ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗೆ ಜಾತಿಯ ಬಣ್ಣವೇಕೆ?

Last Updated 19 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ನಾನು ತುಂಬಾ ಓದುತ್ತೇನೆ. ನೆನಪಿನ ಶಕ್ತಿ ಕಡಿಮೆ ಇರುವುದರಿಂದ ಓದಿದ್ದು ಒಂದೆರಡು ದಿನಗಳಲ್ಲಿ ಮರೆತುಹೋಗುತ್ತದೆ. ಪೊಲೀಸ್ ಸಬ್‍ಇನ್‌ಸ್ಪೆಕ್ಟರ್ ಆಗಬೇಕು ಎಂಬ ಆಸೆಯಿದೆ. ನಾಲ್ಕು ಬಾರಿ ಪರೀಕ್ಷೆಯಲ್ಲಿ ವಿಫಲನಾಗಿದ್ದು ಜೀವನದಲ್ಲಿ ಸೋತಿದ್ದೇನೆ. ಸಹಾಯ ಮಾಡಿ.
-ಹೆಸರು, ಊರು ಇಲ್ಲ.

ಬೇಕಾದಷ್ಟು ವಿಚಾರಗಳಲ್ಲಿ ನಿಮಗೆ ಎಲ್ಲವೂ ಜ್ಞಾಪಕವಿರುತ್ತದೆ ಅಲ್ಲವೇ? ಉದಾಹರಣೆಗೆ ನಿಮ್ಮ ಆಸಕ್ತಿಯ ಕ್ರೀಡೆ, ಸ್ನೇಹಿತರು ಇತ್ಯಾದಿ. ಅಂದಮೇಲೆ ನಿಮಗೆ ನೆನಪಿನ ಶಕ್ತಿ ಕಡಿಮೆ ಎಂದು ಹೇಗೆ ಹೇಳುತ್ತೀರಿ? ಹಾಗಿದ್ದರೆ ಓದಿದ್ದು ಮಾತ್ರ ಏಕೆ ಜ್ಞಾಪಕದಲ್ಲಿ ಉಳಿಯುತ್ತಿಲ್ಲ?

ಇದಕ್ಕೆ ಎರಡು ಕಾರಣಗಳಿರಬಹುದು.

ಪೊಲೀಸ್ ಆಗಲೇಬೇಕೆಂಬ ಒತ್ತಡವನ್ನು ನಿಮ್ಮ ಮೇಲೆ ಹಾಕಿಕೊಂಡಿದ್ದೀರಿ. ಒತ್ತಡ, ಆತಂಕಗಳು ನೆನಪಿನ ಶಕ್ತಿ ಕುಂದಿಸುವುದಕ್ಕೆ ನಮ್ಮೆಲ್ಲರ ಮೆದುಳಿನ ರಚನೆಯೇ ಕಾರಣ. ಇದು ನಿಮ್ಮೊಬ್ಬರ ಸಮಸ್ಯೆಯಲ್ಲ. ಹಿಂದಿನ ಪ್ರಯತ್ನಗಳಲ್ಲಿನ ಸೋಲು, ಹಿಂಜರಿಕೆ, ಭಯ, ಕೀಳರಿಮೆಗಳು ನಿಮ್ಮನ್ನು ಕಾಡುತ್ತಿರಬಹುದೇ? ಇವುಗಳಿಂದ ಹೊರಬರಲು ಕುಟುಂಬದ, ಸ್ನೇಹಿತರ ಅಥವಾ ಅಗತ್ಯವಿದ್ದರೆ ಮನೋಚಿಕಿತ್ಸಕರ ಸಹಾಯ ಪಡೆಯಿರಿ.

ಓದುವ ವಿಷಯಗಳನ್ನು ಕೇವಲ ಪರೀಕ್ಷೆಗೆ ಬೇಕಾದ ಮಾಹಿತಿಯಾಗಿ ತೆಗೆದುಕೊಳ್ಳುತ್ತಿದ್ದೀರೇ ಹೊರತು ಅದರಲ್ಲಿ ನಿಮ್ಮ ಆಸಕ್ತಿಯನ್ನು ತೊಡಗಿಸುತ್ತಿಲ್ಲ. ಆಸಕ್ತಿಯಿಲ್ಲದ ವಿಚಾರಗಳನ್ನು ನೆನಪಿಟ್ಟುಕೊಳ್ಳುವ ವ್ಯವಸ್ಥೆ ಮೆದುಳಿನಲ್ಲಿ ಇಲ್ಲ. ಇದಕ್ಕೆ ಓದುವ ವಿಧಾನಗಳನ್ನು ಬದಲಿಸಿಕೊಳ್ಳಬೇಕು. ವಿಷಯಗಳ ಆಳಕ್ಕೆ ಹೋಗಿ ನಿಧಾನವಾಗಿ ಅರಗಿಸಿಕೊಂಡು ನಿಮ್ಮದಾಗಿಸಿಕೊಳ್ಳಬೇಕು. ವೃತ್ತಿಯಲ್ಲಿ ಅವುಗಳ ಉಪಯೋಗವನ್ನು ಮಾಡುವುದು ಹೇಗೆ ಎಂದು ಯೋಚಿಸಬೇಕು. ನೀವು ಅಧ್ಯಾಪಕರಾಗಿದ್ದರೆ ಟಿಪ್ಪಣಿಗಳ ಸಹಾಯವಿಲ್ಲದೆ ವಿಷಯವನ್ನು ವಿದ್ಯಾರ್ಥಿಗಳಿಗೆ ಹೇಗೆ ಬೋಧಿಸುತ್ತಿದ್ದೀರಿ ಎಂದು ಯೋಚಿಸಿ. ಇವುಗಳಿಗೆ ಶಿಕ್ಷಣತಜ್ಞರ ಸಹಾಯ ಪಡೆಯಬಹುದು.

**

ನಾನು ಪ್ರೀತಿಯಿಂದ ವಂಚಿತನಾದೆ. ಹುಡುಗಿ ಮತ್ತು ಅವಳ ಪ್ರಿಯಕರ ನನಗೆ ಮೋಸ ಮಾಡಿದರು. ವಿಷಯ ತಿಳಿದ ನಂತರ ‘ಮನೆಯಲ್ಲಿ ಹೇಳುತ್ತೇನೆ’ ಎಂದರೆ ‘ಹೇಳು’ ಎನ್ನುತ್ತಿದ್ದಾರೆ. ನನ್ನನ್ನೇ ಮಾನಸಿಕ ರೋಗಿಯಂತೆ ನೋಡುತ್ತಿದ್ದಾರೆ. ನಾನು ಗೊಂದಲಕ್ಕೊಳಗಾಗಿದ್ದೇನೆ. ಏನು ಮಾಡುವುದು ಎಂದು ಸಲಹೆ ನೀಡಿ.
-ಹೆಸರು, ಊರು ಇಲ್ಲ.

ಯೌವನದಲ್ಲಿ ಪರಸ್ಪರ ಆಕರ್ಷಣೆ ಸಹಜ. ನಿಮ್ಮನ್ನು ಅಕರ್ಷಿಸಿದ ಹುಡುಗಿಯ ಬಗ್ಗೆ ಪ್ರೀತಿಯ ಭಾವನೆಗಳು ಹುಟ್ಟಿದ್ದೂ ಸಹಜವೇ. ಹುಡುಗಿ ಈಗ ತನ್ನ ನಿರ್ಧಾರವನ್ನು ಬದಲಾಯಿಸಿದ್ದಾಳೆ. ಹಾಗಾಗಿ ನಿಮಗೆ ಅವಳಿಂದ ಮೋಸಹೋದ ಅನುಭವವಾಗುತ್ತಿರಬೇಕಲ್ಲವೇ? ಅವಳನ್ನು ಕಳೆದುಕೊಂಡ ಬೇಸರ ಮತ್ತು ನಾನು ಬಲಿಪಶುವಾದೆ ಎನ್ನುವ ಭಾವನೆಗಳು ನಿಮ್ಮಲ್ಲಿ ದ್ವೇಷವನ್ನು ಹುಟ್ಟಿಸಿ ಅವಳಿಗೆ ಬೆದರಿಕೆ ಹಾಕುವಂತೆ ಮಾಡಿವೆ. ಆದರೆ ಬೆದರಿಕೆಯಿಂದ, ಒತ್ತಾಯದಿಂದ ಸಿಗುವುದು ಪ್ರೀತಿಯಲ್ಲ, ದಾಸ್ಯ ಮಾತ್ರ. ಹುಡುಗಿ ತನ್ನ ಆಯ್ಕೆ ಮಾಡಿಕೊಂಡಿದ್ದಾಳೆ. ನಿಮ್ಮ ಆಯ್ಕೆ ಏನು? ಅವಳನ್ನು ದ್ವೇಷಿಸುತ್ತಾ, ಅವಳಿಗಾಗಿ ಕೊರಗುತ್ತಾ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುತ್ತೀರೋ ಅಥವಾ ಅವಳನ್ನು ಮರೆತು ನಿಮ್ಮ ಬದುಕಿನ ಗುರಿಗಳ ಬಗ್ಗೆ ಯೋಚಿಸುತ್ತೀರೋ? ಮರೆಯುವುದು ಆರಂಭದಲ್ಲಿ ಕಷ್ಟ. ಸತತವಾಗಿ ಪ್ರಯತ್ನಿಸಿದರೆ ನಿಮ್ಮೊಳಗಿರುವ ಗಟ್ಟಿತನ ಸಹಾಯಮಾಡುತ್ತದೆ.

ನೀವು ಪ್ರೀತಿಯಿಂದ ವಂಚಿತರಾಗಿಲ್ಲ. ಪ್ರೀತಿಯ ಹುಡುಕಾಟದಲ್ಲಿದ್ದೀರಿ. ಪ್ರಯತ್ನದಲ್ಲಿ ಸೋಲುಗಳು ಸಹಜ. ಮುಂದೆ ನಿಮ್ಮನ್ನು ಮೆಚ್ಚುವ ಹುಡುಗಿ ಸಿಗುತ್ತಾಳೆ.

**

ಪದವಿ ಓದುತ್ತಿರುವ ನಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಅವನು ಬೇರೆ ಜಾತಿಯವನು. ಒಂದು ವರ್ಷದಿಂದ ಇಬ್ಬರೂ ಖುಷಿಯಾಗಿದ್ದೆವು. ಇತ್ತೀಚೆಗೆ ಅವನು ದೂರವಾಗಿದ್ದಾನೆ. ಬೇರೆ ಜಾತಿಯ ಹುಡುಗಿಯನ್ನು ಅವನ ಪೋಷಕರು ಒಪ್ಪುವುದಿಲ್ಲವಂತೆ. ನನಗೆ ಅವನನ್ನು ಬಿಟ್ಟು ಇರಲು ಆಗುವುದಿಲ್ಲ. ನಿಧಾನವಾಗಿ ಜಾತಿ, ಬಣ್ಣ, ರೂಪಗಳಿಗಿಂತ ಪ್ರೀತಿ ಮಖ್ಯ ಅಂತ ತಿಳಿದು ಅವನು ಬಂದೇ ಬರುತ್ತಾನೆ ಎನ್ನುವ ನಂಬಿಕೆಯಿದೆ. ಅವನ ಪೋಷಕರಿಗೆ ಹೇಗೆ ಅರ್ಥ ಮಾಡಿಸುವುದು? ನಿಮ್ಮಿಂದ ಪಾಸಿಟಿವ್ ಉತ್ತರ ಬೇಕು.
-ಪೂಜಾ, ಬೆಂಗಳೂರು

ಪತ್ರ ಬಹಳ ಉದ್ದವಾಗಿದ್ದು ಅದರ ತುಂಬಾ ನಿಮ್ಮ ಪ್ರೀತಿಯ ತೀವ್ರತೆಯನ್ನು ಹೇಳಿಕೊಂಡಿದ್ದೀರಿ. ನಿಮ್ಮ ಪ್ರೀತಿ ಪ್ರಾಮಾಣಿಕವಾದದ್ದು ಎಂದುಕೊಳ್ಳೋಣ. ನೀವಿನ್ನೂ ವಿದ್ಯಾರ್ಥಿನಿ. ಪ್ರೀತಿ ಮದುವೆಯಾಗಿ ಬದಲಾಗುವುದಕ್ಕೆ ಬಹಳ ಸಮಯ ಬೇಕಲ್ಲವೇ? ಅಲ್ಲಿಯವರೆಗೆ ಎದುರಾಗುವ ಎಲ್ಲಾ ಪರೀಕ್ಷೆಗಳನ್ನು ಇಬ್ಬರೂ ಗೆದ್ದರೆ ಮಾತ್ರ ಜೀವನಪರ್ಯಂತ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯ. ನಿಮ್ಮಿಬ್ಬರ ಪ್ರೀತಿ ಮೊದಲನೇ ಪರೀಕ್ಷೆಯನ್ನು ದಾಟಲು ಕಷ್ಟಪಡುತ್ತಿದೆ. ಇದರ ಅರ್ಥ ಪ್ರೀತಿಯಿನ್ನೂ ಆಳವಾಗಿ ಬೇರುಬಿಟ್ಟಿಲ್ಲ ಅಂತಲ್ಲವೇ?

ಪ್ರೀತಿ ಆಳವಾಗಿ ಬೇರೂರಲು ಸಮಯ ಬೇಕು. ಹಾಗಾಗಿ ಸಹನೆಯನ್ನು ಉಳಿಸಿಕೊಳ್ಳಿ. ಸದ್ಯಕ್ಕೆ ನಿಮ್ಮ ವಿದ್ಯಾರ್ಥಿ ಜೀವನದ ಬಗೆಗೆ ಹೆಚ್ಚು ಗಮನಕೊಡಿ. ನೀವಿಬ್ಬರೂ ಆರ್ಥಿಕವಾಗಿ ಸ್ವತಂತ್ರರಾದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಸಿಗುತ್ತದೆ. ಅಲ್ಲಿಯವರೆಗೆ ಹುಡುಗನಿಗೆ ಪ್ರೀತಿಯನ್ನು ಮುಂದುವರೆಸಲು ಒತ್ತಾಯಿಸುತ್ತಾ ನಿರಾಸೆಗೊಳ್ಳುವ ಬದಲು ನಿಮ್ಮ ಜೀವನವನ್ನು ರೂಪಿಸಿಕೊಂಡರೆ ಹೇಗಿರುತ್ತದೆ ಯೋಚಿಸಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT