ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ಹಾದಿಯಲ್ಲಿ : ಕೈ ಹಿಡಿದ ಪೇರಲ ಕೃಷಿ

ಮಾನ್ಯರಮಸಲವಾಡದ ಕೃಷಿಕ ಕೋಗಳಿ ಕೊಟ್ರೇಶ
Last Updated 11 ಡಿಸೆಂಬರ್ 2019, 9:51 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದ ಯುವ ಕೃಷಿಕ ಕೋಗಳಿ ಕೊಟ್ರೇಶ ಪೇರಲ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಸಾಂಪ್ರದಾಯಿಕ ಕೃಷಿಯಲ್ಲಿ ಆಗಿದ್ದ ನಷ್ಟವನ್ನು ಅವರು ಹಣ್ಣಿನ ಕೃಷಿಯಲ್ಲಿ ಭರ್ತಿ ಮಾಡಿಕೊಂಡಿದ್ದಾರೆ.ಮಸಲವಾಡ ಗ್ರಾಮದಲ್ಲಿ ಕೊಟ್ರೇಶ ಹಾಗೂ ಹಿರಿಯ ಸಹೋದರ, ಪೊಲೀಸ್ ಪೇದೆಯಾಗಿರುವ ಚನ್ನಬಸಪ್ಪ ಅವರಿಗೆ ಸೇರಿದ ಒಂಬತ್ತು ಎಕರೆ ಜಮೀನು ಇದೆ. ನಾಲ್ಕು ವರ್ಷದ ಹಿಂದೆ ಅದು ಖುಷ್ಕಿ ಭೂಮಿಯಾಗಿತ್ತು. ಉತ್ತಮ ಮಳೆಯಾದಲ್ಲಿ ಸಮೃದ್ಧ ಫಸಲು ಬೆಳೆಯುವ ಫಲವತ್ತಾದ ಕಪ್ಪು ಎರಿ ಭೂಮಿ ಅದು. ಸತತ ಬರಗಾಲ, ರೋಗಬಾಧೆ, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗದೇ ಅವರು ಕೃಷಿಯಲ್ಲಿ ಲಾಭಕ್ಕಿಂತ ನಷ್ಟ ಅನುಭವಿಸಿದ್ದೇ ಹೆಚ್ಚು.

ಚನ್ನಬಸಪ್ಪ ಪೊಲೀಸ್ ಇಲಾಖೆ ಸೇರಿದ್ದರೂ ಕೃಷಿಯ ಮೇಲೆ ಅವರಿಗೆ ವಿಶೇಷ ಪ್ರೀತಿ. ನಾಲ್ಕು ವರ್ಷದ ಹಿಂದೆ ಕೊಳವೆಬಾವಿ ಕೊರೆಯಿಸಿ ತಮ್ಮನಿಗೆ ನೀರಾವರಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹೊಲದ ಪಕ್ಕದಲ್ಲೇ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಾಲುವೆ ಹರಿಯುವುದರಿಂದ ನೀರಿನ ಸೌಲಭ್ಯ ಉತ್ತಮವಾಗಿದೆ.

ಒಂಬತ್ತು ಎಕರೆ ಜಮೀನಿನ ಪೈಕಿ ಒಂದು ಎಕರೆಯಲ್ಲಿ ಲಖನೌ-49 ತಳಿಯ ಪೇರಲ ಬೆಳೆದಿದ್ದಾರೆ. ಐದು ಎಕರೆಯಲ್ಲಿ ದಾಳಿಂಬೆ, ಒಂದು ಎಕರೆಯಲ್ಲಿ ಗೋಡಂಬಿ ನಾಟಿ ಮಾಡಿದ್ದಾರೆ. ಎರಡು ವರ್ಷದಿಂದ ಪೇರಲ ಹಣ್ಣಿನ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಮೂರು ಹಣ್ಣು ಸೇರಿದರೆ ಒಂದು ಕೆ.ಜಿ ತೂಗುವಷ್ಟು ದೊಡ್ಡ ಗಾತ್ರದ ಹಣ್ಣುಗಳು ಗಿಡದಲ್ಲಿ ತೊನೆದಾಡುತ್ತಿವೆ. ಸಾವಯವ ಪದ್ಧತಿಯಲ್ಲಿ ಬೆಳೆಯುವ ಇಲ್ಲಿನ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.

ಹೂವಿನಹಡಗಲಿಯ ಹಣ್ಣಿನ ವ್ಯಾಪಾರಿ ಜತೆ ಒಪ್ಪಂದ ಮಾಡಿಕೊಂಡು ಪ್ರತಿ ವಾರ ನಾಲ್ಕು ಕ್ವಿಂಟಲ್ ಹಣ್ಣನ್ನು ಮಾರುಕಟ್ಟೆಗೆ ಕಳಿಸುತ್ತಾರೆ. ಪ್ರತಿ ಕೆ.ಜಿ.ಗೆ ₹28ಗಳಂತೆ ದರ ನಿಗದಿಪಡಿಸಿ, ಹಣ್ಣಿನ ವ್ಯಾಪಾರಿಯೇ ಹೊಲಕ್ಕೆ ಬಂದು ಕಟಾವು ಮಾಡಿಕೊಂಡು ಹೋಗುತ್ತಾರೆ. ಪ್ರತಿ ತಿಂಗಳು ₹40,000 ಗಳಂತೆ ಐದರಿಂದ ಆರು ತಿಂಗಳು ನಿರಂತರ ಆದಾಯ ಪಡೆಯುತ್ತಾರೆ. ಈ ಕೃಷಿ ಕೈ ಹಿಡಿದಿದ್ದರಿಂದ ಹಿಂದಿನ ವರ್ಷ ಮತ್ತೊಂದು ಎಕರೆಗೆ ಪೇರಲ ವಿಸ್ತರಿಸಿ ತೈವಾನ್ ಗೋವಾ ತಳಿಯ ಪೇರಲ ನಾಟಿ ಮಾಡಿದ್ದಾರೆ.

‘ಒಣ ಬೇಸಾಯ ಪದ್ಧತಿಯಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆಯುವಾಗ ಆರಕ್ಕೇರದ, ಮೂರಕ್ಕಿಳಿಯದ ಸ್ಥಿತಿಯಲ್ಲಿದ್ದೆವು. ನೀರಾವರಿ ಮಾಡಿಕೊಂಡ ಬಳಿಕ ಬದುಕು ಸುಧಾರಿಸಿದೆ’ ಎಂದು ಕೊಟ್ರೇಶ್‌ ಹೇಳಿದರು.

‘ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಪೇರ ಸಸಿಗಳನ್ನು ತರಿಸಿಕೊಂಡು ನಾಟಿ ಮಾಡಿದ್ದೇವೆ. ಹಡಗಲಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ದುರ್ಗಪ್ರಸಾದ್ ಅವರ ಮಾರ್ಗದರ್ಶನದಂತೆ ಬೆಳೆ ನಿರ್ವಹಣೆ ಮಾಡುತ್ತಿದ್ದು, ಉತ್ತಮ ಇಳುವರಿ ಪಡೆಯುತ್ತಿದ್ದೇವೆ. ನಮ್ಮಣ್ಣ ಪೊಲೀಸ್ ಆಗಿದ್ದರೂ ಬಿಡುವಿನ ವೇಳೆಯಲ್ಲಿ ಅವರೂ ನಮ್ಮೊಂದಿಗೆ ಕೃಷಿಯಲ್ಲಿ ಕೈ ಜೋಡಿಸುತ್ತಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT