ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಚಿಕ್ಕ ಕಾಳಿನ ಯೂರಿಯಾಗೆ ರೈತರ ಬೇಡಿಕೆ

ಸಣ್ಣ, ದೊಡ್ಡ ಕಾಳಿನ ಯೂರಿಯಾದಲ್ಲಿ ಒಂದೇ ಪ್ರಮಾಣದ ಪೋಷಕಾಂಶ; ಕೃಷಿ ಇಲಾಖೆ ಸ್ಪಷ್ಟನೆ
Last Updated 24 ಜುಲೈ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಬಿತ್ತನೆ ಬಹುತೇಕ ಪೂರ್ಣಗೊಂಡಿದ್ದು, ಇದೀಗ ರಸಗೊಬ್ಬರ ಯೂರಿಯಾ ಕುರಿತ ಚರ್ಚೆ ಶುರುವಾಗಿದೆ.‌ ಕೆಲವೆಡೆ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಸಿಗುತ್ತಿಲ್ಲ. ಸಿಕ್ಕರೂ ಚಿಕ್ಕ ಕಾಳಿನ ಯೂರಿಯಾ ಕೊರತೆ ಇದೆ ಎಂಬುದು ಜಿಲ್ಲೆಯ ರೈತರ ವಾದ. ಆದರೆ, ಜಿಲ್ಲೆಯಲ್ಲಿ ಸಾಕಷ್ಟು ಯೂರಿಯಾ ದಾಸ್ತಾನಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಚಿಕ್ಕ–ದೊಡ್ಡ ಕಾಳು: ಜಿಲ್ಲೆಯಲ್ಲಿ ಈ ಹಂತದಲ್ಲಿ ಬೆಳೆಗಳಿಗೆ ಮೇಲು ಗೊಬ್ಬರವಾಗಿ ಯೂರಿಯಾ ನೀಡಲಾತ್ತದೆ. ಚಿಕ್ಕ ಕಾಳಿನ ಯೂರಿಯಾಗೆ ರೈತರು ಬೇಡಿಕೆ ಇಡುತ್ತಿದ್ದಾರೆ.

‘ಯಾವುದೇ ಬೆಳೆಗೆ ಮೇಲು ಗೊಬ್ಬರವಾಗಿ ನೀಡಲು ಸಣ್ಣ ಕಾಳಿನ ಯೂರಿಯಾ ಗೊಬ್ಬರವೇ ಉತ್ತಮ. ಉದಾಹರಣೆಗೆ ಗೋವಿನ ಜೋಳವನ್ನು ಬದು ಮಾಡಿ ಬಿತ್ತಿರುತ್ತೇವೆ. ಚಿಕ್ಕ ಕಾಳಿನ ಗೊಬ್ಬರ ಹಾಕಿದರೆ, ಅದು ನೇರವಾಗಿ ಬೆಳೆಯ ಬುಡದಲ್ಲೇ ಉಳಿದು, ಬೆಳೆಗೆ ಹತ್ತಿಕೊಳ್ಳುತ್ತದೆ. ದೊಡ್ಡ ಕಾಳಿನ ಗೊಬ್ಬರ ಹಾಕಿದರೆ, ಅದು ಬದುವಿನಿಂದ ಉರುಳಿ ಸಾಲಿನಲ್ಲಿ ಬೀಳುತ್ತದೆ. ಹೀಗಾಗಿ ಚಿಕ್ಕ ಕಾಳಿನ ಯೂರಿಯಾಗೆ ಆದ್ಯತೆ ನೀಡುತ್ತೇವೆ’ ಎನ್ನುತ್ತಾರೆ ಅಳ್ನಾವರದ ರೈತ ಭರತೇಶ ಪಾಟೀಲ.

‘ನಮ್ಮ ತಾಲ್ಲೂಕು ಬಯಲು ಸೀಮೆ ಪ್ರದೇಶ. ಇಲ್ಲಿ ಮಳೆಯ ಪ್ರಮಾಣವೂ ಕಡಿಮೆ. ಚಿಕ್ಕ ಕಾಳಿನ ಗೊಬ್ಬರಕ್ಕೆ ಆದ್ಯತೆ ನೀಡುತ್ತೇವೆ. ದೊಡ್ಡ ಕಾಳಿಗೆ ಸಾಕಷ್ಟು ಮಳೆಯಾಗಬೇಕು. ಇಲ್ಲದಿದ್ದರೆ, ಅದು ಕರಗುವುದಿಲ್ಲ. ಆಗ ಅದನ್ನು ಬೆಳೆ ಹೀರಿ
ಕೊಳ್ಳುವುದಿಲ್ಲ’ ಎಂದು ನವಲಗುಂದ ತಾಲ್ಲೂಕಿನ ರೈತ ಪ್ರಕಾಶ ಸಿಗ್ಲಿ ಪ್ರತಿಪಾದಿಸುತ್ತಾರೆ.

‘ಈ ಮುಂಗಾರಿಗೆ 60 ಚೀಲ ಯೂರಿಯಾ ಬೇಕಿದೆ. ಆದರೆ, ನನಗೆ ಸಿಕ್ಕಿರುವುದು ಕೇವಲ 25 ಚೀಲ ಮಾತ್ರ. ಚಿಕ್ಕಕಾಳಿನ ಯೂರಿಯಾ ಕೊರತೆಯಿದ್ದು, ಇನ್ನೊಂದು ವಾರದಲ್ಲಿ ಮತ್ತಷ್ಟು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಪ್ರಕಾಶ ಹೇಳಿದರು.‌

ದೊಡ್ಡ ಕಾಳಿನ ಗೊಬ್ಬರ ಉತ್ತಮ: ‘ಚಿಕ್ಕ ಕಾಳಿನ ಗೊಬ್ಬರ ಉತ್ತಮ. ಪ್ರಮಾಣದಲ್ಲಿ ಅದು ಜಾಸ್ತಿ ಬರುತ್ತದೆ ಎಂಬುದು ರೈತರ ವಾದ. ಆದರೆ, ಚಿಕ್ಕ ಕಾಳು–ದೊಡ್ಡ ಕಾಳಿನ ಗೊಬ್ಬರದಲ್ಲಿ ವ್ಯತ್ಯಾಸ ಇರುವುದಿಲ್ಲ. ಎರಡೂ ಗೊಬ್ಬರಗಳಲ್ಲಿರುವ ಸಾರಜನಕದ ಪ್ರಮಾಣ ಒಂದೇ ರೀತಿ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT