ಸಾವಿನಲ್ಲಿ ಸಂಭ್ರಮ ಸಾಮಾಜಿಕ ಮೌಲ್ಯವಲ್ಲ

ಬುಧವಾರ, ಜೂನ್ 26, 2019
25 °C
ಹಿರಿಯರ ಇಂತಹ ನಡವಳಿಕೆಗಳಿಂದ ಮಕ್ಕಳು ಕಲಿತುಕೊಳ್ಳುವ ಜೀವನ‌ ಮೌಲ್ಯವೇನು?

ಸಾವಿನಲ್ಲಿ ಸಂಭ್ರಮ ಸಾಮಾಜಿಕ ಮೌಲ್ಯವಲ್ಲ

Published:
Updated:

ಬಲಪಂಥ ಮತ್ತು ಎಡಪಂಥಗಳೆಂಬ ಸೈದ್ಧಾಂತಿಕ ನಿಲುವುಗಳು ತಮ್ಮ ವೈಚಾರಿಕ ಸ್ವರೂಪವನ್ನು ಕಳೆದುಕೊಂಡ ನಂತರ ಹೆಚ್ಚು ವ್ಯಕ್ತಿಗತ ಆಕ್ರಮಣಕಾರಿ ಭಾಷೆಯನ್ನು ಬಳಸುತ್ತಿವೆ. ಒಂದು ಸೈನ್ಯಕ್ಕೆ ಅದರ ಎದುರಿಗಿರುವ ಸೈನ್ಯ ಮಾತ್ರವೇ ಕಾಣುವುದು. ಆದರೆ ಎರಡೂ ಸೈನ್ಯಗಳಿಗೆ ಸೇರದ ಜನರೂ ಅಲ್ಲಿರುತ್ತಾರೆ. ಅದನ್ನು ಸಮಾಜವೆಂದು ಕರೆಯಲಾಗುತ್ತದೆ. ಸಮಾಜದಲ್ಲಿ ಇತ್ತಂಡದ ಪರವಾಗಿರುವವರೂ ಇರುತ್ತಾರೆ. ಆದರೆ ಅವರದು ವೈರತ್ವದ ಭಾಷೆಯಾಗಿರುವುದಿಲ್ಲ. ಏಕೆಂದರೆ ಅವರಿಗೆ ಗೆಲುವಿನ ಉದ್ದೇಶ ಸ್ಮಶಾನದ ನಿರ್ಮಾಣವಲ್ಲ; ಸುಂದರ ಸಂಸಾರದ ನಿರ್ಮಾಣವೆಂಬ ಅರಿವಿರುತ್ತದೆ.

ದೇಹದಿಂದ ಬಿಡುಗಡೆಯಾದ ಆತ್ಮಕ್ಕೆ ಸಾವಿಲ್ಲ. ಅದು ಪರಬ್ರಹ್ಮದಲ್ಲಿ ಸೇರಿಕೊಳ್ಳುತ್ತದೆ. ಆದ್ದರಿಂದ ಸಾವಿಗೆ ಬರುವ ಪ್ರತಿಕ್ರಿಯೆಗಳು ಅಧ್ಯಾತ್ಮಕ್ಕೆ ಮಹತ್ವದ್ದಲ್ಲ. ನಾಸ್ತಿಕವಾದಕ್ಕೂ ಸಾವಿಗೆ ಬರುವ ಪ್ರತಿಕ್ರಿಯೆಗಳು ಮಹತ್ವದ್ದಲ್ಲ. ಏಕೆಂದರೆ ಅದು ಸಾವಿನ‌ ಕೊನೆಯ ಕ್ಷಣದ ತನಕ ಮಾತ್ರ ತನ್ನ ಚಿಂತನೆಯನ್ನು ಇರಿಸಿಕೊಳ್ಳುತ್ತದೆ. ಮರಣಿಸಿದ ಮರುಕ್ಷಣಕ್ಕೆ ದೇಹಕ್ಕೆ ನಿಷ್ಪ್ರಯೋಜಕ ಮಾಂಸಕ್ಕಿಂತ ಹೆಚ್ಚಿನ ಗುರುತಿಸುವಿಕೆ ಇಲ್ಲ. ಆದರೆ ಇವೆರಡರ ನಡುವೆ ಸಾಮಾಜಿಕ ನಾಗರಿಕತೆ ಇದೆ. ವ್ಯಕ್ತಿಗಳು ಸಾಯುತ್ತಾರೆ. ಪ್ರಭುತ್ವಗಳ ಸ್ವರೂಪಗಳೇ ಬದಲಾಗುತ್ತವೆ. ಒಂದು ಪ್ರಭುತ್ವ ಸತ್ತು ಮತ್ತೊಂದು ಹುಟ್ಟುತ್ತದೆ. ದೇಶಗಳ ಸೀಮೆಗಳೂ ಬದಲಾಗುತ್ತವೆ. ಆದರೆ ಸಮಾಜ ಶಾಶ್ವತ ಸಂಸ್ಥೆ. ಸಮಾಜ ಮುನ್ನಡೆಯುವುದು ಸಂಸ್ಕಾರಗಳಿಂದ. ಸಂಸ್ಕಾರಗಳು ನಿರ್ದೇಶಿಸಲ್ಪಡುವುದು ಮೌಲ್ಯಗಳಿಂದ.

ಮೌಲ್ಯಗಳು ಎಂದರೇನು? ಮೂಲತಃ ಮೃಗವಾಗಿರುವ ಮನುಷ್ಯ ತನ್ನ ಮೃಗೀಯ ಪ್ರವೃತ್ತಿಯನ್ನು ಪ್ರಜ್ಞಾಪೂರ್ವಕವಾಗಿ ನಿಯಂತ್ರಿಸಲು ಹಾಕಿಕೊಂಡ ನಿಯಮಗಳು. ಈ ನಿಯಮಗಳ ಪಾಲನೆ ವೈಯಕ್ತಿಕ ಅವಶ್ಯಕತೆಯೂ ಆಗುವುದು ವ್ಯಕ್ತಿ ಮಾನವ ಪ್ರೇಮದ ಔನ್ನತ್ಯವನ್ನು ತಲುಪಿದ್ದಾಗ ಮಾತ್ರ. ಆದರೆ ಈ ನಿಯಮಗಳ ಪಾಲನೆಯು ಸಾಮಾಜಿಕ ಅವಶ್ಯಕತೆಯಾಗಿರುತ್ತದೆ ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಇದೊಂದು ರೀತಿ, ಮನುಷ್ಯ ನಿಜವಾಗಿ ಹೇಗಿರುತ್ತಾನೆ ಎಂದು ಎಲ್ಲರಿಗೂ ಗೊತ್ತಿದ್ದರೂ ವಸ್ತ್ರ ಧರಿಸಿಯೇ ಕಾಣಿಸಿಕೊಂಡ ಹಾಗೆ.

ಪರಸ್ಪರ ವಿರೋಧಿಗಳಾದ ಎರಡೂ ಸಿದ್ಧಾಂತಿಗಳಲ್ಲಿಯೂ ಕೆಲವರು ತಮಗಾಗದವರು ಮೃತರಾದಾಗ ಸಂತೋಷವನ್ನು ಪ್ರಕಟಿಸಿದ ಪ್ರಕರಣಗಳಿವೆ. ಕೆಲವರು ನಯವಾದ ಭಾಷೆಯಲ್ಲಿ ವ್ಯಕ್ತಪಡಿಸಿದ್ದರೆ ಕೆಲವರು ಒರಟಾದ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ ಅಷ್ಟೆ. ಇಂತಹ ಸಂದರ್ಭದಲ್ಲಿ ಸಮಾಜ ಈ ನಡವಳಿಕೆಯನ್ನು ಒಪ್ಪುವುದಿಲ್ಲ ಎಂಬುದನ್ನು ಹೇಳಿ ಎಚ್ಚರಿಸಬೇಕಾಗುತ್ತದೆ.

ಒಬ್ಬ ವ್ಯಕ್ತಿ ಮೃತನಾದಾಗ ಉಳಿದವರು ಹೇಗೆ ವರ್ತಿಸಬೇಕೆಂದು ಸಂವಿಧಾನ ಹೇಳುವುದಿಲ್ಲ. ಏನನ್ನೇ ಆದರೂ ‘ಸಂವಿಧಾನ’ದ ಹೆಸರಿನ‌ ಮೂಲಕವೇ ಸಮರ್ಥಿಸಿಕೊಳ್ಳುವವರಿಗೆ ಇದರ ಅರಿವಿರಬೇಕು. ಸಂವಿಧಾನ ಇದನ್ನು ಹೇಳಬೇಕಾಗಿಯೂ ಇಲ್ಲ. ಸಾಮಾನ್ಯಜ್ಞಾನ ಸಾಕಾಗುತ್ತದೆ. ಆ ಸಾಮಾನ್ಯಜ್ಞಾನಕ್ಕೆ ಪರಂಪರೆಯ ಹಿನ್ನೆಲೆಯೂ ಇದೆ.

ರಾಮಾಯಣ-ಮಹಾಭಾರತಗಳು ನಮ್ಮ ನಿತ್ಯ ಜೀವನದ ಭಾಗಗಳು. ರಾಮ, ಮರ್ಯಾದಾ ಪುರುಷೋತ್ತಮನಾಗುವುದು ಆತನ ನಡವಳಿಕೆಗಳಿಂದಾಗಿ. ರಾವಣ ಹತ್ಯೆಯಾದಾಗ ರಾಮ ಸಂಭ್ರಮ ಪಡುವುದಿಲ್ಲ. ರಾವಣನ ಹೆಣಕ್ಕೆ ನಮಿಸುತ್ತಾನೆ. ‘ಎಲ್ಲ ಶತ್ರುತ್ವವೂ ಸಾವಿನೊಂದಿಗೆ ಕೊನೆಯಾಗುತ್ತದೆ. ಲಂಕೆಯ ರಾಜ ಯಾವುದಕ್ಕೆ ಅರ್ಹನಾಗಿದ್ದಾನೊ ಆ ರೀತಿಯಲ್ಲೇ ಅಂತ್ಯಸಂಸ್ಕಾರ ನಡೆಸಬೇಕು’ ಎಂದು ಹೇಳುತ್ತಾನೆ. ರಾಮನ ಈ ಸಂಸ್ಕಾರದ ಹಿಂದೆ ಮಾನವೀಯ ಪ್ರಜ್ಞೆ ಇದೆ. ಯುದ್ಧ ಪ್ರಾರಂಭದ ಸಮಯದಲ್ಲೂ ಅವನು, ‘ಮಾನವ ಕುಲದ ಮಹಾಶತ್ರು ಯುದ್ಧ’ ಎಂಬ ಕೊನೆಯ ಎಚ್ಚರಿಕೆಯನ್ನು ರಾವಣನಿಗೆ ಕೊಟ್ಟ. ಈ ಪ್ರಜ್ಞೆ ರಾಮನನ್ನು ಉಳಿದ ಬಲಶಾಲಿಗಳಿಗಿಂತ ಬೇರೆಯಾಗಿಸಿತು. ನೂರು ಯೋಜನ ಹಾರಬಲ್ಲ ಹನುಮಂತನಿಗೂ ಕುಂಭಕರ್ಣನನ್ನು ಎದುರಿಸಲು ಆಗಲಿಲ್ಲ. ರಾವಣನನ್ನು ಈಗ ಹೆಡೆಮುರಿ ಕಟ್ಟಿ ತರುತ್ತೇನೆ ಎಂದು ಹೋದ ಸುಗ್ರೀವ ತಾನೇ ಬಂದಿಯಾದ. ಲಕ್ಷ್ಮಣನೂ ಮೇಘನಾದನ ಕೈಯಲ್ಲಿ ಹೊಡೆಸಿಕೊಂಡ. ಎಲ್ಲರೂ ಬಲಶಾಲಿಗಳೇ. ಆದರೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದೆ ದ್ವೇಷದ ಭಾಷೆಯಲ್ಲಿ ಮಾತನಾಡುವವರು. ಆದರೆ ಎಂದೂ ದ್ವೇಷದ ಭಾಷೆಯಲ್ಲಿ ಮಾತನಾಡದ ರಾಮನೊಬ್ಬನನ್ನು ಗೆಲ್ಲಲು ಯಾರಿಗೂ ಸಾಧ್ಯವಾಗಲಿಲ್ಲ. ತನ್ನನ್ನು ತಾನು ಗೆಲ್ಲಬಲ್ಲವನಿಗೆ ಮಾತ್ರ ಎದುರಾಳಿಯನ್ನೂ ಗೆಲ್ಲಬಲ್ಲ ಶಕ್ತಿ ಇರುತ್ತದೆ. ಅಂತಹವನಿಗೆ ಎದುರಾಳಿಯನ್ನು ಪ್ರೀತಿಸುವ ಶಕ್ತಿಯೂ ಇರುತ್ತದೆ. ಆದ್ದರಿಂದ ರಾಮ ಮೌಲ್ಯಪ್ರಜ್ಞೆಯ ಸಂಕೇತವಾಗುತ್ತಾನೆ.

ಹಾಗಾದರೆ ಕೃಷ್ಣ, ನರಕಾಸುರನನ್ನು ಕೊಂದದ್ದಕ್ಕೆ ಹಬ್ಬ ಆಚರಿಸುವುದಿಲ್ಲವೇ ಎಂದು ಕೇಳಿದವರಿದ್ದಾರೆ. ಆದರೆ ಅಲ್ಲಿ ನರಕಾಸುರನ ಸಾವನ್ನು ಹಬ್ಬವೆಂದು ಆಚರಿಸುವುದಲ್ಲ; ಕೃಷ್ಣನ ಗೆಲುವನ್ನು ಹಬ್ಬವೆಂದು ಆಚರಿಸುವುದು. ಗೆದ್ದವನಿಗೆ ತನ್ನ ಗೆಲುವನ್ನು ಸಂಭ್ರಮಿಸುವ ಅಧಿಕಾರವಿದೆ. ಆದರೆ ಸತ್ತವನ ಸಾವನ್ನು ಸಂಭ್ರಮಿಸುವ ಅಧಿಕಾರವಿಲ್ಲ. ಸ್ವಾತಂತ್ರ್ಯಾನಂತರ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲೆಲ್ಲ ನಾವು ಗೆದ್ದಿದ್ದೇವೆ ಮತ್ತು ನಮ್ಮ ಗೆಲುವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಆದರೆ ಭಾರತವು ಯುದ್ಧದಲ್ಲಿ ಗೆದ್ದಾಗ ಆಚರಿಸಿದ ಯಾವ ಸಂಭ್ರಮವೂ ಪಾಕಿಸ್ತಾನದ ಸೈನಿಕರು ಸತ್ತದ್ದಕ್ಕಾಗಿ ಪಟ್ಟ ಸಂತೋಷವಾಗಿರಲಿಲ್ಲ. ಇಲ್ಲೆಲ್ಲ ಯುದ್ಧಗಳು ಎರಡು ಪ್ರಭುತ್ವಗಳ ನಡುವೆ ನಡೆದಿವೆ. ಪ್ರಭುತ್ವಗಳು ಎನ್ನುವುದು ಇಲ್ಲಿ ಬಹುಮುಖ್ಯ ಅಂಶ. ಏಕೆಂದರೆ ಒಂದು ಪ್ರಭುತ್ವಕ್ಕೆ ಇನ್ನೊಂದು ಪ್ರಭುತ್ವದ ವಿರುದ್ಧ ಯುದ್ಧ ಘೋಷಿಸುವ ಪರಮಾಧಿಕಾರವಿದೆ. ಆದ್ದರಿಂದ ಯುದ್ಧದಲ್ಲಿ ಶತ್ರು ಸೈನಿಕನನ್ನು ಕೊಂದರೆ ಅದು ಅಪರಾಧವಲ್ಲ. ಆದರೆ ಒಂದೇ ಪ್ರಭುತ್ವದ ಅಧೀನದಲ್ಲಿರುವ ಒಬ್ಬ ಮನುಷ್ಯನನ್ನು ಇನ್ನೊಬ್ಬ ಕೊಂದರೆ ಅದು ಶಿಕ್ಷಾರ್ಹ ಅಪರಾಧ. ಹಾಗಿದ್ದಾಗಲೂ ಒಂದು ಪ್ರಭುತ್ವ ಇನ್ನೊಂದು ಪ್ರಭುತ್ವದ ವಿರುದ್ಧ ಗೆದ್ದಾಗ ಗೆಲುವನ್ನು ಮಾತ್ರ ಆಚರಿಸುವುದು ಹೊರತು ಶತ್ರುದೇಶದ ಸೈನಿಕರ ಸಾವಿನ ಸಂಭ್ರಮವನ್ನಲ್ಲ ಎಂದ ಮೇಲೆ, ಒಂದೇ ಪ್ರಭುತ್ವದ ಆಶ್ರಯದಲ್ಲಿರುವ ಒಬ್ಬ ವ್ಯಕ್ತಿ ಸತ್ತಾಗ ಅದೇ ಪ್ರಭುತ್ವದ ಆಶ್ರಯದಲ್ಲಿರುವ ಇನ್ನೊಬ್ಬ ಸಂಭ್ರಮಿಸುವುದು ಹೇಗೆ ಸರಿಯಾಗುತ್ತದೆ?

ಸತ್ತಾಗ ಸಂಭ್ರಮಿಸುವುದನ್ನು ಧರ್ಮಗಳು ಮಾನ್ಯ ಮಾಡಲು ಸಾಧ್ಯವಿಲ್ಲ. ಏಕೆಂದರೆ ಧರ್ಮಗಳು ಹುಟ್ಟಿದ್ದೇ ನಾಗರಿಕ ಬದುಕಿನ ನಿರ್ಮಾಣಕ್ಕಾಗಿ. ಏಸುಕ್ರಿಸ್ತ ತನ್ನನ್ನು ಶಿಲುಬೆಗೇರಿಸಿದವರನ್ನೂ ಕ್ಷಮಿಸು ಎಂದು ಪ್ರಾರ್ಥಿಸುವುದು, ಪ್ರವಾದಿ ಮಹಮ್ಮದ್, ವಿರೋಧಿ ಬಣದ ಯಹೂದ್ಯನ ಹೆಣ ಕಂಡ ತಕ್ಷಣ ಎದ್ದು ನಿಂತು ಗೌರವಿಸುವುದೆಲ್ಲ ಇದನ್ನೇ ಸೂಚಿಸುತ್ತವೆ. ಹಿಂದೂ ಧರ್ಮದಲ್ಲಿ ಕೆಟ್ಟದ್ದು ಮಾಡಿದವರು ನರಕಕ್ಕೆ, ಒಳ್ಳೆಯದನ್ನು ಮಾಡಿದವರು ಸ್ವರ್ಗಕ್ಕೆ ಹೋದರೂ ಸ್ವರ್ಗ ಯಾರಿಗೂ ಶಾಶ್ವತವಲ್ಲ. ಮೋಕ್ಷ ಶಾಶ್ವತವಾದದ್ದು. ಕೆಟ್ಟವನು ಹಲವು ಜನ್ಮ ತಳೆದು ಪ್ರಾಯಶ್ಚಿತ್ತ ಅನುಭವಿಸಿದ ನಂತರ ಅಂತಿಮವಾಗಿ ಮೋಕ್ಷಕ್ಕೇ ಹೋಗುತ್ತಾನೆ. ಒಳ್ಳೆಯವನೂ ಮೋಕ್ಷಕ್ಕೇ ಹೋಗುತ್ತಾನೆ. ಕೆಟ್ಟವನಿಗೂ ಮೋಕ್ಷದ ಅಧಿಕಾರ ಇರುವ ಧರ್ಮವಿದು. ಹಾಗಿರುವಾಗ ಸಾವನ್ನು ಸಂಭ್ರಮಿಸಲು ಧರ್ಮದ ಸಮರ್ಥನೆ ಯಾವ ಧರ್ಮದಲ್ಲೂ ಸಿಗಲಾರದು.

ಹಿರಿಯರು ತಮ್ಮ ಸೈದ್ಧಾಂತಿಕ ವಿರೋಧಕ್ಕಾಗಿ ಸಾವನ್ನು ಸಂಭ್ರಮಿಸಿದರೆ ಇದನ್ನೆಲ್ಲ ನೋಡುತ್ತಿರುವ ಅವರ ಮಕ್ಕಳಾಗಲೀ, ಅವರ ಮಕ್ಕಳ ವಯಸ್ಸಿನ ಬೇರೆ ಮಕ್ಕಳಾಗಲೀ ಕಲಿತುಕೊಳ್ಳುವ ಜೀವನ‌ ಮೌಲ್ಯವೇನು? ಅವರು ಗಳಿಸಿಕೊಳ್ಳುವ ನೈತಿಕ ಶಕ್ತಿಯೇನು? ಇತಿಹಾಸದ ಉದ್ದಕ್ಕೂ ಸಾಮ್ರಾಜ್ಯಗಳು ನಾಶವಾದದ್ದು ಅದರ ನೈತಿಕ ಶಕ್ತಿ ಕಳೆದು ಹೋದ ನಂತರವೇ. ಪ್ರತಿಯೊಂದು ವಿಚಾರದಲ್ಲೂ ಹಿರಿಯರು ಮಕ್ಕಳ ಮನಸನ್ನು ಕೆಡಿಸುವ ಎಲ್ಲವನ್ನೂ ಮಾಡಿ, ಮಕ್ಕಳ ಮನಸ್ಸಿನಲ್ಲಿ ಕ್ರೌರ್ಯವನ್ನೇ ತುಂಬುತ್ತಾ ಹೋಗಿ, ಶಿಕ್ಷಕರು ಮಕ್ಕಳಲ್ಲಿ ನೈತಿಕ ಪ್ರಜ್ಞೆಯನ್ನು ಬೆಳೆಸುತ್ತಿಲ್ಲವೆಂದು ದೂರಿದರೆ ಯಾವ ಶಿಕ್ಷಕ ತಾನೇ ಏನು ಮಾಡಲು ಸಾಧ್ಯ? ನಮ್ಮ ನಡವಳಿಕೆಗಳು ಭಾರತದ ಭವಿಷ್ಯದ ಜನರಿಗೆ ವರವಾಗುವಂತಿರಬೇಕೋ ಶಾಪವಾಗುವಂತಿರಬೇಕೋ ಎಂಬುದನ್ನು ಹಿರಿಯರು, ಮಾಧ್ಯಮಗಳು, ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಅರ್ಥ ಮಾಡಿಕೊಳ್ಳಬೇಕು. ಭಾವೀ ಪೀಳಿಗೆಯ ಕನಸು ಕಣ್ಣುಗಳಿಗೆ ‘ಸಾವಿರದ’
ಸಾರ್ಥಕತೆಗಳನ್ನು ಕಾಣಿಸಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 34

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !