ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exlcusive: ಮೊಳಕಾಲ್ಮುರು ಸೀತಾಫಲಕ್ಕೆ ಎಲ್ಲಿಲ್ಲದ ಬೇಡಿಕೆ

Last Updated 27 ನವೆಂಬರ್ 2020, 8:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಮೊಳಕಾಲ್ಮುರು ಸಣ್ಣದೊಂದು ಪಟ್ಟಣ. ಇಲ್ಲಿನ ಬೀದಿಯಲ್ಲಿ ಸಾಗಿದರೆ ಹೆಜ್ಜೆಗೊಬ್ಬರು ಸೀತಾಫಲ ವ್ಯಾಪಾರಿ ಸಿಗುತ್ತಾರೆ. ಚಿಕ್ಕ–ಚಿಕ್ಕ ಬುಟ್ಟಿಯಲ್ಲಿ ಆಕರ್ಷಕವಾಗಿ ಜೋಡಿಸಿದ ಸೀತಾಫಲ ನೋಡಿದ ಗ್ರಾಹಕರು ಖರೀದಿಸದೇ ಇರುವುದು ಅಪರೂಪ.

ರೇಷ್ಮೆ ಸೀರೆಯಂತೆ ಸೀತಾಫಲ ಹಣ್ಣು ಕೂಡ ಮೊಳಕಾಲ್ಮುರಿಗೆ ಅಸ್ಮಿತೆಯೊಂದನ್ನು ತಂದುಕೊಟ್ಟಿದೆ. ಪ್ರಕೃತಿದತ್ತವಾಗಿ ಸಿಗುವ ಹಣ್ಣಿನ ರುಚಿಗೆ ಮಾರುಹೋಗದವರು ಅಪರೂಪ. ಬೆಂಗಳೂರು, ಮೈಸೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿ ರಾಜ್ಯದ ಹಲವು ನಗರದ ಮಾರುಕಟ್ಟೆಗೆ ಮೊಳಕಾಲ್ಮುರು ಸೀತಾಫಲ ರವಾನೆಯಾಗುತ್ತದೆ. ಹೊರ ರಾಜ್ಯದಲ್ಲಿಯೂ ಈ ಹಣ್ಣಿಗೆ ಅಪಾರ ಬೇಡಿಕೆ ಇದೆ.

ಬಯಲುನಾಡಿನ ಮೊಳಕಾಲ್ಮುರಿಗೂ ಸೀತಾಫಲಕ್ಕೂ ಎತ್ತಣ ಸಂಬಂದ ಎಂಬುದು ಇಲ್ಲಿಗೆ ಭೇಟಿ ನೀಡಿದವರ ಉದ್ಗಾರ. ಕಣ್ಣು ಹಾಯಿಸದಷ್ಟೂ ದೂರದವರೆಗೆ ಕಾಣುವ ಹೆಬ್ಬಂಡೆಗಳ ಬೆಟ್ಟದ ಸಾಲಿನಲ್ಲಿ ಸೀತಾಫಲ ಸಹಜವಾಗಿ ಬೆಳೆದುನಿಂತಿದೆ. ಸೀತಾಫಲದ ನಂಟನ್ನು ಬಿಡಿಸಲು ಸ್ಥಳೀಯರು ಶತಮಾನಗಳ ಹಿಂದಿನ ನೆನಪುಗಳಿಗೆ ಜಾರುತ್ತಾರೆ.

ಶಿಲಾಯುಗದ ಪಳಯುಳಿಕೆ ಹೊಂದಿರುವ ಅಪರೂಪದ ಊರುಗಳಲ್ಲಿ ಮೊಳಕಾಲ್ಮುರು ಕೂಡ ಒಂದು. ಇಲ್ಲಿನ ಹಲವು ಗ್ರಾಮಗಳಲ್ಲಿ ಇದರ ಐತಿಹ್ಯಗಳು ಈಗಲೂ ಲಭ್ಯವಾಗುತ್ತವೆ. ರಾಮಾಯಣಕ್ಕೆ ಸಂಬಂಧಿಸಿದ ಹಲವು ಕುರುಹುಗಳಿವೆ ಎಂಬುದು ಜನರ ನಂಬಿಕೆ. ಸೀತಾಫಲದ ಹಣ್ಣಿನ ಬಗೆಗೂ ಇಂತಹದೇ ಕಥೆಗಳನ್ನು ಜನರು ಬಿಚ್ಚಿಡುತ್ತಾರೆ.

‘ರಾಮನ ವನವಾಸಕ್ಕೆ ಸೀತೆಯೂ ಜೊತೆಯಾಗುತ್ತಾಳೆ. ಅರಣ್ಯದಲ್ಲಿ ಸಿಗುವ ಕಾಡುಹಲಸು (ಸೀತಾಫಲ) ಹಣ್ಣನ್ನು ರಾಮನು ಸೀತೆಗೆ ನೀಡುತ್ತಾನೆ. ಅದರ ರುಚಿಗೆ ಮಾರುಹೋದ ಸೀತೆಗೆ ಕಾಡುಹಲಸು ಪ್ರಿಯವಾಗುತ್ತದೆ. ಅಲ್ಲಿಂದ ಇದಕ್ಕೆ ಸೀತಾಫಲ ಎಂಬ ನಾಮಕರಣವಾಯಿತು’ ಎಂಬ ವಿವರಣೆ ನೀಡುತ್ತಾರೆ ಮೊಳಕಾಲ್ಮುರಿನ ಸ್ಥಳೀಯರು.

ಮೊಳಕಾಲ್ಮುರು ತಾಲ್ಲೂಕಿನ ಹೀರೆ ಅಡವಿ, ನುಂಕಪ್ಪನ ಬೆಟ್ಟ, ಕೂಗಬಂಡೆ, ಮರ್ಲಹಳ್ಳಿ, ರಾಯದುರ್ಗ ಮಾರ್ಗ, ಹಾನಗಲ್ ಸುತ್ತಲಿನ ಬೆಟ್ಟ, ಹಿರೇಕೆರೆಹಳ್ಳಿ, ಭೈರಾಪುರ, ಕಾಟನಾಯಕನಹಳ್ಳಿ, ಎದ್ದಲ ಬೊಮ್ಮಯ್ಯನಹಟ್ಟಿಯ ಬೆಟ್ಟದ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಈ ಹಣ್ಣಿನ ಗಿಡಗಳು ಪ್ರಕೃತಿದತ್ತವಾಗಿ ಬೆಳೆದಿವೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸೇರಿ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಊರುಗಳಲ್ಲಿ ಸೀತಾಫಲ ಹೇರಳವಾಗಿ ಬೆಳೆಯುತ್ತದೆ. ಕಲ್ಲು ಬಂಡೆಗಳ ಸಂದುಗಳ ನಡುವೆ ಎದ್ದುನಿಂತ ಸೀತಾಫಲದ ಹಣ್ಣಿನ ಗಿಡಗಳು ವಿಸ್ಮಯ ಮೂಡಿಸುತ್ತವೆ.

ಸಾಮಾನ್ಯವಾಗಿ ಆಗಸ್ಟ್‌ ತಿಂಗಳಲ್ಲಿ ಸೀತಾಫಲ ಗಿಡದಲ್ಲಿ ಹೂ ಅರಳುತ್ತವೆ. ಕಾಲಕಾಲಕ್ಕೆ ಹದ ಮಳೆ ಬಿದ್ದರೆ ಮಾತ್ರ ಹೂ ಕಾಯಿಯಾಗುತ್ತದೆ. ಮಳೆಯ ಕೊರತೆಯಿಂದ ಉತ್ತಮ ಫಲ ಸಿಗುವುದು ಅಪರೂಪವಾಗಿದೆ. ಹಲವು ವರ್ಷಗಳಿಂದ ಕುಸಿತ ಕಂಡಿದ್ದ ಸೀತಾಫಲದ ಇಳುವರಿ ಈ ವರ್ಷ ಉತ್ತಮ ಮಳೆಯಿಂದ ಹೇರಳವಾಗಿ ಲಭ್ಯವಾಗುತ್ತಿದೆ. ನವೆಂಬರ್‌, ಡಿಸೆಂಬರ್‌ ಹಾಗೂ ಜನವರಿಯಲ್ಲಿ ಸೀತಾಫಲದ ಹಣ್ಣು ಮಾರುಕಟ್ಟೆಗೆ ಬರುತ್ತವೆ.

ಕಾಡಿನಲ್ಲಿ ಪ್ರಕೃತಿದತ್ತವಾಗಿ ಬೆಳೆದ ಹಣ್ಣು ಕಣ್ಮನ ಸೆಳೆಯುವಂತಹ ಆಕಾರದಲ್ಲಿರುತ್ತದೆ. ಕೀಟನಾಶಕ, ರಾಸಾಯನಿಕ ಗೊಬ್ಬರದ ಹಂಗಿಲ್ಲದ ಹಣ್ಣನ್ನು ಗ್ರಾಹಕರು ಇಷ್ಟಪಡುತ್ತಾರೆ. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಬೆಟ್ಟದ ಸೀತಾಫಲವನ್ನು ಹರಾಜು ಮೂಲಕ ವ್ಯಾಪಾರಸ್ಥರಿಗೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆ ಪಡೆದವರು ಹಣ್ಣುಗಳನ್ನು ಕಿತ್ತು ದೊಡ್ಡ ನಗರಗಳ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ.

ಬೆಟ್ಟದಲ್ಲಿರುವ ಕರಡಿಗೂ ಸೀತಾಫಲ ಪ್ರಮುಖ ಆಹಾರ. ಸೀತಾಫಲದ ಹಣ್ಣುಗಳನ್ನು ಕಿತ್ತು ಮಾರಾಟ ಮಾಡಿದ ಪರಿಣಾಮ ಕರಡಿಗಳು ರೈತರ ತೋಟಗಳಿಗೆ ದಾಳಿ ಮಾಡುತ್ತಿದ್ದವು. ದಾಳಿಂಬೆ, ಪಪ್ಪಾಯ ಸೇರಿ ಇತರ ಹಣ್ಣಿನ ತೋಟಗಳಲ್ಲಿ ದಾಂಧಲೆ ಮಾಡುತ್ತಿದ್ದವು. ಈ ಬಗ್ಗೆ ತೋಟಗಾರಿಕೆ ಬೆಳೆಗಾರರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಸೀತಾಫಲ ಸಿಗದಿರುವುದರಿಂದ ಕರಡಿಗಳು ತೋಟದತ್ತ ಬರುತ್ತಿರುವುದನ್ನು ಗಮನಿಸಿದ ಅರಣ್ಯ ಇಲಾಖೆ, ಪ್ರಸಕ್ತ ವರ್ಷ ಸೀತಾಫಲದ ಟೆಂಡರ್‌ ರದ್ದು ಮಾಡಿದೆ.

ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಮೊಳಕಾಲ್ಮುರು ತಾಲ್ಲೂಕಿನ ಜನರಿಗೆ ಇದರಿಂದ ಅನುಕೂಲವಾಗಿದೆ. ಕೂಲಿ ಕೆಲಸಕ್ಕೆ ವಲಸೆ ಹೋಗುವುದನ್ನು ಕೈಬಿಟ್ಟು ಸೀತಾಫಲ ಕೀಳಲು ಬೆಟ್ಟ ಏರುತ್ತಿದ್ದಾರೆ. ಬೆಟ್ಟದಿಂದ ಕಿತ್ತು ತಂದ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಮೊಳಕಾಲ್ಮುರು ಪಟ್ಟಣವನ್ನು ಒಂದು ಸುತ್ತು ಹಾಕಿದರೆ ಇಂತಹ ನೂರಾರು ವ್ಯಾಪಾರಿಗಳು ಕಾಣಸಿಗುತ್ತಾರೆ.

ಔಷಧೀಯ ಗುಣಗಳನ್ನು ಹೊಂದಿದ ಸೀತಾಫಲ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ದೇಹದ ಉಷ್ಣತೆಯನ್ನು ಇದು ನಿಯಂತ್ರಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಉದರ ಸಂಬಂಧಿ ಕಾಯಿಲೆಗಳನ್ನು ಇದು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್-ಎ, ವಿಟಮಿನ್-ಬಿ6, ಕ್ಯಾಲ್ಸಿಯಂ ಹೇರಳವಾಗಿದೆ ಎನ್ನುತ್ತಾರೆ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT