ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತೋಟ: ಎಲೆಯೊಳಗೆ ಸಸಿ

Last Updated 13 ಜುಲೈ 2020, 19:30 IST
ಅಕ್ಷರ ಗಾತ್ರ

ಕೈತೋಟದಲ್ಲಿ ಒಮ್ಮೆಗೆ ವಿವಿಧ ಬಗೆಯ ಬೀಜಗಳನ್ನು ನೆಟ್ಟಾಗ ಎಲ್ಲೆಲ್ಲಿ ಯಾವ ಯಾವ ಬೀಜವಿದೆಯೆಂದು ತಿಳಿಯುವುದಿಲ್ಲ. ನೀರನ್ನು ಹಾಕಿ ಆರೈಕೆ ಮಾಡಲು ಗೊಂದಲವಾಗುತ್ತದೆ. ಒಂದೊಂದು ಬೀಜದ ಮೊಳಕೆ ಬರುವ ಸಮಯ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಬೀಜದ ಬದಲು, ಆ ಬೀಜಗಳಿಂದ ಸಸಿ ಮಾಡಿ, ನೆಟ್ಟರೆ ಗೊಬ್ಬರ, ನೀರು ಎಲ್ಲವನ್ನೂ ನೀಡಲು ಅನುಕೂಲ.

ದೊಡ್ಡ ಪ್ರಮಾಣದಲ್ಲಿ ತರಕಾರಿ ಬೆಳೆಯುವ ರೈತರು ಪ್ಲಾಸ್ಟಿಕ್‌ ಟ್ರೇಗಳಲ್ಲಿ ಸಸಿಗಳನ್ನು ತಯಾರಿಸಿಕೊಳ್ಳುತ್ತಾರೆ. ಆದರೆ ಕೈತೋಟಕ್ಕಾಗಿ ಸಣ್ಣ ಪ್ರಮಾಣದಲ್ಲಿ ಸಸಿ ಬೆಳೆಸಲು ಟ್ರೇಗಳಿಗೆ ಪರ್ಯಾಯವಾಗಿ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೆ. ಆಗ ತೋಟದಲ್ಲೇ ಸಿಗುವ ಎಲೆಗಳಿಂದ ಸಸಿ ಬೆಳೆಸುವಂತಹ ವಿಡಿಯೊವೊಂದು ವಾಟ್ಸ್‌ಆ್ಯಪ್ ಗುಂಪಿನಲ್ಲಿ ಕಂಡಿತು. ಇದು ನನ್ನ ಕೈತೋಟಕ್ಕೆ ಬೇಕಾದ ಸಸಿ ಬೆಳೆಸಿಕೊಳ್ಳಲು ತುಂಬಾ ಸಹಕಾರಿಯಾಯಿತು.

ಅಗಲವಾದ ಎಲೆಯಾಗಿರಲಿ..

ಮಾವು ಅಥವಾ ಹಲಸಿನೆಲೆ, ಒಂದಷ್ಟು ಸೋಗೆ ಅಥವಾ ಹಂಚಿಕಡ್ಡಿ ಇವಿಷ್ಟು ನಮಗೆ ಎಲೆಯಲ್ಲಿ ಸಸಿ ಬೆಳೆಸಲು ಬೇಕಾದ ಸಾಮಗ್ರಿಗಳು.

ಎಲೆಗಳನ್ನು ಚಿತ್ರದಲ್ಲಿರುವಂತೆ ಕೋನ್ ಆಕಾರದಲ್ಲಿ ಸುತ್ತಿ ಕಡ್ಡಿಚುಚ್ಚಿ ಬಿಚ್ಚಿಕೊಳ್ಳದಂತೆ ಭದ್ರ ಮಾಡಬೇಕು. ಬಾಳೆಎಲೆಯಲ್ಲಿ ದೊನ್ನೆ ಮಾಡುವ ಅಥವಾ ಮುತ್ತುಗದ ಎಲೆಯಲ್ಲಿ ಊಟದ ಎಲೆ ಹಚ್ಚುವುದನ್ನು ನೋಡಿದ್ದವರಿಗೆ ಎಲೆಗಳನ್ನು ಕೋನ್ ಆಕಾರಕ್ಕೆ ಸಿದ್ಧಪಡಿಸಿಕೊಳ್ಳುವುದು ಸುಲಭ.

ಮಣ್ಣು–ಗೊಬ್ಬರ ಸಿದ್ಧವಾಗಿಟ್ಟುಕೊಳ್ಳಿ

ಈ ಎಲೆಗಳನ್ನು ಕೋನ್‌‌ ಆಕಾರದಲ್ಲಿ ಮಾಡಿಕೊಳ್ಳುವ ಮುನ್ನ, ಅದಕ್ಕೆ ತುಂಬುವುದಕ್ಕೆ ಬೇಕಾದ ಮಣ್ಣು, ಸಗಣಿ ಪುಡಿ ಸಿದ್ಧವಾಗಿಟ್ಟುಕೊಳ್ಳಿ. ಸಗಣಿ ಸಿಗದಿದ್ದರೆ ಯಾವುದಾದರೂ ಗೊಬ್ಬರವಾದರೂ ಆದೀತು.

ಎಲೆಯ ಕೋನಿನೊಳಗೆ ಕಾಲು ಭಾಗದಷ್ಟು ಗೊಬ್ಬರ ಬೆರೆಸಿದ ಮಣ್ಣು ತುಂಬಿ ಬೀಜ ಹಾಕಬೇಕು. ನಂತರ ಕೋನಿನ ಮುಕ್ಕಾಲು ಭಾಗದಷ್ಟನ್ನು ಅದೇ ಮಣ್ಣಿನಿಂದ ಮುಚ್ಚಬೇಕು. ದಿನಕ್ಕೆರಡು ಬಾರಿ ನೀರುಣಿಸಿದರೆ ಆಯಿತು.

ಮಣ್ಣು–ಗೊಬ್ಬರ ತುಂಬಿದ ಕೋನ್‌ಗಳನ್ನು ನಿಲ್ಲಿಸಲು ಒಂದು ಆಧಾರ ಬೇಕು. ಇದಕ್ಕೆ ಹೀಗೆ ಮಾಡಬಹುದು. ತಳಭಾಗದಲ್ಲಿ ನೀರು ಹರಿದು ಹೋಗುವಷ್ಟು ರಂಧ್ರವಿರುವ ಟಬ್‌ ಆಯ್ಕೆ ಮಾಡಿಕೊಂಡು, ಅದರಲ್ಲಿ ಒಂದರ ಪಕ್ಕ ಒಂದು ಬೀಜವೂರಿದ ಕೋನ್‌ಗಳನ್ನು ಜೋಡಿಸ
ಬಹುದು. ಇದರಿಂದ ಗಿಡಗಳಿಗೆ ಹಾಕಿದ ನೀರು ಕೆಳಗಡೆಯಿಂದ ಹರಿದು ಹೋಗುತ್ತದೆ. ಗಿಡ ಕೊಳೆಯುವುದು ತಪ್ಪುತ್ತದೆ.

ಚಿತ್ರವನ್ನು ಗಮನಿಸಿ. ಅದರಲ್ಲಿರುವಂತೆ ಕಬ್ಬಿಣದ ಮೆಷ್‌ ಬಳಸಿ, ಮೆಷ್‌ನ ಪ್ರತಿ ಖಾನಿಯಲ್ಲಿ ಎಲೆ ಕೋನ್‌ ಅನ್ನು ಇಡಬಹುದು. ಕೆಳಗಡೆ ನೀರು ಸಂಗ್ರಹವಾಗಲು ಒಂದು ಟಬ್‌ ಇಟ್ಟರೆ ಸಾಕು.

ಬೀಜಗಳ ಮೊಳಕೆ ಆರಂಭ

ಹೀಗೆ ಊರಿದ ಬೀಜಗಳು ಒಂದೊಂದಾಗಿ ಮೊಳಕೆ ಬಂದು ಬೇರು ಬಿಟ್ಟು ಸಸಿಯಾಗಲಾರಂಭಿಸುತ್ತದೆ. ಈ ಸಸಿಗಳನ್ನು ಸಣ್ಣ ಗುಂಡಿ ತೆಗೆದು ಎಲೆಯ ಸಮೇತ ಮಣ್ಣಿನಲ್ಲಿ ಇಟ್ಟರೆ ಆಯಿತು. ಎಲೆ ಕೊಳೆಯುವುದರಿಂದ ಬೇರುಗಳು ಎಲೆಯನ್ನು ಸೀಳಿಕೊಂಡು ಬರುತ್ತವೆ. ಸಸಿ ಊರುವಾಗಲೂ ಬೇರಿಗೆ ಹಾನಿಯಾದೀತೆಂಬ ಆತಂಕ ಇರುವುದಿಲ್ಲ. ನೂರಕ್ಕೆ ನೂರರಷ್ಟು ಸಸಿಗಳು ಬೆಳೆಯುತ್ತವೆ.

ಈ ವಿಧಾನ ಅನುಸರಿಸುವುದರಿಂದ, ಪ್ಲಾಸ್ಟಿಕ್‌ ಬಳಕೆ ನಿಲ್ಲುತ್ತದೆ. ಖರ್ಚಿಲ್ಲದೇ ಸಸಿ ಬೆಳೆಸಬಹುದು. ಹೀಗೆ ಖರ್ಚಿಲ್ಲದ ಈ ವಿಧಾನ ಸಣ್ಣ ಕೈತೋಟಕ್ಕೆ ಸೂಕ್ತವಾಗಿದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT