ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಬ್ದುಲ್‌ ಕಲಾಂರಂತೆ ಆಗುವ ಬಯಕೆ’

Last Updated 7 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ನನಗೆ 22 ವರ್ಷ. ಎಂ.ಎಸ್ಸಿ. ಓದುತ್ತಿದ್ದೇನೆ. ನನಗೆ ಅಬ್ದುಲ್ ಕಲಾಂ ಅವರಂತೆ ಸಾಧನೆ ಮಾಡಲು ಆಗುತ್ತಿಲ್ಲ ಎನ್ನುವ ಚಿಂತೆ. ನನ್ನ ಕೈಯಲ್ಲಿ ಏನು ಮಾಡಲು ಆಗುತ್ತಿಲ್ಲ. ನಾನು ವೇಸ್ಟ್ ಎಂದು ಆಗಾಗ ಅನ್ನಿಸುತ್ತದೆ. ಮನಸ್ಸನ್ನು ಯಾವ ರೀತಿ ನೆಮ್ಮದಿಯಿಂದ ಇರಿಸುವುದು. ಅದಕ್ಕಾಗಿ ಏನು ಮಾಡಬೇಕು?

ಹೆಸರು, ಊರು ಬೇಡ

ಜೀವನದಲ್ಲಿ ಒಬ್ಬರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳವುದು ನಿಜಕ್ಕೂ ಒಳ್ಳೆಯ ವಿಚಾರ ಹಾಗೂ ಅದು ಶ್ಲಾಘನೀಯ ಕೂಡ. ಆದರೆ ಅದರಿಂದ ನೀವು ಪ್ರೇರಣೆಗೊಳ್ಳಬೇಕು. ನೀವು ಕಲಾಂ ಅವರಂತೆ ಆಗಬೇಕು ಎಂದು ಯೋಚಿಸಿದ ಮಾತ್ರಕ್ಕೆ ಅವರಂತೆ ಆಗಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ಅವರಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು. ಅವರ ಸಾಧನೆಯ ಹಿಂದೆ ಎಂತಹ ಕಠಿಣಶ್ರಮ ಹಾಗೂ ಪರಿಶ್ರಮವಿತ್ತು, ಎಂತಹ ಕಠಿಣ ಹಾದಿಯಲ್ಲಿ ಅವರು ಸಾಗಿದ್ದರು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ? ಸುಮ್ಮನೆ ಯೋಚಿಸಿದರೆ ಏನೂ ಪ್ರಯೋಜನವಿಲ್ಲ. ಅದಕ್ಕೆ ತಕ್ಕ ಹಾಗೆ ಶ್ರಮ ಹಾಕಬೇಕು. ಮನೆಯವರು ಹಾಗೂ ಸ್ನೇಹಿತರ ಸಹಾಯ ಪಡೆದುಕೊಳ್ಳಿ. ನೀವು ಏನು ಸಾಧಿಸಬೇಕು ಎಂದು ಅಂದುಕೊಂಡಿದ್ದೀರಿ ಎಂಬುದರ ಬಗ್ಗೆ ನಿಮ್ಮ ಅಧ್ಯಾಪಕರ ಬಳಿ ಮಾತನಾಡಿ. ಅವರಿಂದ ಅಗತ್ಯ ಟಿಪ್ಸ್‌ಗಳನ್ನು ಪಡೆದುಕೊಳ್ಳಿ.

ಸರಿಯಾದ ಕ್ರಮದಲ್ಲಿ ಡಯೆಟ್‌ ಹಾಗೂ ವ್ಯಾಯಾಮ ನಿಮ್ಮನ್ನು ಫಿಟ್ ಆಗಿರಿಸುತ್ತದೆ; ಅದು ಓದಲು ಉತ್ಸಾಹವನ್ನೂ ನೀಡುತ್ತದೆ. ಹಾಗಾಗಿ ನಿಮ್ಮ ದೈನಂದಿನ ಜೀವನಕ್ರಮದಲ್ಲಿ ವ್ಯಾಯಾಮ ಅಥವಾ ಆಟವನ್ನು ರೂಢಿಸಿಕೊಳ್ಳಿ. ಮೊದಲಿಗೆ ಸಣ್ಣ ಸಣ್ಣ ಹೆಜ್ಜೆ ಇರಿಸಿ. ಚಿಕ್ಕಪುಟ್ಟ ಗುರಿಗಳನ್ನು ಇರಿಸಿಕೊಳ್ಳಿ; ಅವನ್ನು ಸಾಧಿಸಲು ಪ್ರಯ್ನತಿಸಿ. ಸಣ್ಣ ಪುಟ್ಟ ಗುರಿಗಳನ್ನು ಸಾಗಿಸಿದರೆ ಮುಂದಿನ ಹೆಜ್ಜೆ ಇಡಲು ಪ್ರೇರಣೆಯಾಗುತ್ತದೆ. ಹಾಗೇ ಅದು ಮುಂದುವರಿಯುತ್ತವೆ.ಸುಮ್ಮನೆ ಯೋಚಿಸುವ ಬದಲು ಅದರ ಮೇಲೆ ಕೆಲಸ ಮಾಡಲು ಪ್ರಯತ್ನಿಸಿ. ಆಗ ಖಂಡಿತ ನಿಮ್ಮ ಗುರಿಯನ್ನು ಮುಟ್ಟಲು ದಾರಿ ಸಿಗುತ್ತದೆ.

***

ಹನ್ನೆರಡು ವರ್ಷದ ಹಿಂದೆ ನನ್ನ ಸ್ನೇಹಿತೆಯ ಮೊದಲ ಪತಿ ಮರಣ ಹೊಂದಿದ್ದರು. ನಂತರ ಅವಳು ಎರಡನೇ ಮದುವೆಯಾಗುತ್ತಾಳೆ. ಮೊದಲ ಪತಿಯಿಂದ ಅವಳಿಗೆ 14 ವರ್ಷದ ಹೆಣ್ಣುಮಗಳಿದ್ದಾಳೆ. ಎರಡನೇ ಮದುವೆಯಿಂದ ಎಂಟು ವರ್ಷದ ಗಂಡುಮಗುವಿದೆ. ನನ್ನ ಸ್ನೇಹಿತೆ ಮೊದಲ ಮಗಳಿಗೆ ತನ್ನ ಎರಡನೆಯ ಮದುವೆಯ ಬಗ್ಗೆ ಹೇಳಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದಾಳೆ. ಹೇಳಿದರೆ ಎಲ್ಲಿ ತಮ್ಮ ಸಂಬಂಧವನ್ನು ಮುರಿದುಕೊಳ್ಳುತ್ತಾಳೋ ಎಂಬ ಭಯ, ಹೇಳದಿದ್ದರೆ ಎಲ್ಲಿ ಬೇರೆಯವರಿಂದ ವಿಷಯ ತಿಳಿದುಕೊಳ್ಳುತ್ತಾಳೋ ಎಂಬ ಗೊಂದಲ. ಅವಳ ಮಗಳು ತುಂಬ ಸೂಕ್ಷ್ಮ ಮನಸ್ಸಿನವಳು. ತನ್ನ ಈಗಿನ ತಂದೆ ಹಾಗೂ ತಮ್ಮನನ್ನು ತುಂಬ ಹಚ್ಚಿಕೊಂಡಿದ್ದಾಳೆ. ನನ್ನ ಸ್ನೇಹಿತೆ ಏನು ಮಾಡಬೇಕು?

ಹೆಸರು, ಊರು ಬೇಡ

ನಿಮ್ಮ ಸ್ನೇಹಿತೆಯ ಮಗಳಿಗೆ ಅವಳ ನಿಜವಾದ ತಂದೆಯ ಬಗ್ಗೆ ತಿಳಿಸುವುದು ತುಂಬಾ ಮುಖ್ಯವಾದ ವಿಚಾರ. ಅವಳಿಗೆಈಗ 14 ವರ್ಷ. ತನ್ನ ತಾಯಿ ಎರಡನೆಯ ಮದುವೆಯ ವಿಚಾರವನ್ನು ಇಲ್ಲಿಯವರೆಗೆ ಯಾಕೆ ಹೇಳಲಿಲ್ಲ ಎಂಬುದನ್ನು ಅವಳು ಅರ್ಥ ಮಾಡಿಕೊಳ್ಳಬಲ್ಲಳು. ವಿಷಯ ತಿಳಿದ ಮೇಲೆ ಅವಳು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ ಅವಳ ಈಗಿನ ತಂದೆ ಅವಳನ್ನು ತುಂಬ ಕಾಳಜಿ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವಳ ತಂದೆ–ತಾಯಿ ಇಬ್ಬರೂ ಸೇರಿ ಮಗಳ ಮನಸ್ಸಿಗೆ ಬೇಸರವಾಗದ ರೀತಿಯಲ್ಲಿ ಪರಿಸ್ಥಿತಿಯ ಅರಿವು ಮೂಡಿಸಿ ಸತ್ಯವನ್ನು ತಿಳಿಸಬೇಕು. ವಿಷಯ ತಿಳಿದ ಮೇಲೆ ಕೆಲವು ದಿನಗಳ ಕಾಲ ಅವಳು ಬೇಸರದಿಂದಿರಬಹುದು. ಏಕೆಂದರೆ ಇಲ್ಲಿಯವರೆಗೆ ಅವಳು ಒಂದು ಕಂಪರ್ಟ್ ಜೋನ್‌ನಲ್ಲಿ ಬದುಕುತ್ತಿದ್ದಳು. ಈ ವಿಷಯ ಅವಳನ್ನು ಸ್ವಲ್ಪ ಗೊಂದಲಕ್ಕೆ ಒಳಗಾಗುವಂತೆ ಮಾಡಬಹುದು. ಆದರೆ ಖಂಡಿತ ಅವಳು ಸರಿ ಹೊಂದುತ್ತಾಳೆ. ಅವಳ ಬಗ್ಗೆ ಭಯ ಬೇಡ.

***

ನನಗೆ 26 ವರ್ಷ. ಜೀವನದಲ್ಲಿ ಮಹತ್ವದ್ದೇನಾದರು ಸಾಧಿಸಬೇಕು ಎಂಬ ಬಯಕೆ ಇತ್ತು. ಆದರೆ ಬಡತನ ಮತ್ತು ಭಯದ ಕಾರಣದಿಂದ ಸಿಕ್ಕಿದ ಕೆಲಸಕ್ಕೆ ಬಂದುಬಿಟ್ಟೆ. ಈಗ ನಾನು ಲೈನ್‌ಮ್ಯಾನ್ ಆಗಿದ್ದೇನೆ. ಇದರಲ್ಲೇ ಮುಂದುವರಿದರೆ ಅಭಿವೃದ್ಧಿ ಇಲ್ಲ. ಕುಟುಂಬಕ್ಕೆ ಹೊರೆಯಾಗುತ್ತೇನೆಂಬ ಭಯ. ಮೂರು ವರ್ಷದಿಂದ ಏನನ್ನು ಸರಿಯಾಗಿ ಓದಿಲ್ಲ. ಓದಲು ಶುರು ಮಾಡಿದರೆ ಓದಿನಲ್ಲಿ ಹಿಡಿತ ಸಿಗುವುದೋ ಇಲ್ಲವೊ, ಜೊತೆಗೆ ಎಲ್ಲಿ ಕೆಲಸ ಕಳೆದುಕೊಳ್ಳುತ್ತೇನೋ ಅನ್ನಿಸುತ್ತಿದೆ. ಇದರ ಮಧ್ಯೆ ಓದಬೇಕೆಂಬ ಆಸೆಯೂ ಇದೆ. ಇದರ ಮಧ್ಯೆ ಪ್ರೀತಿ, ಪ್ರೇಮ ಬೇರೆ. ಈ ಎಲ್ಲವನ್ನು ನಾನು ಹೇಗೆ ನಿಭಾಯಿಸಲಿ?

ಮಲ್ಲೇಶ್, ಕುಂದಾಪುರ

ಇಲ್ಲಿ ನೀವು ಏನನ್ನು ಓದಿದ್ದೀರಿ, ಎಲ್ಲಿಯವರೆಗೆ ಓದಿದ್ದೀರಿ ಎಂಬುದನ್ನು ತಿಳಿಸಿಲ್ಲ. ನೀವು ಡಿಗ್ರಿ ಮುಗಿಸಿರಬಹುದು ಎಂದುಕೊಳ್ಳುತ್ತೇನೆ. ನೀವು ಉದ್ಯೋಗದಲ್ಲಿದ್ದೀರಿ. ಅದು ನಿಜಕ್ಕೂ ಒಳ್ಳೆಯ ವಿಚಾರ.ಅನೇಕರು ಸುಮ್ಮನೇ ಕೆಲಸವಿಲ್ಲದೇ ಕಾಲ ಕಳೆಯುತ್ತಾರೆ. ‌ಈಗ ನೀವು ಮುಂದೆ ಏನಾದರೂ ಓದಬೇಕು ಮತ್ತು ಒಳ್ಳೆಯ ಕೆಲಸ ಪಡೆದುಕೊಳ್ಳಬೇಕು ಎಂದುಕೊಂಡಿದ್ದೀರಿ. ನೀವಿರುವ ಜಾಗದಲ್ಲಿ ಸಂಜೆ ಕಾಲೇಜು ಇದ್ದರೆ ಸೇರಿಕೊಳ್ಳಿ, ಇಲ್ಲವೆಂದಾದರೆ ದೂರಶಿಕ್ಷಣದ ಮೂಲಕ ಓದನ್ನು ಮುಂದುವರಿಸಬಹುದು. ಅದು ನಿಮ್ಮ ಈಗಿನ ಕೆಲಸಕ್ಕೆ ತೊಂದರೆ ಮಾಡುವುದಿಲ್ಲ. ಜೊತೆಗೆ ಓದನ್ನು ಮುಂದುವರಿಸಬಹುದು. ಒಮ್ಮೆ ನೀವು ಡಿಗ್ರಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿದರೆ ಬೇರೆ ಕಡೆ ಒಳ್ಳೆಯ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಸ್ವಂತ ಉದ್ಯೋಗ ಆರಂಭಿಸಬಹುದು. ಲೈನ್‌ಮ್ಯಾನ್ ಆಗಿ ಅನುಭವವಿರುವ ಕಾರಣದಿಂದ ಎಲೆಕ್ಟ್ರಿಕಲ್‌ ಕ್ಷೇತ್ರದಲ್ಲೂ ಸ್ವಂತ ಉದ್ಯೋಗ ಆರಂಭಿಸಬಹುದು.ಆಫೀಸಿನಲ್ಲಿ ಹಿರಿಯರ ಬಳಿ ಈ ಬಗ್ಗೆ ಮಾತನಾಡಿ. ನೀವು ಮುಂದೆ ಯಾವ ರೀತಿಯ ಉದ್ಯೋಗ ಮಾಡಬಹುದು ಎಂಬುದನ್ನು ಕೇಳಿ ತಿಳಿದುಕೊಳ್ಳಿ. ಸರ್ಕಾರಿ ಉದ್ಯೋಗದ ಬಗ್ಗೆಯೂ ಕೇಳಿ. ಸಮಯದೊಂದಿಗೆ ಎಲ್ಲವೂ ಸಾಗುತ್ತದೆ – ಪ್ರೀತಿ, ಆರ್ಕಷಣೆ ಕೂಡ. ಆದರೆ ಮೊದಲು ನಿಮ್ಮ ಓದು ಹಾಗೂ ಕೆಲಸಕ್ಕೆ ಪ್ರಾಶಸ್ತ್ಯ ನೀಡಿ. ಅನಂತರ ಎಲ್ಲವೂ ನಿಮ್ಮನ್ನು ಹಿಂಬಾಲಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT