ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಸಿನ ಕೃಷಿಗೆ ಅಂತರಬೆಳೆ ಸಂಗಾತಿ

Last Updated 27 ಫೆಬ್ರುವರಿ 2019, 5:57 IST
ಅಕ್ಷರ ಗಾತ್ರ

ಬೆಳಗಾವಿಯ ಮೂಡಲಗಿ ತಾಲ್ಲೂಕಿನ ಜೋಕಾನಟ್ಟಿ ಗ್ರಾಮದ 58ರ ಹರೆಯದ ಕೃಷಿಕ ಮುತ್ತಪ್ಪ ಸಾಬಣ್ಣ, ಕೃಷಿಯೊಂದಿಗೆ ಬದುಕು ಕಟ್ಟಿಕೊಂಡವರು. ಅವರದ್ದು ಒಟ್ಟು ಹತ್ತು ಎಕರೆ ಭೂಮಿ. ಅದರಲ್ಲಿ ಮೂರು ಎಕರೆಯಲ್ಲಿ ಸಮಗ್ರ ಬೆಳೆ ಪದ್ಧತಿಯಲ್ಲಿ ಅರಿಸಿನ ಬೆಳೆದಿದ್ದಾರೆ. ಅವರು ಬೆಳೆದಿರುವುದು ಅಧಿಕ ಇಳುವರಿ ನೀಡುವ ಸುಧಾರಿತ ‘ಪ್ರತಿಭ’ ತಳಿ. ಇದನ್ನು ಬೆಳೆಯಲು ಕಾರಣವಾಗಿದ್ದು ‘ಫೇಸ್‍ಬುಕ್’ !

ಅಜ್ಜಪ್ಪ ಮತ್ತು ಸಿದ್ಧಾರೂಢ, ಮುತ್ತಪ್ಪ ಅವರ ಮಕ್ಕಳು. ಅಜ್ಜಪ್ಪ ಕೃಷಿ ಅವಲಂಬಿತರು. ಸಿದ್ಧಾರೂಢರು ಶಿಕ್ಷಕರಾಗಿದ್ದಾರೆ. ಇಬ್ಬರೂ ಅಪ್ಪನ ಕೃಷಿ ಚಟುವಟಿಕೆಗೆ ಕೈ ಜೋಡಿಸುತ್ತಾರೆ. ಸಿದ್ಧಾರೂಢರು ಬೆಳೆ ಯೋಜನೆ, ಪ್ರಮುಖ ಕೃಷಿ ನಿರ್ಧಾರಗಳು, ಉತ್ಪನ್ನಗಳ ಮಾರಾಟದಲ್ಲಿ ನೆರವಾಗುತ್ತಾರೆ. ಜೊತೆಗೆ ಬಿಡುವು ಮಾಡಿಕೊಂಡು ದುಡಿಯುತ್ತಾರೆ.

ಉತ್ತಮ ಇಳುವರಿ ತಳಿ

ಮುತ್ತಪ್ಪ ಅವರು ಪ್ರತಿ ಬಾರಿ ಸೇಲಂ ತಳಿ ಅರಿಸಿನ ಬೆಳೆಯುತ್ತಿದ್ದರು. ಇತ್ತೀಚೆಗೆ ಆ ತಳಿಗೆ ಬೆಂಕಿ ರೋಗ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಇಳುವರಿಯೂ ಕಡಿಮೆಯಾಗುತ್ತಿತ್ತು. ಸಾಮಾಜಿಕ ಜಾಲತಾಣ ನೋಡುವ ಅಭ್ಯಾಸವಿದ್ದ ಸಿದ್ಧಾರೂಢರು ಒಮ್ಮೆ ಹೀಗೆ ಫೇಸ್‌ಬುಕ್‌ ಜಾಲಾಡುತ್ತಿದ್ದಾಗ, ಮೈಸೂರಿನ ಕೃಷಿಕ ಜಗದೀಶ್ ಎಂಬುವವರು ತೋಟಗಾರಿಕೆ ಮಹಾವಿದ್ಯಾಲಯದಿಂದ ‘ಪ್ರತಿಭ’ ತಳಿಯ ಸಸಿ ತಂದು ನಾಟಿ ಮಾಡಿ ಉತ್ತಮ ಬೆಳೆ ತೆಗೆದ ವಿವರ ಸಿಕ್ಕಿತು. ತಕ್ಷಣ ಜಗದೀಶರೊಂದಿಗೆ ಸಂಪರ್ಕ ಸಾಧಿಸಿದ ಅವರು, ಮೂರು ಎಕರೆಗಾಗುವಷ್ಟು ಬಿತ್ತನೆ ಗಡ್ಡೆಯನ್ನು ಅವರಿಂದ ಪಡೆದರು.

‘ಅಪ್ಪ, ತಮ್ಮ ಹೊಸ ತಳಿ ಬೆಳೆಯೋದಕ್ಕೆ ವಿರೋಧಿಸಿದರು.ಸಂಪ್ರದಾಯದಂತೆ ಗಡ್ಡೆ ಬಿಟ್ಟು ಸಸಿ ನೆಡೋಣ ಅಂದೆ. ಆಗಲೂ ಬೇಡ ಅಂದ್ರು; ಸುಮ್ಮನಾಗದೆ, ಸಸಿ ನೆಡೋಣ. ಬಿತ್ತನೆ ಉಳಿಯುತ್ತೆ. ಭೂಮಿ ತಯಾರಿಗೆ ಹೆಚ್ಚು ಸಮಯ ಸಿಗುತ್ತೆ. ಒಂದೂವರೆ ತಿಂಗಳು ಹೊಲದ ನಿರ್ವಹಣೆ ಇರುವುದಿಲ್ಲ ಅಂತ ಹೇಳಿ ಒಪ್ಪಿಸಿದೆ’ ಎಂದರು ಸಿದ್ಧಾರೂಢರು. ‘ಅಕ್ಕಪಕ್ಕದ ರೈತರೆಲ್ಲ ನಾವು ಸಸಿನಾಟಿ ಮಾಡೋದು ನೋಡಿ, ಏನೇನೋ ಅಂದ್ಕೊಂಡ್ರು, ಈಗ ಎಕರೆಗೆ ಮೂವತ್ತು ಕ್ವಿಂಟಲ್ ಸಂಸ್ಕರಿಸಿದ ಅರಿಸಿನ ಬಂದಿರೋದು ನೋಡಿ, ನಾವೂ ಈ ಸಲ ತಳಿ ಬದಲಿಸೋಣ, ಸಸಿ ನಾಟಿ ಮಾಡಿ ನೋಡೋಣ ಅಂತಿದ್ದಾರೆ’ ಎನ್ನುತ್ತಾ ಮಾತು ಜೋಡಿಸಿದರು ಅಜ್ಜಪ್ಪ.

ಮಿಶ್ರಬೆಳೆಯಾಗಿ ಶೇಂಗಾ

ಅರಿಸಿನ ಬೆಳೆ ನಾಟಿ ಮಾಡಿದ ಮೇಲೆ, ಅದು ಬೆಳೆಯುವುದಕ್ಕೆ ಎರಡು ತಿಂಗಳು ಬೇಕು. ಅಲ್ಲಿವರೆಗೂ, ಸಸಿಗಳ ಸಾಲಿನ ನಡುವೆ ಅಂತರಬೆಳೆಯಾಗಿ ಮೆಕ್ಕೆಜೋಳ, ಶೇಂಗಾ ನಾಟಿ ಮಾಡಿದರು. ಹತ್ತು ಕ್ವಿಂಟಲ್‌ ಜೋಳ ಸಿಕ್ಕಿತು. ₹15 ಸಾವಿರ ಲಾಭ ಬಂತು. ಆಕಳು – ಎಮ್ಮೆಗಳಿಗೆ ವರ್ಷಕ್ಕಾಗು ವಷ್ಟು ಮೇವು ಸಿಕ್ಕಿತು.

‘ಇದ್ಯಾವುದನ್ನೂ ಲಾಭಕ್ಕೆ ಅಂತ ಹಾಕ್ಲಿಲ್ಲ. ಆದರೆ, ನಮಗೆ ಮನೆ ಬಳಕೆಗೆ ಶೇಂಗಾ ಬಂತು, ಅಡುಗೆಗೆ ಎಣ್ಣೆನೂ ಆಯ್ತು ಬಿಡ್ರಿ’ ಎಂದರು ಮುತ್ತಪ್ಪ. ಅಂತರ ಬೆಳೆ ಹಾಕಿದ್ದರಿಂದ ಕಳೆಯ ಬಾಧೆ ಕಡಿಮೆಯಾಗಿದೆ. ಸಂಪೂರ್ಣ ಬಿಸಿಲು ಬೇಡದ ಅರಿಸಿನಕ್ಕೆ ತುಸು ನೆರಳೂ ಒದಗಿದೆ. ಹೀಗಾಗಿ ಬೆಳೆಯೂ ಚೆನ್ನಾಗಿ ಬಂತು. ಹಾಕಿದ ಗೊಬ್ಬರಗಳೂ ಸಮರ್ಪಕವಾಗಿ ಉಪಯೋಗವಾಗಿವೆ ಎಂಬುದು ಅವರ ಅಭಿಪ್ರಾಯ.

ನೀರು ಹನಿಸಿದ್ದಷ್ಟೆ

ಸುತ್ತಮುತ್ತಲ ಅನೇಕ ಕೃಷಿಕರು ಈಗಲೂ ಅರಿಸಿನ ಬೆಳೆಗೆ ನೀರನ್ನು ಹರಿಸುತ್ತಾರೆ. ಮುತ್ತಪ್ಪನವರು ಮಾತ್ರ, ಡ್ರಿಪ್‌ ಮೂಲಕವೇ ಸಸಿಗಳಿಗೆ ನೀರು ಪೂರೈಸುತ್ತಾರೆ. ‘ನೀರಿದೆ ಅಂದ ಮಾತ್ರಕ್ಕೆ ಹರಿಸೋದು ಸರಿಯಲ್ರಿ. ಎಷ್ಟು ಬೇಕೋ ಅಷ್ಟನ್ನ ಬೇಕಾದಾಗ ಡ್ರಿಪ್ ಮುಖಾಂತರ ಕೊಟ್ರೆ ನೀರೂ ಉಳಿಯುತ್ತೆ, ಕಳೆಯೂ ಕಡಿಮೆ, ಬೆಳೆಗೆ ರೋಗವು ಕಡಿಮೆ, ಕೊಟ್ಟ ಗೊಬ್ಬರ ಪೋಲಾಗೋದಿಲ್ಲ’– ಹನಿ ನೀರಾವರಿಯ ಅನುಕೂಲಗಳನ್ನ ಸಾಬಣ್ಣವರು ಪಟ್ಟಿ ಮಾಡಿದ್ದು ಹೀಗೆ. ನೀರು ಹೆಚ್ಚಾದರೆ ಅರಿಸಿನಕ್ಕೆ ಕೊಳೆ ರೋಗ ಬರುತ್ತದೆ ಎಂಬುದು ಇವರ ಅನುಭವದ ಮಾತು. ಫಲವತ್ತಾದ ಕಪ್ಪು ಮಣ್ಣಾಗಿದ್ದರಿಂದ ನೀರು ಹಿಡಿದುಕೊಳ್ಳುವ ಶಕ್ತಿ ತುಸು ಹೆಚ್ಚಾಗಿದೆ. ಹಾಗಾಗಿ ವಾರಕ್ಕೆರಡು ದಿನ ಮಾತ್ರ ಡ್ರಿಪ್‌ ಮೂಲಕ ಎರಡು ತಾಸು ನೀಡು ಕೊಟ್ಟಿದ್ದಾರೆ.

‌ಬೆಳೆ ಸಂರಕ್ಷಣೆ

ಬಿತ್ತನೆಗೆ ಮುನ್ನವೇ ಬೀಜೋಪಚಾರ ಮಾಡಿದ್ದರು. ನಂತರ ಬೇವಿನ ಹಿಂಡಿ, ಟ್ರೈಕೋಡರ್ಮ, ಸುಡೋಮೊನಾಸ್ ಬಳಕೆ ಮಾಡಿದರು. ಡ್ರಿಪ್ ಮೂಲಕ ಎರಡು ಲೀಟರ್ ನೀರಿನೊಂದಿಗೆ ‘ಸ್ಟ್ರೆಸ್ ಔಟ್’ ಉತ್ಪನ್ನ ನೀಡಿದರು. ಸಸ್ಯಜನ್ಯ ಶಿಲೀಂಧ್ರ ನಾಶಕ ‘ಪಿಪಿಎಫ್‍ಸಿ’ ಸಿಂಪಡಣೆ ಸಿಂಪಡಿಸಿದರು. ಡ್ರಿಪ್‌ ಮೂಲಕ ಹನಿ ಹನಿ ನೀರು ಪೂರೈಕೆ ಮಾಡಿದ್ದರಿಂದ, ಕೀಟ-ರೋಗ ನಿರ್ವಹಣೆ ಸುಲಭವಾಗಿದೆ ಎನ್ನುವುದು ಸಿದ್ಧಾರೂಢರ ಅಭಿಪ್ರಾಯ.

‘ಸ್ಟ್ರೆಸ್ ಔಟ್’ ಬಳಸಿದ್ದರಿಂದ ಅರಿಸಿಣಕ್ಕೆ ರೋಗ-ಕೀಟ ಬಾಧೆ ಕಡಿಮೆಯಾಗಿದೆ. ನೀರಾವಿಯನ್ನು ಕಡಿಮೆ ಮಾಡಿ ನೀರಿನ ಬಳಕೆಯ ಕ್ಷಮತೆಯನ್ನೂ ಹೆಚ್ಚಿಸಿದೆ. ಬೆಳೆ ಪೋಷಕಾಂಶ ಹೀರಿಕೊಳ್ಳಲು ಸಹಕರಿಸಿದೆ ಎನ್ನುತ್ತಾ ಕೀಟ-ರೋಗ ನಿರ್ವಹಣಾ ಕ್ರಮಗಳನ್ನು ವಿವರಿಸಿದರು. ಪ್ರತಿ ಲೀಟರ್ ನೀರಿಗೆ ಬೇವಿನೆಣ್ಣೆಯನ್ನು ಬೆರೆಸಿ ಎರಡು ಸಲ ಸಿಂಪಡಣೆ ಮಾಡಿದ್ದರು ಅಜ್ಜಪ್ಪ. ಇದರಿಂದ ರಸ ಹೀರುವ ಕೀಟಗಳ ಬಾಧೆ ಕಡಿಮೆ ಆಯಿತು ಬೇವಿನಿಂಡಿ ಹಾಕಿದ್ದರಿಂದ ಹುಸಿಕಾಂಡ ಕೊರಕವೂ ಹೆಚ್ಚು ಬಾಧಿಸಲಿಲ್ಲ ಎನ್ನುವುದು ಅವರ ಅನುಭವದ ನುಡಿ.

ಒಂದು ಎಕರೆ ಅರಿಸಿನ ಬೆಳೆಯಲು ಸರಾಸರಿ ₹90 ಸಾವಿರ ಖರ್ಚಾಗಿದೆ. ಮಿಶ್ರ ಬೆಳೆಯಾಗಿ ಬೆಳೆದ ಮೆಕ್ಕೆಜೋಳದಿಂದ ₹15 ಸಾವಿರ ಆದಾಯ ಬಂದಿದೆ. ಶೇಂಗಾ ಬೆಳೆದಿದ್ದು ಮನೆ ಉಪಯೋಗಕ್ಕೆ ಆಗಿದೆ. ಈಗ ಅರಿಸಿನ ಕಟಾವಾಗಿದೆ. ಬೇಯಿಸಿ ಒಣಗಿಸುವ ಹಂತದಲ್ಲಿದೆ. ಕನಿಷ್ಟ 30 ಕ್ವಿಂಟಲ್ ಇಳುವರಿ ಸಿಗುವುದು ಖಚಿತವಾಗಿದೆ. ಸದ್ಯದ ಮಾರುಕಟ್ಟೆ ದರ ಕ್ವಿಂಟಲ್‌ಗೆ 7 ಸಾವಿರದಿಂದ 8ಸಾವಿರ ರೂಪಾಯಿ ಇದೆ. ಒಂದು ಎಕರೆಗೆ ಕನಿಷ್ಠ ₹2.10 ಲಕ್ಷ, ಮೆಕ್ಕೆಜೋಳದ ಆದಾಯ ಸೇರಿಸಿದರೆ ₹2.25 ಲಕ್ಷ. ಇದು ಸಾಬಣ್ಣವರ ನಿರೀಕ್ಷೆ. ಅರಿಸಿನ ಆಸಕ್ತ ಕೃಷಿಕರು, ‘ಪ್ರತಿಭ’ ಬಿತ್ತನೆ ಗಡ್ಡೆಯ ಬಗ್ಗೆ ಮಾಹಿತಿಗಾಗಿ ದೂರವಾಣಿ 8722964063 / 7619582489 ಮೂಲಕ ಮುತ್ತಪ್ಪ ಅವರನ್ನು ಸಂಪರ್ಕಿಸಬಹುದಾಗಿದೆ.

ಬೆಳೆ ಪೋಷಣೆ ಹೀಗೆ

ಎಕರೆಗೆ ಕೊಟ್ಟ ಕೊಟ್ಟಿಗೆ ಗೊಬ್ಬರ ಹತ್ತು ಟನ್. ಮುನ್ನೂರು ಕೆ.ಜಿ. ಬೇವಿನಹಿಂಡಿ. ಕೋಳಿ ಗೊಬ್ಬರ ಒಂದು ಟನ್. ಎರಡು ತಿಂಗಳ ನಂತರ 100 ಕೆ.ಜ 17-17-17, ಜೊತೆಗೆ ಐವತ್ತು ಕೆ.ಜಿ ಪೊಟ್ಯಾಷ್. ನಾಲ್ಕು ತಿಂಗಳ ಸಸಿಗಳಾದಾಗ ಮತ್ತೊಮ್ಮೆ 50 ಕೆ.ಜಿ 17-17-17 ಹಾಗೂ ಅಷ್ಟೇ ಪ್ರಮಾಣದ ಪೊಟ್ಯಾಷ್. ಅಂತರ ಬೆಳೆಗಳೆಲ್ಲ ಮುಗಿದು ಅರಿಸಿನಕ್ಕೆ ಐದು ತಿಂಗಳಾದ ಮೇಲೆ ಹನಿ-ರಸಾವರಿಯ ಮೂಲಕ 15 ದಿನಗಳ ಅಂತರದಲ್ಲಿ ನಾಲ್ಕು ಬಾರಿ 20 ಕೆ.ಜಿ. 0-0-50 ನೀರಿನಲ್ಲಿ ಕರಗುವ ಗೊಬ್ಬರ ನೀಡಿದ್ದಾರೆ. 10 ಟನ್ ಕೊಟ್ಟಿಗೆ ಗೊಬ್ಬರ ಕೊಟ್ಟಿದ್ದರಿಂದ ಲಘುಪೋಷಕಾಂಶಗಳ ಕೊರತೆ ಅಷ್ಟಾಗಿ ಕಾಣಲಿಲ್ಲ. ಬೆಳಗಾವಿಯ ಕೆಲ ತಾಲ್ಲೂಗಳಲ್ಲಿ ಮಣ್ಣಿನ ರಸಸಾರ ತುಸು ಹೆಚ್ಚಿದ್ದರಿಂದ ಸತು, ಕಬ್ಬಿಣದ ಕೊರತೆ ಕಾಣಿಸುವುದುಂಟು. ಅದಕ್ಕಾಗಿ ಬೆಳೆಗೆ ಎರಡು, ಮೂರು, ನಾಲ್ಕು ತಿಂಗಳಾದಾಗ ಲೀಟರ್ ನೀರಿಗೆ ಐದು ಗ್ರಾಂ ‘ಟರ್ಮೆರಿಕ್ ಸ್ಪೆಷಲ್’ ಬೆರೆಸಿ ಸಿಂಪಡಿಸಿರುತ್ತಾರೆ. ಇದರಿಂದ ಲಘುಪೋಷಕಾಂಶಗಳ ಕೊರತೆ ಅಷ್ಟೇ ನೀಗಲಿಲ್ಲ, ಇಳುವರಿಯಲ್ಲೂ ಕೊಂಚ ಹೆಚ್ಚಳವಾಗಿ ಉತ್ತಮ ಗುಣಮಟ್ಟದ ಅರಿಸಿನ ಬಂದಿದೆ ಎನ್ನುತ್ತಾರೆ ಸಿದ್ಧಾರೂಢರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT