡಿಯುತ್ತಿರಬೇಕಾದರೆ ನಾನು ಎಂದು ಇಲ್ಲದ ಧೈರ್ಯದಿಂದ ಅವಳಿದ್ದ ಕಡೆಗೆ ದಿಟ್ಟ ಹೆಜ್ಜೆಯನ್ನು ಇಡುತ್ತಾ ನಡೆದೆ.

ಅವಳನ್ನು ಸಮೀಪಿಸಿದ ಕೂಡಲೇ “ನಾನು ನಿನ್ನೊಂದಿಗೆ ಸ್ವಲ್ಪ ಪ್ರೈವೇಟ್ ಆಗಿ ಮಾತನಾಡಬೇಕು ಎಂದೆ” ಕೂಡಲೇ ಆಕೆಯ ಸ್ನೇಹಿತರೆಲ್ಲ ಎಲ್ಲ ಅರಿವಾದಂತೆ “ಓ.....!” ಎಂದು ಕೂಗಲಾರಂಭಿಸಿದರು. ಆಕೆ ಮುಗುಳ್ನಗೆಯೊಂದಿಗೆ ನಮ್ಮ ಕ್ಲಾಸಿನಾಚೆಯಿದ್ದ ವೇದಿಕೆಯ ಬಳಿ ಬಂದು “ಹಾಂ.. ಹೇಳು” ಎಂದಳು. ಆ ಹಿಂದಿನ ರಾತ್ರಿ ಪಠಿಸಿದ್ದ ಸಾಲುಗಳೆಲ್ಲ ಆಕೆಯನ್ನು ನೋಡಿದ ಕೂಡಲೆ ಮರೆತು ಹೋದವು. ಕೊನೆಗೆ ನನ್ನ ಮನಸ್ಸಿನಲ್ಲಿದ್ದ ಮಾತುಗಳನ್ನೆ ಹೇಳಲು ತೀರ್ಮಾನಿಸಿದೆ. “ನಿನಗೆ ಈ ಡ್ರೆಸ್ಸ್ ತುಂಬಾ ಸುಂದರವಾಗಿ ಕಾಣುತ್ತದೆ. ಫಸ್ಟ್ ಇಯರ್ ಅಲ್ಲಿ ನಿನ್ನನ್ನು ನಾನು ಅಷ್ಟೊಂದು ಗಮನಿಸಲಿಲ್ಲ. ಆದರೆ ಆ ವರ್ಷದ ಎಥ್ನಿಕ್ ಡೇ ದಿವಸ ನಿನ್ನನ್ನು ನೋಡಿದ ಮೇಲೆ ನನಗೆ ನಿನ್ನ ಮೇಲೆ ಫೀಲಿಂಗ್ಸ್ ಶುರುವಾಯಿತು. ನೀನು ಬೆಳೆಯುತ್ತಾ ಸುಂದರಿಯಾದೆಯೊ ಅಥವಾ ಹುಟ್ಟುತ್ತಲೇ ಇಷ್ಟು ಸುಂದರವಾಗಿ ಹುಟ್ಟಿದೆಯೊ ನನಗೆ ಗೊತ್ತಿಲ್ಲ. ಆದರೆ ನಾನು ನನ್ನ ಜೀವನದಲ್ಲಿ ಈವರೆಗೂ ನಿನ್ನಷ್ಟು ಸುಂದರವಾದ ಹುಡುಗಿಯನ್ನು ನೋಡಿಲ್ಲ. ಸೆಕೆಂಡ್ ಇಯರ್ ಪೂರ್ತಿ ನಿನ್ನನ್ನು ನಾನು ಗಮನಿಸುತ್ತಾ ನಿನ್ನ ಗುಣವು ನಿನ್ನಷ್ಟೇ ಸುಂದರವಾಗಿದೆಯೆಂಬುದನ್ನು ಅರಿತೆ. ನಾನು ಓದಿದ್ದು ಬಾಯ್ಸ್ ಸ್ಕೂಲ್ನಲ್ಲಿ ಆದ್ದರಿಂದ ನಾನು ಪ್ರೀತಿಸಿದ ಮೊದಲ ಹುಡುಗಿ ನೀನೇ ಎನ್ನುವುದಕ್ಕೆ ಯಾವುದೆ ಸಂಶಯ ಬೇಡ. ನೀನು ನನ್ನ ಪ್ರೀತಿಯನ್ನು ಒಪ್ಪಿಕೊಂಡರೆ ನಾವಿಬ್ಬರೂ ಈ ರಿಲೆಷನ್‍ಷಿಪ್‍ಅನ್ನು ಮುಂದುವರೆಸಬಹುದು. ನಿನ್ನನ್ನು ನಿನ್ನ ತಂದೆ ತಾಯಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ನಾನು ಹೇಳಲ್ಲ. ಆದರೆ ನಿನ್ನ ಮನಸ್ಸಿಗೆ ನೋವುಂಟಾಗುವ ರೀತಿ ನಾನು ಎಂದು ನಡೆದುಕೊಳ್ಳುವುದಿಲ್ಲ. ನೀನು ನಿನ್ನ ಅಭಿಪ್ರಾಯವನ್ನು ಈಗಲೇ ಹೇಳಬೇಕೆಂದಿಲ್ಲ. ನಿನಗೆ ಬೆಕಾದಷ್ಟು ಸಮಯ ತೆಗೆದುಕೋ.ಹಾಗೆ ನೀನು ನನಗೆ ಈ ವಿಷಯದ ಕುರಿತಾಗಿ ಉತ್ತರಿಸಬೇಕೆಂದೆ ಇಲ್ಲ. ನೀನು ಯಾವ ಉತ್ತರವನ್ನು ನೀಡದೇ ಕೂಡ ಇರಬಹುದು.ಕಾಲೇಜಿನ ಕಡೆದಿನ ಪ್ರೊಪೋಸ್ ಮಾಡಿದ್ದೇನೆ ನೀನು ಈ ಪ್ರೊಪೋಸಲ್ ಅನ್ನು ಅಕ್ಸೆಪ್ಟ್ ಮಾಡಿದರೆ ನಾನು ಆದಷ್ಟು ಮುಂದೆ ನೀನು ಓದುವ ಕಾಲೇಜಿನಲ್ಲೇ ಓದಲು ಪ್ರಯತ್ನಿಸುತ್ತೇನೆ. ಈ ನಂಬರ್ ಗೆ ನಿನ್ನ ಉತ್ತರವನ್ನು ನಿನಗಿಷ್ಟವಾದಾಗ ಹೇಳು”ಎಂದು ಆಕೆಯ ಕೈಗೆ ಕಾಗದದ ಚೂರೊಂದನ್ನು ಇಟ್ಟೆ. “ಈ ವಿಷಯವನ್ನೇ ಹೇಳಬೆಕೆಂದು ನಾನು ನಿನ್ನನ್ನು ಕರೆದೆ” ಎಂದೆ. ಅದಾದ ಮೇಲೆ ನನಗೆ ಬಹಳ ಹೊತ್ತು ಕಾಲೇಜಿನಲ್ಲಿ ಇರಲು ಮನಸ್ಸಾಗಲಿಲ್ಲ. ಆದಷ್ಟು ಬೇಗ ಹೊರಟು ಮನೆಗೆ ಬಂದೆ.

– ಇಂತಿ, ಪ್ರೇಮಿ 

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು