ಭಾನುವಾರ, ಸೆಪ್ಟೆಂಬರ್ 27, 2020
24 °C

ಕೋಳಿ ಸಾಕುವ ಮುನ್ನ...

ಡಾ. ಗಣೇಶ ಹೆಗಡೆ ನೀಲೇಸರ Updated:

ಅಕ್ಷರ ಗಾತ್ರ : | |

Prajavani

ಬ್ರಾಯ್ಲರ್ ಕೋಳಿ ಸಾಕಾಣಿಕೆ ಜನಪ್ರಿಯಗೊಳ್ಳುತ್ತಿದೆ. ಈ ಉದ್ಯಮಕ್ಕೆ ಬರುವವರ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೋಳಿ ಸಾಕಾಣಿಕೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮಳೆಗಾಲದ ಅದೊಂದು ಬೆಳಿಗ್ಗೆ ಹಂಚಿನಕೇರಿಯ ಮೊಹಮ್ಮದ್ ಆತಂಕಿತರಾಗಿದ್ದರು. ಇಪ್ಪತ್ತು ದಿನ ವಯಸ್ಸಿನ 500 ಮರಿಗಳಿರುವ ಅವರ ಮಾಂಸದ ಕೋಳಿ ಫಾರಂನಲ್ಲಿ ಹದಿನೈದು ಸತ್ತುಹೋಗಿದ್ದವು. ಇದೇನಾಯಿತು ಎಂದು ಹತ್ತಿರ ಹೋಗಿ ನೋಡಿದರೆ ಕೋಳಿಮರಿಗಳಿಗೆ ನೆಲಹಾಸಾಗಿ ಹಾಕಿದ್ದ ಭತ್ತದ ಹೊಟ್ಟಿನ ಮೇಲೆ ಅಲ್ಲಲ್ಲಿ ಕೆಂಪನೆಯ ರಕ್ತದೊಂದಿಗೆ ಮಿಶ್ರಿತವಾದ ಹಿಕ್ಕೆ ಕಂಡಿತು. ತಡಮಾಡದೇ ಏಳೆಂಟು ಸತ್ತ ಕೋಳಿಗಳನ್ನು ಚೀಲಕ್ಕೆ ತುಂಬಿ ಪಶುರೋಗ ನಿರ್ಣಯ ಪ್ರಯೋಗಾಲಯಕ್ಕೆ ತಂದರು. ಮರಣೋತ್ತರ ಪರೀಕ್ಷೆ ಮಾಡಿ ನೋಡಿದಾಗ ಅವಕ್ಕೆ ಕಾಕ್ಸಿಡಿಯೋಸಿಸ್ ಎಂಬ ಕಾಯಿಲೆ ತಗುಲಿದ್ದು ಕಂಡಿತು.

ಅರೆ! ಇದೆಲ್ಲಿಂದ ಬಂತು ರೋಗ ಎಂದು ಪ್ರಶ್ನಿಸಿದ ಅವರಿಗೆ ಕೋಳಿಮನೆಯ ಸ್ವಚ್ಛತೆ ಮತ್ತು ನೆಲಹಾಸನ್ನು ಆದಷ್ಟು ಒಣದಾಗಿ ಇಟ್ಟುಕೊಳ್ಳುವುದರ ಜೊತೆಗೆ ಕೋಳಿ ಸಾಕಣೆಯ ಬಗ್ಗೆ ವಿವರಣೆ ನೀಡಬೇಕಾಯಿತು.

ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಉದ್ಯೋಗವೆಂದರೆ ಬ್ರಾಯ್ಲರ್ ಕೋಳಿ ಅಥವಾ ಮಾಂಸದ ಕೋಳಿ ಸಾಕಣೆ. ಪ್ರಸ್ತುತ ಲಕ್ಷಾಂತರ ಜನರು ಈ ಉದ್ಯಮವನ್ನು ನಡೆಸುತ್ತಿದ್ದಾರೆ. ದೇಶದ ಆಹಾರದ ಅಗತ್ಯವನ್ನು ಪೂರೈಸಲು ಈ ಉದ್ಯಮ ಬಹುದೊಡ್ಡ ಕೊಡುಗೆ ನೀಡುತ್ತಿದೆ.

ಈ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಅಧಿಕ ಪ್ರೊಟಿನ್‌ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ. ಇವುಗಳ ಸಾಕಣೆ ಅತ್ಯಂತ ಸುಲಭ ಹಾಗೂ ಸರಳ. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ್ನು ಪ್ರಾರಂಭಿಸಬಹುದು. ಆದರೆ, ತರಬೇತಿ ಕೊರತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ, ಕೆಲವೊಮ್ಮೆ ಉದ್ಯಮಿಗಳು ಕೈಸುಟ್ಟುಕೊಂಡಿರುವ ಉದಾಹರಣೆಗಳಿವೆ. ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಹಾಕಿದರೆ, ನಾಲ್ಕೈದು ಸಾವಿರ ಕೋಳಿಗಳನ್ನು ಒಬ್ಬನೇ ನಿರ್ವಹಿಸಬಹುದು. ಕೇವಲ ಒಂದು ಒಂದೂವರೆ ತಿಂಗಳಿನಲ್ಲಿ ಇಳುವರಿ.

ಕೋಳಿಗಳ ವಿಶೇಷತೆಗಳು

ಈ ಕೋಳಿಗಳು ಕೇವಲ ಒಂದು ಒಂದೂವರೆ ತಿಂಗಳುಗಳಲ್ಲಿ ಎರಡು ಎರಡೂವರೆ ಕೆ.ಜಿ ತೂಕ ಪಡೆಯುತ್ತವೆ. ಒಂದು ಕೆ.ಜಿ. ತೂಕ ಬರಲು ಪ್ರತಿ ಕೋಳಿಗೆ 1.6 ಕೆಜಿ ಯಿಂದ 1.75 ಕೆ.ಜಿಯಷ್ಟು ಆಹಾರ ಸಾಕು! ಮೊಟ್ಟೆ ಕೋಳಿಗಳ ಸಾಕಣೆಗೆ ಹೊಲಿಸಿದರೆ ಮಾಂಸದ ಕೋಳಿ ಸಾಕಣೆಯ ಪ್ರಾರಂಭಿಕ ವೆಚ್ಚ ತೀರಾ ಕಡಿಮೆ. ಸಾಕಣೆ ಕಾಲಾವಧಿ ಕೇವಲ 4ರಿಂದ 6 ವಾರಗಳು ಮಾತ್ರ. ಇವುಗಳ ಮಾಂಸಕ್ಕೆ ಬೇಡಿಕೆ ಹೆಚ್ಚು.

ಸಾಕಣೆಗೆ ಏನೇನು ಬೇಕು?

ಈ ಉದ್ಯೋಗವನ್ನು ಕೈಗೊಳ್ಳಲು ಆಸಕ್ತಿ, ದೃಢವಾದ ಮನಸ್ಸು, ಶ್ರದ್ಧೆ, ಕನಿಷ್ಠ ತರಬೇತಿ ಹಾಗೂ ಪರಿಶ್ರಮ ಬೇಕು. ಪ್ರತಿ ಕೋಳಿಗೆ ಒಂದು ಚದರ ಅಡಿ ಸ್ಥಳಾವಕಾಶದ ಕೋಳಿ ಮನೆ ಅಗತ್ಯ. ಸತತ ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆಯಿರುವುದರಿಂದ ವಿದ್ಯುತ್‌ ಬೇಕು.
ಅತಿ ಶೀಘ್ರದಲ್ಲಿ ಬೆಳವಣಿಗೆ ಹೊಂದಿ ಮಾಂಸವನ್ನು ಉತ್ಪಾದಿಸುವ ಉದ್ದೇಶಕ್ಕೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಕುಕ್ಕುಟ ತಳಿಗಳಿವೆ. ಉದಾಹರಣೆಗೆ ಕಾಬ್, ಹಬ್ಬರ್ಡ್, ಹಬ್‍ಚಿಕ್ಸ್ ಇತ್ಯಾದಿ. ಪ್ರತಿಷ್ಠಿತ ಕೋಳಿಮರಿ ಕಂಪನಿಗಳು ಇಂತಹ ಕೋಳಿಮರಿಗಳನ್ನು ತಯಾರಿಸಿ ಒಂದು ದಿನ ವಯಸ್ಸಿನ ಇಂತಹ ಮರಿಗಳನ್ನು ಸಾಕಣೆದಾರರ ಮನೆಬಾಗಿಲಿಗೆ ತಲುಪಿಸುತ್ತವೆ.

ಈ ಕೋಳಿಮರಿಗಳು ಹುಟ್ಟಿದಾಗ 42ಗ್ರಾಂ ನಿಂದ 45 ಗ್ರಾಂ ತೂಕವಿರುತ್ತವೆ. ಅದನ್ನು ಪಡೆದ ರೈತರು ಪ್ರಾರಂಭದ 10-15 ದಿನಗಳ ಕಾಲ ವಿದ್ಯುತ್ ಬಲ್ಬುಗಳ ಮೂಲಕ ಬೆಚ್ಚಗೆ ಕಾವು ಕೊಟ್ಟು ಪೌಷ್ಟಿಕ ಆಹಾರ ಹಾಕಿ ಸತತವಾಗಿ ನೀರುಣಿಸಿ ಒಂದು ಒಂದೂವರೆ ತಿಂಗಳುಗಳ ತನಕ ಸಾಕಿ ಮಾರಾಟ ಮಾಡುತ್ತಾರೆ. ಕೇವಲ 45 ದಿನಗಳಲ್ಲಿ ಕೋಳಿ ಮರಿಯು ತನ್ನ ತೂಕವನ್ನು 50 ಪಟ್ಟು ಹೆಚ್ಚಿಸಿಕೊಳ್ಳುತ್ತದೆ! ಹೀಗೆ 500 ರಿಂದ 5000ರ ಸಂಖ್ಯೆಯಲ್ಲಿ ಮರಿಗಳನ್ನು ಸಾಕುವ ರೈತರು ಬಹಳವಿದ್ದಾರೆ. ಕೋಳಿ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸುತ್ತಾರೆ.

ಕೋಳಿ ಆಹಾರ

ಕೋಳಿಗಳಿಗೆಂದೇ ತಯಾರಿಸಿದ ಸಂತುಲಿತ ಆಹಾರ ಮಾರುಕಟ್ಟೆಯಲ್ಲಿ ಲಭ್ಯ. ಈ ಆಹಾರದಲ್ಲಿ ಮರಿಗಳ ವಯಸ್ಸಿಗೆ ತಕ್ಕಂತೆ ನೀಡುವ ಪ್ರಿಸ್ಟಾರ್ಟರ್, ಸ್ಟಾರ್ಟರ್, ಹಾಗೂ ಫಿನಿಶರ್ ಎಂಬ ಆಹಾರಗಳಿವೆ. ಆಹಾರದ ಗುಣಮಟ್ಟ ಮತ್ತು ಸಂಗ್ರಹಣೆಯ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಅವಶ್ಯ. ಆಹಾರವು ಶಿಲೀಂಧ್ರಪೀಡಿತ(ಫಂಗಸ್‌)ವಾಗಿರಬಾರದು.

ರೋಗನಿರೋಧಕ ಲಸಿಕೆಗಳು

ಮಾರಕರೋಗಗಳಾದ ರಾಣಿಖೇಟ್(ಕೊಕ್ಕರೆ ರೋಗ), ಗುಂಬಾರೋ ಮತ್ತು ರೋಗಗಳ ವಿರುದ್ಧ ಮರಿಗಳಿಗೆ ಪಶುವೈದ್ಯರ ಸಲಹೆಯ ಮೇರೆಗೆ ಲಸಿಕೆಯನ್ನು ನೀರಿನಲ್ಲಿ ಕೊಡಬೇಕಾಗುತ್ತದೆ. ಇವಲ್ಲದೇ ರಕ್ತ ಬೇಧಿ(ಕಾಕ್ಸಿಡಿಯಾ), ಶ್ವಾಸಕೋಶಗಳ ಕಾಯಿಲೆ(ಸಿ.ಆರ್.ಡಿ), ಗೌಟ್ ಹಾಗೂ ಟೈಫಾಯಿಡ್‍ನಂತಹ ರೋಗಗಳ ಕುರಿತು ನಿಗಾ ಅವಶ್ಯ.

ಎಚ್ಚರಿಕೆಯ ಕ್ರಮಗಳು

ಮೊಟ್ಟಮೊದಲನೆಯದಾಗಿ ವಿಶ್ವಾಸಾರ್ಹ ಪೂರೈಕೆದಾರರಿಂದ ಆರೋಗ್ಯವಂತ ಮರಿಗಳನ್ನು ಖರೀದಿಸಬೇಕು. ಉತ್ತಮ ಮರಿಗಳು ಸಿಗುತ್ತಿಲ್ಲವೆಂದೋ ಅಥವಾ ಕಡಿಮೆ ದರದಲ್ಲಿ ಸಿಗುತ್ತದೆಂದೋ ಕಳಪೆ ದರ್ಜೆಯ ಕೋಳಿಮರಿಗಳನ್ನು ಖರೀದಿಸಿದರೆ ನಷ್ಟವಾಗುವ ಸಂದರ್ಭ ಹೆಚ್ಚು.

ಸಾಕಾಣಿಕೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಯಸ್ಸಿಗನುಗುಣವಾಗಿ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು. ವೈಜ್ಞಾನಿಕ ನಿರ್ವಹಣೆ ಅಗತ್ಯ. ಕೋಳಿ ಮಾಂಸದ ಮಾರಾಟದ ದರ ತೀರಾ ಏರುಪೇರಿನಿಂದ ಕೂಡಿರುತ್ತದೆ. ಕಾರಣ ಆಯಾ ಸಂದರ್ಭಕ್ಕೆ ಹಾಗೂ ವರ್ಷದ ಆಯಾ ತಿಂಗಳುಗಳಲ್ಲಿ ಬೇಡಿಕೆಗೆ ತಕ್ಕಂತೆ ಮರಿಗಳನ್ನು ಸಾಕಬೇಕು. ರೋಗನಿರೋಧಕ ಲಸಿಕೆಯನ್ನು ನಿರ್ಲಕ್ಷಿಸಬಾರದು.

ಹೊಸದಾಗಿ ಸಾಕಾಣಿಕೆ ಶುರುಮಾಡುವಾಗ ಸೂಕ್ತ ತರಬೇತಿ ಪಡೆದರೆ ಉತ್ತಮ. ಜೊತೆಗೆ ಈಗಾಗಲೇ ಕೋಳಿ ಸಾಕಿದವರ ಸಂಪರ್ಕ ಪಡೆದು ನೇರ ಅನುಭವ ಹೊಂದುವುದು ಅಗತ್ಯ.

ಇಷ್ಟು ವಿವರಣೆ ನೀಡಿ ಮೊಹಮ್ಮದರ ಕಾಕ್ಸಿಡಿಯಾ ಪೀಡಿತಕೋಳಿಗಳಿಗೆ ಒಂದು ವಾರಕಾಲ ಔಷಧಿಯನ್ನು ನೀರಿನಲ್ಲಿ ಹಾಕಿ ಕೊಟ್ಟನಂತರ ಉಳಿದೆಲ್ಲವೂ ಚೇತರಿಕೆ ಕಂಡವು.’

ಲೇಖಕರು : ಪ್ರಾದೇಶಿಕ ಸಂಶೋಧನಾ ಅಧಿಕಾರಿ, ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ, ಶಿರಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು