ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಕನಿಯಲ್ಲಿ ಬೆಳೆಯಿರಿ ಬಳ್ಳಿ ತರಕಾರಿ

Last Updated 14 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ನಿಮಗೆ ಅಗತ್ಯವಿರುವ ತರಕಾರಿಗಳನ್ನು ನೀವೇ ಬೆಳೆದುಕೊಳ್ಳುವುದರಿಂದ ತಾಜಾ ಮತ್ತು ರುಚಿಕರ ತರಕಾರಿಗಳನ್ನು ತಿನ್ನುವ ಅವಕಾಶವಷ್ಟೇ ಅಲ್ಲ, ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೂ ಒಳ್ಳೆಯದು. ಆದರೆ ಬೆಂಗಳೂರಿನಂತಹ ನಗರಗಳಲ್ಲಿ, ಅಪಾರ್ಟ್‌ಮೆಂಟ್‌ ಸಮುಚ್ಛಯಗಳು ಶರವೇಗದಲ್ಲಿ ವಿಸ್ತರಿಸುತ್ತಿರುವಾಗ ತರಕಾರಿ ಬೆಳೆಯಲು ಜಾಗವೆಲ್ಲಿ ಎಂಬ ಪ್ರಶ್ನೆ ಏಳಬಹುದು. ಫ್ಲ್ಯಾಟ್‌ ಹೊಂದಿರುವವರಿಗೆ ಟೆರೇಸ್‌ ಕೂಡ ದುರ್ಲಭವೇ. ಆದರೆ ಇರುವ ಬಾಲ್ಕನಿಯಲ್ಲೇ ಕುಂಡದಲ್ಲಿ ತರಕಾರಿ ಬೆಳೆಸಬಹುದು. ಇದಕ್ಕೆ ಬೇಕಾಗುವ ಜಾಗವೂ ಅತ್ಯಲ್ಪ. ಹೀಗಾಗಿ ಲಂಬವಾಗಿ ಬೆಳೆಯುವ ಬಳ್ಳಿ ತರಕಾರಿಗಳನ್ನು ಬೆಳೆಸಬಹುದು. ಬಾಲ್ಕನಿ ಗ್ರಿಲ್ಸ್‌ಗೆ ಈ ಬಳ್ಳಿಯನ್ನು ಹಬ್ಬಿಸಬಹುದು.

ಬಾಲ್ಕನಿಯಲ್ಲಿ ಹಬ್ಬಿಸಬಹುದಾದ ಬಳ್ಳಿ ತರಕಾರಿಗಳಲ್ಲಿ ಪ್ರಮುಖವಾದದ್ದು ಸೌತೆಕಾಯಿ. ವರ್ಷವಿಡೀ ಬೆಳೆಯಬಹುದಾದ ಈ ಬಳ್ಳಿ ತರಕಾರಿಗೆ ಅಷ್ಟೊಂದು ಆರೈಕೆಯೂ ಬೇಡ. ದೊಡ್ಡ ಗಾತ್ರದ ಕುಂಡದಲ್ಲಿ ಮಣ್ಣು, ಸೆಗಣಿ ಗೊಬ್ಬರ ಮಿಶ್ರ ಮಾಡಿ ಸೌತೆ ಬೀಜವನ್ನು ಊರಿ. ಕೆಲವೇ ದಿನಗಳಲ್ಲಿ ಕುಡಿಯೊಡೆದು ಬರುವ ಈ ಬಳ್ಳಿಯನ್ನು ಬಾಲ್ಕಿನಿ ಗ್ರಿಲ್ಸ್‌ಗೆ ಹಂದರವಾಗಿ ಹಬ್ಬಿಸಬಹುದು. ಆದರೆ ಇದರ ಕುಡಿ ತಿದ್ದುವುದರಲ್ಲಿ ನೀವು ಪಳಗಿರಬೇಕು. ಬಳ್ಳಿ ಒಂದು ಮಾರುದ್ದ ಬೆಳೆದ ಕೂಡಲೇ ಅದು ಯಾವ ದಿಕ್ಕಿನಲ್ಲಿ ಬೆಳೆಯಬೇಕು ಎಂದು ನೀವೇ ನಿರ್ದೇಶನ ನೀಡುವುದು ಅಗತ್ಯ. ಸೌತೆ ಬಳ್ಳಿಗೆ ಕೀಟಗಳ ಬಾಧೆ ಕಡಿಮೆ. ಜೊತೆಗೆ ಆಗಾಗ ಕಾಯಿಯನ್ನು ಕೊಯ್ಯುವುದರಿಂದ ಬಳ್ಳಿಗೂ ಅಷ್ಟು ಭಾರ ಬೀಳುವುದಿಲ್ಲ.

ಹಾಗೆಯೇ ಬೀನ್ಸ್‌ ಅಥವಾ ಹುರುಳಿಕಾಯಿ. ಡಬಲ್‌ ಬೀನ್ಸ್‌ ಅತ್ಯಂತ ರುಚಿಕರ. ಇದನ್ನು ಕೂಡ ದೊಡ್ಡ ಗಾತ್ರದ ಕುಂಡದಲ್ಲಿ ಬೀಜವನ್ನು ಹಾಕಿ ಬೆಳೆಸಬಹುದು. ಬಾಲ್ಕನಿಯ ಬದಿಯ ಹಾಗೂ ಮೇಲ್ಗಡೆ ಗ್ರಿಲ್ಸ್‌ಗೆ ಕೂಡ ಹಬ್ಬಿಸಬಹುದು. ಎಲೆಗೆ ಹುಳ ಹತ್ತದಂತೆ ನೋಡಿಕೊಳ್ಳುವುದು ಅಗತ್ಯ.

ಹಾಗಲಕಾಯಿ ಬಳ್ಳಿಯನ್ನೂ ಇದೇ ರೀತಿ ಹಬ್ಬಿಸಬಹುದು. ಆದರೆ ಇದಕ್ಕೆ ಪೌಷ್ಟಿಕಾಂಶ ಜಾಸ್ತಿ ಬೇಕು. ಹೀಗಾಗಿ ಸಾವಯವ ಗೊಬ್ಬರವನ್ನು ಆಗಾಗ ಉಣಿಸುತ್ತಿರಬೇಕು. ಇದಕ್ಕೆ ಬಿಸಿಲೂ ಅಗತ್ಯ. ಬೆಂಗಳೂರಿನಲ್ಲಿ ಈಗ ಬಿಸಿಲಿಗೇನೂ ಬರವಿಲ್ಲ. ಹೀಗಾಗಿ ಆರಾಮವಾಗಿ ಅಲ್ಲಿಯೂ ಬೆಳೆಸಬಹುದು. ಒಂದು ಬಳ್ಳಿಯಲ್ಲಿ 10–12 ಹಾಗಲಕಾಯಿ ಬಿಡಬಹುದು.

ಇನ್ನೊಂದು ಬಳ್ಳಿ ತರಕಾರಿ ಸೀಮೆ ಬದನೆ. ಸ್ವಲ್ಪ ದೊಡ್ಡದಾದ ಕುಂಡದಲ್ಲಿ ಮೊಳಕೆ ಬಂದ ಸೀಮೆ ಬದನೆಕಾಯಿಯನ್ನು ಮಣ್ಣು ಮತ್ತು ಗೊಬ್ಬರ ಹಾಕಿ ಊರಬೇಕು. ಆಗಾಗ ಸ್ವಲ್ಪ ಸ್ವಲ್ಪ ನೀರುಣಿಸಿ. ಇದು ಹಂದರಕ್ಕೆ ಹಬ್ಬಿಸಬಹುದಾದ ಬಳ್ಳಿ. ಒಂದೇ ಒಂದು ಬಳ್ಳಿಯಲ್ಲಿ 60–70 ಕಾಯಿಯನ್ನು ಕೊಯ್ಯಬಹುದು. ರುಚಿಕರ ಸಾಂಬಾರ್‌, ಪಲ್ಯಕ್ಕೆ ಹೇಳಿ ಮಾಡಿಸಿದ ಈ ತರಕಾರಿ ನೀರಿನ ಅಂಶವನ್ನು ಜಾಸ್ತಿ ಹೊಂದಿರುತ್ತದೆ.

ಇದೇ ರೀತಿ ಪಡುವಲ, ಹೀರೆ, ಸಣ್ಣ ಗಾತ್ರದ ಕುಂಬಳಕಾಯಿ, ಹಸಿರು ಬಟಾಣಿ ಕೂಡ ಬೆಳೆಸಬಹುದು.

ಇನ್ನು ಬಸಳೆ ಕೂಡ ಹಬ್ಬಿಕೊಳ್ಳುವಂತಹ ಬಳ್ಳಿ. ಇದರ ದಂಟನ್ನು ಮಧ್ಯಮ ಗಾತ್ರದ ಕುಂಡದಲ್ಲಿ ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಊರಿದರೆ ಸಾಕು, ಬೇರು ಬಿಟ್ಟುಕೊಂಡು ಬೆಳೆಯುತ್ತದೆ. ಅದನ್ನು ಗ್ರಿಲ್ಸ್‌ಗೆ ಹಬ್ಬಿಸಿ. ಅತ್ಯಂತ ಶೀಘ್ರವಾಗಿ ಬೆಳೆಯುವ ಈ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ.

ಸಿದ್ಧತೆ ಹೇಗೆ?

ಮಣ್ಣಿಗೆ ನೀವು ನಿಮ್ಮದೇ ಆದ ಸಾವಯವ ಗೊಬ್ಬರ ಮಾಡಿ ಸೇರಿಸಬಹುದು. ತರಕಾರಿ ಸಿಪ್ಪೆ, ಒಣಗಿದ ಎಲೆ, ಅದೃಷ್ಟವಿದ್ದರೆ ಬೀದಿಯಲ್ಲಿ ಹಸು ಹಾಕಿದ ಸೆಗಣಿ ಸಿಕ್ಕಿದರೆ ಸೇರಿಸಬಹುದು. ಹಾಗೆಯೇ ಒಳ್ಳೆಯ ಕುಂಡದಲ್ಲಿ ಹಾಕಿದರೆ ಮಣ್ಣು ತೇವಾಂಶ ಹಿಡಿದುಕೊಂಡು ಗಾಳಿ ಸಂಚಾರಕ್ಕೂ ಎಡೆ ಮಾಡಿಕೊಡಬಹುದು.

ಬಳ್ಳಿಗೆ 2x2x1 ಅಡಿಯ ಕುಂಡವಿರಲಿ. ಮಳೆ ನೀರು ಕೊಯ್ಲು ಮಾಡಿಕೊಂಡರೆ ನೀರಿಗೇನೂ ಬರವಿರದು. ನೀರುಣಿಸುವಾಗ ಎಚ್ಚರಿಕೆ ವಹಿಸಿ. ಮಗ್‌ ಮೂಲಕ ಸ್ವಲ್ಪ ಸ್ವಲ್ಪ ಹಾಕಿ. ಜಾಸ್ತಿ ಹಾಕಿದರೆ ಅದು ಕುಂಡಕ್ಕಿರುವ ತೂತಿನ ಮೂಲಕ ಹೊರ ಹೋಗುವಂತಿರಬೇಕು. ಪಾತ್ರೆ, ಬಟ್ಟೆ ತೊಳೆದ ನೀರನ್ನೂ ಬಳಸಬಹುದು. ಬಾಲ್ಕನಿಯಲ್ಲಿ ಸಾಕಷ್ಟು ಸೂರ್ಯನ ಬೆಳಕು ಬರುವಂತಿರಬೇಕು. ಹಾಗೆಯೇ ನೆರಳು ಬೇಕಾದರೆ ಬಲೆ ಬಳಸಬಹುದು. ಬಾಲ್ಕನಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಹಾಗೆಯೇ ವಾಟರ್‌ ಪ್ರೂಫ್‌ ಮಾಡಿಸಿ. ಈಗಂತೂ ಸಾವಯವ ಕೀಟನಾಶಕ ಲಭ್ಯ. ಹೀಗಾಗಿ ಅದನ್ನೇ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT