ಮಂಗಳವಾರ, ಜೂನ್ 28, 2022
28 °C
ದೀರ್ಘಕಾಲ ಕಾಪಿಡುವ ಮೌಲ್ಯವರ್ಧಿತ ವಿಧಾನ

ಹಲಸಿನ ತೊಳೆ ಕಾಪಿಟ್ಟು ತಿನ್ನೋಣ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

prajavani

ಹಲಸಿನ ಹಣ್ಣನ್ನು ಕೊಯ್ದ ಮೇಲೆ ತೊಳೆಗಳನ್ನು ತಕ್ಷಣವೇ ತಿನ್ನಬೇಕು. ಆಗಲೇ ರುಚಿ ಸಿಗೋದು. ಬೇಕಾದ್ರೆ ಒಂದು ದಿನ ಇಟ್ಟು ತಿನ್ನಬಹುದು, ಅದೂ ತೊಳೆ (ಸೊಳೆ) ಗಟ್ಟಿಯಾಗಿದ್ದರೆ ಮಾತ್ರ. ‘ಆದರೆ, ಹಲಸಿನ ಹಣ್ಣಿನ ತೊಳೆಗಳನ್ನು ಮೌಲ್ಯವರ್ಧಿಸಿದರೆ, ಆರು ತಿಂಗಳು ಕೆಡದಂತೆ ಕಾಪಿಟ್ಟು ತಿನ್ನಬಹುದು. ಅಷ್ಟೇ ಅಲ್ಲ, ಕಾಪಿಟ್ಟ ತೊಳೆಯನ್ನು ಬೇರೆ ಬೇರೆ ಖಾದ್ಯಗಳಿಗೂ ಬಳಸಬಹುದು’ ಎನ್ನುತ್ತಾರೆ ಕೃಷಿಕ ಗೇಬ್ರಿಯಲ್ ಸ್ಟೇನಿ ವೇಗಸ್.

ಮೂಡಬಿದ್ರೆ ಸಮೀಪದ ತೆಂಕಮಿಜಾರು (ನೀರ್‌ಕೆರೆ) ಕೃಷಿಕ ಸ್ಟೇನಿ ಅವರು, ಬಹಳ ವರ್ಷಗಳಿಂದ ಹೀಗೆ ಹಲಸಿನ ಹಣ್ಣಿನ ತೊಳೆಗಳನ್ನು ಮೌಲ್ಯವರ್ಧನೆ ಮಾಡುತ್ತಿದ್ದಾರೆ. ತಾವು ತಿನ್ನುತ್ತಾ, ಗೆಳೆಯರಿಗೆ, ಅತಿಥಿ–ಅಭ್ಯಾಗತರಿಗೂ ಹಂಚುತ್ತಿದ್ದಾರೆ.

ಮೌಲ್ಯವರ್ಧನೆ ವಿಧಾನ ಸರಳ

‘ಇದೊಂದು ಸರಳ ವಿಧಾನ. ಯಾರು ಬೇಕಾದರೂ ಮಾಡಬಹುದು’ ಎನ್ನುತ್ತಾ ಮೌಲ್ಯವರ್ಧನೆ ಪ್ರಕ್ರಿಯೆಯ ಹಂತಗಳನ್ನು ಸರಳವಾಗಿ ವಿವರಿಸುತ್ತಾರೆ ಸ್ಟೇನಿ. ಆ ಮೌಲ್ವಿಯವರ್ಧಿಸುವ ವಿಧಾನ ಇಲ್ಲಿದೆ;

* ಹದವಾದ ಹಲಸಿನ ಹಣ್ಣನ್ನು ಕೊಯ್ದು ತೊಳೆ ಬಿಡಿಸಿಕೊಳ್ಳಬೇಕು. ತುಂಬಾ ಹಣ್ಣಾಗಿರಬಾರದು. ದೋರೆಗಾಯಿಯೂ ಅಲ್ಲ. ತೊಳೆ ತುಸು ಹದವಾಗಿರಬೇಕು.

* ಒಂದು ತೊಳೆಯನ್ನು ನಾಲ್ಕೈದು ಸೀಳುಗಳನ್ನಾಗಿ ಮಾಡಿ. ಸೀಳು ಮಾಡಿದ ತುಂಡುಗಳನ್ನು ತೆಳುವಾದ ಬಿಳಿ ಹತ್ತಿ (ಕಾಟನ್‌)‌ ಬಟ್ಟೆಯಲ್ಲಿ ಹಾಕಿ, ಗಂಟು ಕಟ್ಟಿ(ಇದಕ್ಕೆ ಬ್ಲಾಂಚಿಂಗ್ –b*anching ಎನ್ನುತ್ತಾರೆ). 

* ಅಗಲಬಾಯಿಯ ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ. ಕುದಿಯುವ ನೀರಿಗೆ ಉಪ್ಪು ಹಾಕಿ. ಅದು ರುಚಿಗೆ ತಕ್ಕಷ್ಟು ಇರಲಿ. ಇದು ತೊಳೆಯನ್ನು ದೀರ್ಘವಾಗಿ ಕಾಪಿಡಲು ಪ್ರಿಸರ್ವೇಟಿವ್ ತರಹ ಕೆಲಸ ಮಾಡುತ್ತದೆ. 

* ಹಲಸಿನ ತೊಳೆ ಚೂರುಗಳ ಗಂಟನ್ನು ಕುದಿಯುವ ನೀರಿನಲ್ಲಿ ಎರಡರಿಂದ ಎರಡೂವರೆ ನಿಮಿಷ ಮುಳುಗಿಸಿಡಿ. ಅಂದರೆ ದಪ್ಪ ತೊಳೆಗಳಾದರೆ ಸಮಯ ಹೆಚ್ಚು ಬೇಕಾಗುತ್ತದೆ. ತೊಳೆ ಗಾತ್ರ ತೆಳ್ಳಗಿದ್ದರೆ 2 ನಿಮಿಷ ಸಾಕು.

* ನಂತರ ಗಂಟನ್ನು ತೆಗೆದು, ಹಣ್ಣಿನ ಸೀಳುಗಳಿಂದ ನೀರು ಕೆಳಗಿಳಿಯುವಂತಹ ಪಾತ್ರೆಗೆ (ಜಾಲರಿ ತರಹದ, ರಂಧ್ರಗಳಿರುವ ಪಾತ್ರೆ) ಹಾಕಿ. ಚೂರುಗಳಿಗೆ ಅಂಟಿರುವ ನೀರು ಬಸಿದು ಹೋಗಬೇಕು.

* ತೊಳೆಗಳು ತಣ್ಣಗಾಗಿ, ನೀರು ಪೂರ್ಣ ಬಸಿದ ಹೋದ ನಂತರ, ಅವುಗಳ ಮೇಲೆ ಸ್ವಲ್ಪ ಸಕ್ಕರೆ ಉದುರಿಸಿ(ದೀರ್ಘಕಾಲ ಇಡಬೇಕೆಂದರೆ ಸಕ್ಕರೆ ಉದುರಿಸಿ). ಉದಾಹರಣೆಗೆ ಒಂದು ಕೆ.ಜಿ ಹಲಸಿನ ತೊಳೆ ಹೆಚ್ಚಿಕೊಂಡಿದ್ದೀರಿ ಎಂದರೆ, ಅದಕ್ಕೆ 20ರಿಂದ 30 ಗ್ರಾಂ ನಷ್ಟು ಸಕ್ಕರೆ ಉದುರಿಸಿದರೆ ಸಾಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿ. ಈ ಸಕ್ಕರೆಯೂ ಒಂದು ರೀತಿ ಪ್ರಿಸರ್ವೇಟಿವ್ ತರಹ ಕೆಲಸ ಮಾಡುತ್ತದೆ. 

* ತೊಳೆಗಳಲ್ಲಿರುವ ತೇವಾಂಶ ಆರಿದ ನಂತರ ಶುದ್ಧವಾದ ಬಿಳಿ ಹತ್ತಿ (ಕಾಟನ್)‌ ಬಟ್ಟೆಯ ಮೇಲೆ ಸಕ್ಕರೆ ಲೇಪಿತ ಸೀಳಿದ ತೊಳೆಯ ಚೂರುಗಳನ್ನು ಹರಡಿ, ಎರಡು ಅಥವಾ ಮೂರು ದಿನ ಬಿಸಿಲಲ್ಲಿ ಒಣಗಿಸಿ(ಬಿಸಿಲಿನ ಪ್ರಖರತೆ ಮೇಲೆ ಅವಧಿ ನಿರ್ಧರಿಸಿ). ಕೆಲಸ ಸುಲಭವಾಗಲಿ ಎಂಬ ಕಾರಣಕ್ಕೆ ಹಣ್ಣಿನ ಚೂರನ್ನು ಒಣಗಿಸಲು ನಾನು ಲೋಹದ ಟ್ರೇಗಳನ್ನು ಮಾಡಿಸಿದ್ದೇನೆ.

* ಬಿಸಿಲಲ್ಲಿ ಒಣಗಿದ ನಂತರ ಹಣ್ಣಿನ ಚೂರುಗಳು ರಬ್ಬರ್‌‌ ತರಹ ಫ್ಲೆಕ್ಸಿಬಲ್ ಆಗುತ್ತವೆ. ಅವುಗಳನ್ನು ಗಾಳಿಯಾಡದಂತಹ ಬಾಟಲ್‌ಗಳಲ್ಲಿ ತುಂಬಿಡಿ. 


ಒಣಗಿದ ಹಲಸಿನ ತೊಳೆ

‘ಹೀಗೆ ಮೌಲ್ಯವರ್ಧಿತ ಹಣ್ಣಿನ ಚೂರುಗಳನ್ನು ಆರು ತಿಂಗಳಕಾಲ ಕಾಪಿಟ್ಟು ತಿನ್ನುತ್ತೇವೆ. ಬಂಧು ಬಾಂಧವರಿಗೆ, ಗೆಳೆಯರಿಗೂ ಹಂಚುತ್ತೇವೆ’ ಎನ್ನುತ್ತಾರೆ ಸ್ಟೇನಿ. ‘ಈ ಚೂರುಗಳನ್ನು ದೋಸೆ, ಪಾಯಸ, ಮಿಲ್ಕ್‌ಶೇಕ್‌ನಂತಹ ಖಾದ್ಯಗಳ ತಯಾರಿಕೆಗೆ ಬಳಸಬಹುದು. ಮಕ್ಕಳು ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ’ ಎಂಬುದು ಅವರ ಅನುಭವದ ಮಾತು.

ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಮಾಡುವ ಯೋಚನೆ ಇದ್ದವರು, ಹಲಸಿನ ಹಣ್ಣಿನ ಉತ್ಪಾದನೆ ಮತ್ತು ಮಾರುಕಟ್ಟೆ ಪರಿಶೀಲಿಸಿಕೊಂಡು ಮುಂದುವರಿಯಬಹುದು. ಅಂಥವರು ಸೋಲಾರ್ ಡ್ರೈಯರ್ ಬಳಸುವುದರಿಂದ ಮೌಲ್ಯವರ್ಧನೆ ಪ್ರಕ್ರಿಯೆ ಸುಲಭವಾಗಬಹುದು. 

ಹಲಸು ವೈವಿಧ್ಯ

ಗೇಬ್ರಿಯಲ್ ಸ್ಟೇನಿ ವೇಗಸ್, ನಿವೃತ್ತ ಅರಣ್ಯ ಸಂಕ್ಷಣಾಧಿಕಾರಿ. ಅವರಿಗೆ ಹಲಸು ಅಚ್ಚುಮೆಚ್ಚಿನ ಹಣ್ಣು. ‘ಹಲಸು ಬೆಳೆಸುವುದು ನನಗೆ ಪ್ಯಾಷನ್’ ಎನ್ನುತ್ತಾರೆ. ‘ಇದು ಭವಿಷ್ಯದ ಆಹಾರ. ಹಾಗಾಗಿ, ಹಲಸಿನ ತಳಿಗಳನ್ನೂ ಸಂರಕ್ಷಿಸಿದ್ದೇನೆ’ ಎನ್ನುತ್ತಾರೆ.  

ಸ್ಟೇನಿ ಅವರದ್ದು 10 ಎಕರೆಯ ತೋಟ. ರಬ್ಬರ್, ಅಡಿಕೆ ಪ್ರಮುಖ ಬೆಳೆಗಳು. ಈ ಬೆಳೆಗಳ ಜತೆಗೆ ಸುಮಾರು 600 ಹಲಸಿನ ಮರಗಳಿವೆ. ಅದರಲ್ಲಿ ಮುಕ್ಕಾಲುಪಾಲು ಸ್ಥಳೀಯ ತಳಿಗಳು. ಕೇರಳದ ಮುಟ್ಟಂ ಪತ್ತಾ ಮುಟ್ಟಂ, ತೇನ್ ವರಿಕ್ಕ, ಸಿಂಗಾಪುರ, ಪ್ರಕಾಶ್ ಚಂದ್ರ, ಜೆ 33, ವಿಯೆಟ್ನಾಂ ಸೂಪರ್ ಅರ್ಲಿ, ಮನಮೋಹನ್, ಅನನ್ಯ, ಪ್ರಶಾಂತಿ ಸೇರಿದಂತೆ  35 ರಿಂದ 40 ವೆರೈಟಿಯ ಬೇರೆ ಬೇರೆ ತಳಿಗಳೂ ಇವರಲ್ಲಿವೆ.


ಹಲಸಿನೊಂದಿಗೆ ಗೇಬ್ರಿಯಲ್ ಸ್ಟೇನಿ ವೇಗಸ್

‘ನಮ್ಮಲ್ಲಿ ಸ್ಥಳೀಯ ತಳಿಗಳಷ್ಟೇ ಬೆಳೆಯುತ್ತವೆ. ಅವುಗಳಿಗೆ ರೋಗ ಕಡಿಮೆ. ವಿದೇಶಿ ತಳಿಗಳು ಮತ್ತು ಒಣಪ್ರದೇಶದ ತಳಿಗಳು ಇಲ್ಲಿಯ ಮಳೆಗೆ ತಡೆಯುವುದಿಲ್ಲ. ಅವುಗಳಿಗೆ ರೋಗ ಬರುತ್ತದೆ’ ಎನ್ನುವುದು ಸ್ಟೇನಿ ಅವರ ಅನುಭವದ ನುಡಿ. ಸದ್ಯ ಸುಮಾರು 150 ಮರಗಳು ಫಸಲು ಬಿಡುತ್ತಿವೆ. ಇಲ್ಲಿವರೆಗೂ ಹಣ್ಣನ್ನು ಮಾರಾಟ ಮಾಡಿಲ್ಲ. ಚರ್ಚ್, ಆಶ್ರಮ, ಸಂಬಂಧಿಕರು, ಗೆಳಯರಿಗೆ ಉಚಿತವಾಗಿ ನೀಡಿದ್ದೇನೆ. ಮುಂದಿನ ವರ್ಷದಿಂದ ನನ್ನದೇ ಆದ ರೀತಿಯಲ್ಲಿ ಮಾರಾಟ ಆರಂಭಿಸುತ್ತೇನೆ’ ಎನ್ನುತ್ತಾರೆ ಸ್ಟೇನಿ.

ಮೌಲ್ಯವರ್ಧಿತ ಹಲಸಿನ ಕುರಿತ ಮಾಹಿತಿಗೆ ಗೇಬ್ರಿಯಲ್ ಸ್ಟೇನಿ ವೇಗಸ್‌ ಅವರ ಸಂಖ್ಯೆ 9481446643

(ಸಮಯ: ಸಂಜೆ 6 ರಿಂದ ರಾತ್ರಿ 8ರವರೆಗೆ ಮಾತ್ರ ಲಭ್ಯ) 

(ಚಿತ್ರಗಳು: ಗೇಬ್ರಿಯಲ್‌ ಸ್ಟೇನಿ ವೇಗಸ್ ಅವರ ಸಂಗ್ರಹದಿಂದ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು