ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲೋಕದಲ್ಲಿ ‘ಗಿರ್’ ಗಮ್ಮತ್ತು!

Last Updated 25 ಜೂನ್ 2018, 20:16 IST
ಅಕ್ಷರ ಗಾತ್ರ

ತುಮಕೂರು ನಗರ ಹೊರವಲಯದ ಸತ್ಯಮಂಗಲದಿಂದ ಶಿರಾ ಗೇಟ್‌ ಕಡೆ ಸಾಗುವಾಗ (ಶಿರಾಗೇಟ್‌ನಿಂದಲೂ ಬರಬಹುದು) ಬನ್ನಿರಾಯನ ನಗರ ಸಿಗುತ್ತದೆ. ಈ ನಗರ ಒಳಹೊಕ್ಕಂತೆ ತರಕಾರಿ ತೋಟಗಳು ಹಸಿರು ಹಾಸಿನಂತೆ ಕಾಣುತ್ತವೆ. ಹಸಿರು ಚಾದರದ ನಡುವಿನ ರಸ್ತೆಯಲ್ಲಿ ಹಾಯ್ದು, ಅಮಾನಿಕೆರೆಯ ಹಿಂಭಾಗಕ್ಕೆ ಬಂದರೆ ಕಂದು ಬಣ್ಣದ ಹಸುಗಳಿರುವ ಅಂಗಳವೊಂದು ಕಾಣುತ್ತದೆ. ಅದೇ ಬೆಂಗಳೂರಿನ ಶಿವಶಂಕರ್ ಮತ್ತು ಅವರ ಸ್ನೇಹಿತರು ನಡೆಸುತ್ತಿರುವ ‘ಗೋಲೋಕ’!

ಗೋಲೋಕದಲ್ಲಿ ಗುಜರಾತ್‌ನ 23 ಗಿರ್ ಆಕಳುಗಳಿವೆ. ಈ ಕೇಂದ್ರದಿಂದ ತುಮಕೂರಿಗೆ ನಿತ್ಯ 250 ಲೀಟರ್ ಹಾಲು ಪೂರೈಕೆ ಮಾಡಲಾಗುತ್ತಿದೆ. ಲೀಟರ್ ಹಾಲಿಗೆ ₹75 ರಿಂದ ₹95ರವರೆಗೂ ಬೆಲೆ ಸಿಗುತ್ತಿದೆ. ಈ ಗೋಲೋಕ, ಐದಾರು ರೈತರಿಗೆ ಗಿರ್ ತಳಿ ಸಾಕಣೆಗೆ ಪ್ರೇರಣೆಯಾಗಿದೆ.

ಗೋಲೋಕದ ಆರಂಭವಾಗಿದ್ದು: ಬೆಂಗಳೂರಿನ ಮಲ್ಲೇಶ್ವರದ ಶಿವಶಂಕರ್ ಗೋಲೋಕದ ಆರಂಭದ ರೂವಾರಿ. ಆರೇಳು ವರ್ಷಗಳ ಹಿಂದೆ ಸ್ನೇಹಿತರಿಬ್ಬರು ಅನಾರೋಗ್ಯದಿಂದ ಅಕಾಲಿಕ ಮರಣಹೊಂದಿದರು. ಈ ಸಾವು ಅವರಲ್ಲಿ ತಳಮಳ ಹುಟ್ಟಿಸಿತು. ಗೆಳೆಯರ ಅನಾರೋಗ್ಯಕ್ಕೆ ಆಹಾರದ ಸಮಸ್ಯೆಯೇ ಕಾರಣ ಎಂದು ಅರಿತ ಶಿವಶಂಕರ್, ‘ವಿಷಮುಕ್ತ ಆಹಾರ’ದ ಬಗ್ಗೆ ಚಿಂತನೆ ನಡೆಸಿದರು. ಈ ಕುರಿತು ಗೆಳೆಯರೊಡನೆ ಚರ್ಚಿಸಿದರು. ಆಗ ಹೊರಹೊಮ್ಮಿದ್ದೇ ಗಿರ್ ತಳಿಯ ದೇಸಿ ಆಕಳು ಸಾಕುವ ಯೋಚನೆ.

ಇದೆಲ್ಲ ಆಗಿದ್ದು 2011ರಲ್ಲಿ. ಆಗ ಶಿವಶಂಕರ್ ಹಳ್ಳಿಗೆ ಹೋಗಿ ಹಸು ಸಾಕುವ ಯೋಚನೆಯನ್ನು ಮನೆಯವರೆದುರು ಹೇಳಿದಾಗ ಅವರು ಒಪ್ಪಲಿಲ್ಲ. ಆದರೆ, ಹಿತೈಷಿಗಳಿಂದ ಮನೆಯವರನ್ನು ಒಪ್ಪಿಸಿದರು. ನಂತರ ಅಂತರ್ಜಾಲದಲ್ಲಿ ಹುಡುಕಾಡಿ ದೇಸಿ ತಳಿ ಹಸುಗಳು ಲಾಭ–ನಷ್ಟ, ಸಾಕುವಾಗ ಎದುರಾಗುವ ಕಷ್ಟ, ಹಾಲಿನಿಂದ ಆರೋಗ್ಯದ ಲಾಭ.. ಹೀಗೆ ಅನೇಕ ವಿಚಾರಗಳನ್ನೂ ಸಂಗ್ರಹಿಸಿದರು. ಅದರ ಚುಂಗು ಹಿಡಿದು ಗುಜರಾತ್‌ನ ಜುನಾಗಡ ವಿಶ್ವವಿದ್ಯಾಲಯದವರೆಗೂ ಹೋಗಿಬಂದು, ಭರಪೂರ ಮಾಹಿತಿ ತಂದರು. ಗಿರ್ ಹಸುಗಳನ್ನು ಸಾಕಲು ಸಂಕಲ್ಪ ಮಾಡಿದರು.

ಗಿರ್‌ ತಳಿ ಪೋಷಣೆಗೆ ತುಮಕೂರು ವಾತಾವರಣ ಸೂಕ್ತ ಎಂಬ ಸಲಹೆ ಸಿಕ್ಕಿತು ಶಿವಶಂಕರ್‌ಗೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಸಿದ್ದಾಪುರದ ಬಳಿ ಸ್ವಲ್ಪ ಜಮೀನು ಖರೀದಿಸಿ 5 ಗಿರ್ ಹಸುಗಳನ್ನು ಸಾಕಲು ಆರಂಭಿಸಿದರು. ಇದೇ ಅವರ ಮೊದಲ ಹೆಜ್ಜೆ. ಹಾಲು ಕರೆಯುವ ಹಸುಗಳೊಂದಿಗೆ ಹೈನುಗಾರಿಕೆ ಆರಂಭಿಸಿದರು. ಕರೆದ ಹಾಲನ್ನು ತುಮಕೂರು ನಗರಕ್ಕೆ ಪೂರೈಸುತ್ತಿದ್ದರು. ಹಾಲು ಖರೀದಿಸುತ್ತಿದ್ದ ರಮೇಶ್ ‘ನಮ್ಮ ಜಮೀನಿನಲ್ಲಿಯೇ ಹೈನುಗಾರಿಕೆ ಮಾಡಿ, ಜಾಗ ಕೊಡುತ್ತೇನೆ’ ಎಂದರು. ಆಗ, ಗೋಪಾಲನೆ ಸ್ಥಳ ಮಧುಗಿರಿಯಿಂದ ಬನ್ನಿರಾಯನ ನಗರಕ್ಕೆ ಸ್ಥಳಾಂತರವಾಯಿತು.

ಸಹಕಾರ ತತ್ವ–ಟ್ರಸ್ಟ್ ಆರಂಭ: ನಗರದ ಸಮೀಪಕ್ಕೆ ಬಂದ ಮೇಲೆ ಹಾಲಿಗೆ ಬೇಡಿಕೆ ಹೆಚ್ಚಾಯಿತು. ಹಾಲಿನ ಗುಣದ ಬಗ್ಗೆ ಗ್ರಾಹಕರಿಂದ ಗ್ರಾಹಕರಿಗೆ ಪ್ರಚಾರವಾಯಿತು. ಗ್ರಾಹಕರ ಜತೆಗೆ, ಹಸು ಸಾಕುವ ಆಸಕ್ತರ ಸಂಖ್ಯೆಯೂ ವೃದ್ದಿಯಾಯಿತು. ಕೆಲವರು ‘ನಮಗೂ ಈ ಹಸುಗಳನ್ನು ಸಾಕುವ ಆಸೆ ಇದೆ. ಆದರೆ ಜಾಗ ಇಲ್ಲ’ ಎಂದು ಹೇಳಿಕೊಂಡರು. ಅಂಥ ಸಮಾನ ಮನಸ್ಕ ಗೆಳೆಯರು ಶಿವಶಂಕರ್ ಜತೆ ಸೇರಿದರು. ಸಹಕಾರ ತತ್ವದಡಿ ಬನ್ನಿರಾಯನನಗರದ ರಮೇಶ್ ತೋಟದಲ್ಲಿ ‘ಗೋಲೋಕ ಸೇವಾ ಟ್ರಸ್ಟ್’ ಆರಂಭವಾಯಿತು. ಸಂಘ ನೋಂದಣಿಯಾಯಿತು. ಸದ್ಯ ಟ್ರಸ್ಟ್‌ನಲ್ಲಿ 21 ಸದಸ್ಯರು ಇದ್ದಾರೆ.

‘ಬೆಂಗಳೂರಿನ ವಾತಾವರಣ ತುಮಕೂರಿನಲ್ಲೂ ಇದೆ ಎನ್ನುವ ಕಾರಣಕ್ಕೆ ಇಲ್ಲಿ ಹಸು ಸಾಕಲು ಮುಂದಾದೆ’ ಎನ್ನುವ ಶಿವಶಂಕರ್, ಹಾಲು ಪೂರೈಸುತ್ತಲೇ ಅನೇಕರನ್ನು ಗೆಳೆಯರನ್ನಾಗಿಸಿಕೊಂಡಿದ್ದಾರೆ. ಹಾಲು ಮಾರುವಾಗ ತೋಟದ ಮಾಲೀಕ ರಮೇಶಣ್ಣ ಪರಿಚಯವಾದರು. ನಂತರ ಜಗದೀಶ್ ಬಾಬು, ನಟರಾಜ ಶೆಟ್ಟರು, ರಾಮಮೂರ್ತಿ, ಸತ್ಯಣ್ಣ, ಅಭಿಲಾಷ್, ಆನಂದ್, ಶಶಿ ಅಕ್ಕ, ಜ್ಯೋತಿ ಅಕ್ಕ, ಸತ್ಯಾನಂದ್, ಸುಧೀಂದ್ರ, ಕೃಷ್ಣ, ವಿಶ್ವೇಶ್ವರಯ್ಯ ಜತೆಯಾದರು. ಅವರೆಲ್ಲರೂ ಈಗ ಟ್ರಸ್ಟ್‌ ಸದಸ್ಯರು’ ಎಂದು ಬಳಗ ಬೆಳೆದ ಬಗ್ಗೆ ಅವರು ಹೆಮ್ಮೆಯಿಂದ ಮಾಹಿತಿ ಹಂಚಿಕೊಳ್ಳುತ್ತಾರೆ.

ಮೂರೂವರೆ ಎಕರೆಯ ತೋಟದ ಭಾಗವಾಗಿರುವ ಗೋಲೋಕದಲ್ಲಿ 16 ಹಾಲು ಕರೆಯುವ ಹಸುಗಳಿವೆ. ಒಂದು ಗೂಳಿ ಹಾಗೂ ಐದಾರು ಕರುಗಳಿವೆ. ನಿತ್ಯ 80 ರಿಂದ 90 ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. 250 ಲೀಟರ್ ಬೇಡಿಕೆ ಇದೆಯಂತೆ. ಈ ಟ್ರಸ್ಟ್‌ನಿಂದ ಪ್ರೇರಣೆ ಪಡೆದ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ, ಡಾಬಸ್‌ಪೇಟೆ ಬಳಿ, ಗುಬ್ಬಿ ಮತ್ತು ಪಾವಗಡದ ಸ್ನೇಹಿತರು ಗಿರ್ ಹಸುಗಳನ್ನು ಸಾಕಿದ್ದಾರೆ. ಅಲ್ಲಿಂದ ಗೋಲೋಕಕ್ಕೆ ಹಾಲು ಕಳುಹಿಸುತ್ತಾರೆ. ಇಲ್ಲಿಂದ ಗ್ರಾಹಕರಿಗೆ ಪೂರೈಕೆಯಾಗುತ್ತದೆ.

ಪ್ರತ್ಯಕ್ಷ–ಪರೋಕ್ಷ ಲಾಭಗಳು : ‘ತಳಿ ಆಧರಿಸಿ ಗಿರ್ ಹಸುಗಳ ಬೆಲೆ ಇದೆ. ಆದರೆ ಸಾಮಾನ್ಯ ರೈತರು ಸಾಕಲು ತರುವ ಹಸುವಿಗೆ ₹ 70ರಿಂದ 80 ಸಾವಿರ ಆಗುತ್ತದೆ. ಕೆಲವರು ತಳಿ ಅಭಿವೃದ್ಧಿಯನ್ನೂ ಮಾಡುತ್ತಿದ್ದು ಇದೂ ಆರ್ಥಿಕವಾಗಿ ಲಾಭದಾಯಕ’ ಎಂದು ಲಾಭಗಳ ವಿಷಯ ವಿವರಿಸುವ ಶಿವಶಂಕರ್, ಸೀಮೆ ಹಸು ಮತ್ತು ದೇಸಿ ತಳಿ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತಾರೆ. ‘ಸೀಮೆಹಸು 5 ರಿಂದ 6 ಕರುಗಳನ್ನು ನೀಡಿದರೆ, ಗಿರ್ ಹಸುಗಳು ಅಂದಾಜು 10 ಕರುಗಳನ್ನು ಹಾಕುತ್ತವೆ. ಸೀಮೆಹಸುಗಳನ್ನು ಬಿಸಿಲಿನಲ್ಲಿ ಹೆಚ್ಚು ಕಾಲ ಮೇಯಿಸುವುದು ಕಷ್ಟ. ಆದರೆ ಈ ಹಸುಗಳನ್ನು ಬಿಸಿಲು ತಡೆಯುತ್ತವೆ’ ಎನ್ನುವುದು ಅವರ ಅಭಿಪ್ರಾಯ.

ಗಿರ್ ತಳಿಗಳು ಹಾಲಿನಲ್ಲಷ್ಟೇ ಅಲ್ಲ, ಸಗಣಿಯಿಂದಲೂ ಲಾಭ ಕೊಡುತ್ತವೆ ಎಂಬುದು ಟ್ರಸ್ಟ್‌ನವರ ಲೆಕ್ಕಾಚಾರ. ಅವರ ಪ್ರಕಾರ ಒಂದು ಹಸು ನಿತ್ಯ ಸರಾಸರಿ 20 ಕೆ.ಜಿ ಸಗಣಿ ನೀಡುತ್ತದೆ. ಒಂದು ಕೆ.ಜಿ ಸಗಣಿಯಲ್ಲಿ ನಾಲ್ಕುಬೆರಣಿ ಮಾಡುತ್ತಾರೆ. 10 ಲೀಟರ್ ಗಂಜಲ ಪರಿಷ್ಕರಿಸಿದರೆ 3 ಲೀಟರ್ ಗೋಮೂತ್ರ ಬರುತ್ತದೆ. ಲೀಟರ್‌ಗೆ ₹20ರಂತೆ ಮಾರಾಟವಾಗುತ್ತದೆ. ಹಾಲಿನ ಜತೆಗೆ, ತುಪ್ಪವನ್ನು ಮಾರಾಟ ಮಾಡುತ್ತಾರೆ. ಗಿರ್ ಹಸುವಿನ ಹಾಲಿನಿಂದ ಉತ್ಪಾದಿಸುವ ತುಪ್ಪದ ಬೆಲೆ 1 ಕೆ.ಜಿ.ಗೆ ₹1,800 ಇದೆಯಂತೆ. ಆಯುರ್ವೇದ, ಪಂಚಗವ್ಯ ಚಿಕಿತ್ಸೆಯಲ್ಲಿ ಈ ತುಪ್ಪವನ್ನು ಹೆಚ್ಚು ಬಳಸುತ್ತಾರಂತೆ.

ಗೊಬ್ಬರ ಮತ್ತು ಸಗಣಿಯಿಂದಲೇ ದಿನಕ್ಕೆ ಕನಿಷ್ಠ ₹250 ಆದಾಯಗಳಿಸಬಹುದು ಎಂದು ಲೆಕ್ಕಕೊಡುತ್ತಾರೆ ಶಿವಶಂಕರ್. ಸಗಣಿಯಿಂದ ತಯಾರಿಸುವ ಬೆರಣಿಯನ್ನು ಶವಸಂಸ್ಕಾರ, ಹೋಮ, ಅಗ್ನಿಹೋತ್ರದಂತಹ ಕಾರ್ಯಕ್ರಮಗಳಿಗೆ ಇಲ್ಲಿಂದ ಕೊಂಡೊಯ್ಯುತ್ತಾರೆ. ಉಳಿದ ಸಗಣಿಯನ್ನು ಮಾರಾಟ ಮಾಡುತ್ತಾರೆ. ಗೋವುಗಳಿಗಾಗಿ ಎಕರೆಗೂ ಹೆಚ್ಚು ಜಾಗದಲ್ಲಿ ನೇಪಿಯರ್, ಜೋಳ, ಅಲಸಂದೆ, ಹುರುಳಿಯನ್ನು ಮೇವಿಗಾಗಿ ಬೆಳೆಸುತ್ತಾರೆ. ಮೇವಿನ ಬೆಳೆಗೆ ಸಗಣಿಯನ್ನೇ ಗೊಬ್ಬರವಾಗಿಸುತ್ತಾರೆ. ಸಗಣಿ ಗೊಬ್ಬರದ ಬಳಕೆಯಿಂದಾಗಿ ತೋಟದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಾಗಿದೆ. ಆರೇಳು ವರ್ಷಗಳ ಗಿರ್ ತಳಿಯೊಂದಿಗಿನ ಗೋವಿನ ಪಯಣ ಶಿವಶಂಕರ್‌ಗೆ ಖುಷಿಕೊಟ್ಟಿದೆ. ಬೆಂಗಳೂರಿನ ಮಲ್ಲೇಶ್ವರದ ಕನ್ನಡ ಸಂಘ ಇವರ ಸಾಧನೆ ಗುರುತಿಸಿ ಸನ್ಮಾನಿಸಿದೆ. ಗಿರ್ ತಳಿ ಪೋಷಣೆ ಕುರಿತ ಹೆಚ್ಚಿನ ಮಾಹಿತಿಗಾಗಿ ಶಿವಶಂಕರ್ ಅವರನ್ನು ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು: 7899047555

ಮಾರುಕಟ್ಟೆಯ ಕಷ್ಟ – ಸುಖ

ಕೃಷಿಯಲ್ಲಿ ಸುಖದಷ್ಟೇ ಕಷ್ಟವೂ ಇದೆ ಎಂಬುದನ್ನು ಆರಂಭದಲ್ಲೇ ಶಿವಶಂಕರ್‌ಗೆ ಅರಿವಾಗಿದೆ. ಒಂದು ಲೀಟರ್‌ ಹಾಲನ್ನು ₹ 70ಕ್ಕೆ ಮಾರುವಾಗ ಕೆಲವರು ‘ಇವರು ಮೋಸ ಮಾಡಲು ಬಂದಿದ್ದಾರೆ’ ಎನ್ನುವಂತೆ ನೋಡಿದ್ದಾರೆ. ‘ನಾವು ಈಗ ಹಾಲು ಕುಡಿದು ಬದುಕಿಲ್ಲವಾ, ಇದರಲ್ಲೇನು ವಿಶೇಷ’ ಎಂದು ಗೇಲಿ ಮಾಡಿದ್ದರು. ಆದರೆ ನಮ್ಮನ್ನು ನಂಬಿ ಹಾಲು ಖರೀದಿಸಿ, ಬಳಸಿದವರು ತಮ್ಮ ಆರೋಗ್ಯದಲ್ಲಾದ ಬದಲಾವಣೆ ಮನಗಂಡು, ಆ ಮಾಹಿತಿಯನ್ನು ಬೇರೆಯವರಿಗೂ ಹಂಚಿಕೊಂಡಿದ್ದು ಮಾರುಕಟ್ಟೆ ವಿಸ್ತರಣೆಗೆ ಸಹಕಾರವಾಯಿತು ಎಂದು ಶಿವಶಂಕರ್ ಮಾರುಕಟ್ಟೆಯ ಕಷ್ಟ–ಸುಖವನ್ನು ನೆನಪಿಸಿಕೊಳ್ಳುತ್ತಾರೆ.

ಚಿತ್ರಗಳು: ಎಸ್‌. ಚಂದನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT