ಸುದ್ದಿಯನ್ನು ಓದಲಷ್ಟೇ ಅಲ್ಲ.. ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪತ್ರಿಕೆಗಳ ಓದು ಅವಶ್ಯವಾಗಿದೆ. ಇದೇ ಕಾರಣಕ್ಕೆ ಹಲವಾರು ಅಭಿವೃದ್ಧಿಪರ ದೇಶಗಳಲ್ಲಿ ದಿನಪತ್ರಿಕೆಗಳ ಓದನ್ನು ಕಡ್ಡಾಯಗೊಳಿಸಿದ್ದಾರೆ. ಮಕ್ಕಳು ಭಾವಿ ಪ್ರಜೆಗಳಾಗುವುದಷ್ಟೆ ಅಲ್ಲ, ಉತ್ತಮ ನಾಗರಿಕರಾಗಲು, ಮಾನವ ಸಂಪನ್ಮೂಲವಾಗಲು ಪತ್ರಿಕೆಗಳ ಓದು ಸಹಾಯಕವಾಗುತ್ತದೆ ಎನ್ನುವುದು ಹಲವಾರು ಶಾಲೆಗಳ ಪ್ರಾಂಶುಪಾಲರೂ ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಕಾರಣಕ್ಕೆ ಪ್ರಜಾವಾಣಿ ಬಳಗದಿಂದ ’ಡಿಎಚ್‌ಐಇ’ ಯೋಜನೆಯು ಚಾಲ್ತಿಯಲ್ಲಿದೆ. ದಿನಪತ್ರಿಕೆಯ ಓದು ವಿದ್ಯಾರ್ಥಿಗಳಲ್ಲಿ ಮತ್ತು ಓದುಗರಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ. ಇಲ್ಲಿ ದಿನಪತ್ರಿಕೆಗಳ ಓದಿನಿಂದ ವಿದ್ಯಾರ್ಥಿಗಳಲ್ಲಿ ಕಂಡು ಬಂದಿರುವ ಬದಲಾವಣೆಗಳ ಕುರಿತು ವಿವರಿಸಿದ್ದಾರೆ.
ಪ್ರಚಲಿತ ವಿದ್ಯಮಾನಗಳ ಅರಿವು: ಹದಿಹರೆಯದ ವಿದ್ಯಾರ್ಥಿಗಳಲ್ಲಿ ತಮ್ಮ ಸುತ್ತಲಿನ ಜಗತ್ತಿನಲ್ಲಿ ಏನು ನಡೆದಿದೆ ಎಂಬ ಸ್ಪಷ್ಟ ತಿಳಿವು ಮೂಡುತ್ತದೆ. ಸುಳ್ಳು ಸುದ್ದಿಗಳ ಪತ್ತೆ ಮಾಡುವುದು, ನಂಬ ಬಹುದಾದ ಸುದ್ದಿಯೇ ಎಂಬ ವಿವೇಚನೆಯೂ ಮೂಡುತ್ತದೆ. ದಿನಪತ್ರಿಕೆ ಓದುವ ಮಕ್ಕಳು, ವಾಟ್ಸ್ ಆ್ಯಪ್‌ಗಳಲ್ಲಿ ಫಾರ್ವರ್ಡ್ ಆಗುವ ಸುದ್ದಿಗಳನ್ನು ಸುಲಭವಾಗಿ ನಂಬುವುದಿಲ್ಲ.
ಅಂತರರಾಷ್ಟ್ರೀಯ ವಿದ್ಯಮಾನಗಳ ಪರಿಚಯ: ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಹೊರತಾಗಿ ನೀಡುವ ಪ್ರೊಜೆಕ್ಟ್‌ಗಳಿಗೆ ದಿನಪತ್ರಿಕೆಗಳನ್ನೇ ಮಾಹಿತಿಯ ಆಕರ ಮಾಡಿಕೊಳ್ಳುತ್ತಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳ ಕುರಿತು ಅವರಿಗೆ ಸೂಕ್ತ ಮಾಹಿತಿ ಇರುತ್ತದೆ. ಯಾವ ದೇಶದ ರಾಜಧಾನಿ ಯಾವುದು, ನಾಯಕರು ಯಾರು ಎಂಬ ಸ್ಪಷ್ಟ ಮಾಹಿತಿ ಇದ್ದು, ಆಯಾ ದೇಶಗಳ ಆಗುಹೋಗುಗಳ ಪರಿಚಯ ಇರುತ್ತದೆ.
ದಿನ ಪತ್ರಿಕೆಗಳ ಓದಿನಿಂದ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆದಿದೆ. ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಅರಿವಿನ ಹರವನ್ನು ವಿಸ್ತಾರಗೊಳಿಸುವ ಕ್ರಮ ಇದಾಗಿದೆ.–ಡಾ. ಸುಮಾಲಿನಿ ಬಿ ಸ್ವಾಮಿ, ನಿರ್ದೇಶಕರು ಮತ್ತು ಪ್ರಾಚಾರ್ಯರು, ಸಿಲಿಕಾನ್ ಸಿಟಿ ಅಕಾಡೆಮಿ ಸೆಕೆಂಡ್ರಿ ಎಜುಕೇಶನ್, ಬೆಂಗಳೂರು
ಆಡಾಡುತ್ತ ಪದಸಿರಿ: ಬಹುತೇಕ ಮಕ್ಕಳು ಪದಬಂಧ ಬಿಡಿಸುವಲ್ಲಿ ಹೆಚ್ಚು ಆಸಕ್ತರಾಗಿರುತ್ತಾರೆ. ಭಾಷಾ ಅವಧಿಯಲ್ಲಿ ಪದಬಂಧಗಳ ಕುರಿತು ಕೆಲವೊಮ್ಮೆ ಚರ್ಚೆ ಏರ್ಪಡಿಸಿದಾಗ, ಸುಳಿವುಗಳನ್ನಾಧರಿಸಿ ಪದ ಹುಡುಕುವಾಗ ಅವರಲ್ಲಿ ವಿಶ್ಲೇಷಣಾತ್ಮಕ ಕೌಶಲ ಹೆಚ್ಚುತ್ತದೆ. ಜೊತೆಗೆ ಹೊಸ ಹೊಸ ಪದಗಳನ್ನು ಕಲಿಯುತ್ತಾರೆ. ಒಂದು ಪದದ ಸಮನಾರ್ಥಕ ಪದ, ನಾನಾ ಅರ್ಥಗಳು, ವಿರುದ್ಧಪದ, ಬಹುವಚನ ಹೀಗೆ ಪ್ರಯೋಗಗಳನ್ನು ಮಾಡುತ್ತ ಭಾಷೆಯ ಮೇಲೆ ಹಿಡಿತ ಸಾಧಿಸುತ್ತಾರೆ.
ಹೆಚ್ಚುವ ಏಕಾಗ್ರತೆ: ಪ್ರತಿದಿನವೂ ಸುಡೊಕು ಆಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಜೊತೆಗೆ ವಿಶ್ಲೇಷಣಾತ್ಮಕವಾಗಿ ಹಾಗೂ ನಿರ್ಣಯಾತ್ಮಕವಾಗಿ ಯೋಚಿಸುವುದು ಸಾಧ್ಯವಾಗುತ್ತದೆ. ಇದರೊಂದಿಗೆ ಓದುವ ಅವಧಿ ಹೆಚ್ಚಾಗುತ್ತ ಹೋಗುತ್ತದೆ.
ಅಭಿವ್ಯಕ್ತಿ ಕೌಶಲ: ಮಕ್ಕಳು ಪ್ರತಿದಿನವೂ ಪತ್ರಿಕೆಯನ್ನು ಓದುತ್ತ, ಓದುತ್ತ ತಮ್ಮದೇ ಆದ ಶೈಲಿಯನ್ನು ಬರವಣಿಗೆಯಲ್ಲಿ ರೂಢಿಸಿಕೊಳ್ಳುತ್ತಾರೆ. ತಮಗೆ ಅನಿಸಿದ್ದನ್ನು ಸ್ಪಷ್ಟವಾಗಿ ಹೇಳುವಲ್ಲಿ, ಬರವಣಿಗೆಯಲ್ಲಿ ದಾಖಲಿಸುವಲ್ಲಿ ಸಶಕ್ತರಾಗುತ್ತಾರೆ.
ವಿಮರ್ಶಾತ್ಮಕ ನೋಟ: ಪ್ರತಿಯೊಂದಕ್ಕೂ ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ಮಕ್ಕಳು ಶಕ್ತರಾಗುತ್ತಾರೆ. ಪ್ರತಿಯೊಂದು ಆಗು ಹೋಗುಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡಲು ಸಾಧ್ಯವಾಗುತ್ತದೆ.
ಕಾಮನ್ ಸೆನ್ಸ್ ಮೀಡಿಯಾ ಎಂಬ ಸಂಸ್ಥೆಯು ಕೈಗೊಂಡಿರುವ ಸಮೀಕ್ಷೆಯ ಪ್ರಕಾರ, ದಿನಪತ್ರಿಕೆಗಳ ಓದನ್ನು ಆರಂಭಿಸಿದ ಮಕ್ಕಳಲ್ಲಿ, ಪ್ರತಿವಾರವೂ ಸ್ಕ್ರೀನ್ ಸಮಯ ಕಡಿತವಾಗುತ್ತ ಹೋಗಿದೆ. ಮತ್ತು ಹೊಸಹೊಸ ಪುಸ್ತಕಗಳನ್ನು ಓದುವತ್ತಲೂ ಒಲವು ತೋರಿದರು ಎಂದು ತಿಳಿಸಿದೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಹೆತ್ತವರು, ಶಿಕ್ಷಕರು ಮತ್ತು ಸ್ನೇಹಿತರಷ್ಟೇ ಸಕಾರಾತ್ಮಕ ಪರಿಣಾಮವನ್ನು ದಿನಪತ್ರಿಕೆಗಳು ಮಾಡುತ್ತವೆ. ನಿಮ್ಮ ಮನೆಯಲ್ಲಿಯೂ ಶಾಲೆಗೆ ಹೋಗುವ ಮಗುವಿದ್ದಲ್ಲಿ, ದಿನಪತ್ರಿಕೆ ಓದಿಸುವ ಅಭ್ಯಾಸ ಆಗುವಂತೆ ಮಾಡಿ.
ದಿನಪತ್ರಿಕೆಗಳು, ಪ್ರತಿಯೊಬ್ಬರ ಸಾಮಾಜಿಕ ಚಿಂತನೆಗೆ ಪೂರಕ ಇಂಧನ. ಅದರಲ್ಲೂ, ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯವನ್ನು ಹೆಚ್ಚಿಸುತ್ತಾ, ಜಾಗತಿಕ ವಿದ್ಯಮಾನಗಳನ್ನು ಅರಿಯಲು, ದಿನ ಪತ್ರಿಕೆಗಳ ಓದು ಬಹಳ ಮುಖ್ಯ.–ಫಾ. ಸುನೀಲ್ ಫರ್ನಾಂಡಿಸ್, ಪ್ರಚಾರ್ಯರು ಸಂತ ಜೋಸೆಫ್ ಬಾಲಕರ ಪ್ರೌಢಶಾಲೆ, ಬೆಂಗಳೂರು
ಯಾವ ಶಾಲೆಗಳಲ್ಲಿ ಏನೇನು ಬದಲಾವಣೆ ಆಗಿವೆ?
ಬೆಂಗಳೂರಿನ ಎನ್‌ಪಿಎಸ್ (ಇಂದಿರಾನಗರ, ರಾಜಾಜಿನಗರ, ಯಶ್ವಂತಪುರ, ಜಾಲಹಳ್ಳಿ), ಸಿಲಿಕಾನ್ ಸಿಟಿ ಅಕಾಡೆಮಿ ಆಫ್ ಸೆಕೆಂಡರಿ ಎಜುಕೇಷನ್, ಸೇಂಟ್ ಜೋಸೆಫ್ ಬಾಲಕರ ಪ್ರೌಢಶಾಲೆ ಬಿಷಪ್ ಕಾಟನ್ ಬಾಲಕಿಯರ ಪ್ರೌಢ ಶಾಲೆ, ಮೈಸೂರಿನ ಎಕ್ಸೆಲ್ ಪಬ್ಲಿಕ್ ಶಾಲೆ, ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಹಾಸನದ ಹಾಸನ್ ಪಬ್ಲಿಕ್ ಸ್ಕೂಲ್, ದಕ್ಷಿಣ ಕನ್ನಡದ ಜ್ಞಾನಗಂಗಾ ಪಬ್ಲಿಕ್ ಶಾಲೆ, ಅಮೃತಾ ವಿದ್ಯಾಲಯ ಮಂಗಳೂರು, ನಿಟ್ಟೂರು ಸೆಂಟ್ರಲ್ ಕಾಲೇಜು ರಾಣೆಬೆನ್ನೂರು ಮುಂತಾದ ಶಾಲೆಗಳ ಪ್ರಾಂಶುಪಾಲರು ಹಾಗೂ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಕಂಡುಕೊಂಡ ಬದಲಾವಣೆಗಳನ್ನು ಈ ರೀತಿಯಾಗಿ ಪಟ್ಟಿ ಮಾಡಿದ್ದಾರೆ.
* ಆತ್ಮವಿಶ್ವಾಸ ಹೆಚ್ಚಿದೆ
* ಭಾಷೆಯ ಮೇಲೆ ಹಿಡಿತ ಇದೆ
* ಓದುವ ವೇಗ ಹೆಚ್ಚಿದೆ
* ಸಾಮುದಾಯಿಕ ಮತ್ತು ಸಾಮಾಜಿಕ ಪ್ರಜ್ಞೆ ಹೆಚ್ಚಿದೆ
* ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮವಿಶ್ವಾಸದಿಂದ ತಮ್ಮ ಗುರುತು ಮೂಡಿಸಲು ಸಾಧ್ಯವಾಗಿದೆ
* ರಸಪ್ರಶ್ನೆ, ಪ್ರಬಂಧ, ಭಾಷಣ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ದಿನಪತ್ರಿಕೆ ಓದುವ ಮಕ್ಕಳು ಸದಾ ಬಹುಮಾನ ಪಡೆಯುತ್ತಿದ್ದಾರೆ.
ಅಸೀಮ ಜ್ಞಾನದ ಬೆಳಕನ್ನು ಪಡೆಯುವಲ್ಲಿ ದಿನಪತ್ರಿಕೆಗಳ ಓದು, ಮೊದಲ ಬೆಳಕಿನ ಕುಡಿಯಾಗುತ್ತದೆ.–ಶಂಭುಲಿಂಗ ದಿಗ್ಗಾವಿ, ಎಸ್‌ಬಿಆರ್ ಪಬ್ಲಿಕ್ ಶಾಲೆ ಕಲಬುರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.