ಸೋಮವಾರ, ಫೆಬ್ರವರಿ 24, 2020
19 °C
ಹೆಜ್ಜೆ ಹೆಜ್ಜೆಗೆ ಕುತೂಹಲ, ರೈತರ ಪ್ರಶ್ನೆಗಳು, ವಿಜ್ಞಾನಿಗಳಿಂದ ವಿವರಣೆ; ಸೀಡ್‌ ಪೋರ್ಟಲ್‌ ಬಿಡುಗಡೆ

30 ಎಕರೆಯಲ್ಲಿ ತೋಟಗಾರಿಕೆ ವಿಶ್ವರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರಘಟ್ಟದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ (ಐಐಎಚ್‌ಆರ್‌) ಒಳಪಟ್ಟ 700 ಎಕರೆ ಪ್ರದೇಶದಲ್ಲಿ ಬಹುಬಗೆಯ ಗಿಡಗಳು, ತೋಟಗಳಿದ್ದು, ಈ ಪೈಕಿ 30 ಎಕರೆ ಪ್ರದೇಶದಲ್ಲಿ ಸಿದ್ಧಪಡಿಸಲಾದ ಹಣ್ಣು, ತರಕಾರಿ, ಹೂವಿನ ತೋಟಗಳು ಭಾರತದ ತುಣುಕೊಂದನ್ನು ತಂದು ಇಟ್ಟಂತಹ ಭಾವ ಮೂಡಿಸಿತು.

ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ರಾಷ್ಟ್ರೀಯ ತೋಟಗಾರಿಕಾ ಉತ್ಸವ ನಡೆಯುತ್ತಿದ್ದು, ಈ ಬಾರಿಯೂ ಅದಕ್ಕಾ
ಗಿಯೇ ಭರ್ಜರಿ ತಯಾರಿ ನಡೆಸಿದ್ದಕ್ಕೆ ನಳನಳಿಸುತ್ತಿದ್ದ ಗಿಡ, ಬಳ್ಳಿ, ಹೂವು, ಕಾಯಿಗಳು ಸಾಕ್ಷಿಯಾಗಿದ್ದವು. ದೂರದ ಊರುಗಳಿಂದ ಬರುವ ರೈತರಿಗೆ ಸಾಧ್ಯವಾದಷ್ಟು ಕಡಿಮೆ ಜಾಗದಲ್ಲಿಯೇ ಸಾಕಷ್ಟು ಮಾಹಿತಿ ಸಿಗಬೇಕು ಎಂಬ ಚಿಂತನೆಯಲ್ಲಿ ಈ ವ್ಯವಸ್ಥೆ ರೂಪಿಸಲಾಗಿತ್ತು.

ಡ್ರ್ಯಾಗನ್‌ ಹಣ್ಣು ತಿನ್ನಲು ರುಚಿ, ಆದರೆ ಅದನ್ನು ಬೆಳೆಯುವುದನ್ನು ನೋಡುವುದು ಕಷ್ಟ, ನೂರಾರು ಗಿಡಗಳು, ಅದನ್ನು ಬೆಳೆಸಿದ ವಿಧಾನ, ರೈತರಿಗೆ ನಿಶ್ಚಿತ ಬೆಲೆ ಒದಗಿಸುವ ಕ್ರಮಗಳಂತಹ ಮಾಹಿತಿಗಳು ನೂರಾರು ರೈತರ ಮನದಲ್ಲಿ ಅಚ್ಚೊತ್ತಿದವು. 

ಅರ್ಕಾ ಉದಯ್‌ ಮತ್ತು ಅರ್ಕಾ ಸುಪ್ರಭಾತ ಎಂಬ ಅಧಿಕ ಇಳುವರಿ ನೀಡುವ ಮಾವು, ಅರ್ಕಾ ಕಿರಣ್‌, ಅರ್ಕಾರ ಪೂರ್ಣ ಎಂಬ ಕೆಂಪು ಮತ್ತು ಬಿಳಿ ತಿರುಳು ಹೊಂದಿರುವ ಸೀಬೆ, ಅಧಿಕ ಇಳುವರಿಯ ಅರ್ಕಾ ಭೀಮ್‌ ಈರುಳ್ಳಿ, ಹೈಬ್ರಿಡ್‌ ತಳಿಯ ಅರ್ಕಾ ಖ್ಯಾತಿ ಮೆಣಸು... ಪಟ್ಟಿ ಬೆಳೆಯುತ್ತ ಹೋಗುತ್ತದೆ. ದ್ರಾಕ್ಷಿ ಬೆಳೆಗೆ ಸಾಂಪ್ರದಾಯಿಕ ಚಪ್ಪರದ ಬದಲಿಗೆ ತಂತಿಯ ಇಳಿಜಾರಿನ ಚಪ್ಪರ ಬಳಸಿದರೆ ಫಸಲು ಅಧಿಕ ಎಂಬುದನ್ನು ರೈತರಿಗೆ ಮನವರಿಕೆ ಮಾಡುವಲ್ಲಿ ವಿಜ್ಞಾನಿಗಳು ಸಫಲರಾದರು. ಹೂವಿನ ಲೋಕವಂತೂ ಅದ್ಭುತ, ಮನಮೋಹಕವಾಗಿತ್ತು. ಕಡಿಮೆ ಎತ್ತರದ ಚೆಂಡು ಗಿಡದಲ್ಲಿ ದುಂಡಗೆ ಅರಳುವ ಹೂವಿನ ಮಹಿಮೆ, ಅಲಂಕಾರಿಕ ಗ್ಲಾಡಿಯೋಲಸ್‌ ತಳಿಗಳಾದ ಅರ್ಕಾರ್‌ ಅಮರ್‌, ಅರ್ಕಾ ಕೇಸರ್‌ಗಳ ವೈಯ್ಯಾರ, ಜರ್ಬೇರಾದಲ್ಲಿ ಅರ್ಕಾ ವೈಟ್‌ ಎಂಬ ಬಿಳಿ ಬಣ್ಣ, ಹಸಿರು ದಂಟಿನ ತಳಿ, ಕನಕಾಂಬರದಲ್ಲಿ ಅರ್ಕಾ ಚೆನ್ನ, ಕನಕ, ಲೋಕಲ್‌ ತಳಿಗಳ ಮೈಮಾಟ, ಅರ್ಕಾ ನಿರಂತರ ಎಂಬ ಸುಗಂಧರಾಜದ ಗಾಂಭೀರ್ಯ, ಒಂದೆಲಗದ ಔಷಧೀಯ ಗುಣಗಳು ಸಹ ಮನ ಮುಟ್ಟಿದವು.

ಟೊಮೆಟೊ, ಬಟಾಣಿ, ಬೀನ್ಸ್‌, ಸೊರೆಕಾಯಿ, ಸಿಹಿಗುಂಬಳ, ಈರುಳ್ಳಿ ಸಹಿತ ಹಲವಾರು ತರಕಾರಿ ಬೆಳೆಗಳು ನಳನಳಿಸುತ್ತಿದ್ದುದಕ್ಕಿಂತಲೂ ಮಿಗಿಲಾಗಿ ವಿಜ್ಞಾನಿಗಳ ನೂರಾರು ದಿನಗಳ ಸಂಶೋಧನೆ, ಅಧಿಕ ಇಳುವರಿಗೆ ಅವರು ಮಾಡಿದ ನಾನಾ ಪ್ರಯೋಗಗಳ ಶ್ರಮ ಎದ್ದು ಕಾಣುತ್ತಿತ್ತು. 

‘ನಾವು ಇಲ್ಲಿ ಕೃಷಿಕರಿಗೆ ಕೇವಲ ತೋರಿಸುವುಷ್ಟೇ ಅಲ್ಲ, ಇಲ್ಲಿಂದ ತಳಿ ಪಡೆದುಕೊಂಡು ಹೋದವರು ಇತರರಿಗೂ ಇದರ ಬಗ್ಗೆ ಮನವರಿಕೆ ಮಾಡಬೇಕು, ಐಐಎಚ್‌ಆರ್‌ ತಳಿಯ ಗಿಡಗಳನ್ನು ಅಥವಾ ಬೀಜಗಳನ್ನು ಪೂರೈಸುವ ಉದ್ಯಮಿಗಳಾಗಬೇಕು ಎಂಬುದೇ ನಮ್ಮ ಉದ್ದೇಶ. ಹೀಗಾಗಿ ಹೊಸದಾಗಿ ಬೀಜ ಪೋರ್ಟಲ್‌ ಆರಂಭಿಸಲಾಗಿದೆ. ಮೊಬೈಲ್‌ ಆ್ಯಪ್‌ಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕ ರೈತರನ್ನು ತಲುಪುವ ವಿಶ್ವಾಸ ಇದೆ’ ಎಂದು ಐಐಎಚ್‌ಆರ್‌ ನಿರ್ದೇಶಕ ಡಾ.ಎಂ.ಆರ್.ದಿನೇಶ್ ಹೇಳಿದರು.‌

ಸೀಡ್‌ ಪೋರ್ಟಲ್‌: ಐಸಿಎಆರ್‌–ಐಐಎಚ್ಆರ್‌ನ ಹೊಸ ಬೀಜ ಪೋರ್ಟಲ್‌ https;//seed.iihr.res.in) ಅನ್ನು ಸಹ ಬಿಡುಗಡೆ ಮಾಡಲಾಯಿತು. ಇದರಲ್ಲಿ ಸ್ಪಷ್ಟ ಚಿತ್ರಗಳು, ರೈತರ ಸಂಪರ್ಕ, ಬೀಜ ಲಭ್ಯತೆ, ದರ, ಸಾಗುವಳಿ ಮಾಹಿತಿ ಸಹಿತ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಲಕ್ಷಣಗಳನ್ನು ಇದು ಹೊಂದಿದೆ. 

15 ಲಕ್ಷ ರೈತರಿಗೆ ತರಬೇತಿ

‘ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಸಹಿತ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್‌) ವತಿಯಿಂದ ವರ್ಷಕ್ಕೆ 15 ಲಕ್ಷ ರೈತರಿಗೆ ತರಬೇತಿ ನೀಡಲಾಗುತ್ತಿದ್ದು, ಕಡಿಮೆ ನೀರು ಬಳಸಿ ಅಧಿಕ ಇಳುವರಿ ಪಡೆಯುವುದಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಐಸಿಎಆರ್‌ ಮಹಾನಿರ್ದೇಶಕ ಡಾ.ತ್ರಿಲೋಚನ ಮಹಾಪಾತ್ರ ಹೇಳಿದರು.

ಬುಧವಾರ ಆರಂಭವಾದ 5 ದಿನಗಳ ರಾಷ್ಟ್ರೀಯ ತೊಟಗಾರಿಕಾ ಮೇಳ–2020 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಒಂದೊಂದು ಹನಿ ನೀರೂ ಅಮೂಲ್ಯ. ಹೀಗಾಗಿ ಹನಿ ನೀರಾವರಿ ವಿಧಾನ ಬಳಸಿ ಗರಿಷ್ಠ ಪ್ರಮಾಣದಲ್ಲಿ ಹಣ್ಣು, ತರಕಾರಿ, ಹೂವಿನ ಇಳುವರಿ ಪಡೆಯುವ ನಿಟ್ಟಿನಲ್ಲಿ ಸಂಶೋಧನೆ ಸಾಗಿದೆ. ಇದನ್ನು ರೈತರಿಗೆ ತಲುಪಿಸುವ ಪ್ರಯತ್ನವೂ ನಡೆದಿದೆ’ ಎಂದರು.

‘2022ರಲ್ಲಿ ರೈತರ ಆದಾಯ ದುಪ್ಪಟ್ಟುಗೊಳಿಸುವ ಸಂಕಲ್ಪವನ್ನು ಪ್ರಧಾನಿ ತಳೆದಿದ್ದು, ಅದಕ್ಕೆ ಪೂರಕವಾಗಿ ಐಸಿಎಆರ್–ಐಐಎಚ್‌ಆರ್ ಕೆಲಸ ಮಾಡುತ್ತಿವೆ. ಇಲ್ಲಿನ ಸಂಶೋಧನೆಗಳು ರೈತರಿಗೆ ತಲುಪಿ, ಅವರು ಅದನ್ನು ಇತರಿಗೂ ಪರಿಚಯಿಸಿ ಬೆಳೆ ತೆಗೆಯಲು ಉತ್ತೇಜನ ನೀಡಲಾಗುತ್ತಿದೆ’ ಎಂದರು.

ಐಸಿಎಆರ್‌ನ ಉಪ ಮಹಾನಿರ್ದೇಶಕ (ಮೀನುಗಾರಿಕೆ ವಿಜ್ಞಾನ) ಡಾ.ಜಯಕೃಷ್ಣ ಜೇನಾ, ಐಐಎಚ್‌ಆರ್ ನಿರ್ದೇಶಕ ಡಾ.ಎಂ.ಆರ್‌.ದಿನೇಶ್, ವಿಜ್ಞಾನಿ ಡಾ.ಎಂ.ವಿ.ಧನಂಜಯ ಇದ್ದರು.

ಮೊಬೈಲ್‌ ಆ್ಯಪ್‌

ಬೆಂಗಳೂರಿನ ಐಐಎಚ್‌ಆರ್‌ ಕುರಿತು ಮಾಹಿತಿ ನೀಡುವ ಮತ್ತು ರೈತರಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಮೂರು ಭಾಷೆಗಳಲ್ಲಿ ಸಿದ್ಧಪಡಿಸಲಾಗಿರುವ ‘ಅರ್ಕಾ ಭಾಗ್ವಾನಿ’ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆ ಮಾಡಲಾಯಿತು. ಹೊಸ ಹೊಸ ತಳಿಗಳು, ತೋಟಗಾರಿಕಾ ತಂತ್ರಜ್ಞಾನಗಳು, ಯಶಸ್ವಿ ಕಥೆಗಳು, ಬೀಜ, ನೆಡುವ ಗಿಡದ ಲಭ್ಯತೆ ಕುರಿತ ಮಾಹಿತಿ ಸಹಿತ ಹಲವಾರು ಮಾಹಿತಿಗಳು ಈ ಆ್ಯಪ್‌ನಲ್ಲಿ ಸಿಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು