ಸೋಮವಾರ, ಜೂನ್ 1, 2020
27 °C

ಒಡೆಯ ಕರೆದಾ ಧ್ವನಿಯ ಕೇಳಿ...

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

Prajavani

ಮಣ್ಣನ್ನು ಮೈ ಕೈಗೆ ಮೆತ್ತಿಕೊಂಡು ಆಟವಾಡುವ ಸಂಭ್ರಮ, ಅಂಗಳದಲ್ಲಿ ಅರಳುವ ಹೂಗಳನ್ನು ಮುತ್ತಿಕ್ಕುವ ಖುಷಿ, ಚಂಗನೆ ಜಿಗಿಯುವ ಕರುಗಳನ್ನು ಬೆನ್ನಟ್ಟಿ ಓಡುವ ತವಕ, ಮಾಡಿನ ಮೇಲೆ ಕುಳಿತ ಕಾಗೆಯ ಕೂಗು, ಗುಬ್ಬಚ್ಚಿಯ ಚಿಂವ್ ಚಿಂವ್ ಹಾಡು... ಇವೆಲ್ಲವನ್ನು ಮಕ್ಕಳು ಸವಿಯಬೇಕು, ನೆಲದ ಮಣ್ಣಿನ ಘಮ ಹೀರುತ್ತ ಬೆಳೆಯಬೇಕೆಂಬ ಹಂಬಲ, ಈ ದಂಪತಿಯನ್ನು ಸಿಲಿಕಾನ್ ಸಿಟಿಯಿಂದ ಪುಟ್ಟ ಹಳ್ಳಿಗೆ ತಂದು ನಿಲ್ಲಿಸಿದೆ.

ಆ ದಂಪತಿ ಹೆಸರು ಪೂರ್ಣಿಮಾ ಮತ್ತು ವಿನಾಯಕ ಭಟ್ಟ. ಇಬ್ಬರೂ ಎಂಜಿನಿಯರಿಂಗ್ ಪದವೀಧರರು. ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದವರು. ನೆಮ್ಮದಿಯಿಲ್ಲದ ನಗರ ಜೀವನದಿಂದ ಬೇಸರಗೊಂಡು, ಉದ್ಯೋಗಕ್ಕೆ ರಾಜೀನಾಮೆ ನೀಡಿ ಹಳ್ಳಿಗೆ ಬಂದು ನೆಲೆಸಿದ್ದಾರೆ. ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕು ಬೇಣದಮನೆಯಲ್ಲಿ ತೋಟ ಖರೀದಿಸಿ, ಹಳ್ಳಿ ಬದುಕಿನ ಮಾಧುರ್ಯವನ್ನು ಅನುಭವಿಸುತ್ತಿದ್ದಾರೆ.

ಹಳ್ಳಿಗೆ ಬಂದು ಅಪ್ಪಟ ರೈತರಾದ ವಿನಾಯಕ ಅವರಿಗೆ, ಅಡಿಕೆ ತೋಟದೊಂದಿಗೆ ಹೈನುಗಾರಿಕೆ ನಡೆಸುವ ಯೋಚನೆ ಬಂತು. ಎಚ್‌.ಎಫ್, ಜರ್ಸಿ ತಳಿಯ 10 ಆಕಳನ್ನು ಖರೀದಿಸಿದರು. ದಿನಕ್ಕೆ ಸುಮಾರು 60 ಲೀಟರ್ ಹಾಲು ಹಿಂಡಿ ಡೇರಿಗೆ ಕೊಟ್ಟು ಉಪ ಆದಾಯಕ್ಕೊಂದು ಮೂಲ ಕಂಡುಕೊಂಡರು.

ಬಿಡುವಾದಾಗ ಹೊನ್ನಾವರ ತಾಲ್ಲೂಕು ಕರ್ಕಿಯಲ್ಲಿರುವ ಮೂಲಮನೆಗೆ ಹೋಗುತ್ತಿದ್ದ ಅವರಿಗೆ, ಕೃಶ ಶರೀರದ ಪುಟ್ಟ ಆಕಳುಗಳು ಕಣ್ಣಿಗೆ ಬೀಳುತ್ತಿದ್ದವು. ಬಾಳೆಹಣ್ಣು ತಿಂದವರು ಸಿಪ್ಪೆ ಎಸೆಯುವುದನ್ನೇ ಕಾಯುತ್ತ ಆಸೆಗಣ್ಣಿನಿಂದ ನಿಂತಿರುತ್ತಿದ್ದ ಆ ಆಕಳುಗಳ ಬಗ್ಗೆ ಅವರಿಗೆ ಕನಿಕರ ಮೂಡಿತು. ಇವುಗಳಲ್ಲಿ ಕೆಲವು ರಾತ್ರಿ ಹೊತ್ತು ಕಸಾಯಿಖಾನೆಗೆ ಹೋಗುತ್ತವೆಂದು ಅಲ್ಲಿಯೇ ಅಂಗಡಿಯಲ್ಲಿ ಕುಳಿತವರು ಹೇಳಿದರು. ಇದನ್ನು ಕೇಳಿ ನೊಂದುಕೊಂಡ ಭಟ್ಟರು, ಗತಿಗೋತ್ರವಿಲ್ಲದ ಇವುಗಳ ಪಾಲನೆ ಮಾಡಬೇಕೆಂದು ನಿರ್ಧರಿಸಿದರು.

‘ಈ ರೀತಿ ಹೀನಾಯ ಸ್ಥಿತಿಯಲ್ಲಿದ್ದ ಎಲ್ಲ ಹಸುಗಳು ದೇಸೀಯ ಮಲೆನಾಡು ಗಿಡ್ಡ ತಳಿಗಳು. ದಲ್ಲಾಳಿಯೊಬ್ಬರನ್ನು ಮಾತನಾಡಿಸಿ, ಎಲ್ಲ ಹಸುಗಳನ್ನು ನಾನೇ ಖರೀದಿಸುವುದಾಗಿ ಹೇಳಿದೆ. ಊರಿನಲ್ಲಿ ಮತ್ತೆಲ್ಲಾದರೂ ಇದ್ದರೂ ತಿಳಿಸಿ ಎಂದು ಅವರಿಗೆ ಹೇಳಿಬಂದೆ. ಮನೆಯಲ್ಲಿದ್ದ ಎಚ್‌.ಎಫ್, ಜರ್ಸಿ ದನಗಳನ್ನು ಮಾರಾಟ ಮಾಡಿ, ‘ಮಲೆನಾಡು ಗಿಡ್ಡ’ ತಳಿಯ ಮನೆ ಮಾಡಲು ಯೋಚಿಸಿದೆ. ಹೀಗೆ, ನಾಲ್ಕು ವರ್ಷಗಳಲ್ಲಿ ಸಿಕ್ಕಲ್ಲೆಲ್ಲ ತಂದು ಸಾಕಿರುವ ಮಲೆನಾಡು ಗಿಡ್ಡಗಳ ಸಂಖ್ಯೆ ಈಗ 100 ದಾಟಿದೆ’ ಎನ್ನುತ್ತಾರೆ ಭಟ್ಟರು.

ಮಲೆನಾಡು ಗಿಡ್ಡ ಮನೆಯಲ್ಲಿದ್ದರೆ ಔಷಧ ಸಸ್ಯವೊಂದು ಮನೆಯಲ್ಲಿದ್ದಂತೆ. ಬೆಲೆಕಟ್ಟಲಾಗದ ಜೀವ ಇದು. ಗುಡ್ಡಗಾಡಿನ ಈ ಜೀವಿ, ಬೆಟ್ಟದ ಔಷಧ ಸಸ್ಯದ ಜ್ಞಾನವಿರುವ ನಾಟಿವೈದ್ಯನಂತೆ. ಮೇಯಲು ಹೋದಾಗ ಔಷಧ ಸಸ್ಯಗಳನ್ನು ತಿಂದು ಬರುವ ಇವು, ಹಾಲಿನ ಮೂಲಕ ನಮಗೆ ಅದರ ಸತ್ವವನ್ನು ನೀಡುತ್ತವೆ. ಮಲೆನಾಡು ಗಿಡ್ಡದ ಮೂತ್ರ, ಸಗಣಿ, ಹಾಲು, ತುಪ್ಪ ಎಲ್ಲವೂ ಔಷಧೀಯ ವಸ್ತುಗಳೇ. ತುಪ್ಪ ಕೆ.ಜಿ.ಯೊಂದಕ್ಕೆ ₹3000 ದಿಂದ ₹5000ದವರೆಗೆ ಮಾರಾಟವಾಗುತ್ತದೆ ಎನ್ನುತ್ತ ಅವರು, ಮಲೆನಾಡು ಗಿಡ್ಡದ ಹಾಲಿನಿಂದ ಮಾಡಿದ ರುಚಿಯಾದ ಮಜ್ಜಿಗೆಯನ್ನು ನಮಗೆ ಕೊಟ್ಟರು.

ವಿನಾಯಕ ಭಟ್ಟರ ‘ಮಿಷನ್ ಮಲೆನಾಡು ಗಿಡ್ಡ’ ಇನ್ನೂ ಮುಗಿದಿಲ್ಲ. ಇವರು ಮಲೆನಾಡು ಗಿಡ್ಡ ತಳಿ ಬೇಡ ಎನ್ನುವವರ ಬಳಿ ಹೋಗಿ, ಅವರಲ್ಲಿರುವ ಹಸುಗಳನ್ನು ಖರೀದಿಸುತ್ತಾರೆ. ಸಾಕಲು ಮುಂದಾದವರಿಗೆ ಇವರ ಬಳಿಯಿರುವ ಆಕಳನ್ನು ಉಚಿತವಾಗಿ ಕೊಡುತ್ತಾರೆ. ತಳಿ ಪಡೆಯುವವರು ಬಾಡಿಗೆ ವಾಹನ ತಂದು ಆಕಳು ಹೇರಿಕೊಂಡು ಹೋದರಾಯಿತು.

‘ಮಲೆನಾಡು ಗಿಡ್ಡದಲ್ಲಿ ಸ್ವರ್ಣಕಪಿಲ ಎನ್ನುವುದು ತೀರಾ ಅಪರೂಪದ ಜಾತಿ. ಇದು ವಿನಾಶದ ಅಂಚಿನಲ್ಲಿದೆ. ಬೇಣದಮನೆಯಲ್ಲಿರುವ ಎಲ್ಲ 60ರಷ್ಟು ಹಸುಗಳು ಇದೇ ಜಾತಿಯವು. ಇವುಗಳ ಕೊಂಬಿನಲ್ಲಿ ಪಾಸಿಟಿವ್ ಎನರ್ಜಿಯಿದೆ. ಅದರೊಳಗೆ ಗೊರೊಚನ ಎಂಬ ಅಮೂಲ್ಯ ವಸ್ತುವೊಂದಿದೆ. ಇವುಗಳಲ್ಲೇ ಕೆಂಪು ಹಾಗೂ ಕಪ್ಪು ಜಾತಿಯ ಹಸುಗಳನ್ನು ಬೆಂಗಳೂರು ಸಮೀಪದ ಚಂದಾಪುರಕ್ಕೆ ಕಳುಹಿಸುತ್ತೇನೆ. ಅಲ್ಲಿ ನನ್ನ ಮಾವ ಅದನ್ನು ನೋಡಿಕೊಳ್ಳುತ್ತಾರೆ’ ಎನ್ನುತ್ತ ಭಟ್ಟರು ನಮ್ಮನ್ನು ಬೆಟ್ಟಕ್ಕೆ ಕರೆದುಕೊಂಡು ಹೋದರು. 

‘ಎಲ್ಲಿದ್ರೊ ಎಲ್ಲ ಬರ‍್ರೋ...’ ಎಂದು ಭಟ್ಟರು ಕರೆದಿದ್ದೇ ತಡ, ದೂರದಲ್ಲಿ ಮೇಯುತ್ತಿದ್ದ ಆಕಳುಗಳೆಲ್ಲ ದಾರಿ ಹಿಡಿದು ಭಟ್ಟರ ಬಳಿ ನಿಂತವು. ಅವು ಬರುವ ಪರಿಯನ್ನು ಕಂಡಾಗ ‘ಧರಣಿ ಮಂಡಲ ಮಧ್ಯದೊಳಗೆ’ ಪದ್ಯದ ‘ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ತಾಯಿ ಬಾರೇ, ಕಾಮಧೇನು ನೀನು ಬಾರೆಂದು, ಪ್ರೇಮದಲಿ ಗೊಲ್ಲ ಕರೆದನು...ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು...’ ಈ ಸಾಲುಗಳು ಕಣ್ಮುಂದೆ ಮೂಡಿದವು.

ಹಾಗೆ ಹೊರಟ ಎಲ್ಲ ಹಸುಗಳು, ಗೇಟು ದಾಟಿ, ಕೊಟ್ಟಿಗೆಯಲ್ಲಿ ಅವುಗಳಿಗೆ ಮೀಸಲಿಟ್ಟ ಜಾಗಕ್ಕೆ ಬಂದು ನಿಂತವು. ‘ಮಲೆನಾಡು ಗಿಡ್ಡ ಒದೆಯುವ ಜಾತಿ ಎಂಬುದು ತಪ್ಪು ಕಲ್ಪನೆ. ಮಕ್ಕಳಂತೆ ಪ್ರೀತಿಸಿದರೆ ಅವು ಮೃದುವಾಗುತ್ತವೆ. ನಮ್ಮಲ್ಲಿರುವ ಒಂದು ಆಕಳು ಕೂಡ ಒದೆಯುವುದಿಲ್ಲ. ಇಲ್ಲಿ ಬಂದ ನಾಲ್ಕು ದಿನಕ್ಕೆ ಎಲ್ಲವುಗಳಂತೆ ಹೊಂದಿಕೊಳ್ಳುತ್ತವೆ’ ಎನ್ನುತ್ತ ಅವುಗಳ ಮೈದಡವಿದರು ಭಟ್ಟರು.

‘10 ಎಚ್‌.ಎಫ್ ಸಾಕಣೆ 50 ಮಲೆನಾಡು ಗಿಡ್ಡಕ್ಕೆ ಸಮ. ಇವುಗಳದು ಕನಿಷ್ಠ ನಿರ್ವಹಣಾ ವೆಚ್ಚ. ರೋಗವೂ ಕಡಿಮೆ. ದೇಸಿ ತಳಿಯಾಗಿದ್ದಕ್ಕೆ ಸಹಜವಾಗಿಯೇ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಸದ್ಯಕ್ಕೆ ಎರಡು ಎಕರೆ ತೋಟದಿಂದ ಬರುವ ಆದಾಯವನ್ನು ಕೊಟ್ಟಿಗೆಗೆ ಖರ್ಚು ಮಾಡುತ್ತಿದ್ದೇವೆ. ಇಬ್ಬರು ಕೆಲಸಗಾರರು, ಕೊಟ್ಟಿಗೆ ನಿರ್ವಹಣೆ ಸೇರಿ ವರ್ಷಕ್ಕೆ ಸುಮಾರು ₹5 ಲಕ್ಷ ಖರ್ಚಾಗುತ್ತಿದೆ. ಭವಿಷ್ಯದಲ್ಲಿ ಸಗಣಿಯ ಬೆರಣಿ, ಗೋಮೂತ್ರದಿಂದ ಅರ್ಕ, ಸೊಳ್ಳೆಬತ್ತಿ, ಧೂಪ, ನೋವಿನೆಣ್ಣೆ, ಫಿನಾಯಿಲ್, ಸೋಪ್, ಶಾಂಪೂ, ಕ್ರೀಮ್‌ ತಯಾರಿಸುವ, ಉಪ ಉತ್ಪನ್ನಗಳ ತರಬೇತಿ ಶಾಲೆ ನಡೆಸುವ ಯೋಜನೆಯಿದೆ’ ಎಂದು ಅಲ್ಲಿಯೇ ಇದ್ದ ಪೂರ್ಣಿಮಾ ತಿಳಿಸಿದರು.

‘ಗೋವಿನ ಸಂತತಿ ಉಳಿಸುವ ಉದ್ದೇಶದಿಂದ ಹಾಲನ್ನು ಹೆಚ್ಚು ಹಿಂಡದೇ, ಕರುಗಳಿಗೆ ಬಿಡುತ್ತೇವೆ. ತಿಂಗಳಿಗೆ 10–12 ಕೆ.ಜಿ ತುಪ್ಪ ತಯಾರಾಗುತ್ತದೆ. ಔಷಧ ವಸ್ತುವಾಗಿರುವ ಇದಕ್ಕೆ ಮುಂಗಡ ಬುಕಿಂಗ್ ಇರುತ್ತದೆ. ಒಂದು ಆಕಳಿಗೆ ದಿನಕ್ಕೆ ಸರಾಸರಿ ₹ 55 ಖರ್ಚು ಬರುತ್ತದೆ. ಕರುಗಳಿಗೆ ತಾಯಿ ಹಾಲು ಹೆಚ್ಚು ಸಿಗುವುದರಿಂದ ಹೆಚ್ಚುವರಿ ಆಹಾರ ಅಷ್ಟಾಗಿ ಬೇಕಾಗುವುದಿಲ್ಲ. ತುಪ್ಪದಿಂದ ಬರುವ ಆದಾಯ ನಮ್ಮ ಕುಟುಂಬಕ್ಕೆ, ತೋಟದ ಆದಾಯ ಗೋವು ಕುಟುಂಬಕ್ಕೆ’ ಎಂದು ಅವರು ಲೆಕ್ಕ ಬಿಚ್ಟಿಟ್ಟರು.

ಕೊಟ್ಟಿಗೆಯಲ್ಲಿ 20ಕ್ಕೂ ಹೆಚ್ಚು ಕರುಗಳಿವೆ. ಪುಟಾಣಿ ಆತ್ಮಿಕಾ, ಅನ್ವಿಕಾ ಅವುಗಳ ಜತೆ ಆಟವಾಡುತ್ತಾರೆ. ಅವುಗಳ ಮೈನೇವರಿಸಿ ಮುತ್ತಿಕ್ಕುತ್ತಾರೆ. ಅಂಬೆಗಾಲಿಕ್ಕುವ ಅನ್ವಿಕಾ ಕೈಯಲ್ಲಿ ಲೋಟ ಹಿಡಿದು, ನಾನೂ ಹಾಲು ಕರೆಯುತ್ತೇನೆಂದು ಕರುಗಳ ಬಳಿ ಓಡುತ್ತಾಳೆ. ಈ ಮಕ್ಕಳಿಗೆ ಈಗ ಪೇಟೆಯ ನಾಲ್ಕು ಗೋಡೆಗಳ ನಡುವಿನ ಬಂಧವಿಲ್ಲ, ನಂದಗೋಕುಲದಲ್ಲಿ ಅವರು ಸ್ವಚ್ಛಂದ ಹಕ್ಕಿಗಳು. ವಿನಾಯಕ ಭಟ್ಟರ ಸಂಪರ್ಕ ಸಂಖ್ಯೆ: 9449374231.

ಚಿತ್ರಗಳು ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು