ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕೃಷಿ ಮೇಳ| ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ

ಜಾನುವಾರು ಪ್ರದರ್ಶನದಲ್ಲಿ ಮುಧೋಳ ತಳಿ ನಾಯಿ, ಕುರಿಗಳಿಗೆ ಮುಗಿಬಿದ್ದ ಜನ
Last Updated 19 ಸೆಪ್ಟೆಂಬರ್ 2022, 1:34 IST
ಅಕ್ಷರ ಗಾತ್ರ

ಧಾರವಾಡ: ಕೃಷಿ ಮೇಳದ ಮೊದಲ ದಿನ ಜಾನುವಾರು ಪ್ರದರ್ಶನದಲ್ಲಿ ಹೆಚ್ಚಿನ ಮಳಿಗೆಗಳು ಖಾಲಿಖಾಲಿ ಎನಿಸಿದರೂ ಮುಧೋಳ ತಳಿ ನಾಯಿಗಳನ್ನು, ವಿವಿಧ ತಳಿಗಳ ಕುರಿಗಳನ್ನು ನೋಡಲು ಜನ ಮುಗಿಬಿದ್ದಿದ್ದರು. ಟರ್ಕಿ ಕೋಳಿ ಓಡಾಟ, ಸಾಕಿದ ಹಕ್ಕಿಗಳ ಕಲರವ, ಮೊಲಗಳ ಓಡಾಟ ಮನಸ್ಸಿಗೆ ಮುದ ನೀಡಿದವು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ತಿಮ್ಮಾಪುರದ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರವು ಮುಧೋಳ ತಳಿ ನಾಯಿಗಳ ಮಾಹಿತಿಯನ್ನು ಪಡೆಯಲು ಹಾಗೂ ನಾಯಿಗಳ ಫೋಟೊ ಕ್ಲಿಕ್ಕಿಸಲು ಜನರು ಹಾತೊರೆದರು. ಕೆಂಗುರಿ (ಟೆಂಗುರಿ) ತಳಿ, ಯುಎಎಸ್‌ ಕುರಿ ತಳಿ (ಬನ್ನೂರ ಮಿಶ್ರ ತಳಿ)ಯ ಕುರಿಗಳ ಸಾಕಾಣಿಕೆ ಮಾಡುವ ಯೋಜನೆಯಲ್ಲಿ ಬಂದ ರಾಯಚೂರು, ಕಲಬುರಗಿ, ಕೊಪ್ಪಳ ಭಾಗದ ರೈತರು ಕುರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದರು. ಹೆಚ್ಚು ಆದಾಯ ತಂದುಕೊಡಬಲ್ಲ ತಳಿಯ ಕುರಿಗಳ ಮಾಹಿತಿಗಳನ್ನು ಪಡೆದುಕೊಂಡರು. ಟೆಂಗುರಿ ತಳಿಯ ಗಂಡು ಕುರಿಗಳು ಮೂರೇ ತಿಂಗಳಿಗೆ 20 ಕೆ.ಜಿವರೆಗೆ ತೂಗಲಿದೆ. ವಯಸ್ಕ ಟಗರಿನ (ಟೆಂಗುರಿ) ತೂಕ 50–55 ಕೆಜಿ ಹಾಗೂ ಹೆಣ್ಣು ಕುರಿ ತೂಕ 40–42 ಕೆಜಿ ತೂಕ ನೀಡಲಿದೆ ಎಂದು ಕುರಿ ಸಾಕಣೆದಾರರು ಮಾಹಿತಿ ನೀಡಿದರು. ಬನ್ನೂರ ಮಿಶ್ರ ತಳಿ ಕುರಿಗಳು ಮಾಂಸ ಮತ್ತು ಉಣ್ಣೆಗೆ ಸೂಕ್ತ.

ಹುಬ್ಬಳ್ಳಿಯ ಬೆಳಗಲಿ ಗ್ರಾಮದ ಮಾರ್ಕಂಡೇಶ್ವರ ರ‍್ಯಾಬಿಟ್‌ ಫಾರ್ಮ್‌ನವರು ಮೊಲಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಸಣ್ಣ ಅಳತೆಯ ಜೋಡಿ ಮೊಲಗಳಿಗೆ ₹1 ಸಾವಿರ ರೂಪಾಯಿ ದರವಿದ್ದರೆ ದೊಡ್ಡ ಮೊಲವೊಂದಕ್ಕೆ ₹ 1 ಸಾವಿರ ದರ ನಿಗದಿಪಡಿಸಿದ್ದಾರೆ. ಕೋಳಿಗಳ ವಿಭಾಗದಲ್ಲಿ ಟರ್ಕಿ ಕೋಳಿ ತನ್ನ ಗರಿ ಬಿಚ್ಚಿ ನೋಡುಗರನ್ನು ರಂಜಿಸಿತು. ಪಕ್ಕದಲ್ಲೇ ಕಡಕನಾಥ ಕೋಳಿಗಳು, ನಾಟಿ ಕೋಳಿಗಳೂ ಜನರನ್ನು ಆಕರ್ಷಿಸಿದವು. ಪಂಜರದಲ್ಲಿ ಸಾಕುವ ಬಗೆಬಗೆಯ ಬಣ್ಣದ ಪಕ್ಷಿಗಳು ಈ ಬಾರಿಯ ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಜನರನ್ನು ಸೆಳೆಯುತ್ತಿವೆ. ಕುರಿಗಳ ಪಕ್ಕದಲ್ಲೇ ಬಿಳಿಬಣ್ಣದ ಕುದುರೆಯೊಂದು ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ನೋಡಲು ಬಂದವರು ಕುದುರೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT