ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮಾನಕ್ಕೆ ಮದ್ದೇನು?

Last Updated 3 ಮೇ 2019, 19:30 IST
ಅಕ್ಷರ ಗಾತ್ರ

ನನಗೆ 28 ವರ್ಷ. ಕಳೆದ ಆರು ವರ್ಷಗಳಿಂದ ಒಬ್ಬನನ್ನು ಪ್ರೀತಿಸುತ್ತಿದ್ದೇನೆ. ಅವನು ನನ್ನನ್ನು ಪ್ರೀತಿಸುತ್ತಾನೆ. ನಾವಿಬ್ಬರೂ ಒಳ್ಳೆಯ ಉದ್ಯೋಗದಲ್ಲಿದ್ದೇವೆ. ಆದರೆ ನನಗೆ ಅವನು ಮೇಲೆ ವಿಪರೀತ ಅನುಮಾನ. ಪ್ರತಿ ವಿಷಯವನ್ನೂ ಅನುಮಾನದಿಂದ ನೋಡುತ್ತೇನೆ. ಅವನು ಒಳ್ಳೆಯವನು, ನನಗೆ ಮೋಸ ಮಾಡುತ್ತಿಲ್ಲ ಎಂದು ತಿಳಿದರೂ ಅವನನ್ನು ಅನುಮಾನಿಸುತ್ತೇನೆ. ಜೊತೆಗೆ ಜಗಳ ಮಾಡಿ ಹಿಂಸೆ ಮಾಡುತ್ತೇನೆ. ಇತ್ತೀಚೆಗೆ ಅವನು ನನಗೆ ನೀನು ಬೇಡ, ನಿನ್ನ ಹಿಂಸೆ ತಾಳಲು ಆಗುತ್ತಿಲ್ಲ ಎನ್ನುತ್ತಿದ್ದಾನೆ. ನನಗೆ ಅವನೇ ಪ್ರಪಂಚ. ಅವನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಆದರೆ ಅನುಮಾನವಿಲ್ಲದೇ ಇರಲು ಆಗುತ್ತಿಲ್ಲ. ನನ್ನ ಸಮಸ್ಯೆಗೆ ಪರಿಹಾರ ಏನು?

–ವರ್ಷಾ, ತುಮಕೂರು

ಯಾವುದೇ ಸಂಬಂಧದಲ್ಲಾಗಲಿ ಭಯ ಹಾಗೂ ಅಭದ್ರತೆಯ ಕಾರಣದಿಂದ ಅನುಮಾನಗಳು ಹುಟ್ಟುತ್ತವೆ. ಯಾವಾಗ ನಿಮಗೆ ನಿಮ್ಮ ಅನುಮಾನದ ಪ್ರವೃತ್ತಿಯ ಬಗ್ಗೆ ತಿಳಿಯುತ್ತದೋ ಆಗ ನೀವು ಅದರಿಂದ ಹೊರಬರಲು ಕಠಿಣ ಪ್ರಯತ್ನ ಮಾಡಬೇಕು. ನಿಮ್ಮ ಅನುಮಾನದಿಂದ ನಿಮ್ಮ ಹುಡುಗನಿಗೆ ಎಷ್ಟು ನೋವಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಯಾವುದೇ ಸಂಬಂಧದಲ್ಲಾಗಲಿ ನಂಬಿಕೆ ಎಂಬುದು ಇಲ್ಲದಿದ್ದರೆ ಈ ಸಂಬಂಧದಲ್ಲಿ ಸಂತೋಷವಿರುವುದಿಲ್ಲ. ಹಾಗಾಗಿ ನಂಬಿಕೆ ಎಂಬುದು ಸಂಬಂಧದಲ್ಲಿ ಮಧುರ ಬಾಂಧವ್ಯವನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮನಸ್ಸಿನಲ್ಲಿರುವ ಅಭದ್ರತೆಯ ಬಗ್ಗೆ ನಿಮ್ಮ ಹುಡುಗನ ಜೊತೆ ಮಾತನಾಡಿ. ನಿಮ್ಮ ಭಯಕ್ಕೆ ಕಾರಣ ಏನು ಎಂಬುದನ್ನು ಅವರಿಗೆ ತಿಳಿಸಿ. ಅವರು ನಿಮಗೆ ಭರವಸೆ ನೀಡಲು ಪ್ರಯತ್ನಿಸಿರಬಹುದು. ಆದರೆ ಪದೇ ಪದೇ ಹಿಂದಿನದ್ದೇ ಮರುಕಳಿಸಿದರೆ ಖಂಡಿತ ಅವರಿಗೆ ಕಿರಿಕಿರಿ ಎನ್ನಿಸಿರಬಹುದು. ನೀವಿಬ್ಬರೂ ಸ್ವಲ್ಪ ಸಮಯ ತೆಗೆದುಕೊಳ್ಳಿ. ಆ ಸಮಯದಲ್ಲಿ ನಿಮ್ಮಿಬ್ಬರಿಗೂ ನಿಮ್ಮಿಬ್ಬರ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಅರಿವು ಮೂಡಿಸಿಕೊಳ್ಳಿ.

ಸಮಾಧಾನದಿಂದಿರುವುದನ್ನು ರೂಢಿಸಿಕೊಳ್ಳಿ. ‌ಭವಿಷ್ಯದ ಬಗ್ಗೆ ಹೆಚ್ಚಿಗೆ ಯೋಚಿಸಬೇಡಿ. ವರ್ತಮಾನದಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಯತ್ನ ಮಾಡಿ. ನಿಮ್ಮ ಸುತ್ತ ನಡೆಯುವ ಘಟನೆಗಳ ಬಗ್ಗೆ ಗಮನ ಹರಿಸಿ.

ಭವಿಷ್ಯದ ಬಗ್ಗೆ ಅತಿಯಾಗಿ ಯೋಚಿಸದೆ ನೆಮ್ಮದಿಯಿಂದಿರಿ. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಜೊತೆಗೆ ಧನಾತ್ಮಕ ಯೋಚನೆಗಳಿಂದ ಮನಸ್ಸು ಆರೋಗ್ಯಕರವಾಗಿರುತ್ತದೆ. ಆಗಲೂ ನಿಮಗೆ ಅನುಮಾನಗಳಿಂದ ಹೊರಬರಲು ಸಾಧ್ಯವಾಗದಿದ್ದರೆ ನಿಮಗೆ ಮೂರನೆಯವರ ಸಹಾಯ ಬೇಕಾಗುತ್ತದೆ. ಆಗ ನೀವು ಉತ್ತಮ ಆಪ್ತಸಮಾಲೋಚಕರನ್ನು ನೋಡುವುದು ಒಳಿತು.

***

ಶ್ರೀನಾನು ಬಿ. ಇ ಓದಿದ್ದೇನೆ. 6 ವರ್ಷದಿಂದ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದೆ. ಆದರೆ 2 ವರ್ಷಗಳಿಂದ ಮನೆಯಲ್ಲಿ ನೋಡಿದ ಹುಡುಗನ ಜೊತೆ ಪ್ರೀತಿ ಆಯ್ತು. ಅವನು ನನ್ನನ್ನು ಪ್ರೀತಿಸುತ್ತಿದ್ದಾನೆ. ನನಗೆ ನಾನು ಮಾಡಿದ್ದು ತಪ್ಪು ಎನ್ನಿಸಿ ಮನೆಯಲ್ಲಿ ನೋಡಿದ ಹುಡುಗನಿಗೆ ಬೇಡ ಎಂದು ಹೇಳಿದೆ. ಮತ್ತೆ ಮೊದಲು ಪ್ರೀತಿ ಮಾಡಿದ ಹುಡುಗನನ್ನೇ ಇಷ್ಟಪಡಲು ಆರಂಭಿಸಿದೆ. ಆದರೆ ಅವನು ನನಗೆ ಮೋಸ ಮಾಡಿದ. ಅವನು ಬೇರೆ ಹುಡುಗಿಯ ಜೊತೆ ಇದ್ದಾನೆ. ನನಗೆ ತುಂಬಾ ನೋವಾಯಿತು. ಒಂಟಿತನ ಕಾಡುತ್ತಿದೆ. ಜೀವನ ಬೇಡ ಎನ್ನಿಸುತ್ತದೆ. ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಆದರೆ ನನಗೆ ಓದಲು ಆಗುತ್ತಿಲ್ಲ. ಮೋಸ ಮಾಡಿದ ಪಾಪ ಪ್ರಜ್ಞೆ ಕಾಡುತ್ತಿದೆ. ಯಾರನ್ನೂ ಮದುವೆ ಆಗಲು ಮನಸ್ಸು ಬರುತ್ತಿಲ್ಲ.

–ಹೆಸರು, ಊರು ಬೇಡ

ಈಗ ನೀವು ಪ್ರಾಶಸ್ತ್ಯ ನೀಡಬೇಕಿರುವುದು ನಿಮ್ಮ ಉನ್ನತ ಶಿಕ್ಷಣಕ್ಕೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಒಳ್ಳೆಯ ಕೆಲಸ ಪಡೆದುಕೊಳ್ಳುವುದರ ಮೇಲೆ ನಿಮ್ಮ ಗಮನವಿರಲಿ. ಮೊದಲು ನಿಮ್ಮ ಭವಿಷ್ಯದ ಮೇಲೆ ಗಮನ ಹರಿಸಿ.ಒಮ್ಮೆ ಒಳ್ಳೆಯ ಉದ್ಯೋಗ ಪಡೆದುಕೊಂಡು ಭವಿಷ್ಯದಲ್ಲಿ ನೆಲೆ ಕಂಡುಕೊಂಡರೆ ನಂತರ ಮದುವೆ ಹಾಗೂ ಕುಟುಂಬದ ಬಗ್ಗೆ ಯೋಚಿಸಬಹುದು.

ನೀವು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಾದರೆ ಬೇರೆ ವಿಷಯಗಳ ಬಗ್ಗೆ ಯೋಚಿಸದೇ ನಿಮ್ಮ ಸಂಪೂರ್ಣ ಗಮನವನ್ನು ಓದಿನ ಮೇಲೆ ಹರಿಸಬೇಕು. ಪ್ರತಿದಿನ ಅರ್ಧಗಂಟೆ ಧ್ಯಾನ ಮಾಡಿ. ಧ್ಯಾನ ಮಾಡುವ ಮೂಲಕ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ನಿರಂತರ ಅಭ್ಯಾಸ ಹಾಗೂ ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವ ಮೂಲಕ ನಿಮ್ಮಲ್ಲಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಹೆಚ್ಚುತ್ತದೆ.

***

ನನಗೆ 25 ವರ್ಷ. ನಮ್ಮ ಮನೆಯಲ್ಲಿ ನಾನು ಅಮ್ಮ, ತಮ್ಮ, ತಂಗಿ ಇದ್ದೇವೆ. ನಮ್ಮ ತಂದೆ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಅವರು ಹೋದಾಗಿನಿಂದ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಹಾಗೆ ಆಗುತ್ತಿದೆ. ನಮ್ಮ ಮನೆಯಲ್ಲಿ ಸ್ವಲ್ಪ ಓದಿರೋದು ನಾನು ಮಾತ್ರ. ಡಿಗ್ರಿ ಮುಗಿಸಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಕೆಲಸಕ್ಕಾಗಿ ಎಷ್ಟೇ ಪ‍್ರಯತ್ನ ಪಟ್ಟರೂ ಸಿಗಲಿಲ್ಲ. ನಾನು ತುಂಬಾ ಶ್ರಮಜೀವಿ. ಇಂದಿಗೂ ಹಣಕ್ಕೆ ಬೆಲೆ ಕೊಟ್ಟಿಲ್ಲ. ಬರಿ ನಿಂದರೆ, ಅಪಮಾನ, ನೋವು. ಎಲ್ಲಿ ಕೆಲಸಕ್ಕೆ ಸೇರಿದರೂ ‘ನೀನು ದಡ್ಡ, ಚುರುಕಿಲ್ಲ‘ ಅಂತಾರೆ. ಪ್ರಪಂಚದಲ್ಲಿ ಎಲ್ಲರೂ ಬುದ್ದಿವಂತರಲ್ಲ, ಎಲ್ಲರೂ ದಡ್ಡರಲ್ಲ. ನಾನು ಬುದ್ದಿವಂತನಾಗಲು ಏನು ಮಾಡಬೇಕು.

–ವರುಣ್, ಹಾಸನ

ನನಗೆ ಅರ್ಥವಾಗುತ್ತದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ ಬುದ್ಧಿವಂತರಾಗಿರುತ್ತಾರೆ. ಹಾಗಾಗಿ ನಿಮ್ಮ ಬಗ್ಗೆ ನೀವೇ ಋಣಾತ್ಮಕವಾಗಿ ಯೋಚಿಸಬೇಡಿ. ನಿಮ್ಮ ಸುತ್ತಲಿನ ಜನರು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಪ್ರತಿದಿನ ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರೊಂದಿಗೆ ನಿಮ್ಮ ಕೆಲಸದಲ್ಲಿ ಅಪ್‌ಡೇಟ್ ಆಗಿ. ಸಾಮಾಜಿಕವಾಗಿ ನಿಮ್ಮನ್ನು ತೆರೆದುಕೊಳ್ಳಿ. ಇದರಿಂದ ನಿಮ್ಮ ಸುತ್ತಲಿನ ಸಮಾಜದಲ್ಲಿ ಏನೇನು ನಡೆಯುತ್ತಿದೆ ಎಂಬುದರ ಅರಿವು ನಿಮಗಾಗುತ್ತದೆ. ಸಹೋದ್ಯೋಗಿಗಳ ಜೊತೆ ಮಾತನಾಡಿ. ಅವರಿಂದ ಒಂದಷ್ಟು ಕಲಿಯಿರಿ.

ನಿಮ್ಮ ಒಳ್ಳೆಯದಕ್ಕಾಗಿ ಹೇಳುವ ವ್ಯಕ್ತಿಗಳ ಜೊತೆ ಮಾತನಾಡಿ. ಅವರ ಬಳಿ ನಿಮಗೆ ಕಲಿಸಲು ತಿಳಿಸಿ. ಅವರಿಗೆ ನೀವು ’ನಾನು ಕಲಿಯುತ್ತೇನೆ, ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತೇನೆ’ ಎಂದು ಆಶ್ವಾಸನೆ ನೀಡಿ. ಹೊಸ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಿ ಮಾತನಾಡಿ. ಹೀಗೆ ಮಾಡುವುದರಿಂದ ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯಬಹುದು.

ನಿಮಗೆ ಸರ್ಕಾರಿ ಕೆಲಸಕ್ಕೆ ಅರ್ಹತೆ ಇರುವವರೆಗೂ ಅದಕ್ಕಾಗಿ ಪ್ರಯತ್ನಿಸಿ. ಅವರು ನಡೆಸುವ ಪರೀಕ್ಷೆ ಹಾಗೂ ಸಂದರ್ಶನಗಳಿಗೆ ಒಳ್ಳೆಯ ರೀತಿಯಲ್ಲಿ ರೆಡಿಯಾಗಿ. ಯಾವಾಗಲೂ ಸಂತಸದಿಂದಿರಿ. ಧನಾತ್ಮಕ ವ್ಯಕ್ತಿತ್ವದೊಂದಿಗೆ ಇರುವುದರಿಂದ ಆತ್ಮವಿಶ್ವಾಸವು ಹೆಚ್ಚುತ್ತದೆ. ಆಗ ಜನರು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT