ಗುರುವಾರ , ಮೇ 6, 2021
25 °C

ಕೆಂಬಣ್ಣದ ಮೈಂದಪುಳಿ

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

Prajavani

ಮೈಂದಪುಳಿ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಹಣ್ಣು. ಈ ಭಾಗದಲ್ಲಿ ಹಳ್ಳಿಗಳಲ್ಲಿ ಇದನ್ನು ಕೋಳಿಜುಟ್ಟು ಹಣ್ಣು ಅಂತಲೂ ಕರೆಯುತ್ತಾರೆ. ಕಾರಣ ಈ ಹಣ್ಣಿಗೆ ಥೇಟ್ ಕೋಳಿ ಜುಟ್ಟಿನ ಬಣ್ಣ. ಇದು ‘ಗಾರ್ಸಿನಿಯಾ’ ಕುಟುಂಬಕ್ಕೆ ಸೇರಿದೆ.

ಮೈಂದಪುಳಿ ಮರಗಳು ಸುಮಾರು 20-25 ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ. ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಕುಂದಲ್ಪಾಡಿ ಸುಮಿತ್ರ ಕೆ.ಎಸ್. ಎಂಬ ರೈತರ ಅಡಿಕೆ ತೋಟದ ಬದುವಿನಲ್ಲಿ ಮೈಂದಪುಳಿ ಹಣ್ಣಿನ ಒಂದು ಮರವಿದೆ. ಅದು ಇವರೇ ನೆಟ್ಟು ಬೆಳೆಸಿದ ಮರವಲ್ಲ. ಅವರ ತಂದೆಯವರ ಕಾಲದ್ದು. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ ಇದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ಹೂ ಬಿಟ್ಟು ಹಣ್ಣು ಕೊಡುವವರೆಗಿನ ಸಮಯದಲ್ಲಿ ಮರವನ್ನು ನೋಡಿದರೆ ಮದುವಣಗಿತ್ತಿಯಂತೆ ಕಾಣುತ್ತದೆ. ಅಲಂಕಾರಿಕ ಮರವಾಗಿಯೂ ಇದನ್ನು ರಸ್ತೆ ಬದಿಗಳಲ್ಲಿ, ಉದ್ಯಾನವನಗಳಲ್ಲಿ ಬೆಳೆಸಬಹುದು. ಏಪ್ರಿಲ್ ತಿಂಗಳಲ್ಲಿ ಕಾಂಡದಿಂದ ಅಲ್ಲಲ್ಲಿ ಸುಮಾರು ಒಂದು ಅಡಿಯಿಂದ ಎರಡು ಅಡಿ ಉದ್ದದವರೆಗೆ ಬಿಳಲುಗಳಂತಹ ರಚನೆ ಹೊರಬರುತ್ತದೆ. ಈ ಪ್ರತಿ ರಚನೆಯ ಕೊನೆಭಾಗ ಕೆಂಪು ಬಣ್ಣದ ಪುಟ್ಟಪುಟ್ಟ ಹೂಗಳನ್ನು ಬಿಡುತ್ತದೆ.

ಜೂನ್ ತಿಂಗಳಲ್ಲಿ ನಸು ಕೆಂಪು ಬಣ್ಣದ ಕಾಯಿಗಳಾಗುತ್ತವೆ. ಜುಲೈ ತಿಂಗಳಿನಿಂದ ಸೆಪ್ಟೆಂಬರ್ ಆರಂಭದವರೆಗೆ ಕಡುಕೆಂಪು ಬಣ್ಣದ ಹಣ್ಣುಗಳು ಗೆಜ್ಜೆ ಕಟ್ಟಿದಂತೆ ಬೊಡ್ಡೆಯಿಂದ ಕಾಂಡದ ತುದಿ ತನಕ ತೊನೆದಾಡುತ್ತವೆ. ಪ್ರತಿ ಬಿಳಲಿನಲ್ಲಿ ಒಂದರಿಂದ ಪ್ರಾರಂಭವಾಗಿ 20-30ರ ತನಕ ಹಣ್ಣುಗಳು ಗೊಂಚಲು ಗೊಂಚಲಾಗಿ ಇರುತ್ತವೆ. ಮರದಲ್ಲಿ ಹಣ್ಣು ಅನೇಕ ದಿನಗಳ ಕಾಲ ಕೆಡದೆ ಉಳಿಯುತ್ತದೆ. ಇದು ಮುರುಗಲು ಜಾತಿಗೆ ಸೇರಿದರೂ ಮುರುಗಲುಹಣ್ಣು ಆಗುವಂತೆ ಗೆಲ್ಲುಗೆಲ್ಲುಗಳಲ್ಲಿ ಆಗುವುದಿಲ್ಲ. ಕಾಂಡದಲ್ಲಿ ಮಾತ್ರ ಹಣ್ಣು ಬಿಡುವುದು ಈ ಮರದ ವಿಶೇಷತೆ.

ಹಣ್ಣು ಅಡಿಕೆ ಗಾತ್ರದಲ್ಲಿರುತ್ತದೆ. ಹಣ್ಣಿನ ತುದಿ ಚೂಪು. ದೊರಗು ಮೈ. ಸಿಪ್ಪೆ ತುಂಬ ಗಟ್ಟಿ. ಕೈಯಲ್ಲಿ ಒಡೆಯಲು ಬರುವುದಿಲ್ಲ. ಕತ್ತಿ ಅಥವಾ ಚೂರಿಯಲ್ಲಿ ಸೀಳಬೇಕು. ಒಳಗೆ ನಸುಕೆಂಪು ಬಣ್ಣದ ರಸಭರಿತ ತಿರುಳು ಇರುತ್ತದೆ. ಇದನ್ನು ಬಾಯಿಗೆ ಹಾಕಿದರೆ ಹುಳಿ-ಸಿಹಿ ರುಚಿ. ರಸವನ್ನು ಹೀರಿ ತಿರುಳಿನ ಒಳಗೆ ಇರುವ ಬೀಜವನ್ನು ಉಗಿಯಬೇಕು. ಒಂದು ಹಣ್ಣಿನಲ್ಲಿ ಒಂದರಿಂದ ನಾಲ್ಕರ ತನಕ ಬೀಜಗಳಿರುತ್ತವೆ. ಹಣ್ಣನ್ನು ಜ್ಯೂಸ್ ಮಾಡಿಯೂ ಸವಿಯಬಹುದು.

ಬೀಜದಿಂದ ಸಸ್ಯಾಭಿವೃದ್ಧಿಯಾಗುತ್ತದೆ. ನಾಟಿ ಮಾಡಿದ ಹತ್ತು ವರ್ಷಗಳಲ್ಲಿ ಫಲ ಬರುತ್ತದೆ. ನೇರವಾಗಿ ಬೆಳೆವ ಕಾಂಡ. ಮರ ಗಟ್ಟಿಯಾಗಿದ್ದು ಪೀಠೋಪಕರಣಗಳ ತಯಾರಿಕೆಗೆ ಬಳಸಬಹುದು. ಮೈಂದಪುಳಿಯಲ್ಲಿ ವಿಟಮಿನ್ ‘ಸಿ’ ಹೇರಳವಾಗಿದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣನ್ನು ಕೃಷಿಭೂಮಿಯಲ್ಲೂ ಬೆಳೆಯಬಹುದು. ಆದರೆ ಬೆಳೆಯುವ ಪ್ರಯತ್ನ ಮಾಡಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲೂ ಈ ಹಣ್ಣು ಕಾಣಿಸುವುದಿಲ್ಲ.

ಅಪರೂಪದ ಈ ಕಾಡು ಹಣ್ಣು ಕಣ್ಮರೆಯ ಅಂಚಿಗೆ ತಲುಪಿದೆ ಎನ್ನುವುದು ಆತಂಕದ ಸಂಗತಿ. ರೈತರು ಇದರ ಒಂದೆರಡು ಸಸಿಯನ್ನು ತಮ್ಮ ಕೃಷಿಭೂಮಿಯಲ್ಲಿ ಬೆಳೆಸಬಹುದು. ಈ ಮರದ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಇದರ ವಂಶವಾಹಿಯನ್ನು ಸಾಂಪ್ರದಾಯಿಕ ಅಥವಾ ಅಂಗಾಂಶ ಕೃಷಿಯ ಮೂಲಕ ಹೆಚ್ಚಿಸುವ ಕಾರ್ಯಕ್ರಮ ಮಾಡಬೇಕು. ಅರಣ್ಯ ಇಲಾಖೆ ಈ ಸಸಿಗಳನ್ನು ಬೆಳೆಸುವ ಕಡೆಗೆ ಗಮನ ಹರಿಸಿದರೆ ಅಳಿವಿನ ಅಂಚಿನಲ್ಲಿ ಇರುವ ಇವುಗಳ ಸಂರಕ್ಷಣೆ ಮಾಡಿದಂತಾಗುತ್ತದೆ.

ಸುಮಿತ್ರ ಅವರು ಹಣ್ಣಿನಿಂದ ಗಿಡಗಳನ್ನು ಮಾಡಿಲ್ಲ. ಅವರ ಇಬ್ಬರು ಪುಟ್ಟ ಮಕ್ಕಳಿಗೆ ಈ ಹಣ್ಣು ಬಹಳ ಇಷ್ಟ. ಅವರ ಹೆಂಡತಿಯ ತವರುಮನೆ ಸಮೀಪದ ಕಾಡಿನಲ್ಲಿ (ಸುಳ್ಯದ ಅಜ್ಜಾವರ) ಈ ಹಣ್ಣಿನಲ್ಲೇ ಬಿಳಿ ಬಣ್ಣದ ಹಣ್ಣಿನ ಮರಗಳಿವೆ ಎಂಬ ಮಾಹಿತಿಯನ್ನು ಅವರು ಕೊಟ್ಟರು. ನಮ್ಮ ಪಶ್ಚಿಮಘಟ್ಟದಲ್ಲಿ ಎಂತೆಂಥ ಅಮೂಲ್ಯ ಕಾಡುಹಣ್ಣುಗಳಿವೆ. ಇಂಥ ಕಾಡುಹಣ್ಣುಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ಹಣ್ಣಿನ ಕುರಿತ ಮಾಹಿತಿಗಾಗಿ ಸುಮಿತ್ರ ಅವರ ಮೊಬೈಲ್ ನಂಬರ್ 9449488266.

ಚಿತ್ರಗಳು: ಲೇಖಕರವು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು