ಶುಕ್ರವಾರ, ಮೇ 29, 2020
27 °C
ಪ್ರತಿ ಚಿಗುರಿನಲ್ಲೂ ವಸಂತಾಗಮ ಸಾರುವ ತರು–ಲತೆಗಳು,

ಯುಗಾದಿ: ಬಿಸಿಲಿಗೆ ಬಳಲದ ನಿಸರ್ಗದ ಋತುಗಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಚೈತ್ರವೆಂದರೆ ಚಿಗುರು, ರಣ ಬಿಸಿಲಿನಲ್ಲೂ ಅರಳಿಸಿಕೊಳ್ಳುವ ತರು–ಲತೆಗಳು, ವಸಂತನ ಆಗಮನದ ಮುನ್ಸೂಚನೆ ಸಾರುವ ಹೊಂಗೆ ಹೂಗಳ ಚಿತ್ತಾರ, ಜೇನಿಗೆ ಆಹ್ವಾನ ನೀಡುವ ಪುಷ್ಪಲೋಕ. ಇವೆಲ್ಲವನ್ನೂ ಪ್ರತಿ ವರ್ಷ ಬರ ಮಾಡಿಕೊಳ್ಳುವ ಪ್ರಕೃತಿ ಮಾತೆಯ ಸ್ಮರಣೆಗೆ ಮೆಚ್ಚದವರಾರು? ಮತ್ತೊಂದು ಯುಗಾದಿ ನಮ್ಮ ಮುಂದಿದೆ. 

ತಾಲ್ಲೂಕಿನ ಬನದ ತುಂಬ ಒಣ ವೃಕ್ಷಗಳ ಬೋಳು ಶಿರದಲ್ಲಿ ಮೆಲ್ಲಗೆ ಇಣುಕುತ್ತಿರುವ ಎಳೆ ಎಲೆಗಳ ವರ್ಣ ತಂತುಗಳು, ಪ್ರತಿ ಟೊಂಗೆಯೂ ಹಸಿರು ತುಂಬಿಕೊಳ್ಳುವ ಸೋಜಿಗ ಹಾಗೂ ಕೆಸರು ಹೊದ್ದ ಕೆರೆಕಟ್ಟೆಗಳಿಗೆ ಮಳೆರಾಯನನ್ನು ಕೆರೆಯುವ ಉಮೇದಿನೊಂದಿಗೆ ಹೊರ ಬರುವ ಎಲ್ಲಾ ಜೀವ ಜಂತುಗಳು. ಎಲ್ಲರಿಗೂ ಯುಗಾದಿ ಬರಲೇ ಬೇಕು. ನಾಡಿನಲ್ಲಿ ಜನಪದರ ಜಾತ್ರೆ–ಕೊಂಡೋತ್ಸವಗಳ ಸಂಭ್ರಮದ ಕಾವನ್ನು ನೀಗಿಸಿ ಹೊಸ ಧಿರಿಸು ತೊಟ್ಟು ನಲಿಸುವ ಗ್ರಾಮೀಣ ಹಬ್ಬಗಳಿಗೆ ಕೊನೆ ಹಾಡುವ ಆಚರಣೆಗೆ ಸಿದ್ಧತೆಗಳು ಪೂರ್ಣಗೊಂಡಿವೆ.

ಬೇವು–ಬೆಲ್ಲ: ‘ಹಬ್ಬದಂದು ಸಮೀಪದ ನದಿ, ಕೆರೆಗಳಲ್ಲಿ ಮಿಂದು, ಮಡಿ ಉಟ್ಟು, ಬೇವು ಬೆಲ್ಲದ ಮಿಶ್ರಣ ಸೇವಿಸುತ್ತಾರೆ. ಹಲವು ಗ್ರಾಮಗಳಲ್ಲಿ ಗದ್ದೆಗಳಲ್ಲಿ ಬೆಳೆದಿದ್ದ ಧವಸ ಧಾನ್ಯಗಳನ್ನು ಹೊಸ ಮಡಕೆಯಲ್ಲಿ ಇಟ್ಟು ಆಹಾರ ಬೇಯಿಸಿ ದೇವರಿಗೆ ಅರ್ಪಿಸುತ್ತಾರೆ. ಹೊಸ ದಿನದಂದುಮನೆ ಮುಂಭಾಗ ಮಾವಿನ ತೋರಣ, ಬೇವಿನ ಸೊಪ್ಪು ಅಲಂಕರಿಸಿ ಇಷ್ಟ ದೈವಗಳನ್ನು ನೆನೆಯುತ್ತಾರೆ. ಇದರಿಂದ ಮನೆ–ಮನಗಳಲ್ಲಿ ದೈವೀ ಕಳೆ ತುಂಬುತ್ತದೆ. ಹಬ್ಬದ ಹಿಂದೆ–ಮುಂದೆ ಕೊಂಡೋತ್ಸವ ಏರ್ಪಡಿಸಿ ನಾಡಮೇಗಲಮ್ಮ, ಮಂಟೇಸ್ವಾಮಿ, ಸಿದ್ದಪ್ಪಾಜಿ ಸ್ಮರಿಸುವ ವಾಡಿಕೆ ಇನ್ನೂ ಉಳಿದಿದೆ’ ಎನ್ನುತ್ತಾರೆ ಅರ್ಚಕ ಚಂದ್ರಮೌಳಿ. 

ಜೀವನೋತ್ಸಾಹ: ‘ಅಲ್ಲಲ್ಲಿ ಸುಡು ಬಿಸಿಲಲ್ಲೂ ವಸಂತ ಚಿಗುತಿದ್ದಾನೆ. ವರುಣನ ಕಣ್ಣು ಮುಚ್ಚಾಟವೂ ನಡೆಯುತ್ತಿದೆ. ಕೃಷಿಕರು ಹೊನ್ನೇರು ಕಟ್ಟಿ, ಮರ ಗಣಗಲೆ ಇಟ್ಟು ನೇಗಿಲು ಪೂಜಿಸುವ ಪದ್ಧತಿ ಅಲ್ಲಲ್ಲಿ ಕಾಣ ಸಿಗುತ್ತದೆ. ಕೆಲವು ಕಡೆ ಭೂತಾಯಿಗೆ ನಮಿಸುತ್ತಾರೆ. ರೈತರಿಗೆ ಲವಲವಿಕೆ ತುಂಬುವಲ್ಲಿ ದಟ್ಟೈಸಿದ ಮೇಘಗಳ ಸಾಲು ಆಶಾ ಭಾವನೆ ಹೊಮ್ಮಿಸಿದರೆ, ಮುಗಿಲು ನೆಲದ ನಂಟು ಬೆಸೆದು ಘಮಲು ಉಂಬುವ ಹನಿಗಳ ಸಾಲು ಮುಂಗಾರಿನ ನಿರೀಕ್ಷೆ ಹುಟ್ಟಿಸುತ್ತದೆ. ಹೊಸ ತಲೆಮಾರು ಆಧುನಿಕ ಎಲೆಕ್ಟ್ರಾನಿಕ್‌ ವಸ್ತು ಕೊಳ್ಳುವ ಉತ್ಸಾಹದಲ್ಲಿ ಹಬ್ಬಕ್ಕೆ ಕಳೆಗಟ್ಟಿಸುತ್ತಾರೆ’  ಎಂದು ಹೇಳುತ್ತಾರೆ ಸಾಹಿತಿ ಯಳಂದೂರು ನಾಗೇಂದ್ರ. 

ಆಚರಣೆ ಮಹತ್ವ

ಚೈತ್ರ ಶುದ್ಧ ಪಾಡ್ಯದಲ್ಲಿ ಬರುವ ಯುಗಾದಿ ಯುಗದ ಆರಂಭವನ್ನು ಸೂಚಿಸುತ್ತದೆ. ಪಂಚಾಂಗ ಪದ್ಧತಿಯಂತೆ ಚಾಂದ್ರಮಾನದಲ್ಲಿ ಚೈತ್ರಮಾಸದ ಮೊದಲ ದಿನವನ್ನು ಯುಗಾದಿ ಎನ್ನುತ್ತಾರೆ. ಸೌರಮಾನದಲ್ಲಿ ಮೇಷ ಇಲ್ಲವೇ ಚಿತ್ತ ಯುಗಾದಿಯ ಪ್ರಥಮ ದಿನ. ಇದು ಸಾಮಾನ್ಯವಾಗಿ ಏಪ್ರಿಲ್‌ 14ರಂದು ಬರುತ್ತದೆ. ಶಾಲಿವಾಹನ ದೊರೆಯು ಅಭಿಷಿಕ್ತನಾದ ದಿನ ಎಂತಲೂ ಕರೆಯುತ್ತಾರೆ.

ಪಂಚಾಂಗ ಗಣತಿಯಂತೆ ಈ ದಿನದಂದು ಆರಂಭವಾಗುವ ಹೊಸ ಸಂವತ್ಸರದ ಲೆಕ್ಕವನ್ನು ಶಾಲಿವಾಹನ ಶಕೆ ಎನ್ನುತ್ತಾರೆ. ಮನೆಯ ಅಧಿದೇವತೆಯ ಪೂಜೆ, ನವ ವಸ್ತ್ರಧಾರಣೆ, ಪಂಚಾಂಗ ಶ್ರವಣ, ದಾನ ಈ ದಿನದ ವಿಶೇಷತೆಗಳು. ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಸುಖ–ದುಃಖಗಳನ್ನು ಸಂಕೇತಿಸುವಂತೆ ಬೇವು–ಬೆಲ್ಲ ಸೇವನೆ ಯುಗಾದಿಯಲ್ಲಿ ಮನುಕುಲದ ಸಮ ಚಿತ್ತವನ್ನು ಧ್ವನಿಸುತ್ತದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.