ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಂಕಾರಿಕ ಸಸಿಗಳಿಗೆ ಬೇಡಿಕೆ

ತೋಟಗಾರಿಕೆ ಮೇಳಕ್ಕೆ 18 ಸಾವಿರ ರೈತರ ಭೇಟಿ
Last Updated 7 ಫೆಬ್ರುವರಿ 2020, 19:55 IST
ಅಕ್ಷರ ಗಾತ್ರ

ಬೆಂಗಳೂರು:ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ಮೂರನೇ ದಿನವಾದ ಶುಕ್ರವಾರ ಜನಸಾಗರವೇ ಹರಿದು ಬಂತು. ನಗರದಿಂದ ಬಂದಿದ್ದ ಜನ ಅಲಂಕಾರಿಕ ಸಸಿಗಳ ಖರೀದಿಗೆ ಮುಗಿ ಬಿದ್ದಿದ್ದರು.

ಕಳೆದೆರಡು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಹೆಚ್ಚು ಜನ ಭೇಟಿ ನೀಡಿದರು. 15 ಸಾವಿರ ರೈತರು ಮೇಳದಲ್ಲಿನೋಂದಣಿ ಮಾಡಿಕೊಂಡಿದ್ದು, ವಿವಿಧ ಶಾಲಾ ಕಾಲೇಜುಗಳ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿದರು.

ರೈತರಿಗೆ ಮಾಹಿತಿ ನೀಡುವ ಸಲುವಾಗಿ ಎಲ್ಲ ಮಾದರಿಯ ಹಣ್ಣು, ತರಕಾರಿ, ಹೂವಿನ ಬೆಳೆಗಳ ಪ್ರಾತ್ಯಕ್ಷಿಕೆಗಳನ್ನು ಸಂಸ್ಥೆಯ ಆವರಣದಲ್ಲಿ ಬೆಳೆಸಲಾಗಿದೆ. ಪ್ರತಿ ಪ್ರಾತ್ಯಕ್ಷಿಕೆಯ ಬಳಿಯೂ ರೈತರಿಗೆ ಮಾಹಿತಿ ನೀಡಲು ಸಂಸ್ಥೆಯ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ರಾಜ್ಯ ಮತ್ತು ಹೊರ ರಾಜ್ಯಗಳಿಂದ ರೈತರು ಹಾಗೂ ವಿವಿಧ ಕೃಷಿ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳು ಮೇಳಕ್ಕೆ ಬಂದಿದ್ದರು. ಸುಡು ಬಿಸಿಲನ್ನೂ ಲೆಕ್ಕಿಸದೆ ಆವರಣದಲ್ಲಿದ್ದಪ್ರಾತ್ಯಕ್ಷಿಕ ತೋಟಗಳಲ್ಲಿ ಸಂಚರಿಸಿ ಕೃಷಿ ವಿಧಾನಗಳ ಬಗ್ಗೆ ಮಾಹಿತಿ ಪಡೆದರು.

ಸಸಿಗಳ ಖರೀದಿ ಜೋರು: ಮೇಳದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿದ್ದು, ಖರೀದಿಗೆಜನ ಮುಗಿಬಿದ್ದರು. ಮೇಳಕ್ಕೆ ಭೇಟಿ ನೀಡಿದ್ದ ನಗರವಾಸಿಗಳು ಮನೆಯ ತಾರಸಿಯಲ್ಲಿ ಬೆಳೆಸಬಹುದಾದ ಪೇರಲೆ, ನಿಂಬೆ, ಹೂವು, ತರಕಾರಿ ಹಾಗೂ ವಿವಿಧ ಶೈಲಿಯ ಅಲಂಕಾರಿಕ ಸಸಿಗಳನ್ನು ಖರೀದಿಸಿದರು. ಕಡಿಮೆ ಅವಧಿಯಲ್ಲಿ ಬೆಳೆಯುವ ಬಾಳೆ ಸಸಿಗಳನ್ನು ₹10ರಂತೆ ಮಾರಾಟ ಮಾಡಲಾಗುತ್ತಿದ್ದು, ಬಹುತೇಕರು ಕೈಯಲ್ಲಿ ಬಾಳೆ ಸಸಿ ಹಿಡಿದು ಹಿಂತಿರುಗುತ್ತಿದ್ದರು.

‘ನೀರಾ’ ಸವಿದ ರೈತರು: ಮೇಳದ ಮಳಿಗೆಯೊಂದರಲ್ಲಿ ಆರೋಗ್ಯಕರ ನೀರಾ 250 ಮಿ.ಲೀಗೆ ₹50ರಂತೆ ಮಾರಾಟ ಮಾಡಲಾಗುತ್ತಿದೆ. ನೀರಾ ಕುಡಿಯಲು ರೈತರು ಮಳಿಗೆ ಮುಂದೆ ಬೀಡುಬಿಟ್ಟಿದ್ದರು. ಪೇಯ ಕುಡಿದ ಬಳಿಕ ರುಚಿಗೆ ಮಾರುಹೋದರು. ಬೆಟ್ಟದ ನೆಲ್ಲಿ, ಶುಂಠಿ ಹಾಗೂ ನಿಂಬೆ ಮಿಶ್ರಿತ ಪಾನೀಯವನ್ನು ಜನರು ಕುತೂಹಲದಿಂದ ಸೇವಿಸಿದರು.

ಸದ್ದು ಮಾಡಿದ ‘ದೇಸಿ ನಾರು’

ಸ್ನಾನದ ವೇಳೆ ಉಪಯೋಗಿಸುವ ಪ್ಲಾಸ್ಟಿಕ್ ನಾರಿಗೆ ಪರ್ಯಾಯವಾಗಿ ತುಪ್ಪದ ಹೀರೇಕಾಯಿಯ ಸಿಪ್ಪೆಯಿಂದ ತಯಾರಿಸಿದ ದೇಸಿ ನಾರು ಮೇಳದಲ್ಲಿ ಸದ್ದು ಮಾಡಿತು.

‘ನಾನೇ ಸಿದ್ಧಪಡಿಸಿರುವ ಈ ನಾರು ನಾರು ಕನಿಷ್ಠ ಒಂದು ವರ್ಷದವರೆಗೆ ಬಾಳಿಕೆ ಬರಲಿದೆ’ ಎಂದು ಇದನ್ನು ಸಿದ್ಧಪಡಿಸಿರುವ ಮಧುಗಿರಿಯ ಶಿವಣ್ಣ ತಿಳಿಸಿದರು.

ದ್ರಾಕ್ಷಾರಸ ತಯಾರಿಕೆ–ಜನರಿಗೆ ಮಾಹಿತಿ

ಕರ್ನಾಟಕ ದ್ರಾಕ್ಷಾ ಮಂಡಳಿಯಿಂದ ದ್ರಾಕ್ಷಾರಸ (ವೈನ್) ತಯಾರಿಸುವ ವಿಧಾನಗಳು ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಿಗೆ ವಿವರಿಸಲಾಯಿತು. ಕೆಂಪು, ಬಿಳಿ ಹಾಗೂ ರೋಸ್‌ ವೈನ್‌ಗಳ ಮಾದರಿಗಳನ್ನು ಮಳಿಗೆಯಲ್ಲಿ ಇಡಲಾಗಿತ್ತು. ದ್ರಾಕ್ಷಿ ಬೆಳೆ ಉತ್ತೇಜಿಸುವ ಸಲುವಾಗಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ.

***

ಪ್ರತಿ ವರ್ಷ ಇಲ್ಲಿ ಮೇಳ ನಡೆಯುವ ಮಾಹಿತಿ ಇತ್ತು . ಮೊದಲ ಬಾರಿ ಮೇಳಕ್ಕೆ ಬಂದಿದ್ದೇನೆ. ಆಧುನಿಕ ಕೃಷಿ ಪದ್ಧತಿಗಳ ಅಳವಡಿಕೆಯಿಂದ ರೈತರು ಲಾಭ ಪಡೆಯಬಹುದು

- ಸತೀಶ್‌, ಕೆ.ಆರ್‌.ಪುರ

ಪ್ರತಿ ವರ್ಷ ಇಲಾಖೆ ಬಿಡುಗಡೆ ಮಾಡುವ ಹೊಸ ತಳಿಗಳನ್ನು ರೈತರು ಬೆಳೆಯಬೇಕು. ಹಳೆಯ ತಳಿಗಳಿಗಿಂತ ಇವು ಹೆಚ್ಚು ಇಳುವರಿ ಹಾಗೂ ಲಾಭ ನೀಡುತ್ತವೆ

- ಮುನಿರಾಜ್, ಶಿಡ್ಲಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT